ಆಟಿ ಆಚರಣೆಯಲ್ಲಿ ಸಸ್ಯಗಳ ಮಹತ್ವ: ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ಸಸ್ಯಶಾಸ್ತ್ರ ವಿಭಾಗದಿಂದ ವಿಶೇಷ ಉಪನ್ಯಾಸ

Upayuktha
0


ಉಜಿರೆ: ದಕ್ಷಿಣ ಕನ್ನಡದ ಸಾಂಸ್ಕೃತಿಕ ಪರಂಪರೆಯಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ಆಟಿ ತಿಂಗಳ ಆಚರಣೆಗಳಲ್ಲಿ ಸಸ್ಯಗಳ ಪಾತ್ರ ಹಾಗೂ ಅವುಗಳ ಮಹತ್ವವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಉದ್ದೇಶದಿಂದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು (ಸ್ವಾಯತ್ತ), ಉಜಿರೆಯ ಸಸ್ಯಶಾಸ್ತ್ರ ವಿಭಾಗದ ವತಿಯಿಂದ, IQAC ಸಹಯೋಗದಲ್ಲಿ “ಆಟಿ ಆಚರಣೆಯಲ್ಲಿ ಸಸ್ಯಗಳ ಮಹತ್ವ” ಎಂಬ ವಿಷಯದ ಕುರಿತು ವಿಶೇಷ ಅತಿಥಿ ಉಪನ್ಯಾಸ ಕಾರ್ಯಕ್ರಮ ಸೋಮವಾರ  ನಡೆಯಿತು.


ಕಾರ್ಯಕ್ರಮದಲ್ಲಿ ಸೇಂಟ್ ಅಲೋಶಿಯಸ್ ಕಾಲೇಜು, ಮಂಗಳೂರಿನ ನಿವೃತ್ತ ಸಹಾಯಕ ಪ್ರಾಧ್ಯಾಪಕ ಹಾಗೂ ಎನ್‌ಎಸ್‌ಎಸ್ ನೋಡಲ್ ಅಧಿಕಾರಿ ಡಾ. ವಿಶ್ವನಾಥ ಬದಿಕಾನ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಆಟಿ ಆಚರಣೆಗಳಲ್ಲಿ ಸಸ್ಯಗಳ ಮಹತ್ವ, ಸಾಂಪ್ರದಾಯಿಕ ಜ್ಞಾನ ಮತ್ತು ಪರಿಸರ ಸಂರಕ್ಷಣೆಯ ನಡುವಿನ ಸಂಬಂಧದ ಕುರಿತು ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿಯನ್ನು ನೀಡಿದರು.


ಕಾರ್ಯಕ್ರಮದ ಉದ್ಘಾಟನೆಯನ್ನು ಎಸ್‌ಡಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಶ್ವನಾಥ ಪಿ. ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಡಿಎಂ ಕಾಲೇಜಿನ ರಿಜಿಸ್ಟ್ರಾರ್ ಪ್ರೊ. ಶ್ರೀಧರ ಎನ್. ಭಟ್ಟ ವಹಿಸಿದ್ದರು.


ಕರಾವಳಿ ಕರ್ನಾಟಕದ ಜನಜೀವನದಲ್ಲಿ ಆಟಿ ತಿಂಗಳಿಗೆ ವಿಶೇಷ ಮಹತ್ವವಿದೆ. ಈ ಅವಧಿಯಲ್ಲಿ ಪೂರ್ವಜರಿಂದ ನಡೆದುಬಂದಿರುವ ವಿವಿಧ ಆಚರಣೆಗಳು, ಆಹಾರ ಪದ್ಧತಿಗಳು ಹಾಗೂ ಔಷಧೀಯ ಸಸ್ಯಗಳ ಬಳಕೆಯು ಇಂದಿಗೂ ಜನರ ಜೀವನದಲ್ಲಿ ಪ್ರಸ್ತುತವಾಗಿವೆ. ಪ್ರಕೃತಿಯೊಂದಿಗೆ ಮನುಷ್ಯ ಹೊಂದಿದ್ದ ನಿಕಟ ಸಂಬಂಧವನ್ನು ಪ್ರತಿಬಿಂಬಿಸುವ ಅನೇಕ ಸಾಂಪ್ರದಾಯಿಕ ಆಚರಣೆಗಳು ಆಟಿ ತಿಂಗಳೊಂದಿಗೆ ಬೆಸೆದುಕೊಂಡಿವೆ. ಈ ಹಿನ್ನೆಲೆಯಲ್ಲಿ ಸಸ್ಯಶಾಸ್ತ್ರ ವಿಭಾಗವು ಆಟಿ ಆಚರಣೆಗಳಲ್ಲಿರುವ ಸಸ್ಯಾಧಾರಿತ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಕಾರ್ಯಕ್ರಮವನ್ನು ಆಯೋಜಿಸಿತು.


