ಹೊಸನಗರ: ಗ್ರಾಮಭಾರತಿ ಟ್ರಸ್ಟ್ (ರಿ.), ಕಾರಣಗಿರಿ ಹಾಗೂ ಕಾರಣಗಿರಿ ಕಲಾದರ್ಶನ ಮಾಸಪತ್ರಿಕೆ ಆಶ್ರಯದಲ್ಲಿ ಪ್ರಥಮ ಸುದ್ದಿವಾಹಕ ಮಹರ್ಷಿ ನಾರದರ ಸಂಸ್ಮರಣಾರ್ಥ ಪ್ರತಿಷ್ಠಿತ 'ನಾರದ ಪುರಸ್ಕಾರ' ಪ್ರದಾನ ಸಮಾರಂಭವು ಮಂಗಳವಾರ ಕಾರಣಗಿರಿಯ ಶ್ರೀ ಸಿದ್ಧಿವಿನಾಯಕ ಸಭಾಭವನದಲ್ಲಿ ನಡೆಯಿತು.
ಕಾರಣಗಿರಿ ರಾಷ್ಟ್ರೋತ್ಥಾನ ಬಳಗ ಹಾಗೂ ಶ್ರೀ ವಾದಿರಾಜ ಸಂಸ್ಕೃತಿ ಸಂವರ್ಧನಾ ಸಭಾ, ಹಾದಿಗಲ್ಲು ಸಹಯೋಗದಲ್ಲಿ ಪತ್ರಿಕೋದ್ಯಮ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿರುವ ಒಂಬತ್ತು ಗಣ್ಯರಿಗೆ ನಾರದ ಪುರಸ್ಕಾರ ಪ್ರದಾನ ಮಾಡಿ ಗೌರವಿಸಲಾಯಿತು.
ಈ ವರ್ಷದ ಪುರಸ್ಕಾರಕ್ಕೆ ಕನ್ನಡ ನ್ಯೂಸ್ ಅಂತರ್ಜಾಲ ಪತ್ರಿಕೆಯ ಸಂಪಾದಕ ರಘುಪತಿ ಯಾಜಿ, ಪರಿಸರ ಪತ್ರಕರ್ತ ರಘುನಂದನ್ ಭಟ್ ನರೂರ, ಆಕಾಶವಾಣಿಯ ನಿವೃತ್ತ ನಿರ್ದೇಶಕ ಡಾ. ಸುಧೀಂದ್ರ, ಹಿರಿಯ ಪತ್ರಿಕಾ ಪ್ರತಿನಿಧಿ ಗಣಪತಿ ಪಂಡಿತ್, ಹೊಸದಿಗಂತ ಪ್ರಧಾನ ವರದಿಗಾರ ಸುರೇಶ್ ಡಿ. ಪಳ್ಳಿ, ಟಿ.ವಿ. ವರದಿಗಾರ್ತಿ ಶೈಲಜಾ ಗೊರ್ನಮನೆ, ಹೊಸದಿಗಂತ ಶಿವಮೊಗ್ಗ ಸಂಪಾದಕ ವಾದಿರಾಜ್ ಕಮರೂರು, ಶ್ರೀಧರ ಸಂದೇಶ ಸಂಪಾದಕ ಗಜಾನನ ಭಟ್ಟ ರೇವಣಕಟ್ಟ ಹಾಗೂ ಅಂಕಣಕಾರ-ಲೇಖಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಅವರನ್ನು ಆಯ್ಕೆ ಮಾಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕಲಾಭಾರತಿ ಸದಸ್ಯರಿಂದ ಪ್ರಾರ್ಥನೆ ನೆರವೇರಿತು. ವಸುಧಾ ಚೈತನ್ಯ ಕಾರ್ಯಕ್ರಮ ನಿರೂಪಿಸಿದರು. ರಾಷ್ಟ್ರೋತ್ಥಾನ ಬಳಗದ ಕಾರ್ಯದರ್ಶಿ ನಳಿನಚಂದ್ರ ಸ್ವಾಗತಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಗ್ರಾಮಭಾರತಿ ಟ್ರಸ್ಟ್ ಅಧ್ಯಕ್ಷ ಹಾಗೂ ಕಾರಣಗಿರಿ ಕಲಾದರ್ಶನ ಸಂಪಾದಕ ಹನಿಯ ರವಿ, "ವಿ.ಬಿ. ಹೊಸಮನೆ ಅವರ ಸಂಪಾದಕತ್ವದಲ್ಲಿ ಮೂಡಿಬರುತ್ತಿರುವ ಕಾರಣಗಿರಿ ಕಲಾದರ್ಶನ ಮಾಸಪತ್ರಿಕೆಯನ್ನು ಕಲಾಭಾರತಿ ಟ್ರಸ್ಟ್ ಕಳೆದ 15 ವರ್ಷಗಳಿಂದ ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರುತ್ತಿದೆ. ನಾರದ ಪುರಸ್ಕಾರವನ್ನು ಕೇವಲ ಪತ್ರಕರ್ತರಿಗೆ ಮಾತ್ರವಲ್ಲದೆ ಪತ್ರಿಕಾ ಏಜೆಂಟರಿಗೂ ನೀಡುವ ಮೂಲಕ ಅವರ ಸೇವೆಯನ್ನೂ ಗೌರವಿಸುತ್ತಿದ್ದೇವೆ. ಪ್ರೀತಿ, ವಿಶ್ವಾಸ ಹಾಗೂ ಆತ್ಮೀಯತೆಯೇ ನಮ್ಮ ಸಂಸ್ಥೆಯ ಧ್ಯೇಯವಾಗಿದೆ" ಎಂದು ತಿಳಿಸಿದರು.
