AI ಆಧಾರಿತ ಕ್ರೀಡೆ ಮತ್ತು ಆರೋಗ್ಯ ಪರಿಹಾರಗಳ ಅನ್ವೇಷಣೆ
ಬೆಂಗಳೂರು: ದೈನಂದಿನ ಜೀವನದ ಪ್ರಮುಖ ಸವಾಲುಗಳಿಗೆ ತಂತ್ರಜ್ಞಾನದ ಮೂಲಕ ಪರಿಹಾರ ಕಂಡುಕೊಳ್ಳಲು ಹೊರಟಿರುವ ಕರ್ನಾಟಕದ ಮೂರು ನವೀನ ಆಲೋಚನೆಗಳ ನಾಲ್ವರು ಯುವ ಆವಿಷ್ಕಾರಕರು ‘ಸ್ಯಾಮ್‌ಸಂಗ್ Solve for Tomorrow’ 5ನೇ ಆವೃತ್ತಿಯ ರಾಷ್ಟ್ರೀಯ 'Top 40' ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಕೃತಕ ಬುದ್ಧಿಮತ್ತೆ (AI) ಹಾಗೂ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ತುರ್ತು ರಕ್ತದ ತಾಪಮಾನ ನಿರ್ವಹಣೆ, ಸುಲಭ ಆರೋಗ್ಯ ಮೇಲ್ವಿಚಾರಣೆ ಮತ್ತು ತಳಮಟ್ಟದ ಕ್ರೀಡೆಗಳಲ್ಲಿ ಪಾರದರ್ಶಕತೆ ತರುವ ಉದ್ದೇಶಿತ ಯೋಜನೆಗಳನ್ನು ಇವರು ರೂಪಿಸಿದ್ದಾರೆ.
ತುರ್ತು ಪರಿಸ್ಥಿತಿಯಲ್ಲಿ ರಕ್ತವನ್ನು ಸೂಕ್ತ ತಾಪಮಾನದಲ್ಲಿ ಇರಿಸುವುದು, ವಯಸ್ಸಾದವರು ಅಥವಾ ರೋಗಿಗಳು ಬಿದ್ದುಹೋಗುವ ಅಪಾಯವನ್ನು ಅವರ ನಡಿಗೆಯ ಶೈಲಿಯ ಮೂಲಕ ಮುಂಚಿತವಾಗಿ ಗುರುತಿಸುವುದು ಹಾಗೂ ತಳಮಟ್ಟದ ಕ್ರೀಡೆಗಳಲ್ಲಿ ಸ್ಕೋರಿಂಗ್‌ನ ಸ್ಪಷ್ಟ ದಾಖಲೆ ನಿರ್ವಹಿಸುವುದು — ಇಂತಹ ಸವಾಲುಗಳನ್ನು ಎದುರಿಸಲು ದಕ್ಷಿಣ ಕನ್ನಡದ ಕಾರ್ತಿಕ್ ಪ್ರದೀಪ್ ಪರಮಾದತಿಲ್, ಬೆಂಗಳೂರಿನ ಎ.ವಿ. ಕೃತಿ ಕೃಷ್ಣ, ಭವ್ಯ ಚಾವತ್ ಮತ್ತು ರೂಪಲ್ ಗುಹಾ ನಿಯೋಗಿ ಅವರು ತಂತ್ರಜ್ಞಾನ ಆಧಾರಿತ ನವೀನ ಪರಿಹಾರಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ.
