ಗ್ರಂಥಾಲಯಗಳು ಜ್ಞಾನದ ಜೀವಂತ ಕೇಂದ್ರಗಳು: ಗೋವಿಂದದಾಸ ಕಾಲೇಜಿನಲ್ಲಿ ರಾಜ್ಯಮಟ್ಟದ ಕಾರ್ಯಾಗಾರ

Upayuktha
0



ಸುರತ್ಕಲ್:
“ಜ್ಞಾನವೇ ಶಕ್ತಿ” ಎಂಬ ಧ್ಯೇಯ ವಾಕ್ಯದೊಂದಿಗೆ ದಕ್ಷಿಣ ಕನ್ನಡ ಹಾಗೂ ಕೊಡಗು ಗ್ರಂಥಾಲಯ ಸಂಘ (ರಿ.), ಉಡುಪಿ ಮತ್ತು ಗೋವಿಂದ ದಾಸ ಕಾಲೇಜು, ಸುರತ್ಕಲ್ ಇವರ ಸಹಯೋಗದಲ್ಲಿ “Libraries at the Crossroads : Challenges and Opportunities” ಎಂಬ ವಿಷಯದ ರಾಜ್ಯಮಟ್ಟದ ಕಾರ್ಯಾಗಾರ ಹಾಗೂ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ ಗುರುವಾರ ಗೋವಿಂದದಾಸ ಕಾಲೇಜಿನ ಎ.ವಿ. ಸಭಾಂಗಣದಲ್ಲಿ ನಡೆಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಆಡಳಿತ ಮಂಡಳಿ, ಹಿಂದೂ ವಿದ್ಯಾದಾಯಿನಿ ಸಂಘ (ರಿ.), ಸುರತ್ಕಲ್‌ನ ಅಧ್ಯಕ್ಷರಾದ ಶ್ರೀ ಜಯಚಂದ್ರ ಎಸ್. ಹತ್ವಾರ್ ವಹಿಸಿದ್ದರು. ಅವರು ಮಾತನಾಡಿ ಗ್ರಂಥಾಲಯಗಳು ವಿದ್ಯಾರ್ಥಿಗಳು, ಸಂಶೋಧಕರು ಹಾಗೂ ಸಾಮಾನ್ಯ ಓದುಗರಿಗೆ ಅಗತ್ಯವಾದ ಜ್ಞಾನ ಮೂಲಗಳಾಗಿದ್ದು, ವಿದ್ಯಾರ್ಥಿಗಳು ಓದುವ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕೆಂದರು.


ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪ್ರೊ. ವಿ.ಜಿ. ತಳವಾರ್, ಮಾಜಿ ಕುಲಪತಿ, ಮೈಸೂರು ವಿಶ್ವವಿದ್ಯಾನಿಲಯ ಹಾಗೂ ರೇವಾ ವಿಶ್ವವಿದ್ಯಾಲಯ, ಮಾಹಿತಿ ನಿರ್ವಹಣೆ ಮತ್ತು ಜ್ಞಾನ ಹಂಚಿಕೆಯಲ್ಲಿ ಗ್ರಂಥಾಲಯಗಳ ಸೇವೆ ಅತ್ಯಂತ ಮಹತ್ವದ್ದಾಗಿದೆ ಎಂದರು. ಗ್ರಂಥಾಲಯ ವಿಜ್ಞಾನದ ಪಿತಾಮಹ ಡಾ. ಎಸ್. ಆರ್. ರಂಗನಾಥನ್ ಅವರ ಅಮೂಲ್ಯ ಕೊಡುಗೆಗಳನ್ನು ಸ್ಮರಿಸಿ, ಭಾರತೀಯ ಗ್ರಂಥಾಲಯ ಚಳವಳಿಗೆ ಅವರು ಬಲ ನೀಡಿದ್ದಷ್ಟೇ ಅಲ್ಲ, ವಿಶ್ವ ಗ್ರಂಥಾಲಯ ವಿಜ್ಞಾನಕ್ಕೂ ವೈಜ್ಞಾನಿಕ ಚಿಂತನೆ ಮತ್ತು ಮಾನವಮುಖಿ ದೃಷ್ಟಿಕೋನ ನೀಡಿದ ಅಂತರರಾಷ್ಟ್ರೀಯ ಮಹಾನ್ ಪಂಡಿತರೆಂದು ಶ್ಲಾಘನೆ ಮಾಡಿದರು.


ಕಾರ್ಯಕ್ರಮದಲ್ಲಿ ಗೌರವಾನ್ವಿತ ಅತಿಥಿಯಾಗಿ ಉಪಸ್ಥಿತರಿದ್ದ ಸೇಂಟ್ ಅಲೋಶಿಯಸ್ (ಮಾನ್ಯ ವಿಶ್ವವಿದ್ಯಾಲಯ), ಮಂಗಳೂರು, ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಮಹಾಲಿಂಗ ಭಟ್ ಕೆ. ಅವರು, ಗ್ರಂಥಾಲಯಗಳು ಜ್ಞಾನವಿತರಣೆೆಯ ಸಶಕ್ತ ಕೇಂದ್ರಗಳಾಗಿವೆ ಎಂದು ಹೇಳಿದರು. ಡಿಜಿಟಲ್ ಯುಗದಲ್ಲೂ ಗ್ರಂಥಾಲಯಗಳ ಪಾತ್ರ ಕಡಿಮೆಯಾಗದೆ ಹೊಸ ರೂಪದಲ್ಲಿ ಇನ್ನಷ್ಟು ವಿಸ್ತರಿಸಿದೆ ಎಂದರು.


ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಹಾವೇರಿಯ ಗ್ರಂಥಪಾಲಕ ಡಾ. ರಾಜಶೇಖರ್ ಕುಂಬಾರ್, ಮಾಹಿತಿ ನಿರ್ವಹಣೆ, ಓದುಗರ ಅಗತ್ಯಗಳು, ಡಿಜಿಟಲ್ ಸಂಪನ್ಮೂಲಗಳ ಬಳಕೆ ಹಾಗೂ ತಾಂತ್ರಿಕ ಬದಲಾವಣೆಗಳ ನಡುವೆ ಗ್ರಂಥಾಲಯಗಳು ಎದುರಿಸುತ್ತಿರುವ ಸವಾಲುಗಳ ಕುರಿತು ವಿವರಿಸಿದರು. ಅವರು ವಿದ್ಯಾರ್ಥಿ ಸ್ನೇಹಿ ಸೇವೆಗಳು ಮತ್ತು ಡಿಜಿಟಲ್ ಗ್ರಂಥಾಲಯಗಳ ವಿಸ್ತರಣೆಯ ಅಗತ್ಯವನ್ನು ಒತ್ತಿ ಹೇಳಿದರು.


ಕಾರ್ಯಕ್ರಮದಲ್ಲಿ ಗೋವಿಂದದಾಸ ಕಾಲೇಜಿನ ಆಡಳಿತ ನಿರ್ದೇಶಕ ಪ್ರೊ. ರಮೇಶ್ ಭಟ್ ಎಸ್. ಜಿ ಹಾಗೂ ಪ್ರಾಂಶುಪಾಲ ಪ್ರೊ. ಹರೀಶ್ ಆಚಾರ್ಯ ಪಿ. ಉಪಸ್ಥಿತರಿದ್ದರು. ದಕ್ಷಿಣ ಕನ್ನಡ ಮತ್ತು ಕೊಡಗು ಗ್ರಂಥಾಲಯ ಸಂಘದ ಅಧ್ಯಕ್ಷೆ ಡಾ. ರೇಖಾ ಡಿ. ಪೈ ಅವರು ಸ್ವಾಗತ ಭಾಷಣ ಮಾಡಿದರು. ಕಾರ್ಯದರ್ಶಿ ಡಾ. ವನಜಾ ಧನ್ಯವಾದ ಸಮರ್ಪಿಸಿದರು. ಸಂಘಟನಾ ಕಾರ್ಯದರ್ಶಿ ಡಾ. ಸುಜಾತಾ ಬಿ. ಅವರು ಡಾಕ್ಟರೇಟ್ ಪದವಿ ಪಡೆದ ಅಧ್ಯಾಪಕರ ಸಾಧನೆಗಳನ್ನು ವಾಚಿಸಿದರು. ಹಾಗೂ ಬೆಟ್ಟಂಪಾಡಿ ಸರ್ಕಾರಿ ಕಾಲೇಜಿನ ಗ್ರಂಥಪಾಲಕ ರಾಮ ಗರವರು ನಿವೃತ್ತ ಪ್ರಾಧ್ಯಾಪಕರ ಪಟ್ಟಿಯನ್ನು ವಾಚಿಸಿದರು.


ಸೇಂಟ್ ಅಲೋಶಿಯಸ್ ಕಾಲೇಜಿನ ಗ್ರಂಥಪಾಲಕ ಸಂಜೀವ ಹಾಗೂ ಆಳ್ವಾಸ್ ಕಾಲೇಜು, ಮೂಡುಬಿದಿರೆಯ ಮುಖ್ಯ ಗ್ರಂಥಪಾಲಕಿ ಶ್ಯಾಮಲಾ ನಿರೂಪಣೆ ಮಾಡಿದರು. ಕಾರ್ಯಕ್ರಮದ ಅಂಗವಾಗಿ ನಿವೃತ್ತ ಪ್ರಾಧ್ಯಾಪಕರು, ಡಾಕ್ಟರೇಟ್ ಪದವಿ ಪಡೆದ ಉಪನ್ಯಾಸಕರು ಹಾಗೂ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.


ಸಂಘದ ಪದಾಧಿಕಾರಿಗಳು, ಸದಸ್ಯರು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆಯ ಸಂದರ್ಭದಲಿ ಡಾ. ಎಸ್. ಆರ್. ರಂಗನಾಥನ್ ಅವರ ಜನ್ಮ ಜಯಂತಿಯ ಮಹತ್ವವನ್ನು ಸ್ಮರಿಸಲಾಯಿತು.


ಒಟ್ಟಿನಲ್ಲಿ ಗ್ರಂಥಾಲಯಗಳು ಕೇವಲ ಪುಸ್ತಕಗಳ ಸಂಗ್ರಹಾಲಯಗಳಲ್ಲ. ಜ್ಞಾನ, ಸಂಶೋಧನೆ, ಓದುವ ಸಂಸ್ಕೃತಿ ಮತ್ತು ಸಾಮಾಜಿಕ ಅಭಿವೃದ್ಧಿಯ ಜೀವಂತ ಕೇಂದ್ರಗಳೆಂಬ ಸಂದೇಶ ಕಾರ್ಯಾಗಾರದಿಂದ ಹೊರಹೊಮ್ಮಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top