ಉಪನ್ಯಾಸ ವ್ಯವಸ್ಥಿತ ಅಧ್ಯಯನದಿಂದ ಯಶಸ್ಸು: ಡಾ. ರಾಜೇಶ್
ಪುತ್ತೂರು: ಪ್ರತಿದಿನದ ಅಭ್ಯಾಸ, ಕಲಿತ ವಿಷಯಗಳ ಮರುಪಠಣ ಮತ್ತು ಪುನರಾವರ್ತಿತ ಅಧ್ಯಯನವು ನೆನಪಿನ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಪರೀಕ್ಷೆಯ ಭಯವನ್ನು ಕಡಿಮೆ ಮಾಡುತ್ತದೆ. ಕಡಿಮೆ ಅಥವಾ ಅತಿಯಾದ ಒತ್ತಡ ಎರಡೂ ವಿದ್ಯಾರ್ಥಿಗಳ ಕಾರ್ಯ ಕ್ಷಮತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ. ಒತ್ತಡವನ್ನು ಸಮರ್ಥವಾಗಿ ನಿರ್ವಹಿಸಲು ಸಾಕಷ್ಟು ನಿದ್ರೆ, ವಿಷಯದ ಮೇಲೆ ಹಿಡಿತ, ನಿಯಮಿತ ಅಧ್ಯಯನ ಕ್ರಮ, ವ್ಯಾಯಾಮ, ಇತರರೊಂದಿಗೆ ಹೋಲಿಕೆ ಮಾಡಿಕೊಳ್ಳದಿರುವುದು ಹಾಗೂ ಅಗತ್ಯವಿದ್ದಾಗ ಶಿಕ್ಷಕರ ಸಹಾಯ ಪಡೆಯುವುದು ಮುಖ್ಯ. ಇಂತಹ ವ್ಯವಸ್ಥಿತ ಅಧ್ಯಯನದಿಂದ ಮಾನಸಿಕ ಒತ್ತಡವನ್ನು ಮೀರಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶ ಪಡೆಯಬಹುದು ಎಂದು ಮಂಗಳೂರಿನ ಯೆನೆಪೋಯ ವೈದ್ಯಕೀಯ ಕಾಲೇಜಿನ ಮನೋವೈದ್ಯಕೀಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ರಾಜೇಶ್ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಸತಿಯುತ ಪದವಿಪೂರ್ವ ಕಾಲೇಜಿನಲ್ಲಿ 'ಮಾನಸಿಕ ಒತ್ತಡವನ್ನು ಮೀರಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶ ಪಡೆಯುವ ಗುಟ್ಟು: ಸ್ಮಾರ್ಟ್ ಸ್ಟಡಿ' ವಿಚಾರದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅತ್ಯುತ್ತಮ ಫಲಿತಾಂಶ ಪಡೆಯಲು ಕಣ್ಣಿಗೆ ಕಾಣುವುದೆಲ್ಲವನ್ನೂ ಓದುವುದಕ್ಕಿಂತ, ಪರೀಕ್ಷೆಗೆ ಅಗತ್ಯವಿರುವ ವಿಷಯಗಳನ್ನು ಗುರುತಿಸಿ, ಮುಖ್ಯ ಹಾಗೂ ಅತಿಮುಖ್ಯ ಅಂಶಗಳ ಮೇಲೆ ಗಮನ ಕೇಂದ್ರೀಕರಿಸಿ ಆಳವಾದ ಮತ್ತು ನಿರ್ದಿಷ್ಟ ಅಧ್ಯಯನ ಮಾಡುವುದು ಅಗತ್ಯ. ಪರೀಕ್ಷೆಗೆ ಉಳಿದಿರುವ ಸಮಯವನ್ನು ಸರಿಯಾಗಿ ಲೆಕ್ಕ ಹಾಕಿಕೊಂಡು ಅದಕ್ಕೆ ಅನುಗುಣವಾಗಿ ಅಧ್ಯಯನದ ಯೋಜನೆ ರೂಪಿಸುವುದು ಮುಖ್ಯ. ಎಲ್ಲವನ್ನೂ ಓದುವುದಕ್ಕಿಂತ ಅಗತ್ಯವಿರುವುದನ್ನು ಪರಿಣಾಮಕಾರಿಯಾಗಿ ಓದುವುದೇ ಸ್ಮಾರ್ಟ್ ಸ್ಟಡಿಯ ಉದ್ದೇಶ. ನಿದ್ದೆ ಕಳೆದುಕೊಂಡು ಓದಿದಲ್ಲಿ, ಅತಿ ಕಡಿಮೆ ನಿದ್ರೆ ನೆನಪಿನ ಶಕ್ತಿಯನ್ನು ಕುಂಠಿತಗೊಳಿಸುವುದರ ಜೊತೆಗೆ ಮಾನಸಿಕ ತೊಂದರೆಗಳಿಗೆ ಕಾರಣವಾಗಬಹುದು ಎಂದು ಕಿವಿಮಾತು ಹೇಳಿದರು.
