ಯುವ ಭಾರತದ ಮುಂದಿರುವ ‘ನೀಟ್’ ಸವಾಲು

Upayuktha
0

ಶಿಕ್ಷಣ–ಕೌಶಲ–ಉದ್ಯೋಗದ ಕೊಂಡಿಯೇ ವಿಕಸಿತ ಭಾರತದ ಹೆಜ್ಜೆ

‘ವಿಕಸಿತ ಭಾರತ@2047’ರ ಕನಸು ಸಾಕಾರವಾಗಬೇಕಾದರೆ ಕೇವಲ ಆರ್ಥಿಕ ಪ್ರಗತಿ ಸಾಲದು. ದೇಶದ ಅತಿದೊಡ್ಡ ಸಂಪನ್ಮೂಲವಾದ ಯುವಜನತೆಯ ಸಾಮರ್ಥ್ಯವನ್ನು ಸಮರ್ಪಕವಾಗಿ ಬಳಸಿಕೊಳ್ಳುವುದು ಅತ್ಯಗತ್ಯ. ಈ ಹಿನ್ನೆಲೆಯಲ್ಲಿ, ನೀತಿ ಆಯೋಗದ ಇತ್ತೀಚಿನ ವರದಿಯೊಂದು ದೇಶದ ಯುವಜನತೆಯ ಸ್ಥಿತಿಗತಿಗಳ ಕುರಿತು ಗಂಭೀರ ಚಿಂತನೆಗೆ ಕಾರಣವಾಗಿದೆ.


2021ರ ದತ್ತಾಂಶವನ್ನು ಆಧರಿಸಿರುವ ನೀತಿ ಆಯೋಗದ ವರದಿಯ ಪ್ರಕಾರ, 15ರಿಂದ 29 ವರ್ಷ ವಯೋಮಾನದ ಸುಮಾರು 8.7 ಕೋಟಿ ಯುವಜನರು ಶಿಕ್ಷಣ, ಉದ್ಯೋಗ ಅಥವಾ ಕೌಶಲ ತರಬೇತಿ—ಈ ಮೂರರಲ್ಲಿಯೂ ತೊಡಗಿಸಿಕೊಂಡಿಲ್ಲ ಎಂಬ ಅಂಶ ಕಳವಳಕಾರಿ. ಜಾಗತಿಕವಾಗಿ ಇಂತಹ ಯುವಜನರನ್ನು NEET (Not in Education, Employment or Training) ಎಂದು ಕರೆಯಲಾಗುತ್ತದೆ. ಅಂದರೆ, ನಿರ್ದಿಷ್ಟ ಅವಧಿಯಲ್ಲಿ ಶಿಕ್ಷಣ, ಉದ್ಯೋಗ ಅಥವಾ ಯಾವುದೇ ತರಬೇತಿಯಲ್ಲಿ ತೊಡಗಿಸಿಕೊಳ್ಳದ ಯುವಜನರು.


ಇದು ಕೇವಲ ನಿರುದ್ಯೋಗದ ಸಮಸ್ಯೆಯಲ್ಲ

ನೀಟ್ ಯುವಜನರ ಸಂಖ್ಯೆಯನ್ನು ಕೇವಲ ನಿರುದ್ಯೋಗದ ಅಂಕಿ-ಅಂಶ ಎಂದು ಪರಿಗಣಿಸುವುದು ಸರಿಯಲ್ಲ. ಉದ್ಯೋಗವಿಲ್ಲದಿರುವುದರ ಜೊತೆಗೆ, ಶಿಕ್ಷಣದಿಂದ ಹೊರಗುಳಿಯುವುದು ಮತ್ತು ಕೌಶಲಾಭಿವೃದ್ಧಿಯ ಅವಕಾಶಗಳಿಂದ ದೂರವಾಗುವುದು ಅವರ ಭವಿಷ್ಯದ ಮೇಲೆ ದೀರ್ಘಕಾಲೀನ ಪರಿಣಾಮ ಬೀರುತ್ತದೆ.


ಯುವಾವಸ್ಥೆಯು ವ್ಯಕ್ತಿಯ ಜ್ಞಾನ, ಕೌಶಲ ಮತ್ತು ವೃತ್ತಿಪರ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳುವ ಪ್ರಮುಖ ಹಂತ. ಈ ಅವಧಿಯಲ್ಲಿ ಶಿಕ್ಷಣ ಅಥವಾ ತರಬೇತಿಯಿಂದ ದೂರ ಉಳಿದರೆ, ಅವರ ಪ್ರತಿಭೆ ಮತ್ತು ಸಾಮರ್ಥ್ಯಗಳು ಸಂಪೂರ್ಣವಾಗಿ ಬಳಕೆಯಾಗದೆ ಉಳಿಯುವ ಸಾಧ್ಯತೆಯಿದೆ. ಇದರಿಂದ ಮುಂದಿನ ದಿನಗಳಲ್ಲಿ ಉತ್ತಮ ಉದ್ಯೋಗ ಪಡೆಯುವ ಅವಕಾಶಗಳೂ ಕಡಿಮೆಯಾಗಬಹುದು.


ಯುವಜನರು ಉದ್ಯೋಗದಲ್ಲಿ ತೊಡಗಿಸಿಕೊಳ್ಳದಿರುವುದು ಅವರ ವೈಯಕ್ತಿಕ ಆದಾಯಕ್ಕೆ ಮಾತ್ರವಲ್ಲ, ಕುಟುಂಬದ ಆರ್ಥಿಕ ಸ್ಥಿತಿಗೂ ಪರಿಣಾಮ ಬೀರುತ್ತದೆ. ಕುಟುಂಬದ ಆದಾಯಕ್ಕೆ ಕೊಡುಗೆ ನೀಡಬೇಕಾದ ವಯಸ್ಸಿನಲ್ಲಿ ಯುವಜನರು ಉದ್ಯೋಗದಿಂದ ದೂರವಿದ್ದರೆ, ಆರ್ಥಿಕ ಒತ್ತಡ ಹೆಚ್ಚಾಗುವ ಸಾಧ್ಯತೆಯಿದೆ. 


