ಕೆನರಾ ಕಾಲೇಜು (ಸ್ವಾಯತ್ತ), ಮಂಗಳೂರು ಇದರ ಸ್ಟೂಡೆಂಟ್ ವೆಲ್ಫೇರ್ ಕೌನ್ಸಿಲ್ ಹಾಗೂ ಲಲಿತ ಕಲಾ ಸಂಘದ ವತಿಯಿಂದ ನಗರದ ಟಿ.ವಿ. ರಾಮನ್ ಪೈ ಕನ್ವೆನ್ಷನ್ ಸೆಂಟರ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ಸ್ಟೂಡೆಂಟ್ ವೆಲ್ಫೇರ್ ಕೌನ್ಸಿಲ್ ನ ಉದ್ಘಾಟನೆ ಹಾಗೂ ‘ಆವಿಷ್ಕಾರ್–2026: ಪ್ರತಿಭಾ ಅನಾವರಣ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಬದುಕಿನಲ್ಲಿ ಅವಕಾಶ, ಆಯ್ಕೆ ಮತ್ತು ಬದಲಾವಣೆ ಎಂಬ ಮೂರು ಸಂಗತಿಗಳು ಮಹತ್ವದ ಪಾತ್ರ ವಹಿಸುತ್ತವೆ. ಜೀವನದಲ್ಲಿ ಎಲ್ಲರಿಗೂ ಅವಕಾಶಗಳು ದೊರೆಯುತ್ತವೆ. ಆದರೆ ದೊರೆತ ಅವಕಾಶವನ್ನು ಗುರುತಿಸಿ, ಅದನ್ನು ಸದುಪಯೋಗಪಡಿಸಿಕೊಳ್ಳುವ ಮನೋಭಾವವೇ ವ್ಯಕ್ತಿಯ ಮುಂದಿನ ಬದುಕಿನ ದಿಕ್ಕನ್ನು ನಿರ್ಧರಿಸುತ್ತದೆ. ಅದೇ ರೀತಿ ಪ್ರತಿಯೊಂದು ಆಯ್ಕೆಯೂ ನಮ್ಮ ಬದುಕಿನ ಮೇಲೆ ಪರಿಣಾಮ ಬೀರುವುದರಿಂದ ವಿವೇಚನೆಯಿಂದ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಹೇಳಿದರು.
ವಿದ್ಯಾರ್ಥಿಗಳು ತಮ್ಮಲ್ಲಿರುವ ಸಾಮರ್ಥ್ಯ, ಪ್ರತಿಭೆ ಮತ್ತು ಆಸಕ್ತಿಯನ್ನು ಗುರುತಿಸಿಕೊಂಡು, ವೈಯಕ್ತಿಕ ಬೆಳವಣಿಗೆಯೊಂದಿಗೆ ಸಮಾಜದ ಒಳಿತಿನ ಕಡೆಗೂ ತಮ್ಮ ಚಿಂತನೆಗಳನ್ನು ವಿಸ್ತರಿಸಬೇಕು. ನಮ್ಮೊಳಗೆ ಆಗುವ ಸಕಾರಾತ್ಮಕ ಬದಲಾವಣೆಯೇ ಕುಟುಂಬ, ಶಿಕ್ಷಣ ಸಂಸ್ಥೆ ಮತ್ತು ಸಮಾಜದಲ್ಲಿಯೂ ಉತ್ತಮ ಬದಲಾವಣೆಗೆ ಕಾರಣವಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಕೇವಲ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವುದಷ್ಟೇ ಅಲ್ಲದೆ, ಉತ್ತಮ ಸಮಾಜ ನಿರ್ಮಾಣದಲ್ಲಿ ತಮ್ಮ ಪಾತ್ರವನ್ನು ಅರಿತು ಮುನ್ನಡೆಯಬೇಕು ಎಂದು ಡಾ. ಹೆಬ್ಬಾರ್ ಕರೆ ನೀಡಿದರು.
ಕಲೆಯು ವ್ಯಕ್ತಿತ್ವವನ್ನು ರೂಪಿಸುವ ಶಕ್ತಿಯಾಗಿದೆ: ರೂಪಶ್ರೀ ವರ್ಕಾಡಿ
ಗೌರವ ಅತಿಥಿಯಾಗಿ ಭಾಗವಹಿಸಿದ್ದ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ನಟಿ ರೂಪಶ್ರೀ ವರ್ಕಾಡಿ ಮಾತನಾಡಿ, ತಮ್ಮ ರಂಗಭೂಮಿ ಮತ್ತು ಕಲಾ ಪಯಣದ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.