ಯೋಜನೆ ಅಗತ್ಯ:
ವಿದ್ಯಾರ್ಥಿಗಳು ತಮ್ಮ ಗುರಿಯನ್ನು ನಿರ್ದಿಷ್ಟವಾಗಿ ನಿಗದಿಪಡಿಸಿಕೊಂಡು, ಅದನ್ನು ಅಳೆಯಬಹುದಾದ, ಸಾಧಿಸಬಹುದಾದ, ಪರೀಕ್ಷೆಯ ಅಗತ್ಯಕ್ಕೆ ಸಂಬಂಧಿಸಿದ ಹಾಗೂ ನಿಗದಿತ ಸಮಯದೊಳಗೆ ಪೂರ್ಣಗೊಳಿಸಬಹುದಾದ ರೀತಿಯಲ್ಲಿ ರೂಪಿಸಿಕೊಳ್ಳಬೇಕು. ಜೀವನಶೈಲಿ, ಶೈಕ್ಷಣಿಕ ಒತ್ತಡ, ವೈಯಕ್ತಿಕ ಹಾಗೂ ಸಾಮಾಜಿಕ ಕಾರಣಗಳಿಂದಾಗಿ ಯುವಜನರಲ್ಲಿ ವಿವಿಧ ರೀತಿಯ ಮಾನಸಿಕ ಹಾಗೂ ವರ್ತನಾ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇಂತಹ ಸಮಸ್ಯೆಗಳನ್ನು ನಿರ್ಲಕ್ಷಿಸದೆ ಆರಂಭಿಕ ಹಂತದಲ್ಲಿಯೇ ಗುರುತಿಸಿ ಸೂಕ್ತ ನೆರವು ಪಡೆಯುವುದು ಅಗತ್ಯ ಎಂದರು.
ವಾಸ್ತವಕ್ಕೆ ವಿರುದ್ಧವಾದ ನಂಬಿಕೆಗಳು, ಇಲ್ಲದಿರುವ ಧ್ವನಿಗಳು ಅಥವಾ ದೃಶ್ಯಗಳನ್ನು ಅನುಭವಿಸುವುದು, ಆಲೋಚನೆ ಮತ್ತು ವರ್ತನೆಯಲ್ಲಿ ತೀವ್ರ ಬದಲಾವಣೆಗಳು ಮುಂತಾದ ಲಕ್ಷಣಗಳು ಕಂಡುಬಂದಾಗ ತಡಮಾಡದೆ ಮನೋವೈದ್ಯರನ್ನು ಸಂಪರ್ಕಿಸುವುದು ಮುಖ್ಯ. ಮಾನಸಿಕ ಸಮಸ್ಯೆಗಳು ದೌರ್ಬಲ್ಯದ ಸಂಕೇತವಲ್ಲ. ಇತರ ಆರೋಗ್ಯ ಸಮಸ್ಯೆಗಳಂತೆ ಮಾನಸಿಕ ಆರೋಗ್ಯದ ಸಮಸ್ಯೆಗಳಿಗೂ ಸೂಕ್ತಚಿಕಿತ್ಸೆ ಮತ್ತು ಸಮಾಲೋಚನೆಯ ಮೂಲಕಪರಿಹಾರ ಕಂಡುಕೊಳ್ಳಬಹುದು ಎಂಬ ಅರಿವು ವಿದ್ಯಾರ್ಥಿಗಳಲ್ಲಿ ಮೂಡಿಸುವ ಅಗತ್ಯವಿದೆ ಎಂದರು.
ವೇದಿಕೆಯಲ್ಲಿ ಅಂಬಿಕಾ ವಸತಿಯುತ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಗಣೇಶ್ ಪ್ರಸಾದ್ ಡಿ. ಎಸ್., ಉಪ ಪ್ರಾಂಶುಪಾಲ ಪ್ರದೀಪ್ ಕೆ.ವೈ. ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಗಾಯನಾ ನಿರೂಪಿಸಿ, ವಂದಿಸಿ, ನಿರ್ವಹಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