ಶಿಕ್ಷಣ ವ್ಯವಸ್ಥೆಯ ಸವಾಲು

ಹೆಚ್ಚಿನ ಸಂಖ್ಯೆಯ ಯುವಜನರು ಶಿಕ್ಷಣದಿಂದ ಹೊರಗುಳಿಯುತ್ತಿರುವುದು ಶಿಕ್ಷಣ ವ್ಯವಸ್ಥೆಯ ಗುಣಮಟ್ಟ, ಪ್ರವೇಶಾವಕಾಶ ಮತ್ತು ಶಿಕ್ಷಣದ ನಂತರದ ಉದ್ಯೋಗಾವಕಾಶಗಳ ನಡುವಿನ ಹೊಂದಾಣಿಕೆ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಶಿಕ್ಷಣ ಪಡೆದರೂ ಉದ್ಯೋಗಕ್ಕೆ ಅಗತ್ಯವಾದ ಕೌಶಲ ಸಿಗದ ಪರಿಸ್ಥಿತಿಯೂ ಯುವಜನರನ್ನು ಉದ್ಯೋಗ ಮಾರುಕಟ್ಟೆಯಿಂದ ದೂರ ಮಾಡಬಹುದು.


ಇಂದಿನ ಉದ್ಯೋಗ ಮಾರುಕಟ್ಟೆಯಲ್ಲಿ ಸಾಂಪ್ರದಾಯಿಕ ವಿದ್ಯಾರ್ಹತೆಯ ಜೊತೆಗೆ ತಾಂತ್ರಿಕ ಜ್ಞಾನ, ಡಿಜಿಟಲ್ ಕೌಶಲ, ಸಂವಹನ ಸಾಮರ್ಥ್ಯ ಮತ್ತು ವೃತ್ತಿಪರ ತರಬೇತಿಗಳಿಗೆ ಹೆಚ್ಚಿನ ಮಹತ್ವವಿದೆ. ಶಿಕ್ಷಣ, ಕೌಶಲ ತರಬೇತಿ ಮತ್ತು ಉದ್ಯೋಗ ಮಾರುಕಟ್ಟೆಯ ಅಗತ್ಯಗಳ ನಡುವೆ ಅಂತರವಿದ್ದರೆ ನೀಟ್ ಯುವಜನರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.


ನಿರುದ್ಯೋಗದ ಪ್ರಮಾಣವೂ ಆತಂಕಕಾರಿ

ವರದಿಯಲ್ಲಿ ಉಲ್ಲೇಖಿಸಿರುವ ಅಂಕಿ-ಅಂಶಗಳ ಪ್ರಕಾರ, 15–29 ವರ್ಷ ವಯೋಮಾನದ ಯುವಜನರಲ್ಲಿ ನಿರುದ್ಯೋಗದ ಪ್ರಮಾಣ ಸುಮಾರು 15 ಶೇಕಡಾ ಇದೆ. ಕೆಲವು ರಾಜ್ಯಗಳಲ್ಲಿ ಇದು ಇನ್ನೂ ಹೆಚ್ಚಾಗಿದೆ. ಕೇರಳದಲ್ಲಿ ಯುವ ನಿರುದ್ಯೋಗ ಪ್ರಮಾಣ ಸುಮಾರು 29.9 ಶೇಕಡಾ ಇದ್ದರೆ, ನಾಗಾಲ್ಯಾಂಡ್‌ನಲ್ಲಿ 27.4, ಮಣಿಪುರದಲ್ಲಿ 22.9, ಲಡಾಖ್‌ನಲ್ಲಿ 22.2, ಅರುಣಾಚಲ ಪ್ರದೇಶದಲ್ಲಿ 20.9, ಗೋವಾದಲ್ಲಿ 19.1, ಪಂಜಾಬ್‌ನಲ್ಲಿ 18.8 ಮತ್ತು ಆಂಧ್ರಪ್ರದೇಶದಲ್ಲಿ 17.5 ಶೇಕಡಾ ಎಂದು ವರದಿ ಉಲ್ಲೇಖಿಸುತ್ತದೆ.


ಇಲ್ಲಿ ಒಂದು ಪ್ರಮುಖ ವಿಚಾರವನ್ನು ಗಮನಿಸಬೇಕು. ಶಿಕ್ಷಣದ ಪ್ರಮಾಣ ಹೆಚ್ಚಿದರೆ ಮಾತ್ರ ಉದ್ಯೋಗ ಖಾತರಿಯಾಗುವುದಿಲ್ಲ. ಶಿಕ್ಷಣದ ಗುಣಮಟ್ಟ, ಉದ್ಯೋಗ ಮಾರುಕಟ್ಟೆಯ ಬೇಡಿಕೆ, ವೃತ್ತಿಪರ ಕೌಶಲ, ಅನುಭವ ಮತ್ತು ಕೈಗಾರಿಕೆಗಳ ಅಗತ್ಯಗಳಿಗೆ ಹೊಂದಿಕೊಳ್ಳುವ ಸಾಮರ್ಥ್ಯವೂ ಅಷ್ಟೇ ಮುಖ್ಯ.


ಪದವಿ ಇದೆ; ಆದರೆ ಉದ್ಯೋಗ ಎಲ್ಲಿದೆ?

