ಪೂಜೆಯ ಅಂಗವಾಗಿ ದೇವಸ್ಥಾನ ಹಾಗೂ ಹುತ್ತಗಳಿಗೆ, ನಾಗರಕಲ್ಲುಗಳಿಗೆ ಪೂಜೆ ಸಲ್ಲಿಸುತ್ತಾರೆ. ನಾಗಪ್ಪನಿಂದ ರಕ್ಷಣೆ ಕೇಳಿ ಕೆಡಕುಗಳಿಂದ ತಮ್ಮನ್ನು ರಕ್ಷಿಸಲೆಂದು ಬೇಡಿಕೊಂಡು ಜನರು ಹಾಲನ್ನು ಎರೆದು ವಿವಿಧ ರೀತಿಯಿಂದ ಭಕ್ತಿಯಿಂದ ಪೂಜಿಸುತ್ತಾರೆ. ಚೌತಿಯ ದಿನದಂದು ಸ್ತ್ರೀಯರು ಉಪವಾಸವಿದ್ದು ಅಂದು ಪೂಜೆಗೆ ಹಸಿಕಡಲೆ, ಹಸಿಚಿಗಳಿ, ತಂಬಿಟ್ಟನ್ನು ಉಪಯೋಗಿಸುವರು.
ಅಣ್ಣತಂಗಿಯರ ಹಬ್ಬವೆಂದು ಕರೆಯಲ್ಪಡುವ ಈ ಹಬ್ಬವನ್ನು ಅಣ್ಣತಂಗಿಯರು ಸೇರಿ ಈ ಹಬ್ಬವನ್ನು ಆಚರಿಸುತ್ತಾರೆ.ಶಿವನ ಆರಾಧಕರಿಗೆ ನಾಗಪಂಚಮಿ ಅತೀ ಮುಖ್ಯವಾದ ಹಬ್ಬವಾಗಿದೆ. ಶೇಷನಾಗನ ಬೆಂಬಲದಿಂದ ಇಡೀ ಭೂಮಿ ಸಮತೋಲನದಲ್ಲಿದೆ ಎಂದು ನಂಬಲಾಗುತ್ತದೆ. ಚೌತಿ, ಪಂಚಮಿಯಂದು ನಾಗದೇವನನ್ನು ಭಕ್ತಿಯಿಂದ ಪೂಜಿಸಿದರೆ ಅಪಾಯಕಾರಿ ಹಾವುಗಳಿಂದ ರಕ್ಷಣೆ ದೊರೆಯುವದು ಎಂಬ ನಂಬಿಕೆ ನಮ್ಮಲ್ಲಿದೆ.
ಹಿಂದೂಧರ್ಮದಲ್ಲಿ ಸತ್ಯವನ್ನು ಹುಡುಕುವದರ ಸುತ್ತ ನೆಲೆಗೊಂಡಿರುವ ಒಂದು ನಂಬಿಕೆಯಿದೆ. ಎಲ್ಲರಿಗೂ ಜೀವನವನ್ನು ಮತ್ತು ಪ್ರಕೃತಿಯ ಶಕ್ತಿಗಳನ್ನು ಪೂಜಿಸುವ ಒಂದು ಮಾರ್ಗವಾಗಿ ಪ್ರಾಚೀನ ಕಾಲದಿಂದಲೂ ನಡೆದುಬಂದಿದೆ. ಈ ಹಬ್ಬವನ್ನು ಶ್ರಾವಣದ ಪ್ರಾರಂಭದಲ್ಲಿಯೇ ಆಚರಿಸುವ ಕಾರಣ ಮಳೆಗಾಲದಲ್ಲಿ ಹಾವಿನ ಬಿಲದಲ್ಲಿ ನೀರುತುಂಬಿ ಅವುಗಳು ಹೊರಗಡೆ ಬರುವ ಕಾರಣ ಜನರಿಗೆ ಅಪಾಯ ಹೆಚ್ಚು. ಅವುಗಳಿಂದ ರಕ್ಷಣೆಗಾಗಿ ಹಾವಿಗೆ ಪೂಜಿಸುವ ಪದ್ಧತಿ ಬಂದಿದೆ.
ನಾಗಪಂಚಮಿಯ ಕಥೆ
ಒಂದು ಊರಿನಲ್ಲಿ ಒಬ್ಬ ತಂಗಿ ಅವಳಿಗೆ ನಾಲ್ಕು ಜನ ಅಣ್ಣಂದಿರು ಇದ್ದರು.ಮನೆಯಲ್ಲಿ ನಾಗಪಂಚಮಿ ಪೂಜೆಯ ತಯಾರಿಯಲ್ಲಿರುವಾಗ ನಾಗರಹಾವೊಂದು ಬಂದು ಕಚ್ಚಿ ನಾಲ್ಕುಜನ ಸಹೋದರರನ್ನು ಬಲಿ ತೆಗೆದುಕೊಂಡಿತು. ಆಗ ತಂಗಿಯು ಸಹೋದರರಿಲ್ಲದೇ ನಾನು ಹೇಗೆ ಇರಲಿ ಒಬ್ಬ ಅಣ್ಣನನ್ನಾದರೂ ಬದುಕಿಸು ಎಂದು ನಾಗದೇವನನ್ನು ಪ್ರಾರ್ಥಿಸುತ್ತಾಳೆ. ಆಗ ನಾಗದೇವನು ಒಬ್ಬ ಅಣ್ಣನನ್ನು ರಕ್ಷಿಸುತ್ತಾನೆ. ನಂತರ ಅಣ್ಣತಂಗಿ ಸಂಭ್ರಮದಿಂದ ಹಬ್ಬವನ್ನು ಆಚರಿಸುತ್ತಾರೆ.
