ಮಂಗಳೂರು: ನಾಟಕಗಳ ಪ್ರದರ್ಶನದ ಮೂಲಕವೂ ಸಾರ್ವಜನಿಕರಲ್ಲಿ ಮಾದಕ ವ್ಯಸನದ ಕುರಿತು ಜಾಗೃತಿ ಮೂಡಿಸಬಹುದಾಗಿದೆ. ಮಾದಕ ವ್ಯಸನದಿಂದಾಗುವ ಪರಿಣಾಮ ಹಾಗೂ ಕಾನೂನು ನಿಬಂಧನೆ ಸಂಬಂಧ ಮಾಹಿತಿ ತಿಳಿಸುವುದು ಪೊಲೀಸರ ಕರ್ತವ್ಯವಾಗಿದೆ ಎಂದು ಮಂಗಳೂರು ದಕ್ಷಿಣ ವಿಭಾಗದ ಎಸಿಪಿ ವಿಜಯ ಕ್ರಾಂತಿ ಹೇಳಿದರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಯುವ ರೆಡ್‌ಕ್ರಾಸ್ ಘಟಕ, ಭಾರತೀಯ ರೆಡ್‌ಕ್ರಾಸ್ ಮಂಗಳೂರು ಘಟಕ, ಯುವ ರೆಡ್‌ಕ್ರಾಸ್ ವಿಶ್ವವಿದ್ಯಾನಿಲಯ ಕಾಲೇಜು ಘಟಕ, ರಾಷ್ಟ್ರೀಯ ಸೇವಾ ಯೋಜನೆ ಮತ್ತು ಮಾದಕ ವಸ್ತು ಸೇವನೆ ನಿಯಂತ್ರಣ ಕೋಶದ ವತಿಯಿಂದ ವಿಕಸಿತ ಭಾರತಕ್ಕೆ ನಶಾಮುಕ್ತ ಭಾರತ ವಿಷಯದ ಕುರಿತು ಆಯೋಜಿಸಲಾಗಿದ್ದ ವಿಶ್ವವಿದ್ಯಾನಿಲಯ ಮಟ್ಟದ ಅಂತರ ಕಾಲೇಜು ನಾಟಕ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪೊಲೀಸ್ ಇಲಾಖೆ ವತಿಯಿಂದ ಸನ್ಮಿತ್ರ ಎಂಬ ಆಪ್ ಪ್ರಾರಂಭಿಸಲಾಗಿದ್ದು, ಮಾದಕ ವ್ಯಸನಕ್ಕೆ ತುತ್ತಾಗಿರುವ ವ್ಯಕಿಗಳಿಗೆ ಪೊಲೀಸ್ ಕಣ್ಗಾವಲಿನಲ್ಲಿ ಆಪ್ತ ಸಮಾಲೋಚನೆ ನಡೆಸಲಾಗುತ್ತದೆ. ಸಾರ್ಜನಿಕರಿಗೆ ಕ್ಯುಆರ್ ಕೋಡ್ ಮೂಲಕ ಮಾದಕ ವಸ್ತು ವ್ಯಸನಕ್ಕೆ ಒಳಗಾದವರ ಕುರಿತು ದೂರ ದಾಖಲಿಸಲು ಅವಕಾಶ ಮಾಡಿಕೊಡಲಾಗಿದ್ದು, ಅಗತ್ಯ ಬಿದ್ದಲ್ಲಿ ಇವುಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಮುಖ್ಯ ಅತಿಥಿಗಳಾಗಿದ್ದ ಭಾರತೀಯ ರೆಡ್‌ಕ್ರಾಸ್ ಸೊಸೈಟಿ ಮಂಗಳೂರು ಶಾಖೆಯ ಮುಖ್ಯಸ್ಥ ಡಾ. ಶಾಂತಾರಾಮ್ ಶೆಟ್ಟಿ, ನಿದ್ರೆ ಅಥವಾ ಉಲ್ಲಾಸಕ್ಕಾಗಿ ಮಾದಕ ವಸ್ತುಗಳ ಸೇವನೆ ಆರಂಭಿಸಿ ಅಂತಿಮವಾಗಿ ಅದಕ್ಕೇ ದಾಸರಾಗುತ್ತಾರೆ.
ಎಲ್ಲಾ ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾದಕ ವಸ್ತುಗಳ ಚಟಕ್ಕೆ ಬಲಿಯಾಗುವುದಿಲ್ಲ ಎಂದು ಶಪಥ ಮಾಡಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯವಂತ ನಾಯಕ್, ವ್ಯಕ್ತಿ ದೀರ್ಘಕಾಲದವರೆಗೆ ಬದುಕು ನಡೆಸಲು ಆರೋಗ್ಯಕರವಾದ ಸಮಾಜದ ಅಗತ್ಯವಿದೆ. ಮಾದಕ ವಸ್ತು ಸೇವನೆಯಷ್ಟೇ ಪರಿಣಾಮವನ್ನು ಮೊಬೈಲ್ ಬಳಕೆಯೂ ಉಂಟು ಮಾಡುತ್ತದೆ. ಮಾದಕ ವಸ್ತುಗಳು ನಿಮಗೆ ಮಾತ್ರವಲ್ಲದೇ ಇಡೀ ಕುಟುಂಬದ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುತ್ತದೆ ಎಂದು ಹೇಳಿದರು.
ಇದೇ ವೇಳೆ ಮಂಗಳೂರು ವಿಶ್ವವಿದ್ಯಾನಿಲಯದ ಯುವ ರೆಡ್‌ಕ್ರಾಸ್‌ನ ನೋಡಲ್ ಅಧಿಕಾರಿ ಡಾ. ಗಾಯತ್ರಿ, ಹಳೆ ವಿದ್ಯಾರ್ಥಿ ಸಂಘದ ನಿಕಟ ಪೂರ್ವ ಅಧ್ಯಕ್ಷ ಕರ್ನಲ್ ಶರತ್ ಭಂಡಾರಿ, ಹಳೆ ವಿದ್ಯಾರ್ಥಿ ಸಂಘದ ಶ್ರೀನಿವಾಸ್ ನಾಯ್ಕ್, ಮುರಳೀಧರ ಕಾಮತ್, ಯುವ ರೆಡ್‌ಕ್ರಾಸ್ ಕಾರ್ಯಕ್ರಮ ಅಧಿಕಾರಿ ಡಾ. ಭಾರತಿ ಪಿಲಾರ್, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ. ಸುರೇಶ್ ಸೇರಿದಂತೆ ಕಾಲೇಜಿನ ನಾನಾ ವಿಭಾಗದ ಉಪನ್ಯಾಸಕರು ಉಪಸ್ಥಿತರಿದ್ದರು.
ನಾಟಕ ಸ್ಪರ್ಧೆಯ ವಿಜೇತರ ಪಟ್ಟಿ
ಪ್ರಥಮ ಬಹುಮಾನ: ತ್ರಿಶಾ ಕಾಲೇಜ್ ಆಫ್ ಕಾಮರ್ಸ್ ಮತ್ತು ಮ್ಯಾನೇಜ್‌ಮೆಂಟ್, ಮಂಗಳೂರು
ದ್ವಿತೀಯ ಬಹುಮಾನ: ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು
ತೃತೀಯ ಬಹುಮಾನ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹಿರಿಯಡ್ಕ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


