'ಯಾವುದೇ ಆರ್ಥಿಕತೆಯ ಕೊರತೆ ಇಲ್ಲದೆ, ತಮಗೆ ಸಾಕಾಗುವಷ್ಟು ಸಂಪಾದಿಸುವಂತಹ ಉದ್ಯೋಗವನ್ನು ಹೊಂದಿಕೊಂಡಿರುವ ಪ್ರತಿಯೊಬ್ಬ ಪ್ರಜೆಗಳು, ಎತ್ತ ಕಣ್ಣು ಹಾಯಿಸಿದರೂ ಸ್ವಚ್ಛಮಯವಾಗಿ ಕಾಣುವ ಪ್ರದೇಶ, ತಂತ್ರಜ್ಞಾನದ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಪ್ರಗತಿಯ ಪಥವನ್ನ ತಲುಪುವ ಆ ಸಂದರ್ಭ.....'
ಇದು ನಮ್ಮ ಭಾರತ ದೇಶ ಹಲವು ವರ್ಷಗಳಿಂದ ಇಟ್ಟಿರುವ ಒಂದು ಮಹತ್ವಾಕಾಂಕ್ಷೆಯ ಗುರಿಯಾಗಿದ್ದು, ರಾಷ್ಟ್ರ ಸ್ವಾತಂತ್ರ್ಯ ಗಳಿಕೆಯ 1947ರ ನಂತರದಿಂದ ನಾಳಿನ 2047 ರ ಶತಮಾನೋತ್ಸವ ಆಚರಣೆಯ ಪೂರ್ವದಲ್ಲಿ ದೇಶ ವಿಕಸಿತಗೊಳ್ಳಬೇಕು ಎನ್ನುವ ದೊಡ್ಡ ಆಶಯವನ್ನು ಹೊಂದಿದೆ. ಈಗಾಗಲೇ ವರ್ಷ 80 ರ ಹೊಸ್ತಿಲಲ್ಲಿದ್ದು, ಇನ್ನೂ 20 ವರ್ಷ ಸಮಯವಕಾಶವನ್ನು ಹೊಂದಿರುವ ಈ ಸಂದರ್ಭದಲ್ಲಿ ಸರ್ಕಾರ ನಾನಾ ಹೊಸ ಚಿಂತನೆಗೆ ಕೈ ಹಾಕುತ್ತಿದೆ.
ಮುಖ್ಯವಾಗಿ ಕೇಂದ್ರ ಸರ್ಕಾರವು 'ವಿಕಸಿತ್ ಭಾರತ್' ಎನ್ನುವ ಪರಿಕಲ್ಪನೆಯ ಮುಖೇನ ಬೇರೆ ಬೇರೆ ರೀತಿಯ ಯೋಜನೆಯ ಮೂಲಕ ಅಮೆರಿಕಾದಂತಹ ಮುಂದುವರಿದ ದೇಶವನ್ನಾಗಿ ಮಾರ್ಪಾಡು ಮಾಡಲು ಸನ್ನದ್ಧವಾಗುತ್ತಿದೆ.
ಮೊದಲಾಗಿ ಭಾರತವು ಜಾಗತಿಕ ಮಟ್ಟದ ಉತ್ಪಾದನಾ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವಂತೆ ಮಾಡಲು ' ಮೇಕ್ ಇನ್ ಇಂಡಿಯಾ' ಎನ್ನುವ ಅಭಿಯಾನವನ್ನು 2014ರಲ್ಲಿ ಕೇಂದ್ರ ಸರ್ಕಾರವು ಜಾರಿಗೊಳಿಸಿತು. ಇಲ್ಲಿ ಏನೆಂದರೆ ಸರ್ಕಾರ ಸ್ವದೇಶಿಯ ವಸ್ತುಗಳನ್ನ ಹೆಚ್ಚು ಪ್ರಚೋದಿಸಿ, ಪ್ರತಿಯೊಬ್ಬ ಪ್ರಜೆಯೂ ಕೂಡ ಅವುಗಳಿಗೆ ಪ್ರಾಮುಖ್ಯತೆಯನ್ನು ಕೊಡುವಂತೆ ಮಾಡಿತು. ಈ ದಿಸೆಯಿಂದ ವಿವಿಧ ದೊಡ್ಡ ಕಂಪನಿಗಳನ್ನು, ಕೈಗಾರಿಕಾ ತರಬೇತಿ ಕೇಂದ್ರಗಳನ್ನ ಅಂತೆಯೇ ಬೇರೆ ಬೇರೆ ರೀತಿಯ ಉತ್ಪಾದನಾ ಕ್ಷೇತ್ರಗಳನ್ನು ಬೆಳೆಸುವ ಮೂಲಕ ನಮ್ಮ ದೇಶವು ಸ್ವಾವಲಂಬಿತನವನ್ನು ವೃದ್ಧಿಸಿಕೊಳ್ಳಲು ತಯಾರಾಗುತ್ತಾ ಬಂತು.
