ಇಂಜಿನಿಯರಿಂಗ್ ಜ್ಞಾನ ಸಮಾಜದ ಒಳಿತಿಗೆ ಬಳಕೆಯಾಗಲಿ: ಡಾ. ಪೂರ್ಣಿಮಾ ಬಾಳಿಗಾ

Upayuktha
0

ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಇಂಡಕ್ಷನ್ ಕಾರ್ಯಕ್ರಮ

ಮೂಡುಬಿದಿರೆ: ಇಂಜಿನಿಯರಿಂಗ್ ಎಂಬುದು ಕೇವಲ ಸಮೀಕರಣಗಳು, ಯಂತ್ರಗಳು ಹಾಗೂ ಪರೀಕ್ಷೆಗಳಿಗೆ ಸೀಮಿತವಾದ ಕ್ಷೇತ್ರವಲ್ಲ.  ನೈಜ ಜೀವನದ ಸಮಸ್ಯೆಗಳಿಗೆ ಪರಿಣಾಮಕಾರಿ ಪರಿಹಾರಗಳನ್ನು ಕಂಡುಕೊಳ್ಳುವ ಮೂಲಕ ಭವಿಷ್ಯವನ್ನು ರೂಪಿಸುವ ಸೃಜನಶೀಲ ಹಾಗೂ ಹೊಣೆಗಾರಿಕೆಯ ಕ್ಷೇತ್ರವಾಗಿದೆ ಎಂದು ಮಾಹೆಯ ವಿಶ್ರಾಂತ ಸಹ ಕುಲಾಧಿಪತಿ ಡಾ. ಪೂರ್ಣಿಮಾ ಬಾಳಿಗಾ ಹೇಳಿದರು.


ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ (ಎಐಇಟಿ)ಯ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಸೋಮವಾರ ಎಐಇಟಿ ಸಭಾಂಗಣದಲ್ಲಿ ಆಯೋಜಿಸಿದ್ದ ‘ಆಗಮನ’ ಇಂಡಕ್ಷನ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ವಿದ್ಯಾರ್ಥಿ ಜೀವನದ ಮುಂದಿನ ನಾಲ್ಕು ವರ್ಷಗಳು ಕೇವಲ ಪರೀಕ್ಷಾ ಸಿದ್ಧತೆಗೆ ಸೀಮಿತವಾಗದೆ, ಜ್ಞಾನಾರ್ಜನೆ, ಪ್ರಯೋಗಶೀಲತೆ, ಅನುಭವ ಸಂಪಾದನೆ ಹಾಗೂ ಸ್ವ-ಅಭಿವೃದ್ಧಿಗೆ ಪೂರಕವಾಗುವ ಸಾರ್ಥಕ ಅವಧಿಯಾಗಬೇಕು.  ವಿದ್ಯಾರ್ಥಿಗಳು ಕುತೂಹಲವನ್ನು ಬೆಳೆಸಿಕೊಂಡು ಪ್ರಶ್ನಿಸುವ ಮನೋಭಾವವನ್ನು ರೂಢಿಸಿಕೊಳ್ಳಬೇಕು.  ಪ್ರಯೋಗಾಲಯಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಪ್ರಾಯೋಗಿಕ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕು ಎಂದರು.  ಕೃತಕ ಬುದ್ಧಿಮತ್ತೆ, ನವೀಕರಿಸಬಹುದಾದ ಇಂಧನ, ಆರೋಗ್ಯ ತಂತ್ರಜ್ಞಾನ ಹಾಗೂ ಬಾಹ್ಯಾಕಾಶ ತಂತ್ರಜ್ಞಾನ ಸೇರಿದಂತೆ ಉದಯೋನ್ಮುಖ ಕ್ಷೇತ್ರಗಳಲ್ಲಿ ಯುವ ಇಂಜಿನಿಯರ್‌ಗಳಿಗೆ ಅಪಾರ ಅವಕಾಶಗಳಿವೆ. ಈ ಕ್ಷೇತ್ರಗಳಿಗೆ ಕೊಡುಗೆ ನೀಡಲು ಅಗತ್ಯವಾದ ಕೌಶಲ್ಯ ಮತ್ತು ಆಲೋಚನೆಗಳನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದರು. ಇಂಜಿನಿಯರ್‌ಗಳು ತಾಂತ್ರಿಕ ಜ್ಞಾನದ ಜತೆಗೆ ಸಹಾನುಭೂತಿ, ಸಾಮಾಜಿಕ ಹೊಣೆಗಾರಿಕೆ ಹಾಗೂ ಮಾನವೀಯ ಮೌಲ್ಯಗಳನ್ನೂ ಬೆಳೆಸಿಕೊಳ್ಳಬೇಕು.  ಶೈಕ್ಷಣಿಕ ಹಿನ್ನಡೆ, ವೈಫಲ್ಯ ಹಾಗೂ ಆತ್ಮವಿಶ್ವಾಸದ ಕೊರತೆಯನ್ನು ಕಲಿಕೆಯ ಸಹಜ ಹಂತಗಳೆಂದು ಸ್ವೀಕರಿಸಿ, ಅವುಗಳಿಂದ ಪಾಠ ಕಲಿತು ಆತ್ಮವಿಶ್ವಾಸದೊಂದಿಗೆ ಮುನ್ನಡೆಯಬೇಕು ಎಂದು ಅವರು ಸಲಹೆ ನೀಡಿದರು.


ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಮಂಗಳೂರು ಸೇನಾ ನೇಮಕಾತಿ ಕಛೇರಿಯ  ನಿರ್ದೇಶಕ ಕರ್ನಲ್ ಸೋಮು ಮಹಾರಾಜನ್, ಯಶಸ್ಸಿಗೆ ಶಿಸ್ತು, ನಿರಂತರತೆ ಹಾಗೂ ಕಠಿಣ ಪರಿಶ್ರಮ ಅತ್ಯಗತ್ಯ. ಇಂಜಿನಿಯರಿAಗ್ ವಿದ್ಯಾರ್ಥಿಗಳು ಭಾರತೀಯ ಸಶಸ್ತç ಪಡೆಗಳಲ್ಲಿ ಅಧಿಕಾರಿ ಹುದ್ದೆಗಳನ್ನು ಪಡೆಯುವ ಗುರಿಯನ್ನೂ ಹೊಂದಬೇಕು ಎಂದು ಕರೆ ನೀಡಿದರು.


ಶಿಸ್ತನ್ನು ನಿರ್ಬಂಧವಾಗಿ ನೋಡದೆ ಸ್ವಯಂ ನಿಯಂತ್ರಣ, ನಿರಂತರತೆ ಹಾಗೂ ಆತ್ಮವಿಶ್ವಾಸ ಬೆಳೆಸುವ ಸಾಧನವಾಗಿ ಪರಿಗಣಿಸಬೇಕು. ಸೇನಾ ಜೀವನ ಮತ್ತು ವಿದ್ಯಾರ್ಥಿ ಜೀವನದ ನಡುವಿನ ಸಾಮ್ಯವನ್ನು ವಿವರಿಸಿದ ಅವರು, ಕಾಲೇಜು ಜೀವನವು ಅನೇಕ ವಿದ್ಯಾರ್ಥಿಗಳಿಗೆ ಸ್ವತಂತ್ರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಆರಂಭಿಕ ಹಂತವಾಗಿದೆ. ಪಾಲಕರು ಹಾಗೂ ಶಿಕ್ಷಕರ ನೇರ ಮೇಲ್ವಿಚಾರಣೆ ಇಲ್ಲದಿದ್ದರೂ ವಿದ್ಯಾರ್ಥಿಗಳು ಸ್ವಯಂಶಿಸ್ತನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.


ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಶಿಕ್ಷಣವು ಕೇವಲ ಪ್ರಮಾಣಪತ್ರಗಳನ್ನು ಪಡೆಯುವವರನ್ನಾಗಲಿ ಅಥವಾ ಉದ್ಯೋಗವನ್ನು ಹುಡುಕುವ ಇಂಜಿನಿಯರ್‌ಗಳನ್ನಾಗಲಿ ಸೃಷ್ಟಿಸುವುದಕ್ಕೆ ಸೀಮಿತವಾಗಬಾರದು. ಸಮಾಜಕ್ಕೆ ಅರ್ಥಪೂರ್ಣ ಕೊಡುಗೆ ನೀಡಬಲ್ಲ ಜವಾಬ್ದಾರಿಯುತ ವ್ಯಕ್ತಿತ್ವವನ್ನು ರೂಪಿಸಬೇಕು.  ವಿದ್ಯಾರ್ಥಿಗಳು ತಮ್ಮ ಬೆಳವಣಿಗೆಯ ಹೊಣೆಗಾರಿಕೆಯನ್ನು ತಾವೇ ವಹಿಸಿಕೊಳ್ಳಬೇಕು. ಅಪಾಯಗಳನ್ನು ಎದುರಿಸುವ ಧೈರ್ಯ, ವೈಫಲ್ಯದಿಂದ ಕಲಿಯುವ ಮನೋಭಾವ ಹಾಗೂ ಹೊಸ ಪ್ರಯತ್ನಗಳನ್ನು ಮಾಡುವ ಸಿದ್ಧತೆ ಬೆಳೆಸಿಕೊಳ್ಳಬೇಕು. ಕ್ಯಾಂಪಸ್‌ನಲ್ಲಿರುವ 42 ವಿದ್ಯಾರ್ಥಿ ಕ್ಲಬ್‌ಗಳ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಸಲಹೆ ನೀಡಿದರು.  


ದೇಶದ ಭವಿಷ್ಯವನ್ನು ರೂಪಿಸುವ ಶಕ್ತಿ ಯುವಜನತೆಯಲ್ಲಿದೆ. ಅದರಲ್ಲೂ ಜೆನ್-ಝಿ ಪೀಳಿಗೆಯ ಹೊಸ ಆಲೋಚನೆ, ತಂತ್ರಜ್ಞಾನ ಜ್ಞಾನ ಹಾಗೂ ಸೃಜನಶೀಲತೆ ರಾಷ್ಟ್ರದ ಪ್ರಗತಿಗೆ ಹೊಸ ದಿಕ್ಕನ್ನು ನೀಡಬಲ್ಲದು. ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯವನ್ನು ಅರಿತು, ಅದನ್ನು ಸಮಾಜದ ಒಳಿತಿಗಾಗಿ ಸದುಪಯೋಗಪಡಿಸಿಕೊಳ್ಳಬೇಕು  ಎಂದರು.


ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚರ‍್ಯ ಡಾ ಪೀಟರ್ ಫೆರ್ನಾಂಡೀಸ್  ಪ್ರಸ್ತಾವಿಕ ಮಾತುಗಳನ್ನಾಡಿದರು.  ಎಲ್ಲಾ ವಿಭಾಗಗಳ ಮುಖ್ಯಸ್ಥರು ಇದ್ದರು.


ವಿದ್ಯಾರ್ಥಿನಿಯರಾದ ಸ್ಟೆಲ್ಲಾ ಸಾಜಿ ಹಾಗೂ ಶಾರ್ವರಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಉಪನ್ಯಾಸಕರಾದ   ಡಾ ರವಿಕುಮಾರ್ ಸ್ವಾಗತಿಸಿ, ಡಾ ಹರೀಶ್ ಕುಂದರ್ ವಂದಿಸಿದರು.



  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top