ಸಂಪನ್ಮೂಲ ವ್ಯಕ್ತಿ ಡಾ. ವಿಶ್ವನಾಥ ಬದಿಕಾನ ಅವರು ಮಾತನಾಡಿ, ಆಟಿ ತಿಂಗಳಲ್ಲಿ ಸಾಂಪ್ರದಾಯಿಕವಾಗಿ ಬಳಸಲಾಗುವ ವಿವಿಧ ಸಸ್ಯಗಳು, ಅವುಗಳ ಔಷಧೀಯ ಹಾಗೂ ಪೌಷ್ಟಿಕ ಗುಣಗಳು ಮತ್ತು ಗ್ರಾಮೀಣ ಬದುಕಿನಲ್ಲಿ ಅವುಗಳ ಉಪಯೋಗದ ಕುರಿತು ವಿವರಿಸಿದರು. ಹಿಂದಿನ ತಲೆಮಾರುಗಳು ಪ್ರಕೃತಿಯಲ್ಲಿನ ಸಸ್ಯ ಸಂಪತ್ತನ್ನು ಹೇಗೆ ಗುರುತಿಸಿ, ಸಂರಕ್ಷಿಸಿ, ತಮ್ಮ ದೈನಂದಿನ ಬದುಕಿನಲ್ಲಿ ಬಳಸಿಕೊಂಡಿದ್ದವು ಎಂಬುದರ ಕುರಿತು ಅವರು ಬೆಳಕು ಚೆಲ್ಲಿದರು. ಸಾಂಪ್ರದಾಯಿಕ ಸಸ್ಯಜ್ಞಾನವನ್ನು ವೈಜ್ಞಾನಿಕ ದೃಷ್ಟಿಕೋನದಿಂದ ಅರ್ಥೈಸಿಕೊಳ್ಳುವ ಅಗತ್ಯವನ್ನೂ ಅವರು ವಿದ್ಯಾರ್ಥಿಗಳಿಗೆ ತಿಳಿಸಿದರು.


ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ವಿದ್ಯಾರ್ಥಿಗಳಿಂದ ಸಿದ್ಧಪಡಿಸಲಾದ ಸಾಂಪ್ರದಾಯಿಕ ಆಟಿ ತಿಂಗಳ ಖಾದ್ಯಗಳ ಪ್ರದರ್ಶನ ಹಾಗೂ ಸವಿಯುವ ವ್ಯವಸ್ಥೆ ಮಾಡಲಾಗಿತ್ತು. ಆಟಿ ತಿಂಗಳಲ್ಲಿ ಸಾಂಪ್ರದಾಯಿಕವಾಗಿ ತಯಾರಿಸಲಾಗುವ ವಿವಿಧ ಆಹಾರ ಪದಾರ್ಥಗಳು ಮತ್ತು ಅವುಗಳಲ್ಲಿ ಬಳಸುವ ಸ್ಥಳೀಯ ಸಸ್ಯಜನ್ಯ ಪದಾರ್ಥಗಳ ಪರಿಚಯವನ್ನು ವಿದ್ಯಾರ್ಥಿಗಳು ಮಾಡಿಕೊಟ್ಟರು. ಇದರ ಮೂಲಕ ಆಹಾರ, ಆರೋಗ್ಯ, ಸಸ್ಯ ಸಂಪತ್ತು ಮತ್ತು ಸ್ಥಳೀಯ ಸಂಸ್ಕೃತಿಯ ನಡುವಿನ ಅವಿನಾಭಾವ ಸಂಬಂಧವನ್ನು ತಿಳಿದುಕೊಳ್ಳಲು ಅವಕಾಶ ದೊರೆಯಿತು.


ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಸೃಜನಶೀಲತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಇ-ವಾಲ್ ಮ್ಯಾಗಜಿನ್ ಕೂಡ ಪ್ರದರ್ಶಿಸಲಾಯಿತು. ರಂಜನ್ ಆರ್., ಕೀರ್ತಿರಾಜ್ ಹಾಗೂ ಉದಯ್ ಅವರು ಇ-ವಾಲ್ ಮ್ಯಾಗಜಿನ್ ಸಿದ್ಧಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಆಟಿ ಆಚರಣೆ, ಸಸ್ಯಗಳ ವೈವಿಧ್ಯತೆ, ಸಾಂಪ್ರದಾಯಿಕ ಜ್ಞಾನ ಹಾಗೂ ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ವಿಷಯಗಳನ್ನು ಇ-ವಾಲ್ ಮ್ಯಾಗಜಿನ್ ಮೂಲಕ ವಿದ್ಯಾರ್ಥಿಗಳಿಗೆ ಪರಿಚಯಿಸಲಾಯಿತು. ಡಿಜಿಟಲ್ ಮಾಧ್ಯಮವನ್ನು ಬಳಸಿಕೊಂಡು ಸಸ್ಯಶಾಸ್ತ್ರದ ವಿಷಯಗಳನ್ನು ಸೃಜನಾತ್ಮಕವಾಗಿ ಪ್ರಸ್ತುತಪಡಿಸಿರುವುದು ಕಾರ್ಯಕ್ರಮದ ವಿಶೇಷತೆಯಾಗಿತ್ತು.


ಕಾರ್ಯಕ್ರಮದ ನಿರೂಪಣೆಯನ್ನು ಅನ್ವಿಟಾ ಸೆರಾ ಹಾಗೂ ಸೌಜನ್ಯ ಅವರು ಸಮರ್ಥವಾಗಿ ನಿರ್ವಹಿಸಿದರು. ಅತಿಥಿಗಳ ಪರಿಚಯವನ್ನು ಸ್ತುತಿ ಅವರು ನೀಡಿದರು. ಲತಿಕಾ ಸ್ವಾಗತಿಸಿ, ಆತ್ಮಿ ಧನ್ಯವಾದವಿತ್ತರು.


ಆಟಿ ಆಚರಣೆಗಳೊಂದಿಗೆ ಬೆಸೆದುಕೊಂಡಿರುವ ಸಸ್ಯಗಳ ಸಾಂಪ್ರದಾಯಿಕ ಮತ್ತು ವೈಜ್ಞಾನಿಕ ಮಹತ್ವವನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವ ಮೂಲಕ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ವಿಶೇಷ ಅನುಭವ ನೀಡಿತು. ಆಧುನಿಕ ಜೀವನಶೈಲಿಯ ನಡುವೆ ಸ್ಥಳೀಯ ಸಸ್ಯ ಸಂಪತ್ತು, ಸಾಂಪ್ರದಾಯಿಕ ಆಹಾರ ಪದ್ಧತಿ ಮತ್ತು ಪಾರಂಪರಿಕ ಜ್ಞಾನವನ್ನು ಉಳಿಸಿ ಬೆಳೆಸುವ ಅಗತ್ಯವನ್ನು ಕಾರ್ಯಕ್ರಮ ಒತ್ತಿ ಹೇಳಿತು.


ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರು ಶ್ರೀ ಅಭಿಲಾಷ್ ಕೆ. ಎಸ್. ಹಾಗೂ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಸುದರ್ಶನ, ಶ್ರೀಮತಿ ಮಂಜುಶ್ರೀ, ಶ್ರೀಮತಿ ಭವ್ಯಾ ಡಿ. ನಾಯಕ್ ಸೇರಿದಂತೆ, ಸಸ್ಯಶಾಸ್ತ್ರದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿಕ್ಕ್ ಸ್ಥಳೀಯ ಸಸ್ಯ ಸಂಪತ್ತು ಹಾಗೂ ಕರಾವಳಿಯ ಸಾಂಸ್ಕೃತಿಕ ಪರಂಪರೆಯ ಬಗ್ಗೆ ಆಸಕ್ತಿ ಮೂಡಿಸುವುದರ ಜೊತೆಗೆ, ಪ್ರಕೃತಿ ಮತ್ತು ಮಾನವ ಜೀವನದ ನಡುವಿನ ಆಪ್ತ ಸಂಬಂಧವನ್ನು ಅರಿಯಲು ಸಹಕಾರಿಯಾಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top