ಕಳೆದ ನಾಲ್ಕು ದಶಕಗಳಿಂದ ಶ್ರೀ ಸಿದ್ಧಿವಿನಾಯಕನ ಸನ್ನಿಧಿಯಲ್ಲಿ ಸಾವಿರಕ್ಕೂ ಹೆಚ್ಚು ಸಾಮೂಹಿಕ ಸತ್ಯನಾರಾಯಣ ಪೂಜೆಗಳು ನಡೆದಿದ್ದು, ನೂರಾರು ಸಾಧು-ಸಂತರು ಹಾಗೂ ಎರಡು ಸಾವಿರಕ್ಕೂ ಅಧಿಕ ಕಲಾವಿದರು ತಮ್ಮ ಕಲಾಪ್ರದರ್ಶನ ನೀಡಿರುವ ಮಹತ್ವದ ಸಾಂಸ್ಕೃತಿಕ ವೇದಿಕೆಯಾಗಿ ಕಾರಣಗಿರಿ ಬೆಳೆದಿದೆ ಎಂದು ಅವರು ವಿವರಿಸಿದರು.
ಮುಖ್ಯ ಅತಿಥಿ ಅರುಣ್ ಕುಮಾರ್ ಮಾತನಾಡಿ, "ನಾರದರನ್ನು ಕೇವಲ ಹಾಸ್ಯಪ್ರವೃತ್ತಿಯ ಕಥಾನಾಯಕನಾಗಿ ತಿಳಿದವರೇ ಹೆಚ್ಚು. ಆದರೆ ಅವರು ಗಂಭೀರ ವೃತ್ತಿನಿಷ್ಠೆ ಹೊಂದಿದ್ದ ಅಸಾಧಾರಣ ಪ್ರತಿಭೆ. ನಾರಾಯಣನ ನಾಮಸ್ಮರಣೆಯ ಮೂಲಕ ಸಮಾಜದಲ್ಲಿ ಪಾವಿತ್ರ್ಯವನ್ನು ಮೂಡಿಸುತ್ತಾ, ರಾಜರಿಗೆ ಎಚ್ಚರಿಕೆ ನೀಡಿ, ಸಮಸ್ಯೆಗಳಿಗೆ ಪರಿಹಾರದ ಮಾರ್ಗ ಸೂಚಿಸುತ್ತಿದ್ದ ಜವಾಬ್ದಾರಿಯುತ ಸಂದೇಶವಾಹಕರಾಗಿದ್ದರು. ಇಂದಿನ ಮಾಧ್ಯಮ ಪ್ರತಿನಿಧಿಗಳು ಸಹ ನಾರದರ ಆದರ್ಶವನ್ನು ಅಳವಡಿಸಿಕೊಂಡು ಸಮಾಜದಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ನಿರ್ವಹಿಸಬೇಕಾಗಿದೆ" ಎಂದು ಹೇಳಿದರು.
ಅಧ್ಯಕ್ಷೀಯ ಭಾಷಣದಲ್ಲಿ ಹಾದಿಗಲ್ಲು ಲಕ್ಷ್ಮೀನಾರಾಯಣ, "ಪತ್ರಕರ್ತರಲ್ಲಿ ಮೊದಲು ದೇಶಹಿತದ ಮನೋಭಾವ ಇರಬೇಕು. ಸಂವೇದನಾಶೀಲತೆಯಿಂದ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸಬೇಕು. ತಾವು ಏರಿ ಬಂದ ಹಾದಿಯ ಸೋಪಾನಗಳನ್ನು ಎಂದಿಗೂ ಮರೆಯಬಾರದು. ಪತ್ರಿಕೋದ್ಯಮವು ಜವಾಬ್ದಾರಿ ಮತ್ತು ಮೌಲ್ಯಾಧಾರಿತ ಸೇವೆಯಾಗಿರಬೇಕು" ಎಂದು ಕರೆ ನೀಡಿದರು.