ಇಂದಿನ ಯುವಜನರಲ್ಲಿ ಮತ್ತೊಂದು ವೈರುಧ್ಯ ಕಂಡುಬರುತ್ತಿದೆ. ಒಂದು ಕಡೆ ಪದವೀಧರರ ಸಂಖ್ಯೆ ಹೆಚ್ಚುತ್ತಿದೆ. ಮತ್ತೊಂದೆಡೆ, ಅವರ ವಿದ್ಯಾರ್ಹತೆಗೆ ಹೊಂದುವ ಉದ್ಯೋಗ ದೊರೆಯುವುದು ಕಷ್ಟವಾಗುತ್ತಿದೆ.


ನೀತಿ ಆಯೋಗದ ವರದಿಯ ಪ್ರಕಾರ, ಪದವೀಧರರಲ್ಲಿ ಕೇವಲ 8.25 ಶೇಕಡಾ ಮಂದಿಯಷ್ಟೇ ತಮ್ಮ ವಿದ್ಯಾರ್ಹತೆಗೆ ಹೊಂದಿಕೆಯಾಗುವ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬ ಅಂಶ ಗಮನ ಸೆಳೆಯುತ್ತದೆ.


ಕೆಲವರು ಉನ್ನತ ಶಿಕ್ಷಣಕ್ಕೆ ಹೋಗಲು ಸಾಧ್ಯವಾಗದೆ ಕುಟುಂಬದ ಆರ್ಥಿಕ ನೆರವಿಗಾಗಿ ಯಾವುದೇ ಉದ್ಯೋಗವನ್ನು ಸ್ವೀಕರಿಸುತ್ತಾರೆ. ವಿದ್ಯಾರ್ಹತೆಗೆ ಹೊಂದಿಕೆಯಾಗದಿದ್ದರೂ ಸ್ಥಿರ ಆದಾಯ ನೀಡುವ ಉದ್ಯೋಗವೇ ಮುಖ್ಯವಾಗುತ್ತದೆ.


ಇನ್ನೂ ಕೆಲವರು ಉದ್ಯೋಗ ಮಾರುಕಟ್ಟೆಗೆ ಹೊಂದಿಕೊಳ್ಳಲು ಸಾಧ್ಯವಾಗದೆ ನಿಧಾನವಾಗಿ ಉದ್ಯೋಗದ ಹುಡುಕಾಟವನ್ನೇ ಕೈಬಿಡುತ್ತಾರೆ. ಅಂತಹ ಯುವಜನರು ಕೊನೆಗೆ ನೀಟ್ ವರ್ಗಕ್ಕೆ ಸೇರುವ ಅಪಾಯವಿದೆ.


ಬಡ ಕುಟುಂಬಗಳ ಯುವಜನರಿಗೆ ಹೊರೆ ಹೆಚ್ಚು

ಯುವಜನರ ನಿರುದ್ಯೋಗವನ್ನು ಕೇವಲ ಅವರ ವೈಯಕ್ತಿಕ ಸಾಮರ್ಥ್ಯದ ಕೊರತೆಯೆಂದು ಪರಿಗಣಿಸುವುದು ತಪ್ಪು. ಕಡಿಮೆ ಆದಾಯದ ಕುಟುಂಬದ ಯುವಜನರಿಗೆ ಕಾಲೇಜು ಶಿಕ್ಷಣದ ಶುಲ್ಕ, ವಸತಿ ವೆಚ್ಚ, ಪ್ರಯಾಣ ವೆಚ್ಚ, ಪುಸ್ತಕಗಳು ಮತ್ತು ಖಾಸಗಿ ತರಬೇತಿಯ ವೆಚ್ಚಗಳನ್ನು ಭರಿಸುವುದು ಕಷ್ಟವಾಗಬಹುದು.


ಪದವಿ ಮುಗಿಸಿದ ನಂತರವೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ, ತಾಂತ್ರಿಕ ಕೌಶಲ ತರಬೇತಿ ಅಥವಾ ವೃತ್ತಿಪರ ಕೋರ್ಸ್‌ಗಳಿಗೆ ಹಣ ಬೇಕಾಗುತ್ತದೆ. ಕುಟುಂಬದ ಆರ್ಥಿಕ ಪರಿಸ್ಥಿತಿ ದುರ್ಬಲವಾಗಿದ್ದರೆ ಯುವಜನತೆಯ ಮುಂದೆ ಎರಡು ಆಯ್ಕೆಗಳಷ್ಟೇ ಉಳಿಯಬಹುದು—ತಕ್ಷಣ ಯಾವುದಾದರೂ ಕೆಲಸಕ್ಕೆ ಸೇರುವುದು ಅಥವಾ ಉದ್ಯೋಗದ ನಿರೀಕ್ಷೆಯಲ್ಲಿ ಮನೆಯಲ್ಲೇ ಉಳಿಯುವುದು. ಇದು ಕೇವಲ ಒಬ್ಬ ಯುವಕನ ಸಮಸ್ಯೆಯಲ್ಲ; ಅದು ಇಡೀ ಕುಟುಂಬದ ಆರ್ಥಿಕ ಪ್ರಗತಿಯನ್ನು ನಿಧಾನಗೊಳಿಸುವ ಸಮಸ್ಯೆ.


