"ಮೂರನೇ ಶ್ರಾವಣ ಶನಿವಾರದಂದು ಭಕ್ತಿ–ಸಂಗೀತ–ದಾಸ ಸಾಹಿತ್ಯದ ಸಂಗಮ"
ಬೆಂಗಳೂರು: ನಗರದ ಎಚ್‌ಎಸ್‌ಆರ್ ಲೇಔಟ್‌ನ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಶ್ರೀನಿವಾಸ ಕಲ್ಯಾಣ ಮಹೋತ್ಸವ ಸಮಿತಿ ಹಾಗೂ ಎಚ್‌ಎಸ್‌ಆರ್ ಬಡಾವಣೆ ಸಾಂಸ್ಕೃತಿಕ ಅಕಾಡೆಮಿಯ 17ನೇ ವಾರ್ಷಿಕೋತ್ಸವದ ಅಂಗವಾಗಿ, ಮೂರನೇ ಶ್ರಾವಣ ಶನಿವಾರವಾದ ಆಗಸ್ಟ್ 29ರಂದು ಶ್ರೀ ಶ್ರೀನಿವಾಸ ಉತ್ಸವ ಬಳಗದ ವತಿಯಿಂದ ವೈಭವದ ಶ್ರೀನಿವಾಸ ಕಲ್ಯಾಣ ಮಹೋತ್ಸವ ಆಯೋಜಿಸಲಾಗಿದೆ.
ಡಾ. ತಾಯಲೂರು ವಾದಿರಾಜ ಅವರ ನೇತೃತ್ವದ ತಂಡದಿಂದ ಭೂದೇವಿ–ಶ್ರೀದೇವಿ ಸಹಿತ ಶ್ರೀನಿವಾಸ ದೇವರ ಅದ್ದೂರಿ ಕಲ್ಯಾಣೋತ್ಸವ ನಡೆಯಲಿದೆ. ವೇದಮಂತ್ರಗಳ ಘೋಷ, ದಾಸ ಸಾಹಿತ್ಯದ ಕೀರ್ತನೆಗಳು ಹಾಗೂ ಅರ್ಥಪೂರ್ಣ ವ್ಯಾಖ್ಯಾನದೊಂದಿಗೆ ನಡೆಯಲಿರುವ ಈ ಕಾರ್ಯಕ್ರಮ ಭಕ್ತರಿಗೆ ಆಧ್ಯಾತ್ಮಿಕ ಅನುಭೂತಿ ನೀಡಲಿದೆ.
ಹರಿದಾಸ ಸಾಹಿತ್ಯ ಗಾಯಕ ಪಂಡಿತ್ ಸಂತೋಷ್ ಗದ್ದನಕೇರೆ, ಬಾಗಲಕೋಟೆ, ವಿದುಷಿ ಶುಭ ಸಂತೋಷ್ ಹಾಗೂ ಅಪೂರ್ವ ಲಕ್ಷ್ಮಿ ಅವರು ಶ್ರೀನಿವಾಸ ಕಲ್ಯಾಣದ ವಿವಿಧ ಘಟನಾವಳಿಗಳನ್ನು ಸುಶ್ರಾವ್ಯವಾಗಿ ಗಾಯನದ ಮೂಲಕ ಪ್ರಸ್ತುತಪಡಿಸಲಿದ್ದಾರೆ. ಶ್ರೀ ವಾದಿರಾಜ ಸಂಶೋಧನಾ ಪ್ರತಿಷ್ಠಾನದ ನಿರ್ದೇಶಕ ಡಾ. ಬಿ. ಗೋಪಾಲಾಚಾರ್ ಅವರು ಅರ್ಥವಿವರಣೆ ಹಾಗೂ ವ್ಯಾಖ್ಯಾನದ ಮೂಲಕ ಕಲಿಯುಗದ ದೈವ ಶ್ರೀನಿವಾಸ ದೇವರ ಮಹಿಮೆಯನ್ನು ಭಕ್ತರಿಗೆ ಪರಿಚಯಿಸಲಿದ್ದಾರೆ.