20 ವರ್ಷದ ಕಾರ್ತಿಕ್ ಪ್ರದೀಪ್ ಅವರು ತುರ್ತು ರಕ್ತ ವರ್ಗಾವಣೆಯ ಸಂದರ್ಭದಲ್ಲಿ ರಕ್ತದ ತಾಪಮಾನವನ್ನು ನಿಯಂತ್ರಿಸಬಲ್ಲ ಸಣ್ಣ ಹಾಗೂ ಸುಲಭವಾಗಿ ಸಾಗಿಸಬಹುದಾದ ಸಾಧನದ ಪರಿಕಲ್ಪನೆಯನ್ನು ರೂಪಿಸಿದ್ದಾರೆ. ಶಾಕ್, ಹೈಪೋಥರ್ಮಿಯಾ ಮುಂತಾದ ತುರ್ತು ಸನ್ನಿವೇಶಗಳಲ್ಲಿ ಈ ಸಾಧನ ಜೀವ ರಕ್ಷಕವಾಗಬಲ್ಲದು. ಮತ್ತೊಂದೆಡೆ, ಬೆಂಗಳೂರಿನ ಕೃತಿ ಕೃಷ್ಣ ಮತ್ತು ಭವ್ಯ ಚಾವತ್ ಅವರ ‘404NotFound’ ತಂಡವು ‘StepSense’ ಎಂಬ ಸ್ಮಾರ್ಟ್ ಶೂ ವ್ಯವಸ್ಥೆಯನ್ನು ರೂಪಿಸುತ್ತಿದ್ದು, ಇದು ವ್ಯಕ್ತಿಯ ನಡಿಗೆ ಮತ್ತು ಚಲನೆಯನ್ನು ವಿಶ್ಲೇಷಿಸಿ ನ್ಯೂರೋಪಥಿ ಹಾಗೂ ಬೀಳುವ ಅಪಾಯಗಳನ್ನು ಮುಂಚಿತವಾಗಿ ಪತ್ತೆಹಚ್ಚಲು ನೆರವಾಗುತ್ತದೆ. ಹಾಗೆಯೇ ರೂಪಲ್ ಗುಹಾ ನಿಯೋಗಿ ಅವರ ‘NyaayKhel’ ತಂಡವು ಸ್ಮಾರ್ಟ್‌ಫೋನ್ ಕ್ಯಾಮೆರಾಗಳನ್ನು ಬಳಸಿ ಕಬಡ್ಡಿ, ಕುಸ್ತಿ ಹಾಗೂ ಖೋ-ಖೋ ಮುಂತಾದ ದೇಶೀಯ ಕ್ರೀಡೆಗಳಲ್ಲಿ AI ಆಧಾರಿತ ಪಾರದರ್ಶಕ ಸ್ಕೋರಿಂಗ್ ವ್ಯವಸ್ಥೆಯನ್ನು ಸೃಷ್ಟಿಸುತ್ತಿದೆ.
ಈ ಬಾರಿಯ ರಾಷ್ಟ್ರೀಯ Top 40 ತಂಡಗಳಲ್ಲಿ ಅರ್ಧಕ್ಕಿಂತ ಹೆಚ್ಚಿನವು Tier 2 ಮತ್ತು Tier 3 ನಗರಗಳಿಂದ ಬಂದಿದ್ದು, ದೇಶದ ನವೋದ್ಯಮ ವಲಯದಲ್ಲಿ ಯುವಜನರ ಹೆಚ್ಚುತ್ತಿರುವ ಭಾಗವಹಿಸುವಿಕೆಯನ್ನು ಇದು ತೋರಿಸುತ್ತದೆ. ಆಯ್ಕೆಯಾದ ತಂಡಗಳು FITT-IIT Delhiಯಲ್ಲಿ 10 ದಿನಗಳ ತೀವ್ರ ತರಬೇತಿ ಮತ್ತು ಮಾರ್ಗದರ್ಶನ ಪಡೆಯಲಿದ್ದು, ಸ್ಯಾಮ್‌ಸಂಗ್‌ನ ವಿವಿಧ R&D ಕೇಂದ್ರಗಳಿಗೆ ಭೇಟಿ ನೀಡುವ ಅವಕಾಶ ಪಡೆಯಲಿವೆ. ಅಂತಿಮವಾಗಿ ಆಯ್ಕೆಯಾಗುವ ನಾಲ್ಕು ವಿಜೇತ ತಂಡಗಳಿಗೆ ಒಟ್ಟು ₹2 ಕೋಟಿ ಮೊತ್ತದ ಇನ್ಕ್ಯುಬೇಶನ್ ಅನುದಾನ ಹಾಗೂ ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಗೆ ತರಲು IIT ಡೆಲ್ಲಿಯಿಂದ ಸಮಗ್ರ ಬೆಂಬಲ ದೊರೆಯಲಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