ಕೌಶಲಕ್ಕೆ ಉದ್ಯೋಗದ ಕೊಂಡಿ ಬೇಕು

ಯುವಜನರಿಗೆ ಕೌಶಲ ತರಬೇತಿ ನೀಡುವುದಷ್ಟೇ ಸಾಕಾಗುವುದಿಲ್ಲ; ಅದು ಉದ್ಯೋಗದ ಬೇಡಿಕೆಗೆ ಹೊಂದಿಕೆಯಾಗಬೇಕು. ಸ್ಥಳೀಯ ಹಾಗೂ ಭವಿಷ್ಯದ ಉದ್ಯೋಗ ಮಾರುಕಟ್ಟೆಯಲ್ಲಿ ಬೇಡಿಕೆಯಿರುವ ಕೌಶಲಗಳನ್ನು ಗುರುತಿಸಿ ತರಬೇತಿ ಕಾರ್ಯಕ್ರಮಗಳನ್ನು ರೂಪಿಸಬೇಕು. ಕೃತಕ ಬುದ್ಧಿಮತ್ತೆ, ಡಿಜಿಟಲ್ ತಂತ್ರಜ್ಞಾನ, ಆರೋಗ್ಯ ಸೇವೆ, ನವೀಕರಿಸಬಹುದಾದ ಇಂಧನ, ಪ್ರವಾಸೋದ್ಯಮ, ಲಾಜಿಸ್ಟಿಕ್ಸ್ ಮತ್ತು ಕೃಷಿ ಸಂಸ್ಕರಣೆಯಂತಹ ಬೆಳೆಯುತ್ತಿರುವ ಕ್ಷೇತ್ರಗಳ ಅಗತ್ಯಗಳಿಗೆ ಅನುಗುಣವಾಗಿ ಯುವಜನರನ್ನು ಸಜ್ಜುಗೊಳಿಸುವುದು ಅಗತ್ಯ.


ಈ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರದ ಕೌಶಲ್ಯಾಭಿವೃದ್ಧಿ ಪ್ರಯತ್ನಗಳು ಈಗ ಸಾಂಪ್ರದಾಯಿಕ ತರಬೇತಿಯನ್ನು ಮೀರಿ, ಉದ್ಯೋಗ ಮಾರುಕಟ್ಟೆಗೆ ಅಗತ್ಯವಾದ ಹೊಸ ಕೌಶಲಗಳತ್ತ ವಿಸ್ತರಿಸುತ್ತಿವೆ. ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆ (PMKVY) ಮೂಲಕ ಅಲ್ಪಾವಧಿಯ ಕೌಶಲ ತರಬೇತಿ, ಮರುಕೌಶಲ್ಯ ಮತ್ತು ಉನ್ನತ ಕೌಶಲ್ಯಾಭಿವೃದ್ಧಿಗೆ ಅವಕಾಶ ಕಲ್ಪಿಸಲಾಗುತ್ತಿದೆ. Skill India Digital Hub ನಂತಹ ಡಿಜಿಟಲ್ ವೇದಿಕೆಗಳು ತರಬೇತಿ, ಪ್ರಮಾಣಪತ್ರ ಮತ್ತು ಉದ್ಯೋಗಾವಕಾಶಗಳನ್ನು ಒಂದೇ ವ್ಯವಸ್ಥೆಯೊಂದಿಗೆ ಸಂಪರ್ಕಿಸುವ ಪ್ರಯತ್ನ ಮಾಡುತ್ತಿವೆ. ಸರ್ಕಾರಿ ITI ಗಳನ್ನು ಆಧುನೀಕರಿಸುವ PM-SETUಯಂತಹ ಉಪಕ್ರಮಗಳು ಕೈಗಾರಿಕೆಗಳ ಅಗತ್ಯಕ್ಕೆ ತಕ್ಕಂತೆ ಯುವಜನರಿಗೆ ಆಧುನಿಕ ಕೌಶಲ ಮತ್ತು ಪ್ರಾಯೋಗಿಕ ತರಬೇತಿ ಒದಗಿಸುವತ್ತ ಗಮನಹರಿಸುತ್ತಿವೆ.


ಈ ಪ್ರಯತ್ನಗಳ ಜೊತೆಗೆ ಅಪ್ರೆಂಟಿಸ್‌ಶಿಪ್ ಕಾರ್ಯಕ್ರಮಗಳು, ರಾಷ್ಟ್ರೀಯ ವೃತ್ತಿ ಸೇವೆ (NCS) ಮತ್ತು ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ (DDU-GKY) ಸೇರಿದಂತೆ ಹಲವು ಕಾರ್ಯಕ್ರಮಗಳು ಯುವಜನರನ್ನು ಉದ್ಯೋಗ ಮಾರುಕಟ್ಟೆಯೊಂದಿಗೆ ಸಂಪರ್ಕಿಸಲು ನೆರವಾಗುತ್ತಿವೆ. ಸ್ವಉದ್ಯೋಗಕ್ಕೆ PMEGP ಮತ್ತು ಮುದ್ರಾ ಯೋಜನೆಗಳೂ ಅವಕಾಶ ಒದಗಿಸುತ್ತವೆ. ಆದರೆ ತರಬೇತಿ ಅಥವಾ ಪ್ರಮಾಣಪತ್ರದಲ್ಲೇ ಪ್ರಕ್ರಿಯೆ ನಿಲ್ಲದೆ, ಕೌಶಲ–ಅಪ್ರೆಂಟಿಸ್‌ಶಿಪ್–ಉದ್ಯೋಗ ಅಥವಾ ಸ್ವಉದ್ಯೋಗ–ಮಾರುಕಟ್ಟೆ ಎಂಬ ಪೂರ್ಣ ಕೊಂಡಿ ನಿರ್ಮಾಣವಾಗಬೇಕು. ಆಗ ಮಾತ್ರ ಕೌಶಲ ತರಬೇತಿ ಯುವಜನರ ಬದುಕಿನಲ್ಲಿ ನಿಜವಾದ ಬದಲಾವಣೆ ತರಬಲ್ಲದು.


