ಸಂತ ಫಿಲೋಮಿನಾ ಕಾಲೇಜಿನಲ್ಲಿ ಪ್ರಥಮ ಪದವೀಧರರ ಸಮಾರಂಭ

Shreya Hegde
0

ಪುತ್ತೂರು : ಇಲ್ಲಿನ ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನಲ್ಲಿ ಪ್ರಥಮ ಪದವೀಧರರ ಸಮಾರಂಭ ನಡೆಯಿತು. ಮಂಗಳೂರು ಧರ್ಮಪ್ರಾಂತದ ಧರ್ಮಾಧ್ಯಕ್ಷರೂ ಹಾಗೂ ಕ್ಯಾಥೋಲಿಕ್ ಶಿಕ್ಷಣ ಮಂಡಳಿಯ ಅಧ್ಯಕ್ಷರಾದ ಡಾ. ಪೀಟರ್ ಪಾವ್ಲ್ ಸಲ್ದಾನ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.


ಸಮಾರಂಭದಲ್ಲಿ ಮಾತನಾಡಿದ ಡಾ. ಪೀಟರ್ ಪಾವ್ಲ್ ಸಲ್ದಾನ, ಪದವಿ ಪಡೆಯುವುದರೊಂದಿಗೆ ಜ್ಞಾನಾರ್ಜನೆ ಮುಗಿಯುವುದಿಲ್ಲ. ಪ್ರೀತಿಯಿಲ್ಲದ ಜ್ಞಾನ ಕೇವಲ ಮಾಹಿತಿಯಾಗುತ್ತದೆ, ಆದರೆ ಪ್ರೀತಿಯೊಂದಿಗೆ ಬೆಸೆದ ಜ್ಞಾನ ವಿವೇಕವಾಗುತ್ತದೆ. ಜ್ಞಾನ ಮತ್ತು ತಂತ್ರಜ್ಞಾನದ ಬೆಳೆವಣಿಗೆಯೊಂದಿಗೆ ಮಾನವೀಯ ಮೌಲ್ಯಗಳು, ಪ್ರೀತಿ ಹಾಗೂ ಕರುಣೆಗಳು ಬಲಗೊಳ್ಳಬೇಕು. ಸಂಶೋಧನೆ ಮತ್ತು ಜ್ಞಾನವು ಸಮಾಜದ ಒಳಿತಿಗೆ ದಾರಿಯಾಗಬೇಕು ಎಂದು ಹೇಳಿದರು.


ಪದವಿ ಪ್ರದಾನ ಭಾಷಣ ಮಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಡಾ. ಗಣೇಶ್ ಸಂಜೀವ್, ಪದವಿ ಪೂರ್ಣಗೊಳಿಸಿ ಹೊರಬಂದ ನಂತರ ವಿಶಾಲ ಸಮಾಜವನ್ನು ಎದುರಿಸಬೇಕಾಗುತ್ತದೆ. ತರಗತಿಯಲ್ಲಿ ಕಲಿತ ಸಿದ್ಧಾಂತಗಳು ಮತ್ತು ಜ್ಞಾನವು ಜೀವನದ ನೈಜ ಸವಾಲುಗಳನ್ನು ಅರ್ಥಮಾಡಿಕೊಳ್ಳಲು ಹಾಗೂ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಲು ದಾರಿದೀಪವಾಗಬೇಕು ಎಂದರು.


ಕ್ಯಾಥೋಲಿಕ್ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ಪ್ರವೀಣ್ ಲಿಯೋ ಲಸ್ರಾದೋ ಮಾತನಾಡಿ, ಸ್ನಾತಕೋತ್ತರ ಪದವಿಯು ಹೊಸ ಕನಸುಗಳನ್ನು ಕಾಣುವ ಮತ್ತು ಅವುಗಳನ್ನು ಸಾಕಾರಗೊಳಿಸುವ ಹೊಸ ಅಧ್ಯಾಯದ ಆರಂಭ ಎಂದು ಶುಭ ಹಾರೈಸಿದರು.


