ಮೂಡುಬಿದಿರೆ : ಕೃಷಿಕರು ಹಾಗೂ ಕೃಷಿ ಕಾರ್ಮಿಕರ ಮಕ್ಕಳಿಗೆ ಕರ್ನಾಟಕ ಸರ್ಕಾರ ಕೃಷಿ ಶಿಕ್ಷಣದಲ್ಲಿ ಮೀಸಲಿಟ್ಟಿರುವ 3,200 ಸೀಟುಗಳನ್ನು ಪಡೆಯಲು ಪ್ರಾಯೋಗಿಕ ಪರೀಕ್ಷೆಯ ಸಿದ್ಧತೆ ಹಾಗೂ ಪ್ರವೇಶ ಪ್ರಕ್ರಿಯೆಯ ಕುರಿತು ವಿದ್ಯಾರ್ಥಿಗಳು ಸಮಗ್ರ ಅರಿವು ಹೊಂದಿರಬೇಕು ಎಂದು ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ಅಗ್ರಿಕಲ್ಚರಲ್ ಸೈನ್ಸಸ್ ಆ್ಯಂಡ್ ಟೆಕ್ನಾಲಜಿಯ ಡೀನ್ ಡಾ. ಎಸ್.ಎನ್. ವಾಸುದೇವ ಜೈನ್ ಹೇಳಿದರು.
ಆಳ್ವಾಸ್ ಪಿಯು ಕಾಲೇಜಿನಲ್ಲಿ ನಡೆದ ಕೃಷಿಕರ ಕೋಟಾದಡಿ ಕೃಷಿ ಪ್ರಾಯೋಗಿಕ ಪರೀಕ್ಷೆಗಳ ಕುರಿತ ಓರಿಯಂಟೇಶನ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇಶದ ಆರ್ಥಿಕತೆ ಹಾಗೂ ಆಹಾರ ಭದ್ರತೆಗೆ ಕೃಷಿ ಆಧಾರವಾಗಿದ್ದು, ಸುಮಾರು ೮೦ ಕೋಟಿ ಜನರು ಇದರ ಮೇಲೆ ಅವಲಂಬಿತರಾಗಿದ್ದಾರೆ. ಕೈಗಾರಿಕೀಕರಣದಿಂದ ಕೃಷಿ ಭೂಮಿಗೆ ಮಿತಿ ಎದುರಾಗುತ್ತಿದ್ದು, ಲಭ್ಯವಿರುವ ಜಲ ಮತ್ತು ಭೂ ಸಂಪನ್ಮೂಲಗಳನ್ನು ಸಮರ್ಥವಾಗಿ ಬಳಸಿ ಉತ್ಪಾದಕತೆ ಹೆಚ್ಚಿಸುವುದು ಅನಿವಾರ್ಯವಾಗಿದೆ. ಪ್ರಧಾನಮಂತ್ರಿಯವರ ಪರ್ ಡ್ರಾಪ್, ಮೋರ್ ಕ್ರಾಪ್ ಪರಿಕಲ್ಪನೆಯಂತೆ ಕಡಿಮೆ ನೀರಿನಲ್ಲಿ ಹೆಚ್ಚು ಉತ್ಪಾದನೆ ಪಡೆಯುವ ವೈಜ್ಞಾನಿಕ ಹಾಗೂ ಸುಸ್ಥಿರ ಕೃಷಿ ಪದ್ಧತಿಗಳ ಬಗ್ಗೆ ವಿದ್ಯಾರ್ಥಿಗಳು ಅರಿವು ಬೆಳೆಸಿಕೊಳ್ಳಬೇಕು ಎಂದು ಅವರು ತಿಳಿಸಿದರು. ಇದೇ ವೇಳೆ ಕೃಷಿ ಕೋಟಾದಡಿ ಪ್ರವೇಶ ಪಡೆಯಲು ಇರುವ ಮೀಸಲಾತಿ, ಅರ್ಹತಾ ಮಾನದಂಡ, ಪ್ರಾಯೋಗಿಕ ಪರೀಕ್ಷೆ ಎದುರಿಸುವ ವಿಧಾನ ಹಾಗೂ ಕೃಷಿ ಶಿಕ್ಷಣದ ಮೂಲಕ ಲಭ್ಯವಿರುವ ವೃತ್ತಿ ಅವಕಾಶಗಳ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಕರಾವಳಿ ಕರ್ನಾಟಕದಲ್ಲಿ ಕೃಷಿ ಶಿಕ್ಷಣ ನೀಡುತ್ತಿರುವ ಆಳ್ವಾಸ್ ಕೃಷಿ ವಿಜ್ಞಾನಗಳ ಸಂಸ್ಥೆಯು ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡುತ್ತಿದ್ದು, ಕಳೆದ ವರ್ಷ ಸಂಸ್ಥೆಯ ವಿದ್ಯಾರ್ಥಿಯೊಬ್ಬರು ಕೃಷಿ ವಿಭಾಗದಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ರ‍್ಯಾಂಕ್ ಗಳಿಸಿದ್ದಾರೆ ಎಂಬ ವಿಚಾರವನ್ನು ಕಾರ್ಯಕ್ರಮದಲ್ಲಿ ಉಲ್ಲೇಖಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಪಿಯು ಕಾಲೇಜಿನ ಪ್ರಾಂಶುಪಾಲ ಪ್ರೊ. ಮೊಹಮ್ಮದ್ ಸಾದಕತ್ ಮಾತನಾಡಿ, ಆಳ್ವಾಸ್ ಸಂಸ್ಥೆಯು ವಿವಿಧ ರಾಜ್ಯಗಳ ವಿದ್ಯಾರ್ಥಿಗಳಿಗೆ ಶಿಕ್ಷಣದ ಅವಕಾಶ ಕಲ್ಪಿಸುತ್ತಿದೆ. ಕೃಷಿ ಕ್ಷೇತ್ರದಲ್ಲಿರುವ ಉನ್ನತ ಶಿಕ್ಷಣ ಮತ್ತು ವೃತ್ತಿ ಅವಕಾಶಗಳನ್ನು ವಿದ್ಯಾರ್ಥಿಗಳು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.
ವೇದಿಕೆಯಲ್ಲಿ ಆಳ್ವಾಸ್ ಪಿಯು ಕಾಲೇಜಿನ ಉಪಪ್ರಾಂಶುಪಾಲೆ ಜಾನ್ಸಿ ಪಿ.ಎನ್. ಉಪಸ್ಥಿತರಿದ್ದರು. ವೇದಾವತಿ ಎ. ಕಾರ್ಯಕ್ರಮ ನಿರೂಪಿಸಿದರು. ಸಂಯೋಜಕ ಗುಣಪ್ರಸಾದ್ ಕರಂದೂರು ವಂದಿಸಿದರು.