ಉದ್ಯೋಗ ಹುಡುಕುವವರಿಂದ ಉದ್ಯೋಗ ಸೃಷ್ಟಿಸುವವರತ್ತ

ಎಲ್ಲ ಯುವಜನರೂ ಸರ್ಕಾರಿ ಅಥವಾ ಖಾಸಗಿ ಉದ್ಯೋಗವನ್ನೇ ಅವಲಂಬಿಸಬೇಕಿಲ್ಲ. ಕೌಶಲದ ಜೊತೆಗೆ ಉದ್ಯಮಶೀಲತೆಯನ್ನೂ ಬೆಳೆಸುವುದು ಅಗತ್ಯ. ಸಣ್ಣ ಉದ್ಯಮ, ಡಿಜಿಟಲ್ ಸೇವೆ, ಕೃಷಿ ಆಧಾರಿತ ಉದ್ಯಮ, ಆಹಾರ ಸಂಸ್ಕರಣೆ, ಪ್ರವಾಸೋದ್ಯಮ ಮತ್ತು ಕರಕುಶಲ ಕ್ಷೇತ್ರಗಳಲ್ಲಿ ಸ್ವಉದ್ಯೋಗದ ಅವಕಾಶಗಳನ್ನು ವಿಸ್ತರಿಸಬಹುದು.


ಈ ನಿಟ್ಟಿನಲ್ಲಿ ದೇಶದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ RUDSETI ಮತ್ತು RSETI ಮಾದರಿಗಳ ಅನುಭವವೂ ಗಮನಾರ್ಹವಾಗಿದೆ. ಗ್ರಾಮೀಣ ಯುವಜನರಿಗೆ ಅಲ್ಪಾವಧಿಯ, ಉದ್ಯೋಗೋನ್ಮುಖ ಕೌಶಲ ತರಬೇತಿ ನೀಡುವುದರ ಜೊತೆಗೆ, ಸ್ವಉದ್ಯೋಗ ಆರಂಭಿಸಲು ಅಗತ್ಯವಾದ ಮಾರ್ಗದರ್ಶನ, ಉದ್ಯಮಶೀಲತಾ ತರಬೇತಿ ಮತ್ತು ಬ್ಯಾಂಕ್ ಸಾಲದಂತಹ ಹಣಕಾಸಿನ ಸಂಪರ್ಕವನ್ನು ಕಲ್ಪಿಸುವುದು ಈ ಸಂಸ್ಥೆಗಳ ಪ್ರಮುಖ ವಿಶೇಷತೆ.


ಇದರ ಪರಿಣಾಮವೂ ಗಮನಾರ್ಹವಾಗಿದೆ. ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಮಾಹಿತಿಯ ಪ್ರಕಾರ, 2023–24ರ ಅಂತ್ಯದವರೆಗೆ RSETIಗಳ ಮೂಲಕ 49.31 ಲಕ್ಷ ಯುವಜನರಿಗೆ ತರಬೇತಿ ನೀಡಲಾಗಿದ್ದು, ಅವರಲ್ಲಿ 35.69 ಲಕ್ಷ ಮಂದಿ ಉದ್ಯೋಗ ಅಥವಾ ಸ್ವಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದಾರೆ. ಅಂದರೆ, ತರಬೇತಿ ಪಡೆದವರಲ್ಲಿ ಸುಮಾರು 72 ಶೇಕಡಾ ಮಂದಿ ಜೀವನೋಪಾಯದೊಂದಿಗೆ ಸಂಪರ್ಕ ಹೊಂದಿದ್ದಾರೆ.


ತರಬೇತಿ ಮುಗಿದ ನಂತರವೂ ಮಾರ್ಗದರ್ಶನ ಮತ್ತು ಅನುಸರಣೆ ನೀಡುವುದರಿಂದ, ಕೇವಲ ಪ್ರಮಾಣಪತ್ರ ನೀಡುವುದಕ್ಕಿಂತ ಯುವಜನರನ್ನು ಸ್ವಾವಲಂಬಿಗಳನ್ನಾಗಿ ಮಾಡುವತ್ತ ಈ ಮಾದರಿ ಗಮನಹರಿಸುತ್ತದೆ. ಇದೇ ರೀತಿಯಲ್ಲಿ ಸ್ವಸಹಾಯ ಸಂಘಗಳ (SHGs) ಅನುಭವವೂ ಯುವಜನರ ಸಬಲೀಕರಣಕ್ಕೆ ಹಲವು ಪಾಠಗಳನ್ನು ನೀಡುತ್ತದೆ. ವಿಶೇಷವಾಗಿ ಗ್ರಾಮೀಣ ಮಹಿಳೆಯರು ಸಣ್ಣ ಉಳಿತಾಯ, ಪರಸ್ಪರ ಸಾಲಸಹಾಯ, ಕೌಶಲ ತರಬೇತಿ ಮತ್ತು ಸಮೂಹ ಉದ್ಯಮಗಳ ಮೂಲಕ ತಮ್ಮ ಆರ್ಥಿಕ ಚಟುವಟಿಕೆಗಳನ್ನು ವಿಸ್ತರಿಸಿರುವುದು ಗಮನಾರ್ಹ.


ಒಬ್ಬೊಬ್ಬರಾಗಿ ಎದುರಿಸಲು ಕಷ್ಟವಾಗುವ ಹಣಕಾಸು ಮತ್ತು ಮಾರುಕಟ್ಟೆಯ ಸವಾಲುಗಳನ್ನು ಸಂಘಟಿತವಾಗಿ ಎದುರಿಸುವ ಸಾಮರ್ಥ್ಯವನ್ನು SHG ಮಾದರಿ ಬೆಳೆಸಿದೆ. ಈ ಅನುಭವವನ್ನು ಯುವಜನರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆಯೊಂದಿಗೆ ಜೋಡಿಸಿದರೆ, ತರಬೇತಿ ಪಡೆದ ಯುವಕ ಅಥವಾ ಯುವತಿ ಉದ್ಯೋಗ ಹುಡುಕುವವರಾಗಿಯೇ ಉಳಿಯದೆ, ಸಣ್ಣ ಉದ್ಯೋಗಾವಕಾಶಗಳನ್ನು ಸೃಷ್ಟಿಸುವವರಾಗುವ ಸಾಧ್ಯತೆ ಹೆಚ್ಚುತ್ತದೆ.


