ರಕ್ಷಾಬಂಧನವನ್ನು ಪ್ರತಿ ವರ್ಷ ಶ್ರಾವಣ ಮಾಸದ ಪೂರ್ಣಿಮೆಯಂದು ಆಚರಿಸಲಾಗುತ್ತದೆ. ಬೆಳಿಗ್ಗೆ ಎದ್ದು ನಿತ್ಯಕರ್ಮಗಳನ್ನು ಮುಗಿಸಿ, ಹೊಸ ಬಟ್ಟೆ ಧರಿಸಿ, ತಂಗಿಯು ಅಣ್ಣನಿಗೆ ತಿಲಕವಿಟ್ಟು, ಆರತಿ ಬೆಳಗಿ, ಮಣಿಕಟ್ಟಿಗೆ ರಾಖಿ ಕಟ್ಟಿ ಆಶೀರ್ವಾದ ಪಡೆಯುತ್ತಾಳೆ. ಅಣ್ಣನು ಪ್ರತಿಯಾಗಿ ಉಡುಗೊರೆ ನೀಡುತ್ತಾನೆ.
ಮದುವೆಯಾಗಿ ತವರು ಮನೆ ತೊರೆದ ಹೆಣ್ಣುಮಗಳಿಗೆ ಸಂಕಷ್ಟ ಬಂದಾಗ ತವರಿನ ಆಸರೆ ಮತ್ತು ಅಣ್ಣನ ಬೆಂಬಲ ಸದಾ ಇರುತ್ತದೆ ಎಂಬ ದೃಢ ವಿಶ್ವಾಸವನ್ನು ಮೂಡಿಸುವುದೇ ನಿಜವಾದ ರಕ್ಷಾಬಂಧನ.
ಧಾರ್ಮಿಕ ಮತ್ತು ಪೌರಾಣಿಕ ಹಿನ್ನೆಲೆ
ಜೈನ ಪರಂಪರೆಯಲ್ಲಿ ನೂಲು ಹುಣ್ಣಿಮೆ: ಈ ದಿನ ಜೈನ ಶ್ರಾವಕರು ಹೊಸ ಜನಿವಾರವನ್ನು (ರತ್ನತ್ರಯ ಸೂತ್ರ) ಧರಿಸುತ್ತಾರೆ. ಜನಿವಾರದಲ್ಲಿರುವ 3 ಪ್ರಧಾನ ಎಳೆಗಳು ರತ್ನತ್ರಯಗಳನ್ನು (ಸಮ್ಯಗ್ದರ್ಶನ, ಸಮ್ಯಗ್ಜ್ಞಾನ, ಸಮ್ಯಕ್ಚಾರಿತ್ರ) ಸೂಚಿಸಿದರೆ, ಅವುಗಳಲ್ಲಿರುವ ಒಟ್ಟು 27 ನೂಲಿನ ಎಳೆಗಳು ಜೈನ ಧರ್ಮದ 27 ಪ್ರಮುಖ ತತ್ವಗಳನ್ನು ಸಂಕೇತಿಸುತ್ತವೆ.
ಕೃಷ್ಣ-ದ್ರೌಪದಿ ಪ್ರಸಂಗ: ಶ್ರೀಕೃಷ್ಣನ ಬೆರಳಿಗೆ ಗಾಯವಾಗಿ ರಕ್ತಸ್ರಾವವಾದಾಗ, ದ್ರೌಪದಿ ತನ್ನ ಸೀರೆಯ ಅಂಚನ್ನು ಹರಿದು ಕಟ್ಟುತ್ತಾಳೆ. ಈ ಋಣಕ್ಕಾಗಿ ಮುಂದೆ ದ್ರೌಪದಿಯ ವಸ್ತ್ರಾಪಹರಣದ ಸಮಯದಲ್ಲಿ ಕೃಷ್ಣನು ಸೀರೆಯನ್ನು ನೀಡಿ ಆಕೆಯ ಮಾನ ರಕ್ಷಿಸುತ್ತಾನೆ.
ಇತರ ಕಥನಗಳು: ದೇವಾಸುರ ಸಂಗ್ರಾಮದಲ್ಲಿ ಇಂದ್ರಾಣಿಯು ಇಂದ್ರನಿಗೆ ಕಟ್ಟಿದ ರಕ್ಷಾಸೂತ್ರ, ಯಮ-ಯಮುನೆಯರ ಬಾಂಧವ್ಯ ಹಾಗೂ ಬಲಿ ಚಕ್ರವರ್ತಿಗೆ ಲಕ್ಷ್ಮಿ ದೇವಿಯು ರಾಖಿ ಕಟ್ಟಿ ವಿಷ್ಣುವನ್ನು ಮರಳಿ ಪಡೆದ ಪ್ರಸಂಗಗಳು ಈ ಹಬ್ಬದ ಮಹತ್ವವನ್ನು ಸಾರುತ್ತವೆ.