ಕಾರ್ಯಕ್ರಮದ ಆರಂಭದಲ್ಲಿ ತಾಳ್ಲಪಾಕ ಅನ್ನಮಾಚಾರ್ಯರ ಕೃತಿಗಳ ಗಾಯನ ನಡೆಯಲಿದ್ದು, ನಂತರ ವಿವಿಧ ಭಜನಾ ಮಂಡಳಿಗಳಿಂದ ಭಜನೆ, ಕೋಲಾಟ ಹಾಗೂ ನೃತ್ಯ ಕಾರ್ಯಕ್ರಮಗಳು ಜರುಗಲಿವೆ.
ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷ ಎ.ಎನ್. ಎಲ್ಲಪ್ಪ ರೆಡ್ಡಿ, ಅಧ್ಯಕ್ಷ ಪ್ರೊ. ಪಿ. ಸದಾಶಿವ ರೆಡ್ಡಿ, ಕಾರ್ಯದರ್ಶಿ ಕೆ. ವಾಸುದೇವ, ಸಲಹೆಗಾರ ಕೆ.ಟಿ. ರಾಮರಾಜು, ವಿ. ಭದ್ರಾ ರೆಡ್ಡಿ ಸೇರಿದಂತೆ ಗಣ್ಯರು ಉಪಸ್ಥಿತರಿರಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ದಾಸ ಸಾಹಿತ್ಯ ಪ್ರಚಾರಕ್ಕೆ ಸಮರ್ಪಿತ ಶ್ರೀ ಶ್ರೀನಿವಾಸ ಉತ್ಸವ ಬಳಗ
‘ಬಾರೋ ಮನೆಗೆ ಗೋವಿಂದ’ ಎಂಬ ಧ್ಯೇಯದೊಂದಿಗೆ 2012ರಲ್ಲಿ ಆರಂಭವಾದ ಶ್ರೀ ಶ್ರೀನಿವಾಸ ಉತ್ಸವ ಬಳಗವು ಆಧ್ಯಾತ್ಮಿಕ, ಸಾಂಸ್ಕೃತಿಕ, ಸಾಹಿತ್ಯ ಹಾಗೂ ಸಂಗೀತ ಪರಂಪರೆಯನ್ನು ಜನಮಾನಸಕ್ಕೆ ತಲುಪಿಸುವ ಕಾರ್ಯದಲ್ಲಿ ತೊಡಗಿದೆ. ದಾಸ ಸಾಹಿತ್ಯ ಪ್ರಚಾರ ಹಾಗೂ ಅದಕ್ಕೆ ಪೂರಕವಾದ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಂಡು ಬರುತ್ತಿರುವ ಬಳಗವು ಪ್ರತಿವರ್ಷ ದಾಸಶ್ರೇಷ್ಠ ಶ್ರೀ ಪುರಂದರದಾಸರ ಆರಾಧನಾ ಸಂದರ್ಭದಲ್ಲಿ ಸಂಗೀತ ವಿದ್ವಾಂಸರ ಉಪನ್ಯಾಸ, ದಾಸವಾಣಿ, ಹರಿದಾಸ ಗೋಷ್ಠಿ, ಭಜನೆ ಹಾಗೂ ‘ಹರಿದಾಸ ಅನುಗ್ರಹ’ ಪ್ರಶಸ್ತಿ ಪ್ರದಾನ ಸಮಾರಂಭಗಳನ್ನು ಆಯೋಜಿಸುತ್ತಿದೆ.
ತಿರುಮಲೆಯಲ್ಲಿ ಸಾಂಪ್ರದಾಯಿಕವಾಗಿ ನಡೆಯುವ ಶ್ರೀನಿವಾಸ ಕಲ್ಯಾಣೋತ್ಸವ ಹಾಗೂ ಊಂಜಲೋತ್ಸವದ ವೈಭವವನ್ನು ದಾಸರ ಪದಗಳು ಮತ್ತು ದೇವರನಾಮಗಳೊಂದಿಗೆ ಸಂಯೋಜಿಸಿ ದೇಶದ ವಿವಿಧೆಡೆ ಪ್ರಸ್ತುತಪಡಿಸುತ್ತಿರುವುದು ಬಳಗದ ಪ್ರಮುಖ ಸೇವೆಯಾಗಿದೆ. ಈ ಕಾರ್ಯಕ್ರಮಗಳು ಭಕ್ತಜನರ ಮನಸೂರೆಗೊಂಡಿವೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

