"ಮನುಷ್ಯ, ಮನುಷ್ಯರಿಗಾಗಿ, ಮನುಷ್ಯರಿಗೋಸ್ಕರ" ದಟ್ ಇಸ್ ಮಾನವೀಯತೆ. ಇದು ಮಲೆನಾಡಿನ ಬದುಕಿನ ಶೈಲಿಯಲ್ಲೇ ಇದೆ ಅಲ್ವಾ!
ಅಬ್ರಹಾಂ ಲಿಂಕನ್ ಅವರು ಪ್ರಜಾಪ್ರಭುತ್ವದ ಬಗ್ಗೆ "ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ" ಎಂದು ದೊಡ್ಡ ವ್ಯಾಖ್ಯಾನ ಕೊಟ್ಟು ಹೋದರು. ಆದರೆ ನಮ್ಮ ಮಲೆನಾಡಿನ ದಟ್ಟ ಕಾಡು, ಮಳೆ ಮತ್ತು ಮಂಜಿನ ನಡುವೆ "ಮನುಷ್ಯ, ಮನುಷ್ಯರಿಗಾಗಿ, ಮನುಷ್ಯರಿಗೋಸ್ಕರ" ನಡೆಸುವ ಜೀವನಶೈಲಿಯನ್ನು ಹತ್ತಿರದಿಂದ ನೋಡಿದರೆ, ಮಾನವೀಯತೆ ಎನ್ನುವುದು ಇಲ್ಲಿನ ಗಾಳಿಯಲ್ಲೇ ಬೆರೆತುಹೋಗಿದೆ ಎನಿಸುತ್ತದೆ.
ಮಲೆನಾಡಿನಲ್ಲಿ ಮಾನವೀಯತೆ ಎಂದರೆ ಯಾವುದೇ ಭಾಷಣ ಅಥವಾ ರಕ್ತದಾನದ ಬ್ಯಾನರ್‌ಗಳಲ್ಲ. ಅಸ್ತವ್ಯಸ್ತವಾಗಿ ಸುರಿಯುವ ಜಡಿಮಳೆಯಲ್ಲಿ, ಕೆಸರು ಹಾದಿಯಲ್ಲಿ ಯಾರೋ ಅಪರಿಚಿತನ ಕಾರು ಸಿಕ್ಕಿಬಿದ್ದಾಗ, ತನ್ನ ಕೆಲಸ ಕಾರ್ಯಗಳನ್ನೆಲ್ಲ ಬದಿಗೊತ್ತಿ, ಕೈಗೆ ಸಿಕ್ಕ ಮರದ ಕೊಂಬೆ ಹಿಡಿದು ಕಾರು ತಳ್ಳಿ ಕೊಡುವ ಆ ಸಣ್ಣ ಸಹಾಯದಲ್ಲೇ ಇಲ್ಲಿನ ಮಾನವೀಯತೆ ಎದ್ದುಕಾಣುತ್ತದೆ. ಅಷ್ಟೇಕೆ, ಆಷಾಢದ ಮಳೆಯಲ್ಲಿ ಛತ್ರಿ ಹಿಡಿದು ಹೋಗುವಾಗ ಎದುರು ಸಿಕ್ಕವನಿಗೆ "ಬನ್ನಿ ಮಾರಾಯ್ರೆ, ಕೊಡೆ ಅಡಿಗೆ ಬನ್ನಿ" ಎಂದು ಜಾಗ ಕೊಡುವುದು ನಮಗೆ ತಾನೇ ತಾನಾಗಿ ಬಂದಿರುವ ಸಂಸ್ಕಾರ!
ಇನ್ನು ಆತಿಥ್ಯದ ವಿಷಯಕ್ಕಂತೂ ಮಲೆನಾಡಿಗರು ಮಿಗಿಲಾದವರು! ಅಪರಿಚಿತನೇ ಇರಲಿ, ಹಿತೈಷಿಯೇ ಇರಲಿ—ಯಾರೇ ಮನೆಗೆ ಬಂದರೂ ಕನಿಷ್ಠ ಒಂದು ಲೋಟ ಕಾಫಿ ಕೊಡದೆ ಕಳಿಸುವ ಅಭ್ಯಾಸವೇ ಮಲೆನಾಡಿನ ಜನಕ್ಕಿಲ್ಲ. ಇನ್ನು ಮಧ್ಯಾಹ್ನದ ಊಟದ ಸಮಯಕ್ಕೇನಾದರೂ ಯಾರಾದರೂ ಹೊಸ್ತಿಲು ತುಳಿದರೆ ಮುಗಿಯಿತು, "ಊಟದ ಹೊತ್ತಿನಲ್ಲಿ ಬಂದಿದ್ದೀರಿ, ಎರಡು ತುತ್ತು ಉಣ್ಣದೆ ಹೋಗುವಂತಿಲ್ಲ" ಎಂದು ಗಂಟುಬಿದ್ದು, ಬಿಸಿಯೂಟ ಉಣಿಸಿಯೇ ಕಳುಹಿಸುವ ಪ್ರೀತಿ ಇಲ್ಲಿದೆ. 'ಅತಿಥಿ ದೇವೋ ಭವ' ಎನ್ನುವುದು ಇಲ್ಲಿ ಪುಸ್ತಕದ ಮಾತಲ್ಲ, ನಿತ್ಯ ಬದುಕಿನ ಧರ್ಮ.