ಇದೊಂದು ಪರಿಕಲ್ಪನೆ ಮಾತ್ರವಲ್ಲದೆ, ಡಿಜಿಟಲ್ ತಂತ್ರಜ್ಞಾನವನ್ನು ಬಳಸಿಕೊಂಡು ನಮ್ಮ ಕಾರ್ಯವನ್ನ ಸುಲಭ, ವೇಗ ಹಾಗೂ ಪರಿಣಾಮಕಾರಿಯಾಗಿಸಲು ಸರ್ಕಾರ ಹೊಸ ಚಿಂತನೆಯ ಮೂಲಕ 2015ರಲ್ಲಿ 'ಡಿಜಿಟಲ್ ಇಂಡಿಯಾ' ಎನ್ನುವ ಯೋಜನೆಯನ್ನೂ ಜಾರಿಗೆ ತಂದಿದೆ. ಈ ಒಂದು ಕಾರ್ಯತಂತ್ರದಿಂದ ಡಿಜಿಟಲ್ ಯುಗದಲ್ಲಿ ಪ್ರತಿಯೊಬ್ಬ ಪ್ರಜೆಯು ಕೂಡ ತಮ್ಮ ಕೆಲಸವನ್ನು ಬಲು ಪಾರದರ್ಶಕತೆಯೊಂದಿಗೆ ನಿರ್ವಹಿಸಿಕೊಳ್ಳಬೇಕು ಎಂಬ ಮುಖ್ಯ ಉದ್ದೇಶವನ್ನು ಹೊಂದಿದೆ.
ಸರ್ಕಾರ ಇಲ್ಲಿ ಕೇವಲ ಆರ್ಥಿಕ ಚಟುವಟಿಕೆಗಳಿಗೆ ನೀರೆರೆದು ಪೋಷಣೆ ಮಾಡುವುದು ಮಾತ್ರವಲ್ಲದೆ, ಶಿಕ್ಷಣ ಕ್ಷೇತ್ರಕ್ಕೂ ಅಗಾಧವಾದ ಪ್ರಾಮುಖ್ಯತೆಯನ್ನು ನೀಡುತ್ತಾ ಬಂದಿದೆ. ನವೀನ ಚಿಂತನೆಯ 'ರಾಷ್ಟ್ರೀಯ ಶಿಕ್ಷಣ ನೀತಿಯನ್ನು' ಅಸ್ತಿತ್ವಕ್ಕೆ ತಂದಿದ್ದು ವಿದ್ಯಾರ್ಥಿಗಳ ಜ್ಞಾನ, ಕೌಶಲ್ಯ ಹಾಗೂ ಸೃಜನಶೀಲತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಬಲು ಚುರುಕಾಗಿ ಕಾರ್ಯನಿರ್ವಹಿಸುತ್ತಿದೆ.
ಇದಲ್ಲದೆ ಒಂದು ದೇಶ ಸುಂದರಮಯವಾಗಿ, ಬಡತನ ನಿರ್ಮೂಲನೆಗೊಂಡು ಒಂದು ಉತ್ತಮ ಆದರ್ಶ ರಾಷ್ಟ್ರವನ್ನಾಗಿಸುವ ಲಕ್ಷ್ಯವನ್ನು ಇಟ್ಟುಕೊಂಡಿದೆ. ಪ್ರತಿ ಸಣ್ಣ ಸಣ್ಣ ಕ್ಷೇತ್ರಗಳನ್ನು ಅಭಿವೃದ್ಧಿಗೊಳಿಸುವ ಧೇಯದ 'ಆತ್ಮ ನಿರ್ಭರ ಭಾರತ', ಸ್ವಚ್ಛತೆ ಹಾಗೂ ನೈರ್ಮಲ್ಯತೆಯನ್ನು ಎತ್ತಿ ಹಿಡಿಯುವ' ಸ್ವಚ್ಛ ಭಾರತ ಮಿಷನ್', ಅದಲ್ಲದೆ ಜನರ ಆರೋಗ್ಯ ಸುರಕ್ಷತೆಯ ದೃಷ್ಟಿಯಿಂದ' ಆಯುಷ್ಮಾನ್ ಭಾರತ', ಒಂದೊಂದು ಕ್ಷೇತ್ರಗಳನ್ನ ಗಮನಿಸಿಕೊಂಡು, ಆಯಾ ವಲಯದಲ್ಲಿ ಅಭಿವೃದ್ಧಿಯನ್ನು ಹೊಂದಲು ಸರಕಾರವು ಪ್ರಯತ್ನ ಪಡುತ್ತಿದೆ.
2047ರ ಈ 'ವಿಕಸಿತ ಭಾರತ' ದ ಗುರಿಯು ಒಂದು ಕನಸು ಮಾತ್ರವಾಗಿರದೆ, ಒಗ್ಗಟ್ಟಿನಿಂದ ಯಶಸ್ಸು ಗೊಳಿಸುವ ಸಂಕಲ್ಪ ನಮ್ಮದಾಗಬೇಕು.' ನಮ್ಮ ದೇಶ ಯಾವ ಒಂದು ಪಥದಲ್ಲಿ ನಡೆಯಬೇಕು ಎನ್ನುವ ಚಿಂತನೆಯನ್ನು, ನಮ್ಮ ಮನದಾಳದಲ್ಲಿ ಇಟ್ಟುಕೊಂಡು, ಅದರಂತೆ ನಾವೆಲ್ಲರೂ ಮುಂದುವರೆಯುವ ಆಶಯವನ್ನ ಹೊಂದಬೇಕಾಗಿದೆ.
-ಕೆ.ಎನ್.ಧನುಷ್,ದಿಡುಪೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


