ಕುಳಾಯಿ ಶಾಲೆಯಲ್ಲಿ ಮಕ್ಕಳ ಕಾನೂನು ಅರಿವು ಕಾರ್ಯಾಗಾರ

Upayuktha
0


ಕುಳಾಯಿ: ಮಕ್ಕಳ ಹಿತಾಸಕ್ತಿ ಕಾಪಾಡಲು ರೂಪಿಸಿರುವ ಪೋಕ್ಸೋ ಕಾಯಿದೆಯ ಅರಿವು ವಿದ್ಯಾರ್ಥಿಗಳಲ್ಲಿರಬೇಕು. 18 ವರ್ಷದೊಳಗಿನ ಹೆಣ್ಣು ಹಾಗೂ ಗಂಡು ಮಕ್ಕಳನ್ನು ಲೈಂಗಿಕ ದೌರ್ಜನ್ಯ, ಶೋಷಣೆ, ಮತ್ತು ಕಿರುಕುಳಗಳಿಂದ ರಕ್ಷಿಸಲು ರೂಪಿಸಿರುವ ಕಠಿಣ ಕಾನೂನು ಇದಾಗಿದ್ದು ಮುಗ್ದ ಮಕ್ಕಳ ಬಾಳನ್ನು ಸುಂದರಗೊಳಿಸುವ ಹೊಣೆಗಾರಿಕೆ ಸಮಾಜದ್ದಾಗಿದೆ ಎಂದು ನ್ಯಾಯವಾದಿ ಮಾನಸ ಹೆಗ್ಡೆ ನುಡಿದಿದ್ದಾರೆ.


ಅವರು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ವಕೀಲರ ಸಂಘ (ರಿ) ಮಂಗಳೂರು ಸಹಯೋಗದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಫಿಶರೀಶ್ ಚಿತ್ರಾಪುರ ಕುಳಾಯಿಯಲ್ಲಿ ಹಳೆ ವಿದ್ಯಾರ್ಥಿ ಸಂಘ ಮತ್ತು ಶಾಲಾಭಿವೃದ್ದಿ ಸಮಿತಿಯ ಸಹಭಾಗಿತ್ವದಲ್ಲಿ ನಡೆದ ಮಕ್ಕಳ ಕಾನೂನು ಅರಿವು ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.


ನ್ಯಾಯವಾದಿ ಬಾಲಕೃಷ್ಣ ಶೆಟ್ಟಿ ಮಾತನಾಡಿ ಬಾಹ್ಯ ಪ್ರಲೋಭನೆಗಳಿಗೆ ವಿದ್ಯಾರ್ಥಿಗಳು ಬಲಿಯಾಗದೆ ಶೈಕ್ಷಣಿಕ ಚಟುವಟಿಕೆಗಳಲ್ಲಿ ಆಸಕ್ತಿ ತಾಳಿ ಉತ್ತಮ ನಾಗರಿಕರಾಗ ಬೇಕು ಎಂದರು.


ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಪ್ರೊ. ಕೃಷ್ಣಮೂರ್ತಿ ಮಾತನಾಡಿ, ಪ್ರಾಥಮಿಕ ಶಿಕ್ಷಣದ ಸಂದರ್ಭದಲ್ಲಿಯೇ ಜೀವನ ಶಿಕ್ಷಣದ ಅರಿವು ಮೂಡಿಸುವ ಕಾರ್ಯ ನಡೆಯಬೇಕಾಗಿದೆ ಎಂದರು. ಹಳೆ ವಿದ್ಯಾರ್ಥಿ ಸಂಘದ ಜೊತೆ ಕಾರ್ಯದರ್ಶಿ ಕುಮಾರ್ ಬಂಗೇರ ಮಾದಕ ದ್ರವ್ಯ ಸೇವನೆಯ ವಿರುದ್ಧ ಜನಜಾಗೃತಿ ಮೂಡಬೇಕಾಗಿದ್ದು ಸಂಘ ಸಂಸ್ಥೆಗಳ ಕಾರ್ಯಕ್ಕೆ ಜಿಲ್ಲಾಡಳಿತದ ಸಹಕಾರ ಅಗತ್ಯವಿದೆ ಎಂದರು.


ಸಾಮಾಜಿಕ ಸೇವಾ ಸಂಘಟಕ ಶ್ರೀನಿವಾಸ ಕುಳಾಯಿ ಅಧ್ಯಕ್ಷತೆ ವಹಿಸಿ ಮಾತನಾಡಿ ಅರಿವು, ನಂಬಿಕೆ ಸ್ವಚ್ಛತೆ, ಶಿಸ್ತುಗಳ ಮೂಲಕ ಉನ್ನತಿ ಸಾಧಿಸಲು ಸಾಧ್ಯವಿದೆ ಎಂದರು.


ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷೆ ಶಶಿಕಲಾ, ಪವನ್ ಮೈರ್ಪಾಡಿ, ಭರತೇಶ್, ಅರುಣ್, ಹರ್ಷಿತಾ ಎಂ. ವಿ., ವಿಜಯ್, ಯಶ್ವಿತ್ ರಾಜ್ ಮತ್ತು ಶಿಕ್ಷಕಿಯರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಶೋಭಾ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top