ಕಾರ್ಯಕ್ರಮದಲ್ಲಿ ಕಾಲೇಜಿನ ವಿವಿಧ ಸ್ನಾತಕೋತ್ತರ ಪದವಿ ವಿಭಾಗಗಳಲ್ಲಿ ಪ್ರಥಮ ರ್ಯಾಂಕ್ ಪಡೆದ ಎಂ.ಎಸ್.ಡಬ್ಲ್ಯು. ವಿಭಾಗದ ಸ್ನೇಹಾ ರೋಸ್ ಜೇಕಬ್, ಎಂ.ಕಾಂ. ವಿಭಾಗದ ಚಸ್ಮಿಕಾ ಟಿ., ಎಂ.ಎಸ್ಸಿ. ಭೌತಶಾಸ್ತ್ರ ವಿಭಾಗದ ನಿತೀಶ್, ಎಂ.ಎಸ್ಸಿ. ಗಣಿತಶಾಸ್ತ್ರ ವಿಭಾಗದ ಅನುಪಮಾ ಹಾಗೂ ಎಂಸಿಎ ವಿಭಾಗದ ನಿರೀಕ್ಷಾ ಆರ್. ಅವರನ್ನು ಗೌರವಿಸಲಾಯಿತು.


ಎಂ.ಎಸ್.ಡಬ್ಲ್ಯೂ., ಎಂ.ಕಾಂ., ಸ್ನಾತಕೋತ್ತರ ಭೌತಶಾಸ್ತ್ರ, ಗಣಿತಶಾಸ್ತ್ರ ಹಾಗೂ ಎಂಸಿಎ ವಿಭಾಗಗಳ ಒಟ್ಟು ೬೦ ಪದವೀಧರರು ಪ್ರಮಾಣಪತ್ರಗಳನ್ನು ಸ್ವೀಕರಿಸಿದರು. ಕಾಲೇಜಿನ ಪ್ರಾಂಶುಪಾಲ ವಂ. ಡಾ. ಆಂಟನಿ ಪ್ರಕಾಶ್ ಮೊಂತೇರೊ ಪದವೀಧರರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಸಂಸ್ಥೆಯ ಲೆಗಸಿ ವೀಡಿಯೊ ಪ್ರದರ್ಶನ ಹಾಗೂ ಶೈಕ್ಷಣಿಕ ಮೆರವಣಿಗೆ ನಡೆಯಿತು.


ಕಾಲೇಜಿನ ಸಂಚಾಲಕ ಜಾನ್ ಬಿ. ಸಲ್ದಾನ ಸ್ವಾಗತಿಸಿದರು. ಪರೀಕ್ಷಾಂಗ ಕುಲಸಚಿವ ಡಾ. ವಿನಯಚಂದ್ರ ವಂದಿಸಿದರು. ಉಪಪ್ರಾಂಶುಪಾಲ ಡಾ. ವಿಜಯಕುಮಾರ್ ಎಂ., ಶೈಕ್ಷಣಿಕ ಕುಲಸಚಿವ ಡಾ. ನಾರ್ಬರ್ಟ್ ಮಸ್ಕರೇನಸ್, ಹಣಕಾಸು ಅಧಿಕಾರಿ ಡಾ. ಎಡ್ವಿನ್ ಎಸ್. ಡಿಸೋಜ, ರೋಶನ್ ಲಸ್ರಾದೋ, ಕ್ಯಾಪ್ಟನ್ ಜಾನ್ಸನ್ ಡೇವಿಡ್ ಸಿಕ್ವೇರಾ, ಅಭಿಷೇಕ್ ಸುವರ್ಣ, ವಿಪಿನ್ ನಾಯ್ಕ್ ಎನ್.ಎಸ್. ಹಾಗೂ ವಿವಿಧ ವಿಭಾಗಗಳ ಸಂಯೋಜಕರು ಉಪಸ್ಥಿತರಿದ್ದರು. ಸಹಾಯಕ ಪ್ರಾಧ್ಯಾಪಕರಾದ ಗ್ರೆಲ್ ಫಿಯೋನಾ ಪಿರೇರಾ ಹಾಗೂ ಪ್ರಶಾಂತ್ ರೈ ಕಾರ್ಯಕ್ರಮ ನಿರೂಪಿಸಿದರು.

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top