ಈ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ಉದ್ಯೋಗ ಸೃಜನ ಕಾರ್ಯಕ್ರಮ (PMEGP) ಹಾಗೂ ಮುದ್ರಾ ಯೋಜನೆಗಳಂತಹ ಯೋಜನೆಗಳನ್ನು ಕೌಶಲ ತರಬೇತಿ, ಮಾರ್ಗದರ್ಶನ ಮತ್ತು ಮಾರುಕಟ್ಟೆ ಸಂಪರ್ಕದೊಂದಿಗೆ ಜೋಡಿಸಬೇಕು. ತರಬೇತಿ ಮಾತ್ರವಲ್ಲ, ಹಣಕಾಸು ಮತ್ತು ಮಾರುಕಟ್ಟೆಯ ಬೆಂಬಲವೂ ದೊರೆತಾಗಲೇ ಯುವಜನರ ಕೌಶಲ ಉದ್ಯಮವಾಗಿ ರೂಪುಗೊಳ್ಳುತ್ತದೆ. ಉದ್ಯೋಗ ಹುಡುಕುವ ಯುವಜನತೆಯಿಂದ ಉದ್ಯೋಗ ಸೃಷ್ಟಿಸುವ ಯುವಜನತೆಯತ್ತ ಸಾಗುವುದು ವಿಕಸಿತ ಭಾರತದ ನಿರ್ಮಾಣಕ್ಕೆ ಮಹತ್ವದ ಹೆಜ್ಜೆಯಾಗಬಹುದು.


ಓದುತ್ತಲೇ ಕಲಿಯಲಿ, ಕಲಿಯುತ್ತಲೇ ಗಳಿಸಲಿ

ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಅರೆಕಾಲಿಕ ಉದ್ಯೋಗ ಅಥವಾ ಇಂಟರ್ನ್‌ಶಿಪ್ ಮೂಲಕ ಆದಾಯ ಗಳಿಸುವ ಅವಕಾಶವೂ ದೊರೆಯಬೇಕು. ಇದರಿಂದ ಎರಡು ಪ್ರಯೋಜನಗಳಿವೆ. ಮೊದಲನೆಯದಾಗಿ, ವಿದ್ಯಾರ್ಥಿಗಳಿಗೆ ಕುಟುಂಬದ ಮೇಲಿನ ಆರ್ಥಿಕ ಅವಲಂಬನೆ ಕಡಿಮೆಯಾಗುತ್ತದೆ. ಎರಡನೆಯದಾಗಿ, ಶಿಕ್ಷಣದ ಜೊತೆಗೆ ಕೆಲಸದ ಅನುಭವ ದೊರೆಯುತ್ತದೆ. ಕಾಲೇಜು ಶಿಕ್ಷಣ ಮತ್ತು ಕೈಗಾರಿಕೆಗಳ ನಡುವೆ ಇಂಟರ್ನ್‌ಶಿಪ್ ವ್ಯವಸ್ಥೆಯನ್ನು ಬಲಪಡಿಸುವುದು ಈ ನಿಟ್ಟಿನಲ್ಲಿ ಪರಿಣಾಮಕಾರಿ ಕ್ರಮವಾಗಬಹುದು.


ಶಿಕ್ಷಣ ಸಂಸ್ಥೆ ಮತ್ತು ಕೈಗಾರಿಕೆಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ಅಪ್ರೆಂಟಿಸ್‌ಶಿಪ್ ವ್ಯವಸ್ಥೆಯನ್ನು ಬಲಪಡಿಸುವ ಅಗತ್ಯವಿದೆ. ರಾಷ್ಟ್ರೀಯ ಅಪ್ರೆಂಟಿಸ್‌ಶಿಪ್ ಪ್ರಚಾರ ಯೋಜನೆಯಂತಹ ಕಾರ್ಯಕ್ರಮಗಳು ಯುವಜನರಿಗೆ ತರಬೇತಿಯ ಜೊತೆಗೆ ಕಾರ್ಯಾನುಭವ ಪಡೆಯಲು ನೆರವಾಗುವ ಮಾದರಿಯಾಗಬಹುದು.


ಶಿಕ್ಷಣ ವ್ಯವಸ್ಥೆಯೂ ಬದಲಾಗಬೇಕು

‘ನೀಟ್’ ಯುವಜನರು ನಿರರ್ಥಕರಲ್ಲ. ಅವರಲ್ಲಿ ಅನೇಕರು ಅವಕಾಶಕ್ಕಾಗಿ ಕಾಯುತ್ತಿರಬಹುದು. ಕೆಲವರಿಗೆ ಮಾರ್ಗದರ್ಶನದ ಕೊರತೆ ಇರಬಹುದು. ಕೆಲವರು ಆರ್ಥಿಕ ಸಂಕಷ್ಟದಲ್ಲಿರಬಹುದು. ಕೆಲವರಿಗೆ ತಮ್ಮ ಸಾಮರ್ಥ್ಯವೇನು ಎಂಬ ಅರಿವಿಲ್ಲದಿರಬಹುದು. ಇನ್ನೂ ಕೆಲವರಿಗೆ ಸೂಕ್ತವಾದ ಉದ್ಯೋಗಾವಕಾಶಗಳ ಮಾಹಿತಿ ದೊರೆಯದಿರಬಹುದು.


