ಕುಂದಾಪುರ: ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಧನಸಹಾಯ ಯೋಜನೆಯಡಿ ನಾದ ನೂಪುರ ಯಕ್ಷೋತ್ಥಾನ ಟ್ರಸ್ಟ್ ವಂಡಾರು ಆಯೋಜನೆಯಲ್ಲಿ ಆಗಸ್ಟ್ 16ರಂದು ಭಾನುವಾರ ಕುಂದಾಪುರದ ಹಂಗಾರಕಟ್ಟೆ ಕೇಂದ್ರದ ಸಭಾಭವನದಲ್ಲಿ ಸಂಜೆ 3 ಗಂಟೆಗೆ ವೀರ ರಾಣಿ ಅಬ್ಬಕ್ಕ ಪ್ರಶಸ್ತಿ ಪುರಸ್ಕೃತ ಶುಭಾಶಯ ಜೈನ್ ವಿರಚಿತ ಹೇಮಾದ್ರಿ ಗಿರಿಬಾಲೆ ಎಂಬ ಪ್ರಸಂಗವು ಪ್ರದರ್ಶನಗೊಂಡಿತು.
ಗಂಧರ್ವರ ನಡುವೆ ಜನ್ಮಾಂತರಗಳಲ್ಲಿ ನಡೆಯುವ ದ್ವೇಷ, ಪ್ರೀತಿ, ಶಾಪ, ವರ, ಒಳ್ಳೆಯತನ ಹಾಗೂ ಧರ್ಮದ ವಿಜಯದ ಕುರಿತು ಧೃಶ್ಯಾವಳಿಗಳು ಮೂಡಿ ಬಂದವು. ಲಲಿತಾಂಗ ಎಂಬ ಅವಳಿ ಪಾತ್ರಗಳಲ್ಲಿ ಪ್ರಸನ್ನ ಶೆಟ್ಟಿಗಾರ ಮಂದಾರ್ತಿ, ಹಾಗೂ ಪ್ರಕಾಶ್ ಕಿರಾಡಿ, ಶಾಲ್ಮಲಿ, ಮಲಯಸುಂದರಿ ಹಾಗೂ ಜಯಂತಸೇನೆ ಎಂಬ ಮೂರು ಪಾತ್ರಗಳಲ್ಲಿ ಕಲಾವಿದರಾದ ವಂಡಾರು ಗೋವಿಂದ, ಮೂರು ಜನ್ಮಗಳ ಪ್ರೀತಿ, ಸಂಘರ್ಷ, ಸೇಡಿನ ಎಳೆಯನ್ನು ವಿವಿಧ ರಸಭಾವಗಳಲ್ಲಿ ಪ್ರಸ್ತುಪಡಿಸಿದರು. ಹೇಮಕೀರ್ತಿಯ ಪಾತ್ರದಲ್ಲಿ ಪ್ರಭಾಕರ ಬೇಳಂಜೆ, ಸುದಂತಿಯ ಪಾತ್ರದಲ್ಲಿ ಜಯಂತ ಸುರ್ಗೊಳಿ ಹಾಗೂ ಹಾಸ್ಯಗಾರ ಲಲಿತಾಂಗನ ಸಖ ಕುಸುಮನಾಗಿ ಕ್ಯಾದಗಿ ಮಹಾಬಲೇಶ್ವರ ಅಭಿನಯಿಸಿದರು.
ಶಾಲ್ಮಲಿ ಹಾಗೂ ಶ್ರೀನಂದರ ಪ್ರೇಮಾನುರಾಗವನ್ನು ಬೇರ್ಪಡಿಸಲು ಸುದಂತಿ ನಡೆಸುವ ಕುತಂತ್ರಗಳು, ಹಾಗೂ ಆಕೆ ಪ್ರತಿ ಜನ್ಮದಲ್ಲೂ ಶ್ರೀನಂದ ಶಾಲ್ಮಲಿಯರನ್ನು ಕಾಡುವ ಹಗೆಯ ಪಣಕ್ಕೆ ಸವಾಲೆಸೆದು ಶಾಲ್ಮಲಿ ಶ್ರೀನಂದರ ಪ್ರೀತಿಯನ್ನು ಗೆಲ್ಲಿಸುವ ಹೇಮಕೀರ್ತಿ ಅವರಿಬ್ಬರ ಆದರ್ಶ ಪ್ರೇಮವನ್ನು ಲೋಕಮುಖದಲ್ಲಿ ಶಾಶ್ವತವಾಗಿ ಉಳಿಯುವಂತೆ ಮಾಡುತ್ತಾನೆ. ಅವರನ್ನು ಒಂದುಗೂಡಿಸಿ ನಿಷ್ಕಲ್ಮಷ ಪ್ರೇಮವನ್ನು ಗೆಲ್ಲಿಸುತ್ತಾನೆ.
ಭಾಗವತರಾದ ಮೂಡುಬೆಳ್ಳೆ ಚಂದ್ರಕಾಂತ ರಾವ್ ಅವರ ಸಾರಥ್ಯದಲ್ಲಿ ನಡೆದ ಆಖ್ಯಾನಕ್ಕೆ ಹಿಮ್ಮೇಳದಲ್ಲಿ ಚೆಂಡೆಯಲ್ಲಿ ಎನ್. ಜಿ. ಹೆಗಡೆ ಹಾಗೂ ಮದ್ದಳೆಯಲ್ಲಿ ಮಂಗೇಶ್ ನಾಡಕರ್ಣಿ ಸಹಕರಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

