ಮಂಗಳೂರು: ಇಂದು ಮಜಲು ಕೊಂಚಾಡಿಯ ನಿಷ್ಕ ಬಡಾವಣೆಯಲ್ಲಿ 80 ನೇ ಸ್ವಾತಂತ್ರ್ಯೋತ್ಸವವನ್ನು ವಿಶೇಷ ರೀತಿಯಲ್ಲಿ ಆಚರಿಸಲಾಯಿತು. ನಾವು ಪರಕೀಯ ಆಡಳಿತದಿಂದ ಮುಕ್ತರಾಗಿ ಅನುಭವಿಸುತ್ತಿರುವ ಸ್ವಾತಂತ್ರ್ಯ ಕೇವಲ ರಾಜಕೀಯ ಸ್ವಾತಂತ್ರ್ಯ ಆಗಿದೆ. ಆದರೆ ನಮ್ಮ ಜನರು ಇನ್ನೂ ಇಂಗ್ಲಿಷ್ ಭಾಷಾ ದಾಸ್ಯದಿಂದ ಮುಕ್ತರಾಗಿಲ್ಲ.
ಈ ವಿಚಾರವನ್ನೆ ಹಿನ್ನೆಲೆಯಾಗಿಟ್ಟುಕೊಂಡು ಇದರ ಮೇಲೆ ಇನ್ನಷ್ಟು ಬೆಳಕು ಚೆಲ್ಲುವ ಉದ್ದೇಶದಿಂದ ಕಾರ್ಯಕ್ರಮವನ್ನು ಸಂಪೂರ್ಣವಾಗಿ ಸಂಸ್ಕೃತದಲ್ಲೇ ನಿರ್ವಹಿಸಲಾಯಿತು. ಜನ ಜೀವನದಲ್ಲಿ ಸಂಸ್ಕೃತವನ್ನು ಆಂಗ್ಲ ಮತ್ತು ಇತರ ಭಾಷೆಗಳಂತೆಯೇ ಬಳಸಬಹುದು ಎಂಬ ವಿಚಾರವನ್ನು ಸಾಮಾನ್ಯ ಜನರಿಗೆ ತೋರಿಸಿಕೊಡುವ ಪ್ರಯತ್ನವನ್ನು ಮಾಡಲಾಯಿತು.
ಸಂಸ್ಕೃತ ಭಾರತಿಯ ಅಖಿಲ ಭಾರತ ಮಟ್ಟದ ಜ್ಯೇಷ್ಠ ಕಾರ್ಯಕರ್ತರಾದ ಡಾ. ವಿಶ್ವಾಸ ಹೆಚ್ ಆರ್ ಅವರು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.
ಶತಮಾನಗಳಿಂದ ವಿದೇಶೀ ಆಡಳಿತಕ್ಕೆ ಸಿಕ್ಕು ನಲುಗಿದ ಭಾರತೀಯರು ಸ್ವಾತಂತ್ರ್ಯೋ ತ್ತರ ಕಾಲದಲ್ಲಿ ತಮ್ಮ ಮೂಲಕ್ಕೆ ಮರಳುವ ಬಗ್ಗೆ ಚಿಂತಿಸಬೇಕು. ಪರಕೀಯ ಆಡಳಿತವಿದ್ದಾಗ ನಮ್ಮನ್ನು ಆಳಿದವರು ತಮ್ಮ ಅನುಕೂಲಕ್ಕೆ ತಕ್ಕಂತೆ ರೂಪಿಸಿದ ಶಿಕ್ಷಣ ನೀತಿಯನ್ನೇ ಅದೇ ರೀತಿಯಲ್ಲಿ ನಾವು ಇನ್ನೂ ಮುಂದುವರಿಸಿಕೊಂಡು ಬಂದಿದ್ದೇವೆ. ನಿಜವಾದ ಭಾರತೀಯತೆ, ನೈಜ ಸಂಸ್ಕೃತಿ ಏನು ಎಂಬುದನ್ನು ಅರಿಯುವ ಪ್ರಯತ್ನ ಇನ್ನಾದರೂ ಮಾಡಬೇಕು.
ಇದು ಸಂಸ್ಕೃತ ಅಧ್ಯಯನದಿಂದ ಮಾತ್ರ ಸಾಧ್ಯ. ಹೇಗೆಂದರೆ ಋಷಿ ಮುನಿಗಳು ತಮ್ಮ ಪ್ರಾಚೀನ ಜ್ಞಾನ ಸಂಪತ್ತ್ತೆಲ್ಲವನ್ನು ಸಂಸ್ಕೃತ ಭಾಷೆಯಲ್ಲಿ ನಿಕ್ಷೇಪಿಸಿದ್ದಾರೆ. ರಾಜತಾಂತ್ರಿಕ, ಆರೋಗ್ಯ, ಅಧ್ಯಾತ್ಮ, ವೈಜ್ಞಾನಿಕ ಇತ್ಯಾದಿ ಬೇರೆ ಬೇರೆ ವಿಚಾರಗಳ ಬಗ್ಗೆ ಅಪಾರ ಜ್ಞಾನ ಭಂಡಾರದ ಸಾಹಿತ್ಯ ನಮ್ಮ ಸಂಸ್ಕೃತ ಭಾಷೆಯಲ್ಲಿದೆ. ಆದರೆ ಅದನ್ನು ಬಳಸಿಕೊಳ್ಳಬೇಕಾದರೆ ಸಂಸ್ಕೃತ ಭಾಷೆ ಎಂಬ ಕೀಲಿ ಕೈ ನಮ್ಮದಾಗಬೇಕು. ಸಂಸ್ಕೃತವನ್ನು ಕಲಿಯಲು, ಬಳಸಲು ಎಲ್ಲರಿಗೂ ಸಾಧ್ಯವಿದೆ, ಸಾಕಷ್ಟು ಅವಕಾಶಗಳೂ ಇವೆ. ನಾವು ಇದನ್ನು ಅರಿಯಬೇಕು ಎಂದು ಅಭಿಪ್ರಾಯ ಪಟ್ಟರು.