ಐತಿಹಾಸಿಕ ಹಾಗೂ ಸಾಮಾಜಿಕ ಆಯಾಮ
ಚಾರಿತ್ರಿಕ ಪ್ರಸಂಗ: ಕ್ರಿ.ಪೂ 326ರಲ್ಲಿ ಅಲೆಕ್ಸಾಂಡರನ ಪತ್ನಿ ರೊಕ್ಸಾನಾ, ಪೋರಸನಿಗೆ ರಕ್ಷಾಸೂತ್ರ ಕಳುಹಿಸಿ ತನ್ನ ಗಂಡನಿಗೆ ಹಾನಿ ಮಾಡದಂತೆ ವಿನಂತಿಸುತ್ತಾಳೆ. ಪೋರಸ್ ಈ ವಿನಂತಿಯನ್ನು ಗೌರವಿಸಿ ಯುದ್ಧದಲ್ಲಿ ಅಲೆಕ್ಸಾಂಡರನನ್ನು ಕೊಲ್ಲುವುದಿಲ್ಲ.
ಸಾಮಾಜಿಕ ಐಕ್ಯತೆ: 1905ರ ಬಂಗಾಳ ವಿಭಜನೆಯ ಸಂದರ್ಭದಲ್ಲಿ ರವೀಂದ್ರನಾಥ ಠಾಕೂರರು ಹಿಂದೂ-ಮುಸ್ಲಿಂ ಐಕ್ಯತೆಯನ್ನು ಸಾರಲು ರಕ್ಷಾಬಂಧನ ಆಚರಣೆಯನ್ನು ಪ್ರೋತ್ಸಾಹಿಸಿದರು.
ಸಂಸ್ಥೆಗಳ ಆಚರಣೆ: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಸೇರಿದಂತೆ ವಿವಿಧ ಸಂಘಟನೆಗಳು ಭಗವಾಧ್ವಜಕ್ಕೆ ರಕ್ಷಾಸೂತ್ರ ಅರ್ಪಿಸಿ, ಭ್ರಾತೃತ್ವ, ಸಾಮಾಜಿಕ ಸಾಮರಸ್ಯ ಮತ್ತು ದೇಶ ರಕ್ಷಣೆಯ ಸಂಕಲ್ಪ ತೊಡಲು ಇದನ್ನು ಆಚರಿಸುತ್ತವೆ.
ದಕ್ಷಿಣ ಭಾರತದ ವಿಶೇಷತೆ ಹಾಗೂ ವ್ಯಾಪಾರೀಕರಣ
ದಕ್ಷಿಣ ಭಾರತದಲ್ಲಿ ನಾಗರಪಂಚಮಿಯ ‘ಅಕ್ಕನ-ತದಿಗೆ’ ಮತ್ತು ದೀಪಾವಳಿಯ ‘ಭಾವನ ಬಿದಿಗೆ’ಯಂತಹ ಸ್ಥಳೀಯ ಹಬ್ಬಗಳು ಸಹೋದರ-ಸಹೋದರಿಯರ ಬಾಂಧವ್ಯವನ್ನು ಸಂಭ್ರಮಿಸುವುದರಿಂದ, ಉತ್ತರ ಭಾರತದಷ್ಟು ವ್ಯಾಪಕವಾಗಿ ರಾಖಿ ಆಚರಣೆ ಇರಲಿಲ್ಲ. ಬದಲಿಗೆ ಈ ದಿನ ‘ಉಪಾಕರ್ಮ/ನೂಲಹುಣ್ಣಿಮೆ’ಗೆ ಹೆಚ್ಚು ಧಾರ್ಮಿಕ ಪ್ರಾಶಸ್ತ್ಯವಿದೆ.
ಇಂದು ರಾಖಿ ಹಬ್ಬವು ಸಣ್ಣ ಪ್ರಮಾಣದ ಉತ್ಪಾದಕರು ಹಾಗೂ ಮಹಿಳಾ ಸ್ವಸಹಾಯ ಸಂಘಗಳಿಗೆ ಜೀವನೋಪಾಯ ಕಲ್ಪಿಸಿದೆಯಾದರೂ, ಅತಿಯಾದ ವ್ಯಾಪಾರೀಕರಣದಿಂದಾಗಿ ಕೇವಲ ಉಡುಗೊರೆಗಳ ವಿನಿಮಯಕ್ಕೆ ಸೀಮಿತವಾಗುವ ಅಪಾಯವಿದೆ.
ರಕ್ಷಾಬಂಧನದ ನಿಜವಾದ ಅರ್ಥ ದುಬಾರಿ ಉಡುಗೊರೆಗಳಲ್ಲಿದೆ ಎಂಬುದಕ್ಕಿಂತಲೂ, ಸಹೋದರ-ಸಹೋದರಿಯರ ನಡುವಿನ ಅಚಲ ಪ್ರೀತಿ, ಭಾವನಾತ್ಮಕ ಬೆಂಬಲ ಮತ್ತು ಗೌರವದಲ್ಲಿದೆ. ಆಧುನಿಕ ಜೀವನದ ವೇಗದಲ್ಲಿ ಮಾನವೀಯ ಬಾಂಧವ್ಯಗಳನ್ನು ಗಟ್ಟಿಗೊಳಿಸುವ ಈ ಪವಿತ್ರ ಭಾವನೆ ಅತ್ಯಗತ್ಯ.
- ಪ್ರೊ. ಭಾಗ್ಯಶ್ರೀ ಬಳಿಗಾರ (ಕಾಶೀನ)
(ಕನ್ನಡ ಉಪನ್ಯಾಸಕರು, ಚೇತನ್ ಕಾಲೇಜ್ ಆಫ್ ಕಾಮರ್ಸ್ BCA & BBA, ಹುಬ್ಬಳ್ಳಿ)
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