ಹೀಗಾಗಿ ಅವರ ಸಮಸ್ಯೆಯನ್ನು ಅವಕಾಶದ ಕೊರತೆಯಾಗಿ ನೋಡಬೇಕು; ವ್ಯಕ್ತಿಯ ವೈಫಲ್ಯವೆಂದು ಮಾತ್ರ ಅಲ್ಲ. ನೀಟ್ ಸಮಸ್ಯೆಗೆ ಸರ್ಕಾರ ಮಾತ್ರ ಪರಿಹಾರ ನೀಡಲು ಸಾಧ್ಯವಿಲ್ಲ. ಶಿಕ್ಷಣ ಸಂಸ್ಥೆಗಳೂ ತಮ್ಮ ಪಾತ್ರವನ್ನು ಮರುಪರಿಶೀಲಿಸಬೇಕು. ಪದವಿ ನೀಡುವುದಷ್ಟೇ ವಿಶ್ವವಿದ್ಯಾಲಯಗಳ ಗುರಿಯಾಗಬಾರದು. ಉದ್ಯೋಗಾರ್ಹತೆ, ಕೌಶಲ, ಸಂವಹನ ಸಾಮರ್ಥ್ಯ, ಸಮಸ್ಯೆ ಪರಿಹರಿಸುವ ಕೌಶಲ, ಉದ್ಯಮಶೀಲತೆ ಮತ್ತು ಡಿಜಿಟಲ್ ಸಾಮರ್ಥ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಬೇಕು.


ಪ್ರತಿ ಕಾಲೇಜಿನಲ್ಲೂ ವೃತ್ತಿ ಮಾರ್ಗದರ್ಶನ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತಾ ಬೆಂಬಲ ವ್ಯವಸ್ಥೆಗಳನ್ನು ಪರಿಣಾಮಕಾರಿಯಾಗಿ ರೂಪಿಸುವ ಅಗತ್ಯವಿದೆ. ವಿದ್ಯಾರ್ಥಿ ಪದವಿ ಮುಗಿಸುವ ವೇಳೆಗೆ “ನನ್ನ ಬಳಿ ಪದವಿ ಇದೆ” ಎನ್ನುವುದಕ್ಕಿಂತ “ನನ್ನ ಬಳಿ ಉದ್ಯೋಗಕ್ಕೆ ಅಗತ್ಯವಾದ ಕೌಶಲವಿದೆ” ಎಂದು ಆತ್ಮವಿಶ್ವಾಸದಿಂದ ಹೇಳುವಂತಾಗಬೇಕು.


ಯುವಶಕ್ತಿಯನ್ನು ಜನಸಂಖ್ಯಾ ಲಾಭವಾಗಿಸಬೇಕು

ಭಾರತದ ಜನಸಂಖ್ಯಾ ರಚನೆಯಲ್ಲಿ ಯುವಜನರ ಪಾಲು ದೊಡ್ಡದಾಗಿದೆ. ಇಂತಹ ಯುವ ಜನಸಂಖ್ಯೆಯನ್ನು ದೇಶದ ಅಭಿವೃದ್ಧಿಗೆ ಬಳಸಿಕೊಳ್ಳಲು ಸಾಧ್ಯವಾದರೆ ಭಾರತಕ್ಕೆ ಅಪಾರವಾದ ಆರ್ಥಿಕ ಮತ್ತು ಸಾಮಾಜಿಕ ಅವಕಾಶಗಳು ತೆರೆದುಕೊಳ್ಳುತ್ತವೆ.


ಆದರೆ ಯುವಜನರು ಶಿಕ್ಷಣದಿಂದ ಹೊರಗುಳಿದರೆ, ಉದ್ಯೋಗ ಮಾರುಕಟ್ಟೆಗೆ ಪ್ರವೇಶಿಸಲಾಗದಿದ್ದರೆ ಅಥವಾ ತಮ್ಮ ಸಾಮರ್ಥ್ಯಕ್ಕೆ ತಕ್ಕ ಕೌಶಲಗಳನ್ನು ಪಡೆಯಲಾಗದಿದ್ದರೆ, ಈ ಜನಸಂಖ್ಯಾ ಲಾಭವೇ ಜನಸಂಖ್ಯಾ ಸವಾಲಾಗಿ ಪರಿವರ್ತನೆಯಾಗಬಹುದು.


ಯುವಜನರ ಕೈಯಲ್ಲಿ ಪದವಿ ಇದ್ದರೂ ಕೌಶಲವಿಲ್ಲದಿದ್ದರೆ ಉದ್ಯೋಗ ಸಿಗುವುದು ಕಷ್ಟ. ಕೌಶಲವಿದ್ದರೂ ಉದ್ಯೋಗಾವಕಾಶದ ಮಾಹಿತಿ ಇಲ್ಲದಿದ್ದರೆ ಪ್ರಯೋಜನವಿಲ್ಲ. ಉದ್ಯೋಗಾವಕಾಶವಿದ್ದರೂ ಅದನ್ನು ಪಡೆಯಲು ಅಗತ್ಯವಾದ ತರಬೇತಿ ಪಡೆಯಲು ಸಾಧ್ಯವಾಗದಿದ್ದರೆ ಮತ್ತೊಂದು ಸಮಸ್ಯೆ. ಹೀಗಾಗಿ ಶಿಕ್ಷಣ–ಕೌಶಲ–ಉದ್ಯೋಗಗಳ ನಡುವೆ ಬಲವಾದ ಸಂಪರ್ಕ ನಿರ್ಮಿಸುವುದು ಇಂದಿನ ಅಗತ್ಯ.