ಕಾಲವನ್ನು ಗಡಿಯಾರದಲ್ಲಿ ನೋಡಿ ಅಳೆದು ತೂಗಿ ಸಂಭಾಷಣೆ ನಡೆಸುವ, ಮನೆಗೆ ಬಂದವರನ್ನು "ಏನು ವಿಷಯ?" ಎಂದು ಹೆಬ್ಬಾಗಿಲಲ್ಲೇ ನಿಲ್ಲಿಸಿ ವಿಚಾರಿಸಿ ಕಳಿಸುವ ನಗರ ಪ್ರದೇಶದ ಮಂದಿ, ಮಲೆನಾಡಿಗರ ಈ ಕರುಣೆ ಮತ್ತು ಆತಿಥ್ಯದ ಸಂಸ್ಕೃತಿಯಿಂದ ಕಲಿಯುವುದು ಬೆಟ್ಟದಷ್ಟಿದೆ!
ಈ ಮಾನವೀಯತೆ ಮತ್ತು ಹಿರಿಯರಿಗೆ ಗೌರವ ನೀಡುವ ಗುಣ ಇಲ್ಲಿ ದಿಢೀರನೆ ಬರುವುದಲ್ಲ; ಮಲೆನಾಡಿನ ಪ್ರತಿ ಮನೆಯಲ್ಲೂ ಮಕ್ಕಳಿಗೂ ಇದನ್ನು ಹುಟ್ಟಿನಿಂದಲೇ ಉಣಿಸಿ ಬೆಳೆಸಲಾಗುತ್ತದೆ. ಮನೆಗೆ ಯಾರಾದರೂ ಹಿರಿಯರು ಬಂದಾಗ ಎದ್ದು ನಿಂತು ಕೈಜೋಡಿಸುವುದು, ಕಾಲಿಗೆ ಬಿದ್ದು ನಮಸ್ಕರಿಸುವುದು, ಹಿರಿಯರ ಮಾತುಗಳಿಗೆ ಎದುರು ಆಡದೆ ವಿನಯದಿಂದ ಆಲಿಸುವುದು—ಇವೆಲ್ಲವೂ ಇಲ್ಲಿನ ಮಕ್ಕಳಿಗೆ ರಕ್ತಗತವಾಗಿಯೇ ಬಂದುಬಿಡುತ್ತದೆ.
ತನಗಿಂತ ಹಿರಿಯರನ್ನು 'ಅಣ್ಣ', 'ಅಜ್ಜ', 'ದೊಡ್ಡಪ್ಪ' ಎಂದು ಕರೆಯುತ್ತಾ, ಪರರ ಕಷ್ಟಕ್ಕೆ ಸ್ಪಂದಿಸುವುದೇ ನಿಜವಾದ ಶಕ್ತಿ ಎಂಬುದನ್ನು ಮಲೆನಾಡಿನ ಪೋಷಕರು ತಮ್ಮ ದಿನನಿತ್ಯದ ನಡವಳಿಕೆಯ ಮೂಲಕವೇ ಮಕ್ಕಳಿಗೆ ಕಲಿಸಿಕೊಡುತ್ತಾರೆ.
