ಉಡುಪಿ: ಅಪರೂಪದ ಸಸ್ಯ ಸಂಪತ್ತುಗಳ ಸಂರಕ್ಷಣೆ ಮತ್ತು ಅಧ್ಯಯನದಲ್ಲೇ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದ ಉಡುಪಿಯ ಪ್ರಸಿದ್ಧ ಪ್ರಗತಿಪರ ಕೃಷಿಕ, ಸಸ್ಯ ನರ್ಸರಿ ತಜ್ಞ ಹಾಗೂ 'ಸಸ್ಯ ತಪಸ್ವಿ' ಎಂದೇ ಹೆಸರಾಗಿದ್ದ ಕರ್ಜೆ ಮಂಜುನಾಥ ಗೋಳಿ (75) ಅವರು ಮಧ್ಯಾಹ್ನ ತೀವ್ರ ಹೃದಯಾಘಾತದಿಂದ ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ವೃತ್ತಿಯಲ್ಲಿ ಕೃಷಿಕ, ಪ್ರವೃತ್ತಿಯಲ್ಲಿ ಪರಿಸರ ಪ್ರೇಮಿ:
ವೃತ್ತಿಯಿಂದ ಸಸ್ಯ ನರ್ಸರಿ ನಡೆಸುತ್ತಿದ್ದ ಮಂಜುನಾಥ ಗೋಳಿಯವರ ನಿಜವಾದ ಧ್ವೇಯ ಅಮೂಲ್ಯ ವನಸ್ಪತಿಗಳು ಹಾಗೂ ಸಸ್ಯ ಪ್ರಭೇದಗಳ ಸಂರಕ್ಷಣೆಯಾಗಿತ್ತು. ಪಶ್ಚಿಮ ಘಟ್ಟಗಳು ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಸಂಚರಿಸಿ ಅತ್ಯಪೂರ್ವ ಸಸ್ಯ ಸಂಪತ್ತಿನ ಕುರಿತು ಆಳವಾದ ಅಧ್ಯಯನ ನಡೆಸಿದ್ದ ಅವರು, ಕ್ರಿಯಾಶೀಲ ಶ್ರಮದಿಂದ ಅವುಗಳನ್ನು ಅಭಿವೃದ್ಧಿಪಡಿಸಿ ರಕ್ಷಿಸಿದ್ದರು. ಸಾವಿರಾರು ಸಸ್ಯ ತಳಿಗಳ ಸಂಪೂರ್ಣ ವಿವರಗಳನ್ನು ನಾಲಗೆಯ ತುದಿಯಲ್ಲೇ ಇಟ್ಟುಕೊಂಡಿದ್ದ ಅವರು ನಿಜಕ್ಕೂ ಸಸ್ಯಲೋಕದ 'ಎನ್‌ಸೈಕ್ಲೋಪೀಡಿಯಾ' ಆಗಿದ್ದರು.
ಅಸ್ಸಾಂನ ಅಗರ್ತಲಾದಿಂದ ಅಗರು ವೃಕ್ಷದ ಬೀಜಗಳನ್ನು ತಂದು ಸಸಿಗಳನ್ನು ಬೆಳೆಸಿ ರಕ್ಷಿಸಿದ್ದು, ಉಡುಪಿಯ ಮುಚ್ಲುಕೋಡು ದೇವಸ್ಥಾನದ ಆವರಣದಲ್ಲಿ ಶ್ರೀ ವಿಶ್ವೇಶತೀರ್ಥ ಗುರುಗಳ ಹೆಸರಿನಲ್ಲಿ 80 ಅಪೂರ್ವ ವನಸ್ಪತಿಗಳ ಮೂಲಿಕಾ ವನ ನಿರ್ಮಿಸಿದ್ದು ಹಾಗೂ ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಅವಧಿಯಲ್ಲಿ ರಾಷ್ಟ್ರಪತಿ ಭವನದ ಮೊಗಲ್ ಗಾರ್ಡನ್‌ಗೆ ತಮ್ಮ ಮನೆಯಂಗಳದಲ್ಲಿದ್ದ ಅಪೂರ್ವ ಸಸ್ಯಗಳನ್ನು ಕಳುಹಿಸಿಕೊಟ್ಟಿದ್ದು ಅವರ ಸಾಧನೆಗೆ ಸಾಕ್ಷಿ.