ಪುರಾಣ ಕಥೆ
ಜನಮೇಜಯ ರಾಜ ತನ್ನ ತಂದೆ ಪರೀಕ್ಷಿತನ ಸಾವಿಗೆ ಸರ್ಪವೇ ಕಾರಣವೆಂದು ತಿಳಿದು ಭೂಲೋಕದಲ್ಲಿ ಸರ್ಪಕುಲ ನಾಶಮಾಡಲು ಸರ್ಪಯಜ್ಞ ಮಾಡಲು ಹೊರಡುತ್ತಾನೆ.ಆದರೆ ಅದೇ ಸಂದರ್ಭದಲ್ಲಿ ಸರ್ಪಗಳಿಗೆ ದೂರಬಂಧುವಾದ ಆಸ್ತಿಕ ಋಷಿಯು ಸರ್ಪಯಾಗ ಮಾಡುವ ಜನಮೇಜಯನನ್ನು ತನ್ನ ಒಳ್ಳೆಯ ಕಾರ್ಯದಿಂದ ಪ್ರಸನ್ನಗೊಳಿಸಿ ಸರ್ಪಯಾಗ ನಡೆಸದಿರಲು ವಿನಂತಿಸಿಕೊಳ್ಳುತ್ತಾನೆ. ಪ್ರಾಣಿಹಿಂಸೆ ಮಹಾಪಾಪವೆಂದು ತಿಳಿ ಹೇಳಿದಾಗ ಸರ್ಪಯಜ್ಞ ನಿಲ್ಲಿಸಿದ ದಿನವೇ ನಾಗಪಂಚಮಿಯಾಗಿತ್ತು.
ವೈಶಿಷ್ಟ್ಯ
ನಾಗಪಂಚಮಿ ಸಾತ್ವಿಕತೆ ಗ್ರಹಿಸಲು ಉಪಯುಕ್ತ ಕಾಲ. ಪಂಚಪ್ರಾಣಗಳೇ ಪಂಚನಾಗಗಳಾಗಲಿವೆ. ನಾಗಪಂಚಮಿ ದಿನದಂದು ವಾತಾವರಣವು ಸ್ಥಿರವಾಗಿರುತ್ತದೆ. ಸಾತ್ವಿಕತೆಯನ್ನು ಗ್ರಹಿಸಲು ಇದು ಯೋಗ್ಯ ಉಪಯುಕ್ತ ಕಾಲವಾಗಿದೆ.
ಚೌತಿಯ ಉಪವಾಸದ ಮಹತ್ವ
ಐದು ಯುಗದ ಹಿಂದೆ ಸತ್ಯೇಶ್ವರಿ ಎಂಬ ದೇವತೆ ಅವಳಿಗೆ ಒಬ್ಬ ಸಹೋದರನಿದ್ದನು.ಸತ್ಯೇಶ್ವರನು ಚೌತಿಯಂದು ಮರಣ ಹೊಂದಿದನು. ಆ ಸಹೋದರನ ಸಾವಿಗೆ ಸತ್ಯೇಶ್ವರಿಯು ಉಪವಾಸವಿದ್ದು ಸತ್ಯೇಶ್ವರನು ನಾಗರೂಪದಲ್ಲಿ ಸಹೋದರಿಗೆ ಕಾಣಲು ಅವಳು ಉಪವಾಸವಿದ್ದು ನಾಗದೇವನ ಪೂಜೆ ಮಾಡಲಾಗಿ ನಾಗದೇವನು ಸಹೋದರನ ರೂಪದಲ್ಲಿ ನಿನಗೆ ಸಹಾಯ ಮಾಡುವೆನೆಂದು ಅವಳಿಗೆ ವಚನ ನೀಡುವದರಿಂದ ಅಂದಿನ ದಿನ ಸ್ತ್ರೀಯರು ಚೌತಿಯ ಉಪವಾಸ ಮಾಡಿ ಅಂದು ಮತ್ತು ನಾಗಪಂಚಮಿಯಂದು ತನಿ ಎರೆಯುತ್ತಾರೆ.
ಉತ್ತರ ಕರ್ನಾಟಕದಲ್ಲಿ ಅಣ್ಣತಂಗಿಯರ ಹಬ್ಬವೆಂದು ನಾಗಪಂಚಮಿಯನ್ನು ಆಚರಿಸಿ ತವರೂರಿನಿಂದ ಹೆಣ್ಣುಮಕ್ಕಳನ್ನು ಸಹೋದರರು ಕರೆತಂದು ಹಬ್ಬ ಸಂಭ್ರಮದಿಂದ ಆಚರಿಸುತ್ತಾರೆ. ನಾಡಿನ ಜನತೆ ಸಂಭ್ರಮದಿಂದ ಹಬ್ಬವನ್ನಾಚರಿಸಿ ನಾಗದೇವನ ಆಶೀರ್ವಾದ ಪಡೆಯೋಣ. ನಾಡಿನ ಜನತೆಗೆ ಶ್ರಾವಣಮಾಸದ ನಾಗರಪಂಚಮಿ ಚೌತಿಯ ಶುಭಾಶಯಗಳು.
- ಗಿರಿಜಾ.ಎಸ್.ದೇಶಪಾಂಡೆ ಬೆಂಗಳೂರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