ಬದುಕಿನಲ್ಲಿ ಎದುರಾಗುವ ಕಷ್ಟಗಳು ಮತ್ತು ಕೊರತೆಗಳು ವ್ಯಕ್ತಿಯ ಪ್ರತಿಭೆಯನ್ನು ಕುಗ್ಗಿಸುವುದಿಲ್ಲ; ಬದಲಾಗಿ, ಅವುಗಳನ್ನೇ ಸವಾಲಾಗಿ ಸ್ವೀಕರಿಸಿದಾಗ ಅವು ಪ್ರತಿಭೆಯ ಬೆಳವಣಿಗೆಗೆ ಪ್ರೇರಣೆಯಾಗುತ್ತವೆ ಎಂದು ಅವರು ಹೇಳಿದರು. ತಮ್ಮ ರಂಗಭೂಮಿಯ ಪಯಣದಲ್ಲಿ ಎದುರಾದ ಅನುಭವಗಳನ್ನು ಮೆಲುಕು ಹಾಕಿದ ಅವರು, ಕಲೆಯ ಮೇಲಿನ ಆಸಕ್ತಿ ಮತ್ತು ನಿರಂತರ ತೊಡಗಿಸಿಕೊಳ್ಳುವಿಕೆ ತಮ್ಮ ಬದುಕಿಗೆ ಹೊಸ ದಿಕ್ಕನ್ನು ನೀಡಿದ ರೀತಿಯನ್ನು ವಿವರಿಸಿದರು.
ಕಲೆ ಕೇವಲ ಮನರಂಜನೆಯ ಸಾಧನವಲ್ಲ. ಅದು ವ್ಯಕ್ತಿಯ ಆಲೋಚನೆ, ಅಭಿವ್ಯಕ್ತಿ, ಆತ್ಮವಿಶ್ವಾಸ ಮತ್ತು ವ್ಯಕ್ತಿತ್ವವನ್ನು ರೂಪಿಸುವ ಪ್ರಬಲ ಮಾಧ್ಯಮವಾಗಿದೆ. ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಕ್ಷೇತ್ರವನ್ನು ಗುರುತಿಸಿಕೊಂಡು ಅದರಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳಬೇಕು. ಆಸಕ್ತಿ ಇರುವ ಕ್ಷೇತ್ರವನ್ನು ಕೇವಲ ಹವ್ಯಾಸವಾಗಿ ಉಳಿಸಿಕೊಳ್ಳದೆ, ಅದನ್ನು ಕೌಶಲ್ಯವಾಗಿ ಬೆಳೆಸಿಕೊಳ್ಳಬೇಕು ಎಂದರು.
ಶಿಕ್ಷಣವು ಬದುಕಿಗೆ ಭದ್ರವಾದ ಅಡಿಪಾಯವನ್ನು ಒದಗಿಸುತ್ತದೆ. ಆದ್ದರಿಂದ ಯಾವುದೇ ಪರಿಸ್ಥಿತಿಯಲ್ಲಿಯೂ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಜೀವನದಲ್ಲಿ ಸ್ಪಷ್ಟವಾದ ಗುರಿಯನ್ನು ನಿರ್ಧರಿಸಿಕೊಂಡು, ಆ ಗುರಿಯತ್ತ ನಿರಂತರ ಪರಿಶ್ರಮದೊಂದಿಗೆ ಸಾಗಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಪರಿಶ್ರಮ, ಶಿಸ್ತು ಮತ್ತು ವಿವೇಚನೆಯೇ ಯಶಸ್ಸಿನ ದಾರಿ: CA ಎಂ. ಜಗನ್ನಾಥ ಕಾಮತ್
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆನರಾ ಕಾಲೇಜು (ಸ್ವಾಯತ್ತ)ದ ಸಂಚಾಲಕ CA ಎಂ. ಜಗನ್ನಾಥ ಕಾಮತ್ ಮಾತನಾಡಿ, ವಿದ್ಯಾರ್ಥಿಗಳು ಬದುಕಿನ ಕಠಿಣತೆಗಳನ್ನು ಎದುರಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು ಎಂದರು.
