ಸೇನಾ ಮಾದರಿಯ ಸಮವಸ್ತ್ರದೊಂದಿಗೆ ಪುಳಕಿತರಾಗುತ್ತಿರುವ ವಿದ್ಯಾರ್ಥಿ ಸಮೂಹ

Upayuktha
0

ಪುತ್ತೂರಿನ ಅಂಬಿಕಾ ಶಿಕ್ಷಣ ಸಂಸ್ಥೆಯಲ್ಲೊಂದು ಕ್ರಾಂತಿಕಾರಕ ಉಪಕ್ರಮ


ಪುತ್ತೂರು: ಶಾಲಾ ಕಾಲೇಜು ಅಂದ ಮೇಲೆ ಸಮವಸ್ತ್ರಗಳು ಮಾಮೂಲಿ. ಒಂದೊಂದು ಶಿಕ್ಷಣ ಸಂಸ್ಥೆಯಲ್ಲಿ ಒಂದೊಂದು ಬಗೆಯ ಸಮವಸ್ತ್ರ. ಹಾಗಾಗಿ ಸಮವಸ್ತ್ರವನ್ನು ನೋಡಿಯೇ ವಿದ್ಯಾರ್ಥಿಗಳು ಯಾವ ಸಂಸ್ಥೆಗೆ ಸೇರಿದವರೆಂದು ಸುಲಭವಾಗಿಯೇ ಗುರುತಿಸಬಹುದು. ಒಟ್ಟಿನಲ್ಲಿ ನಿಗದಿತವಾದ ಬಣ್ಣ ನಿಗದಿತ ಸಂಸ್ಥೆಯನ್ನು ಪ್ರತಿನಿಧಿಸುತ್ತದೆ. ಆದರೆ ಸಮವಸ್ತ್ರ ಕೇವಲ ಗುರುತಾಗಿದ್ದರಷ್ಟೇ ಸಾಲದು, ಅದು ಧರಿಸಿದವನ ಅಂತರಂಗದಲ್ಲಿ ದೇಶಭಕ್ತಿಯ ಪುಳಕವನ್ನು ಮೂಡಿಸಬೇಕೆಂಬ ವಿನೂತನ ಕಲ್ಪನೆಯೊಂದಿಗೆ ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಅಂಬಿಕಾ ವಿದ್ಯಾಲಯ ಸಿಬಿಎಸ್‍ಇ ಸಂಸ್ಥೆಯಲ್ಲಿ  ಇಂತಹ ಸಮವಸ್ತ್ರವನ್ನು ಜಾರಿಗೊಳಿಸಲಾಗಿದೆ. ಅದರ ಪರಿಣಾಮ ಅಂಬಿಕಾ ಮಕ್ಕಳನ್ನು ಸಮವಸ್ತ್ರದಲ್ಲಿ ಕಾಣುವಾಗ ದೇಶದ ಗಡಿ ರಕ್ಷಣೆಯ ಮೂಲಕ ದೇಶದ ಸಮಸ್ತ ನಾಗರಿಕರನ್ನು ಪೊರೆಯುವ ವೀರ ಸೈನಿಕರೆಲ್ಲರೂ ಎದುರು ಬಂದು ನಿಂತಂತೆ ಭಾಸವಾಗುತ್ತದೆ! 