ಇನ್ನು ನಮ್ಮೂರಿನ ಗದ್ದೆ ನಾಟಿ ಅಥವಾ ಅಡಿಕೆ ಸುಲಿಯುವ ಸಮಯ ಬಂತೆಂದರೆ, ಯಾವುದೇ ಕೂಲಿಯ ಲೆಕ್ಕಾಚಾರವಿಲ್ಲದೆ "ನಿಮ್ಮ ಕೆಲಸಕ್ಕೆ ನಾವ್ ಬರ್ತೇವೆ, ನಮ್ಮ ಕೆಲಸಕ್ಕೆ ನೀವ್ ಬನ್ನಿ" ಎಂದು ಪರಸ್ಪರ ಕೈಜೋಡಿಸುವ 'ಹಸಗೆ' ಅಥವಾ ಮುಯ್ಯಾಳು ಪದ್ಧತಿ ಇದೆಯಲ್ಲ, ಅದುವೇ ಮಾನವೀಯತೆಯ ಕಚ್ಚಾ ರೂಪ! ನೆರೆಮನೆಯಲ್ಲಿ ಅತಿಥಿಗಳು ಬಂದರೆ, ನಮ್ಮ ಮನೆಯಿಂದ ಹಾಲಿನ ಗಿಂಡಿ ಅಥವಾ ಹಣ್ಣು-ಹಂಪಲು ಗಡಿಬಿಡಿಯಲ್ಲಿ ಗಡಿ ದಾಟಿ ಆ ಮನೆಗೆ ತಲುಪುವುದು ಮಲೆನಾಡಿನ ಗಂಭೀರ ಪರಂಪರೆ!
ಇನ್ನು ಸಾರಿಗೆಯ ವಿಷಯಕ್ಕೆ ಬಂದರೆ, ಮಲೆನಾಡಿನ ಬಸ್‌ಗಳೇ ಒಂದು ಸಣ್ಣ ಸಂಸಾರ! ಟಿಕೆಟ್ ತಗೊಳ್ಳೋ ಗಡಿಬಿಡಿಯಲ್ಲೂ "ಅವರ ಕೈಲಿ ಚಿಲ್ಲರೆ ಇಲ್ಲದಿದ್ದರೆ ನಾನು ಕೊಡ್ತೀನಿ ಬಿಡಿ" ಎಂದು ಪರಿಚಯವೇ ಇಲ್ಲದ ಪಕ್ಕದ ಪ್ರಯಾಣಿಕನಿಗೆ ಚಿಲ್ಲರೆ ಬಿಚ್ಚಿಕೊಡುವ ಔದಾರ್ಯ ಇಲ್ಲಿದೆ. ಸಾಲದೆಂಬಂತೆ, ರಸ್ತೆಯಲ್ಲಿ ಕಾದು ನಿಂತಿರುವ ಕಾಲೇಜು ವಿದ್ಯಾರ್ಥಿಗಳಿಗೆ ಅಥವಾ ವೃದ್ಧರಿಗೆ ಕಂಡ ಕಂಡ ಬೈಕ್‌ಗಳು, ಜೀಪ್‌ಗಳು 'ಲಿಫ್ಟ್' ನೀಡಲು ತಾನಾಗಿಯೇ ಬ್ರೇಕ್ ಹಾಕುತ್ತವೆ. "ಎಲ್ಲಿತನಕ ಹೋಗ್ಬೇಕು ಮಾರಾಯ್ರೆ?" ಎಂದು ಕೇಳಿ ಹತ್ತಿಸಿಕೊಳ್ಳುವ ಈ ಸಂಸ್ಕೃತಿಗೆ ಯಾವುದೇ ಆಪ್, ಯಾವುದೇ ಬುಕಿಂಗ್‌ಗಳ ಹಂಗಿಲ್ಲ!
ಮನುಷ್ಯನಿಗೆ ಮನುಷ್ಯನೇ ನೆರವಾಗಬೇಕು ಎನ್ನುವುದು ನಿಜ. ಆದರೆ ಇಲ್ಲೂ ಕೆಲವೊಮ್ಮೆ ತಮಾಷೆಯ ಸನ್ನಿವೇಶಗಳು ಎದುರಾಗುತ್ತವೆ. ರಸ್ತೆಯ ಪಕ್ಕದಲ್ಲಿ ಯಾರಾದರೂ ಗಾಡಿ ನಿಲ್ಲಿಸಿ ಕೊಂಚ ಯೋಚಿಸುತ್ತಿದ್ದರೆ ಸಾಕು, ನಾಲ್ಕು ಜನ ಬಂದು "ಏನಾಯ್ತು ಮಾರಾಯ್ರೆ? ಪೆಟ್ರೋಲ್ ಖಾಲಿಯಾ? ಪ್ಲಗ್ ಪಾಯಿಂಟ್ ಪರೀಕ್ಷೆ ಮಾಡಿದಿರಾ?" ಎಂದು ತಜ್ಞರಂತೆ ಸಲಹೆ ಕೊಟ್ಟು, ಕೊನೆಗೆ "ನಿಮ್ಮ ಗಾಡಿ ರಿಪೇರಿ ಮಾಡೋಕೆ ಆ ಮೂಲೆಯಲ್ಲಿ ರಾಮಣ್ಣ ಇದ್ದಾನೆ" ಎಂದು ಉಚಿತ ಮಾರ್ಗದರ್ಶನ ನೀಡುವ ಪಂಡಿತರಿಗೇನೂ ಇಲ್ಲಿ ಕೊರತೆಯಿಲ್ಲ!
