ಉಡುಪಿ: ವಿಶ್ವ ಹಿಂದು ಪರಿಷತ್ ಅಂತಾರಾಷ್ಟ್ರೀಯ ಅಧ್ಯಕ್ಷ, ಸುಪ್ರೀಮ್ ಕೋರ್ಟ್ ನ್ಯಾಯವಾದಿ ಅಲೋಕ್ ಕುಮಾರ್ ಜೀ ಯವರು ಶುಕ್ರವಾರ ರಾಜ್ಯ ಕರಾವಳಿ ಜಿಲ್ಲೆಗಳಲ್ಲಿ ಮಿಂಚಿನ ಸಂಚಾರ ನಡೆಸಿದರು.
ಮಂಗಳೂರು ಉಡುಪಿ ಜಿಲ್ಲೆಗಳಲ್ಲಿ ಸಂಘಟನೆಯ ಪ್ರಮುಖರು ಕಾರ್ಯಕರ್ತರುಗಳೊಂದಿಗೆ ಸಮಾಲೋಚನೆಗಳನ್ನು ನಡೆಸಿದ ಅವರು ಉಡುಪಿ ಶ್ರೀ ಕೃಷ್ಣಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪರ್ಯಾಯ ಶ್ರೀ ಶೀರೂರು ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಭೋಜನ ಪ್ರಸಾದ ಸ್ವೀಕರಿಸಿದರು.
ಅದಕ್ಕೂ ಮೊದಲು ಬಾರಕೂರಿನಲ್ಲಿರುವ ಶ್ರೀ ಭಂಡಾರಕೇರಿ ಮೂಲಮಠಕ್ಕೆ ಭೇಟಿ ಕೊಟ್ಡು ರಾಮದೇವರು ಗೋಪೀನಾಥ ದೇವರ ದರ್ಶನ ಪಡೆದು ಚಾತುರ್ಮಾಸ್ಯ ವ್ರತ ನಡೆಸುತ್ತಿರುವ ಶ್ರೀ ವಿದ್ಯೇಶತೀರ್ಥ ಶ್ರೀಪಾದರನ್ನು ಭೇಟಿಯಾಗಿ ಭಕ್ತಿ ಗೌರವ ಸಮರ್ಪಿಸಿ ಕೆಲ ಹೊತ್ತು ಆತ್ಮೀಯ ಸಮಾಲೋಚನೆ ನಡೆಸಿದರು. ಶ್ರೀಗಳವರು ಅವರನ್ನು ಸಂಮಾನಿಸಿ ಆಶೀರ್ವದಿಸಿದರು.
ಕೀರ್ತಿ ಶೇಷ ಶ್ರೀ ವಿಶ್ವೇಶತೀರ್ಥರು ತಮ್ಮ 8 ನೇ ವಯಸ್ಸಿನಲ್ಲಿ ಸನ್ಯಾಸ ಸ್ವೀಕರಿಸಿದ ಬಳಿಕ ಇದೇ ಮಠದಲ್ಲಿ ಕೆಲವರ್ಷಗಳ ಕಾಲ ಶ್ರೀ ವಿದ್ಯಾಮಾನ್ಯತೀರ್ಥರಿಂದ ಶಾಸ್ತ್ರಾಧ್ಯಯನ ನಡೆಸುವಾಗ ತಂಗುತ್ತಿದ್ದ ಕೊಠಡಿಯನ್ನೂ ಹಾಗೂ ಇಡೀ ಮಠವನ್ನು ನೋಡಿ ಆನಂದಾಶ್ಚರ್ಯವನ್ನು ವ್ಯಕ್ತಪಡಿಸಿದರು.
ಅದಕ್ಕೂ ಮೊದಲು ಶ್ರೀ ಮಠದ ವತಿಯಿಂದ ಅಲೋಕ್ ಜೀಯವರನ್ನು ಆದರಾಭಿಮಾನದಿಂದ ಬರಮಾಡಿಕೊಳ್ಳಲಾಯಿತು.