ಅಂಬಿಕಾ ಶಿಕ್ಷಣ ಸಂಸ್ಥೆಗಳು ಮಕ್ಕಳಲ್ಲಿ ದೇಶಪ್ರೇಮ ತುಂಬುವ ಕಾಯಕವನ್ನು ಅತ್ಯಂತ ಶ್ರದ್ಧೆಯಿಂದ ನಡೆಸಿಕೊಂಡು ಬರುತ್ತಿವೆ. ಪುತ್ತೂರಿನಲ್ಲಿ ದಕ್ಷಿಣ ಭಾರತದ ಏಕೈಕ ಖಾಸಗಿ ಅಮರ್ ಜವಾನ್ ಜ್ಯೋತಿ ಸ್ಮಾರಕ ನಿರ್ಮಿಸಿದ ಹೆಗ್ಗಳಿಕೆಯೂ ಅಂಬಿಕಾಕ್ಕಿದೆ. ಕಾರ್ಗಿಲ್ ಯುದ್ಧದಲ್ಲಿ ಭಾಗಿಗಳಾಗಿ ಭಾರತೀಯ ಸೇನೆ ಕೊಡಮಾಡುವ ಅತ್ಯುನ್ನತ ಪ್ರಶಸ್ತಿಯಾದ ಪರಮ ವೀರ ಚಕ್ರ ಪುರಸ್ಕøತ ಇಬ್ಬರು ಯೋಧರಾದ ಕ್ಯಾಪ್ಟನ್ ಯೋಗೇಂದ್ರ ಸಿಂಗ್ ಯಾದವ್ ಹಾಗೂ ಕ್ಯಾಪ್ಟನ್ ಸಂಜಯ್ ಕುಮಾರ್ ಅವರನ್ನು ಕ್ಯಾಂಪಸ್ ಗೆ ಕರೆಸಿ ವಿದ್ಯಾರ್ಥಿ ಸಮುದಾಯಕ್ಕೆ ಈ ದೇಶದ ನೈಜ ಹೀರೋಗಳನ್ನು ಪರಿಚಯಿಸಿದ ಹೆಮ್ಮೆಯೂ ಅಂಬಿಕಾಕ್ಕೆ ಸಲ್ಲುತ್ತದೆ. ಇದರೊಂದಿಗೆ ಇದೀಗ ಇನ್ನೂ ಒಂದು ಹೆಜ್ಜೆ ಮುಂದುವರೆದು ಮಕ್ಕಳಲ್ಲಿ ಸದಾ ದೇಶಭಕ್ತಿ ಸ್ಫುರಿಸುವಂತೆ ಮಾಡುವ ಉದ್ದೇಶದೊಂದಿಗೆ ಸೇನಾ ಮಾದರಿಯ ಸಮವಸ್ತ್ರವನ್ನು ಪ್ರಸ್ತುತ ವರ್ಷದಿಂದ ಪರಿಚಯಿಸಲಾಗಿದೆ. 


ಸಾಮಾನ್ಯವಾಗಿ ಸಿಬಿಎಸ್‍ಇ ಅಥವ ರಾಜ್ಯ ಆಂಗ್ಲಮಾಧ್ಯಮ ಸಿಲೆಬಸ್‍ನ ಪ್ರತಿಯೊಂದು ಸಂಸ್ಥೆಯಲ್ಲೂ ಒಂದನೆಯಿಂದ ಹತ್ತನೆಯವರೆಗಿನ ವಿದ್ಯಾರ್ಥಿಗಳನ್ನು ನಾಲ್ಕು ಹೌಸ್‍ಗಳಾಗಿ ವಿಂಗಡಣೆ ಮಾಡಿ ಆ ನಾಲ್ಕು ಹೌಸ್‍ಗಳ ಮಧ್ಯೆ ವಿವಿಧ ಸ್ಪರ್ಧೆ, ಕ್ರೀಡೆ, ಚಟುವಟಿಕೆಗಳನ್ನು ನಡಸಲಾಗುತ್ತದೆ. ವಾರದಲ್ಲಿ ಒಂದು ದಿನ ಇಂತಹ ಚಟುವಟಿಕೆಗಳು ನಡೆಯುತ್ತವೆ. ಹಾಗೆ ಚಟುವಟಿಕೆ ನಡೆಸುವ ದಿನಕ್ಕೆಂದೇ ಈ ವಿಶೇಷ ಸೇನಾ ಮಾದರಿ ಸಮವಸ್ತ್ರವನ್ನು ತಯಾರು ಮಾಡಲಾಗಿದೆ. 