ಯಾವುದೇ ಪ್ರಶಸ್ತಿ, ಪುರಸ್ಕಾರ ಅಥವಾ ಪ್ರಚಾರದ ಹಂಬಲವಿಲ್ಲದೆ, ನಿರಾಡಂಬರ ಹಾಗೂ ನಿಸ್ವಾರ್ಥ ಸೇವೆಯಲ್ಲಿ ನಿರತರಾಗಿದ್ದ ಗೋಳಿಯವರು ಶ್ರೇಷ್ಠ ಕಾಯಕಯೋಗಿಯಾಗಿದ್ದರು.
ಪೇಜಾವರ ಶ್ರೀಗಳ ತೀವ್ರ ಸಂತಾಪ:
"ಮಂಜುನಾಥ ಗೋಳಿಯವರ ಹಠಾತ್ ನಿಧನದ ವಾರ್ತೆ ತಿಳಿದು ಅತೀವ ವಿಷಾದವಾಗಿದೆ. ಅನೇಕ ವರ್ಷಗಳಿಂದ ಅವರ ಸಸ್ಯ ಸಂರಕ್ಷಣೆಯ ಕಾರ್ಯವನ್ನು ಗಮನಿಸಿದ್ದೇವೆ. ಓರ್ವ ತಪಸ್ವಿಯಂತೆ ಜೀವನ ನಡೆಸಿದವರು. ಈ ನೆಲಕ್ಕೆ ಅವರಿಂದ ಶ್ರೇಷ್ಠ ಸೇವೆ ಸಂದಿದೆ. ಅವರ ನಿಧನ ಸಮಾಜಕ್ಕೆ ದೊಡ್ಡ ನಷ್ಟ. ಅವರಿಗೆ ಸದ್ಗತಿ ಲಭಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ."
— ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಶ್ರೀ ಪೇಜಾವರ ಮಠ (ನವದೆಹಲಿ)
ಬೆಟ್ಟದ ಹೂವಿನಂತೆ ಸಾರ್ಥಕ ಬದುಕು:
"ಮಂಜುನಾಥ ಗೋಳಿಯವರ ವಿಯೋಗ ಇಡೀ ನಾಡಿಗೆ ಆಘಾತಕಾರಿ. ಪ್ರಶಸ್ತಿ-ಸಂಮಾನಗಳ ಕ್ಯೂನಲ್ಲಿ ನಿಲ್ಲದೆ ಪದ್ಮಶ್ರೀಯಂತಹ ಅತ್ಯುನ್ನತ ಪ್ರಶಸ್ತಿಗೂ ಗೌರವ ತರಬಲ್ಲ ಎತ್ತರದ ವ್ಯಕ್ತಿತ್ವ ಅವರಾಗಿತ್ತು. ಕರಾವಳಿ ಬೈಪಾಸ್‌ನಲ್ಲಿ ಅಪರೂಪದ ಮರವೊಂದನ್ನು ಕಡಿದಾಗ ರಾತ್ರಿಯಿಡೀ ಕಣ್ಣೀರಿಟ್ಟು, ನಂತರ ಪಶ್ಚಿಮ ಘಟ್ಟದಲ್ಲಿ ಅಲೆದಾಡಿ ಆ ಬೀಜಗಳನ್ನು ಹುಡುಕಿ ತಂದು ಬೆಳೆಸಿದ ಪರಿಸರ ಪ್ರೇಮಿ ಅವರು. ಸದಾ ಕಾರಿನಲ್ಲಿ ಸಸಿಗಳನ್ನು ಇಟ್ಟುಕೊಂಡು ಕಂಡ ಕಂಡವರಿಗೆ ಪ್ರೀತಿಯಿಂದ ಹಂಚುತ್ತಿದ್ದ ಅವರ ನೆಲನಿಷ್ಠೆ ಮತ್ತು ನಿಸ್ವಾರ್ಥ ಬದುಕು ಎಂದಿಗೂ ಚಿರಸ್ಮರಣೀಯ."
— ಜಿ. ವಾಸುದೇವ ಭಟ್ ಪೆರಂಪಳ್ಳಿ
ಕರ್ಜೆ ಮಂಜುನಾಥ ಗೋಳಿಯವರ ಅಗಲಿಕೆಯಿಂದ ಕರಾವಳಿ ಜಿಲ್ಲೆ ಮಾತ್ರವಲ್ಲದೆ ಇಡೀ ನಾಡು ಒಬ್ಬ ಶ್ರೇಷ್ಠ ಪ್ರಕೃತಿ ಸೇವಕನನ್ನು ಕಳೆದುಕೊಂಡಂತಾಗಿದೆ.

