ನವದೆಹಲಿ ಚಾತುರ್ಮಾಸ್ಯ: ಪೇಜಾವರ ಶ್ರೀಗಳ ಭೇಟಿ ಮಾಡಿ ಆಶೀರ್ವಾದ ಪಡೆದ ಗೃಹ ಸಚಿವ ಅಮಿತ್ ಶಾ

Shreya Hegde
0


ನವದೆಹಲಿ: ನವದೆಹಲಿಯ ವಸಂತ್ ಕುಂಜ್‌ನಲ್ಲಿರುವ ಶ್ರೀ ಪೇಜಾವರ ಮಠದ ಶಾಖೆ ‘ವೇದವ್ಯಾಸ ಗುರುಕುಲ’ದಲ್ಲಿ 39ನೇ ಚಾತುರ್ಮಾಸ್ಯ ವ್ರತದಲ್ಲಿ ನಿರತರಾಗಿರುವ ಉಡುಪಿ ಶ್ರೀ ಪೇಜಾವರ ಮಠದ ಜಗದ್ಗುರು ಶ್ರೀ ಮಧ್ವಾಚಾರ್ಯ ಸಂಪ್ರದಾಯದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರನ್ನು ಭಾರತ ಸರ್ಕಾರದ ಗೃಹ ಸಚಿವ ಶ್ರೀ ಅಮಿತ್ ಶಾ ಅವರು ಭೇಟಿ ಮಾಡಿ ಆಶೀರ್ವಾದ ಪಡೆದರು.


ಪೂರ್ಣಕುಂಭ ಸ್ವಾಗತ ಮತ್ತು ದರ್ಶನ

ಸಾಯಂಕಾಲ 4:30ರ ಸುಮಾರಿಗೆ ಗುರುಕುಲಕ್ಕೆ ಆಗಮಿಸಿದ ಗೃಹ ಸಚಿವ ಅಮಿತ್ ಶಾ ಅವರಿಗೆ ಗುರುಕುಲದ ವಿದ್ಯಾರ್ಥಿಗಳು ವೈದಿಕ ಪರಂಪರೆಯಂತೆ ವೇದಘೋಷ ಹಾಗೂ ಪೂರ್ಣಕುಂಭದೊಂದಿಗೆ ಅದ್ಧೂರಿ ಸ್ವಾಗತ ಕೋರಿದರು. ಈ ಸಂದರ್ಭದಲ್ಲಿ ಡಾ. ವರಖೇಡಿ ಶ್ರೀನಿವಾಸ ಆಚಾರ್ಯ, ಡಾ. ವಿಠೋಬಾಚಾರ್ಯ ಮತ್ತು ವಾಸುದೇವ ಭಟ್ ಪೆರಂಪಳ್ಳಿ ಉಪಸ್ಥಿತರಿದ್ದು ಸ್ವಾಗತಿಸಿದರು.


ನಂತರ ಶ್ರೀ ಕೃಷ್ಣಧಾಮಕ್ಕೆ ತೆರಳಿದ ಅಮಿತ್ ಶಾ ಅವರು ಶ್ರೀ ಕೃಷ್ಣ ದೇವರ ದರ್ಶನ ಪಡೆದು, ಪಂಚದೀಪ ಬೆಳಗಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಶ್ರೀ ಸಂಸ್ಥಾನದ ಪಟ್ಟದ ದೇವರ ದರ್ಶನ ಪಡೆದ ಅವರು, ದಿವಂಗತ ಶ್ರೀ ವಿಶ್ವೇಶ ತೀರ್ಥ ಶ್ರೀಗಳ ಸಂಸ್ಮರಣ ಧ್ಯಾನಮಂದಿರಕ್ಕೆ ಭೇಟಿ ನೀಡಿ ಪಾದುಕಾದರ್ಶನ ಪಡೆದರು.


ಆಪ್ತ ಸಮಾಲೋಚನೆ ಹಾಗೂ ಆಶೀರ್ವಾದ:

ದೇವ ದರ್ಶನದ ನಂತರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರನ್ನು ಭೇಟಿಯಾದ ಗೃಹ ಸಚಿವರು, ಫಲಪುಷ್ಪ ಸಮರ್ಪಿಸಿ ಗೌರವಿಸಿದರು. ಈ ವೇಳೆ ಉಭಯ ನಾಯಕರ ನಡುವೆ ಕೆಲಹೊತ್ತು ಸೌಹಾರ್ದಯುತ ಹಾಗೂ ಆಪ್ತ ಸಮಾಲೋಚನೆ ನಡೆಯಿತು. ಶ್ರೀಗಳ ಸೇವೆಯನ್ನು ಮೆಚ್ಚಿದ ಶ್ರೀಪಾದರು ಅಮಿತ್ ಶಾ ಅವರಿಗೆ ಶಾಲು ಹೊದಿಸಿ, ಪೇಟ ತೊಡಿಸಿ, ಹಾರ ಹಾಕಿ, ಸ್ಮರಣಿಕೆ ಹಾಗೂ ಫಲಮಂತ್ರಾಕ್ಷತೆ ನೀಡಿ ವಿಶೇಷವಾಗಿ ಆಶೀರ್ವದಿಸಿದರು.


ಗಣ್ಯರ ಉಪಸ್ಥಿತಿ:

ಈ ಧಾರ್ಮಿಕ ಮತ್ತು ವಿಶೇಷ ಭೇಟಿಯ ಸಂದರ್ಭದಲ್ಲಿ ಸಂಸದರಾದ ಬಾನ್ಸುರಿ ಸ್ವರಾಜ್, ರಾಮ್ ವೀರ್ ಸಿಂಗ್ ಬಿದೂರಿ, ಶಾಸಕರಾದ ಅನಿಲ್ ಶರ್ಮಾ, ಕೈಲಾಶ್ ಗೆಹ್ಲೋಟ್, ಡಿಡಿಎ ಸದಸ್ಯ ರಾಜೀವ್ ಬಬ್ಬರ್, ರಾಕೇಶ್ ಗೌರ್, ವಿದ್ವಾನ್ ಎನ್. ವಿಠಲ ಭಟ್, ಟಿ.ಪಿ. ಅನಂತ ಹಾಗೂ ಶ್ರೀಗಳ ಆಪ್ತಕಾರ್ಯದರ್ಶಿಗಳಾದ ಕೃಷ್ಣಮೂರ್ತಿ ಭಟ್, ಅಶ್ವಿನ್ ಕುಮಾರ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top