ಏನಿದು ಸೇನಾ ಮಾದರಿ ಸಮವಸ್ತ್ರ? : ಇದು ಭಾರತೀಯ ಸೇನೆಯ ಅಧಿಕಾರಿಗಳಾಗಲೀ, ಯೋಧರಾಗಲೀ ಬಳಸುವ ಬಣ್ಣದ ಸಮವಸ್ತ್ರವಲ್ಲ. ಅಂತಹದ್ದನ್ನು ಬಳಸುವುದಕ್ಕೆ ಕಾನೂನಿನಲ್ಲಿ ಅವಕಾಶವೂ ಇಲ್ಲ. ಬದಲಾಗಿ ಇದು ಸೇನಾ ಮಾದರಿಯ ಸಮವಸ್ತ್ರ. ಅರ್ಥಾತ್ ಭಾರತೀಯ ಸೇನೆ ತನ್ನ ಸೈನಿಕರಿಗೆ ಸಮವಸ್ತ್ರವನ್ನು ಯಾವ ಮಾದರಿಯಲ್ಲಿ ಹೊಲಿಸುತ್ತದೋ ಅದನ್ನೇ ಮಾದರಿಯಾಗಿರಿಸಿಕೊಂಡು ಈ ಸಮವಸ್ತ್ರಗಳನ್ನೂ ಹೊಲಿಸಲಾಗಿದೆ. ಪೂರ್ತಿ ಕೈ ಮುಚ್ಚುವ ಕ್ರಮವಿರಬಹುದು, ಎದುರು ಎರಡು ಕಿಸೆಗಳಿರುವ ಮಾದರಿ ಇರಬಹುದು, ಹೆಗಲ ಮೇಲೆ ಪಟ್ಟಿ ಬರುವ ಕ್ರಮ ಇರಬಹುದು, ಬೆಲ್ಟ್ ಧರಿಸುವ ವಿಧಾನ ಇರಬಹುದು... ಇವೆಲ್ಲದರಲ್ಲಿಯೂ ಸೇನಾ ಮಾದರಿಯನ್ನು ಅನುಸರಿಸಲಾಗಿದೆ. 


ರೆಜಿಮೆಂಟ್‍ಗಳ ಹೆಸರು : ಶಾಲೆಯಲ್ಲಿರುವ ನಾಲ್ಕು ಹೌಸ್‍ಗಳನ್ನು ಭಾರತೀಯ ಸೇನೆಯಲ್ಲಿನ ರೆಜಿಮೆಂಟ್‍ಗಳ ಹೆಸರಿನಡಿ ಗುರುತಿಸಲಾಗುತ್ತಿದೆ. ರಜಪೂತ್, ಮರಾಠಾ, ನಾಗಾ ಹಾಗೂ ಗೂರ್ಖಾ ಹೆಸರಿನಿಂದ ಆಯಾ ಹೌಸ್ ಅನ್ನು ಕರೆಯಲಾಗುತ್ತದೆ. ಅಂತೆಯೇ ಸೇನೆಯಲ್ಲಿ ಪ್ರತಿಯೊಂದು ರೆಜಿಮೆಂಟ್‍ಗೂ ಅದರದೇ ಆದ ಘೋಷ ವಾಕ್ಯ ಇರುವಂತೆ ಇಲ್ಲಿಯೂ ಒಂದೊಂದು ಹೌಸ್‍ಗೆ ಒಂದೊಂದು ಘೋಷವಾಕ್ಯ ನೀಡಲಾಗಿದೆ. ರಜಪೂತ್ ಗೆ ಬೋಲೋ ಭಜರಂಗ ಬಲಿ ಕಿ ಜೈ ಎಂಬ ಘೋಷ ವಾಕ್ಯವಾದರೆ ಮರಾಠಾಕ್ಕೆ ಹರಹರ ಮಹಾದೇವ್ ಘೋಷವಾಕ್ಯವಾಗಿದೆ. ಅಂತೆಯೇ ನಾಗಾಕ್ಕೆ ಜೈ ದುರ್ಗಾ ಹಾಗೂ ಗೂರ್ಖಾಕ್ಕೆ ಆಯುರ್ ಗೋರ್ಖಲಿ ಎಂಬ ವಾಕ್ಯವನ್ನು ಪ್ರದಾನಿಸಲಾಗಿದೆ.  