ಇನ್ನು ಮಲೆನಾಡಿನ ಆಸ್ಪತ್ರೆ ಅಥವಾ ಕ್ಲಿನಿಕ್‌ಗಳ ಮುಂದಿನ ದೃಶ್ಯವೇ ಬೇರೆ. ಯಾರೋ ಒಬ್ಬರಿಗೆ ಹುಷಾರಿಲ್ಲವೆಂದರೆ ಇಡೀ ಓಣಿಯೇ ಆಸ್ಪತ್ರೆಯ ಅಂಗಳದಲ್ಲಿ ಹಾಜರ್! "ಏನೂ ಹೆದರ್ಬೇಡಿ ಮಾರಾಯ್ರೆ, ನಾವಿದ್ದೇವೆ" ಎಂದು ಧೈರ್ಯ ತುಂಬುತ್ತಾ, ಡಾಕ್ಟರ್ ಬರುವಷ್ಟರಲ್ಲಿ ತಾವೇ ಅರ್ಧ ಡಾಕ್ಟರ್ ಆಗಿ ಏನೇನೋ ಉಪಚಾರ ಹೇಳುವ ಉಚಿತ ವೈದ್ಯಕೀಯ ಸಲಹೆಗಾರರೂ ಇಲ್ಲಿದ್ದಾರೆ!
ಡಿಜಿಟಲ್ ಕಾಲದಲ್ಲೂ ಮಲೆನಾಡಿನ ಮಾನವೀಯತೆ ತನ್ನ ವಿಶಿಷ್ಟತೆಯನ್ನು ಕಳೆದುಕೊಂಡಿಲ್ಲ. ಪಕ್ಕದೂರಿನಲ್ಲಿ ಯಾರದ್ದೋ ಹಸು ತಪ್ಪಿಸಿಕೊಂಡರೆ, ವಾಟ್ಸಾಪ್ ಗ್ರೂಪ್‌ಗಳಲ್ಲಿ ಅದರ ಫೋಟೋ ಹಾಕಿ "ಇದು ಇಂಥವರ ಹಸು, ಕಂಡುಬಂದರೆ ತಿಳಿಸಿ" ಎಂದು ಇಡೀ ತಾಲೂಕನ್ನೇ ಜಾಲತಾಣದ ಮೂಲಕ ಹುಡುಕಾಟಕ್ಕೆ ಇಳಿಸುವ ಹೊಸ ಶೈಲಿಯ ಮಾನವೀಯತೆಯೂ ಈಗ ಜೀವಂತವಾಗಿದೆ!
ಹೋಟೆಲಿನಲ್ಲಿ ಬಿಸಿಬಿಸಿ ಕಾಫಿ ಕುಡಿಯುತ್ತಾ, ಮಳೆಯ ಸದ್ದಿನ ನಡುವೆ ಒಬ್ಬರನ್ನೊಬ್ಬರು ಕ್ಷೇಮ ವಿಚಾರಿಸಿಕೊಳ್ಳುವುದು, ಸಂಕಷ್ಟ ಬಂದಾಗ ಇಡೀ ಊರೇ ಒಂದಾಗಿ ನಿಲ್ಲುವುದು ಮಲೆನಾಡಿನ ಜೀವಗುಣ. ಎಷ್ಟೇ ಆಧುನಿಕತೆ ಬಂದರೂ, ಸ್ವಾರ್ಥದ ನಡುವೆಯೂ ಇತರರಿಗಾಗಿ ಮಿಡಿಯುವ ಈ ಮಲೆನಾಡಿನ ಕರುಣೆಯ ಮನಸ್ಸುಗಳೇ 'ಮಾನವೀಯತೆ' ಎಂಬ ಮೂರಕ್ಷರಕ್ಕೆ ನಿಜವಾದ ಜೀವ ತುಂಬುತ್ತಿವೆ.
- ಪ್ರಸನ್ನ ಹೊಳ್ಳ ತೀರ್ಥಹಳ್ಳಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