ಯಶಸ್ಸಿಗೆ ಪ್ರತಿಭೆಯೊಂದೇ ಸಾಕಾಗುವುದಿಲ್ಲ. ಕಠಿಣ ಪರಿಶ್ರಮ, ಶಿಸ್ತು, ಸಮಯಪ್ರಜ್ಞೆ, ಬದ್ಧತೆ ಮತ್ತು ಸರಿಯಾದ ದಾರಿಯ ಆಯ್ಕೆ ಅತ್ಯಗತ್ಯ. ಜೀವನದಲ್ಲಿ ಸುಲಭವಾದ ದಾರಿಯನ್ನೇ ಹುಡುಕುವ ಬದಲು ಸವಾಲುಗಳನ್ನು ಎದುರಿಸುವ ಮನೋಭಾವವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಅವರು ಹೇಳಿದರು.
ವಿದ್ಯಾರ್ಥಿ ಜೀವನದಲ್ಲಿ ನಾಯಕತ್ವದ ಅವಕಾಶಗಳು ದೊರೆತಾಗ ಅವುಗಳನ್ನು ಜವಾಬ್ದಾರಿಯುತವಾಗಿ ಬಳಸಿಕೊಳ್ಳಬೇಕು. ಯಾವುದೇ ರೀತಿಯ ರಾಜಕೀಯ ಕುತಂತ್ರಗಳಿಗೆ ಅಥವಾ ತಪ್ಪು ಪ್ರಭಾವಗಳಿಗೆ ಬಲಿಯಾಗದೆ, ತಮ್ಮ ವಿವೇಚನಾ ಶಕ್ತಿಯನ್ನು ಬಳಸಿಕೊಂಡು ಸರಿ–ತಪ್ಪುಗಳನ್ನು ಗುರುತಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ನಾಯಕತ್ವವೆಂದರೆ ಕೇವಲ ಒಂದು ಸ್ಥಾನಮಾನವಲ್ಲ; ಅದು ಜವಾಬ್ದಾರಿ, ಸೇವಾ ಮನೋಭಾವ, ಶಿಸ್ತು ಮತ್ತು ಇತರರನ್ನು ಮುನ್ನಡೆಸುವ ಸಾಮರ್ಥ್ಯ ಎಂದು ಅವರು ಹೇಳಿದರು.
ವಿದ್ಯಾರ್ಥಿಗಳು ತಮ್ಮೊಳಗಿನ ನಾಯಕತ್ವದ ಗುಣಗಳನ್ನು ಗುರುತಿಸಿಕೊಂಡು, ಅವುಗಳನ್ನು ಸಮಾಜದ ಒಳಿತಿಗಾಗಿ ಬಳಸಿಕೊಳ್ಳಬೇಕು. ಕಠಿಣ ಪರಿಸ್ಥಿತಿಗಳೇ ವ್ಯಕ್ತಿಯ ಸಾಮರ್ಥ್ಯವನ್ನು ಪರೀಕ್ಷಿಸುತ್ತವೆ. ಅಂತಹ ಸವಾಲುಗಳನ್ನು ಧೈರ್ಯದಿಂದ ಎದುರಿಸುವ ಮೂಲಕವೇ ಉತ್ತಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದು ಹೇಳಿದರು .
ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರೇಮಲತಾ ವಿ ಮಾತನಾಡಿ, ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಸನದಲ್ಲಿ ಪಠ್ಯೇತರ ಚಟುವಟಿಕೆಗಳು ಮಹತ್ವದ ಪಾತ್ರ ವಹಿಸುತ್ತವೆ, ವಿದ್ಯಾರ್ಥಿಗಳಲ್ಲಿರುವ ವೈವಿಧ್ಯಮಯ ಪ್ರತಿಭೆಗಳನ್ನು ಗುರುತಿಸಿ, ಅವುಗಳನ್ನು ಅನಾವರಣಗೊಳಿಸಲು ಸೂಕ್ತ ವೇದಿಕೆ ಒದಗಿಸುವ ಉದ್ದೇಶದಿಂದ ‘ಆವಿಷ್ಕಾರ್–2026’ ಪ್ರತಿಭಾ ಅನಾವರಣ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ಶೈಕ್ಷಣಿಕ ಸಾಧನೆಯೊಂದಿಗೆ ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆ, ನಾಯಕತ್ವ ಮತ್ತು ಸೃಜನಶೀಲ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಇಂತಹ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಸಂವಹನ ಕೌಶಲ್ಯ, ತಂಡದೊಂದಿಗೆ ಕೆಲಸ ಮಾಡುವ ಗುಣ ಹಾಗೂ ನಾಯಕತ್ವದ ಸಾಮರ್ಥ್ಯವನ್ನು ಬೆಳೆಸುತ್ತವೆ. ಶಿಕ್ಷಣದ ಉದ್ದೇಶ ಕೇವಲ ಪದವಿ ಪಡೆಯುವುದಲ್ಲ; ಜವಾಬ್ದಾರಿಯುತ, ಸಂವೇದನಾಶೀಲ ಮತ್ತು ಸಮರ್ಥ ವ್ಯಕ್ತಿತ್ವವನ್ನು ರೂಪಿಸುವುದಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ನೂತನ Student Welfare Council ಪದಾಧಿಕಾರಿಗಳಿಗೆ ಕಾಲೇಜಿನ Student Welfare Councilನ ಸಂಯೋಜಕ ಡಾ. ಗಣೇಶ್ ಶೆಟ್ಟಿ ಅವರು ಪ್ರಮಾಣ ವಚನ ಬೋಧಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಸಂಚಾಲಕ CA ಎಂ. ಜಗನ್ನಾಥ ಕಾಮತ್, ವ್ಯವಸ್ಥಾಪಕರಾದ ಶ್ರೀ ಶಿವಾನಂದ ಶೆಣೈ. ಸ್ವಸ್ತಿಕ ನ್ಯಾಷನಲ್ ಬಿಸಿನೆಸ್ ಸ್ಕೂಲ್‌ನ ಪ್ರಾಂಶುಪಾಲರಾದ ಡಾ. ಮಾಲಿನಿ ಎನ್. ಹೆಬ್ಬಾರ್, ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ನಟಿ ಶ್ರೀಮತಿ ರೂಪಶ್ರೀ ವರ್ಕಾಡಿ, ಪ್ರಾಂಶುಪಾಲರಾದ ಡಾ. ಪ್ರೇಮಲತಾ ವಿ, ಆಡಳಿತಾಧಿಕಾರಿ ಡಾ. ದೀಪ್ತಿ ನಾಯಕ್, ವಿದ್ಯಾರ್ಥಿ ಕ್ಷೇಮ ಪಾಲನ ಸಂಘದ ಸಂಯೋಜಕ ಡಾ. ಗಣೇಶ್ ಶೆಟ್ಟಿ, ಸಹ ಸಂಯೋಜಕರಾದ ಶ್ರೀಮತಿ ರೂಪ ಶ್ರೀ, ಡಾ. ಸವಿತಾ, ಫೈನ್ ಆರ್ಟ್ ಅಸೋಸಿಯೇಷನ್ ನ ಸಂಯೋಜಕಿ ಶ್ರೀಮತಿ ಉಷಾನಾಯಕ್, ವಿದ್ಯಾರ್ಥಿ ನಾಯಕ ಸಾದ್ ಮೊಹಮ್ಮದ್, ದೇವಿಕಾ, ದಿಯಾ ರಾವ್, ಸೋಮ್ ಪ್ರಸಾದ್, ಅನುಷ್ಕಾ ಶೆಟ್ಟಿ ಉಪಸ್ಥಿತರಿದ್ದರು.
ನಿರೂಪಣೆಯನ್ನು ಕು.ಮಿನಾಲ್ ಬಿನು ನಿರ್ವಹಿಸಿದರು. ಸಾದ್ ಮೊಹಮ್ಮದ್ ಸ್ವಾಗತಿಸಿದರು. ಗೌರವಾನ್ವಿತ ಅತಿಥಿಗಳ ಪರಿಚಯವನ್ನು ಶ್ರೀಮತಿ ಉಷಾ ನಾಯಕ್, ಶ್ರೀಮತಿ ರೂಪಶ್ರೀ ನೆರವೇರಿಸಿದರು. ಅನುಷ್ಕಾ ಶೆಟ್ಟಿ ವಂದನಾರ್ಪಣೆ ಸಲ್ಲಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