ಆರಂಭದಲ್ಲಿ ಈ ಸಮವಸ್ತ್ರದ ಯಶಸ್ಸಿನ ಬಗೆಗೆ ಪ್ರಶ್ನೆಗಳಿದ್ದವು. ಆದರೆ ಮಕ್ಕಳು ಈಗ ಈ ಸಮವಸ್ತ್ರವನ್ನು ಎಷ್ಟೊಂದು ಗಾಢವಾಗಿ ಪ್ರೀತಿಸುತ್ತಿದ್ದಾರೆ ಎಂದರೆ ಪ್ರತಿ ಶನಿವಾರ ಬರುವುದನ್ನೇ ಮಕ್ಕಳು ಕಾಯುತ್ತಿದ್ದಾರೆ. ಈ ಸಮವಸ್ತ್ರ ಧರಿಸಿ ತಮ್ಮ ತಮ್ಮ ಘೋಷಣೆಗಳನ್ನು ಕೂಗುವ ಸಂದರ್ಭದಲ್ಲಿ ಇಡಿಯ ಕ್ಯಾಂಪಸ್ ಗಡಿ ಭಾಗದಲ್ಲಿ ನಿಂತ ಸೇನೆಯ ಭಾವವನ್ನು ತರುತ್ತಿದೆ. ಮಕ್ಕಳು ಈ ಸಮವಸ್ತ್ರ ಧರಿಸುವುದಕ್ಕೆ ಅತೀವ ಹೆಮ್ಮೆ ಪಡುತ್ತಿದ್ದಾರೆ ಎನ್ನುವುದು ಸಂಸ್ಥೆಯ ಪ್ರಾಚಾರ್ಯೆ ಮಾಲತಿ ಡಿ. ಅವರ ಮಾತು.


ಸಂಸ್ಥೆಯಲ್ಲಿ ಒಂದನೆಯಿಂದ ಹತ್ತನೆಯವರೆಗೆ ಸುಮಾರು 437 ಮಂದಿ ವಿದ್ಯಾರ್ಥಿಗಳಿದ್ದಾರೆ. ಶನಿವಾರ ಬಂತೆಂದರೆ ಈ ಎಲ್ಲಾ ಮಕ್ಕಳು ತಮಗೆ ನೀಡಲಾದ ಸಮವಸ್ತ್ರ ಧರಿಸಿ ಸಂಸ್ಥೆಗೆ ಆಗಮಿಸುತ್ತಿದ್ದಾರೆ. ಕೆಲವೊಮ್ಮೆ ಚಟುವಟಿಕೆಗಳು ಶನಿವಾರವಲ್ಲದೆ ಇನ್ನಿತರ ದಿನಗಳಿಗೂ ವಿಸ್ತಾರವಾದಾಗ ಮಕ್ಕಳು ಆ ದಿನಗಳಲ್ಲೂ ಈ ವಿಶೇಷ ಸಮವಸ್ತ್ರದಲ್ಲೇ ಆಗಮಿಸಿ ಪುಳಕಿತರಾಗುತ್ತಿದ್ದಾರೆ. ಮಕ್ಕಳನ್ನು ಸೇನಾ ಮಾದರಿ ಸಮವಸ್ತ್ರದಲ್ಲಿ ಕಂಡು  ಹೆತ್ತವರೂ ಧನ್ಯರಾಗುತ್ತಿದ್ದಾರೆ. ಇಂತಹ ಸಮವಸ್ತ್ರವನ್ನು ನೀಡಿ ಮಕ್ಕಳಲ್ಲಿ ಹೆಮ್ಮೆಯ ಭಾವ ಮೂಡಿಸಿದ್ದಕ್ಕಾಗಿ ಸಂಸ್ಥೆಗೆ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದಾರೆ.