ಅಧ್ಯಕ್ಷ ಸ್ಥಾನದಲ್ಲಿ ಡಾ. ಗೌತಮ್ ಕುಳಮರ್ವ ಅವರು ಮಾತನಾಡಿದರು. ಬ್ರಿಟಿಷರು ನಮ್ಮಿಂದ ಸ್ವಾತಂತ್ರ್ಯ ವನ್ನು ಮೊದಲು ಕಸಿದುಕೊಂಡು ಅನಂತರ ಅದನ್ನು ಹಿಂದಿರುಗಿಸಿದಾಗಲೇ ನಮಗೆ ಸ್ವಾತಂತ್ರ್ಯದ ನಿಜವಾದ ಸ್ವಾದ ತಿಳಿಯುವಂತಾಯಿತು. ಅಲ್ಲಿಯ ವರೆಗೆ ನಾವು ಸ್ವತಂತ್ರವೇ ಆಗಿದ್ದರೂ ಕೂಡ ನಮಗೇ ಅದರ ಬೆಲೆಯ ಅರಿವಿರಲಿಲ್ಲ.
ಆಂಗ್ಲ ಭಾಷೆಯೂ ಸೇರಿದಂತೆ ಸಕಲಭಾಷೆಗಳ ಮಾತೆಯಾಗಿರುವ ಸಂಸ್ಕೃತವೂ ಇಂದು ಇದೇ ಪರಿಸ್ಥಿತಿಯನ್ನು ಅನುಭವಿಸುತ್ತಿದೆ. ಅದು ಆಂಗ್ಲ ಭಾಷೆಯ ಯಾಜಮಾನಿಕ್ಯದಿಂದಾಗಿ ಸೊರಗಿದೆ. ಸಂಸ್ಕೃತದಲ್ಲಿ ಹುದುಗಿರುವ ಅಪಾರ ಜ್ಞಾನ ಭಂಡಾರ ಆಂಗ್ಲ ಭಾಷೆಯ ಗುಲಾಮಗಿರಿಯ ಅಡಿಯಲ್ಲಿ ಇಂದಿಗೂ ನಲುಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಕೊನೆಯಲ್ಲಿ ನಿಷ್ಕ ಬಡಾವಣೆಯ ಮಕ್ಕಳು, ಶ್ರೀಮತಿ ಸವಿತಾ ರವಿಶಂಕರ್ ಮತ್ತು ಡಾ. ಅನೂಷಾ ಅವರು ಸಂಸ್ಕೃತದಲ್ಲಿ ಕಿರು ರೂಪಕವನ್ನು ಪ್ರದರ್ಶಿಸಿದರು.
ನಾವು ನಿಜವಾಗಿಯೂ ಸ್ವತಂತ್ರರಾಗಲು, ನಮ್ಮ ಜ್ಞಾನದ ಬಾಗಿಲನ್ನು ತೆರೆಯಲು, ನಮ್ಮ ಪರಂಪರೆಯ ಮೆರುಗನ್ನು ಆನಂದಿಸಲು ನಾವೆಲ್ಲರೂ ಸಂಸ್ಕೃತ ಭಾಷೆಯನ್ನು ಕಲಿಯೋಣ ಎಂಬ ಆಶಯವನ್ನು ವ್ಯಕ್ತಪಡಿಸುತ್ತಾ ಇಂದಿನ ಸ್ವಾತಂತ್ರ್ಯೋತ್ಸವ ಸಮಾರಂಭಕ್ಕೆ ತೆರೆ ಎಳೆಯಲಾಯಿತು.
ಡಾ. ವಾದೀಶ್ ಭಟ್ ಸ್ವಾಗತಿಸಿ ಡಾ. ಮೋಹನ್ ಭಟ್ ವಂದಿಸಿದರು. ಡಾ. ವಿದ್ಯಾ ಗೌತಮ್ ಮುಖ್ಯ ಅತಿಥಿಯನ್ನು ಪರಿಚಯಿಸಿದರು. ಶ್ರೀಮತಿ ಶ್ರೀದೇವಿ ಜೋಶಿ ಪ್ರತಿಜ್ಞೆಯನ್ನು ಎಲ್ಲರಿಗೂ ಭೋದಿಸಿದರು. ಕುಮಾರಿ ಸಾಧ್ವಿ ನಿರೂಪಕಿಯಾಗಿ ಸಹಕರಿಸಿದರು. ಕುಮಾರ ಶ್ರೇಯಸ್ ಜೋಶಿ, ಕುಮಾರ ಸಂವಿದ್ ಹಾಗೂ ಕುಮಾರಿ ಪ್ರತಿಭಾ ಪ್ರಾರ್ಥನೆಯನ್ನು ನೆರವೇರಿಸಿದರು. ಕಾರ್ಯದರ್ಶಿ ಶ್ಯಾಮಪ್ರಸಾದ ಅವರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