ಪ್ರತಿಯೊಬ್ಬ ಯುವಜನರಿಗೂ ಕೌಶಲ ಮತ್ತು ಅವಕಾಶ

8.70 ಕೋಟಿ ಯುವಜನರ ನೀಟ್ ಸ್ಥಿತಿ ಕೇವಲ ಒಂದು ಅಂಕಿ-ಅಂಶವಲ್ಲ; ಅದು ಭಾರತದ ಭವಿಷ್ಯದ ಬಗ್ಗೆ ನಮಗೆ ಎಚ್ಚರಿಕೆ ನೀಡುವ ಸಂಕೇತ. ಇದು ಯುವಜನರ ಸಾಮರ್ಥ್ಯ, ಕುಟುಂಬಗಳ ಆರ್ಥಿಕ ಭದ್ರತೆ, ಶಿಕ್ಷಣ ವ್ಯವಸ್ಥೆಯ ಪರಿಣಾಮಕಾರಿತ್ವ, ಉದ್ಯೋಗ ಮಾರುಕಟ್ಟೆಯ ಸಿದ್ಧತೆ ಮತ್ತು ದೇಶದ ಮಾನವ ಸಂಪನ್ಮೂಲದ ಭವಿಷ್ಯಕ್ಕೆ ಸಂಬಂಧಿಸಿದ ಬಹುಆಯಾಮದ ಸವಾಲಾಗಿದೆ. ಈ ಸವಾಲನ್ನು ಅವಕಾಶವಾಗಿ ಪರಿವರ್ತಿಸುವುದು ಇಂದಿನ ಅತ್ಯಂತ ದೊಡ್ಡ ರಾಷ್ಟ್ರೀಯ ಕರ್ತವ್ಯ. ಯಾವ ಯುವಕನೂ ಅವಕಾಶದ ಕೊರತೆಯಿಂದ ಹಿಂದೆ ಉಳಿಯಬಾರದು; ಪ್ರತಿಯೊಬ್ಬ ಯುವಕನ ಕೈಗೂ ಕೌಶಲ, ಪ್ರತಿಯೊಬ್ಬ ಯುವತಿಯ ಕೈಗೂ ಅವಕಾಶ, ಪ್ರತಿಯೊಬ್ಬ ಕುಟುಂಬಕ್ಕೂ ಆರ್ಥಿಕ ಸಬಲೀಕರಣದ ದಾರಿ ದೊರೆಯಬೇಕು.


ಕೌಶಲಸಂಪನ್ನ ಯುವಶಕ್ತಿಯೇ ವಿಕಸಿತ ಭಾರತದ ಬಲ

2047ರ ವಿಕಸಿತ ಭಾರತದ ಗುರಿ ಕೇವಲ ದೊಡ್ಡ ಆರ್ಥಿಕತೆಯನ್ನು ನಿರ್ಮಿಸುವ ಗುರಿಯಲ್ಲ; ಅದು ಸಾಮರ್ಥ್ಯವಂತ, ಕೌಶಲಸಂಪನ್ನ, ಆತ್ಮನಿರ್ಭರ ಮತ್ತು ಅವಕಾಶಗಳಿಂದ ಸಬಲಗೊಂಡ ಯುವ ಭಾರತವನ್ನು ನಿರ್ಮಿಸುವ ಸಂಕಲ್ಪ.


ಭಾರತದ ಯುವಜನತೆ ಕೇವಲ ಉದ್ಯೋಗ ಹುಡುಕುವವರಾಗಿರದೆ, ಉದ್ಯೋಗ ಸೃಷ್ಟಿಸುವವರಾಗಬೇಕು; ಕೇವಲ ಉದ್ಯೋಗ ಪಡೆಯುವವರಾಗಿರದೆ, ಹೊಸ ಆವಿಷ್ಕಾರ ಮತ್ತು ಉದ್ಯಮಶೀಲತೆಯ ಸಾರಥಿಗಳಾಗಬೇಕು.


ಪ್ರತಿ ಯುವಜನರ ಕೈಯಲ್ಲಿ ಒಂದು ಕೌಶಲ, ಮನಸ್ಸಿನಲ್ಲಿ ಒಂದು ಕನಸು, ಆ ಕನಸನ್ನು ನನಸಾಗಿಸಲು ಅಗತ್ಯವಾದ ಅವಕಾಶ—ಇದೇ ವಿಕಸಿತ ಭಾರತದ ನಿಜವಾದ ಅಡಿಪಾಯ. ಯುವಶಕ್ತಿಯನ್ನು ಕೌಶಲ್ಯ, ಉದ್ಯೋಗ, ಉದ್ಯಮಶೀಲತೆ ಮತ್ತು ಆತ್ಮವಿಶ್ವಾಸದೊಂದಿಗೆ ಜೋಡಿಸಿದಾಗ, ಇಂದಿನ ನೀಟ್ ಸವಾಲು ನಾಳೆಯ ಭಾರತದ ಅತಿ ದೊಡ್ಡ ಜನಸಂಖ್ಯಾ ಲಾಭವಾಗಿ ಪರಿವರ್ತನೆಯಾಗಬಹುದು. ಯುವ ಶಕ್ತಿಯೇ ರಾಷ್ಟ್ರ ಶಕ್ತಿ; ಆ ಶಕ್ತಿಗೆ ಸರಿಯಾದ ದಿಕ್ಕು, ಕೌಶಲ ಮತ್ತು ಅವಕಾಶ ನೀಡಿದಾಗಲೇ 2047ರ ವಿಕಸಿತ ಭಾರತ ಸಾಕಾರವಾಗುತ್ತದೆ.


-ಡಾ. ಎ. ಜಯಕುಮಾರ ಶೆಟ್ಟಿ, ಉಜಿರೆ


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top