ಕೇವಲ ಸಮವಸ್ತ್ರವಷ್ಟೇ ಅಲ್ಲ. ಮಕ್ಕಳು ಅದನ್ನು ಧರಿಸಿ ಬರುವ ಶನಿವಾರದಂದು ಯಾರಾದರೊಬ್ಬ ಸಂಪನ್ಮೂಲ ವ್ಯಕ್ತಿಗಳನ್ನು ಕರೆದು ಭಾರತೀಯ ಸೇನೆಯ ವೀರಯೋಧನೊಬ್ಬನ ಪರಾಕ್ರಮದ ಕಥಾನಕವನ್ನು ಮಕ್ಕಳಿಗೆ ತಿಳಿಸಿಕೊಡಲಾಗುತ್ತದೆ. ಹೇಗೆ ಭಾರತೀಯ ಸೇನೆ ಹಾಗೂ ಕ್ಷಾತ್ರ ತೇಜಸ್ಸಿನ ಯೋಧರು ನಮ್ಮ ದೇಶವನ್ನು ರಕ್ಷಿಸುತ್ತಿದ್ದಾರೆಂಬ ಮಾಹಿತಿಯನ್ನು ಮಕ್ಕಳಿಗೆ ನಿರಂತರವಾಗಿ ತಿಳಿಸಿಕೊಡಲಾಗುತ್ತದೆ. 


ಈ ಸಮವಸ್ತ್ರವನ್ನು ಜಾರಿ ಮಾಡಿರುವುದರ ಹಿಂದೆ ಬಹುದೊಡ್ಡ ಕನಸಿದೆ. ಮೊದಲನೆಯದಾಗಿ ಮಕ್ಕಳು ಸೇನೆಯೆಡೆಗೆ ಆಸಕ್ತಿ ಬೆಳೆಸಿಕೊಳ್ಳುವಲ್ಲಿ ಇದೊಂದು ಪ್ರೇರಣೆಯಾಗಬೇಕು. ಅಷ್ಟು ಮಾತ್ರವಲ್ಲ, ಮಕ್ಕಳು ಮುಂದೆ ಇಂಜಿನಿಯರ್, ಮೆಡಿಕಲ್, ಸಿ.ಎ, ಹೀಗೆ ಯಾವುದೇ ಕ್ಷೇತ್ರದಲ್ಲಿ ಮುಂದುವರೆದರೂ ಅವರವರ ಕ್ಷೇತ್ರದಲ್ಲಿ ಈ ದೇಶದ ವೀರ ಸೈನಿಕರಂತೆ ಯಾವತ್ತೂ ಎದೆಗುಂದದೆ, ಆತ್ಮಸ್ಥೈರ್ಯ ಕಳೆದುಕೊಳ್ಳದೆ ದೇಶಭಕ್ತರಾಗಿ ಮುನ್ನಡೆಯುವಂತಾಗಬೇಕು. ಎಂತಹ ಸಂದರ್ಭದಲ್ಲೂ ಕೈಚೆಲ್ಲಿ ಸೋಲೊಪ್ಪುವಂತಹವರಾಗಬಾರದು. ಅಂತಹ ಕ್ಷಾತ್ರ ವರ್ಚಸ್ಸನ್ನು ಮಕ್ಕಳಲ್ಲಿ ತುಂಬುವ ಉದ್ದೇಶವೂ ಈ ಸಮವಸ್ತ್ರದ ಹಿಂದಿದೆ.

-ಸುಬ್ರಮಣ್ಯ ನಟ್ಟೋಜ

ಅಧ್ಯಕ್ಷರು, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು, ಪುತ್ತೂರು


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top