ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಮತ್ತು ಸಮಯದ ಮಹತ್ವ

Upayuktha
0

ಸಮಯದ ಸದ್ಬಳಕೆ ಮತ್ತು ಶಿಸ್ತುಬದ್ಧ ಬದುಕೇ ಯಶಸ್ಸಿನ ಮೊದಲ ಮೆಟ್ಟಿಲು



ವಿದ್ಯೆಯನ್ನು ಕಲಿಯುವ, ಗ್ರಹಿಸುವ, ಅರ್ಥೈಸಿಕೊಳ್ಳುವ ಹಾಗೂ ಜ್ಞಾನವನ್ನು ಸಂಪಾದಿಸುವವನು ವಿದ್ಯಾರ್ಥಿ ಎಂದು ಕರೆಸಿಕೊಳ್ಳುತ್ತಾನೆ. ವಿದ್ಯಾರ್ಜನೆಯೇ ವಿದ್ಯಾರ್ಥಿ ಜೀವನದ ಮುಖ್ಯ ಗುರಿ. ವಿದ್ಯಾರ್ಥಿಯಾಗಲು ವಯಸ್ಸಿನ ಹಂಗಿಲ್ಲ; ಕಲಿಯುವ ಮನಸ್ಸು ಇರುವವರೆಗೂ ಪ್ರತಿಯೊಬ್ಬರೂ ವಿದ್ಯಾರ್ಥಿಗಳೇ. ಯಾವುದಾದರೊಂದು ವಿಷಯದಲ್ಲಿ ಜ್ಞಾನ ಸಂಪಾದಿಸುವ, ಹೊಸದನ್ನು ಅರಿಯುವ ಹಾಗೂ ತನ್ನ ಜ್ಞಾನವನ್ನು ನಿರಂತರವಾಗಿ ವೃದ್ಧಿಸಿಕೊಳ್ಳುವ ಗುರಿ ಹೊಂದಿರುವವನು ವಿದ್ಯಾರ್ಥಿ. ವಿದ್ಯಾರ್ಥಿಯು ತನ್ನ ಜೀವನದ ಗುರಿಯನ್ನು ಸಾಧಿಸಬೇಕಾದರೆ ಕೆಲವು ನೀತಿ-ನಿಯಮಗಳನ್ನು ಪಾಲಿಸಲೇಬೇಕು. ಅದರಲ್ಲಿಯೂ ಶಿಸ್ತು ಮತ್ತು ಸಮಯಪಾಲನೆ ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಅತ್ಯಂತ ಮಹತ್ವದ ಎರಡು ಮೌಲ್ಯಗಳು.


ಶಿಸ್ತು ಬದುಕಿನ ಆಧಾರ


ಸಮಯಪ್ರಜ್ಞೆ, ಶಿಸ್ತು, ಹಿರಿಯರನ್ನು ಗೌರವಿಸುವ ಗುಣ, ಸಂಯಮದ ನಡವಳಿಕೆ ಮುಂತಾದ ಮೌಲ್ಯಗಳ ಕೊರತೆಯನ್ನು ಇಂದಿನ ಕೆಲವು ವಿದ್ಯಾರ್ಥಿಗಳಲ್ಲಿ ಕಾಣುತ್ತಿರುವುದು ಆತಂಕಕಾರಿ ಸಂಗತಿ. ಆ ಮನೋಭಾವ ಬದಲಾಗಬೇಕಿದೆ. ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಶಿಸ್ತು ಮತ್ತು ಸಮಯಕ್ಕೆ ಪ್ರಾಮುಖ್ಯತೆ ನೀಡಬೇಕು. ಶಿಸ್ತು ಇಲ್ಲದ ಬದುಕು ದಿಕ್ಕಿಲ್ಲದ ಪಯಣದಂತೆ. ಸಮಯದ ಮಹತ್ವ ಅರಿಯದ ಜೀವನವೂ ಕ್ರಮೇಣ ತನ್ನ ಅರ್ಥವನ್ನು ಕಳೆದುಕೊಳ್ಳುತ್ತದೆ.


ಶಿಸ್ತು ಮತ್ತು ಸಮಯದ ಮಹತ್ವವನ್ನು ಅರಿತವರು ಜೀವನದಲ್ಲಿ ಒಂದಲ್ಲ ಒಂದು ಸಾಧನೆ ಮಾಡಿ ಶ್ರೇಷ್ಠ ವ್ಯಕ್ತಿಗಳಾಗುತ್ತಾರೆ. ಆದರೆ ಸಮಯವನ್ನು ಬೇಜವಾಬ್ದಾರಿಯಿಂದ ಕಳೆದು, ಕಾಲಹರಣ ಮಾಡುತ್ತಾ ಅಶಿಸ್ತಿನಿಂದ ಬದುಕುವವರು ತಮ್ಮ ಜೀವನದಲ್ಲಿ ಒಂದರ ಹಿಂದೆ ಒಂದರಂತೆ ಗೊಂದಲಗಳನ್ನು ಸೃಷ್ಟಿಸಿಕೊಳ್ಳುತ್ತಲೇ ಹೋಗುತ್ತಾರೆ.


ಸಮಯವೇ ಅತ್ಯಮೂಲ್ಯ ಸಂಪತ್ತು


ಒಬ್ಬ ವ್ಯಕ್ತಿ ಜೀವನದಲ್ಲಿ ಯಶಸ್ಸು ಕಂಡಿದ್ದಾನೆ ಎಂದರೆ, ಅದರ ಹಿಂದೆ ಆತನ ಶಿಸ್ತುಬದ್ಧ ಜೀವನದ ಜೊತೆಗೆ ಸಮಯದ ಮಹತ್ವ, ಸಮಯದ ಸದ್ಬಳಕೆ ಹಾಗೂ ದೊರೆತ ಅವಕಾಶವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವ ಚಾಣಾಕ್ಷತೆ ಇರುತ್ತದೆ ಎಂದರ್ಥ. “ಒಡೆದ ಮುತ್ತು, ಕಳೆದ ಹೊತ್ತು ಮತ್ತೆಂದು ತಿರುಗಿ ಬಾರದು” ಎಂಬ ನಾಣ್ಣುಡಿಯಂತೆ ಸಿಕ್ಕ ಸಮಯವನ್ನು ಸದುಪಯೋಗಪಡಿಸಿಕೊಂಡು ಅವಕಾಶಗಳನ್ನು ಸೃಷ್ಟಿಸಿಕೊಳ್ಳಬೇಕು. ಕಳೆದುಹೋದ ಸಮಯವನ್ನು ಶಪಿಸುತ್ತಾ, ತೆಗಳುತ್ತಾ ಕುಳಿತರೆ ಯಾವುದೇ ಪ್ರಯೋಜನವಿಲ್ಲ. ಏಕೆಂದರೆ ಕಳೆದುಹೋದ ಸಮಯ ಮತ್ತೆ ಮರಳಿ ಬರುವುದಿಲ್ಲ.


ಈ ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠ ಚಿಂತಕನಿಗೂ, ವಿಜ್ಞಾನಿಗೂ, ಸಾಮಾನ್ಯ ವ್ಯಕ್ತಿಗೂ ಸಿಗುವ ಸಮಯ ದಿನಕ್ಕೆ 24 ಗಂಟೆಗಳೇ. ರೈತನಿಗೂ ಅಷ್ಟೇ ಸಮಯ, ಕಾರ್ಮಿಕನಿಗೂ ಅಷ್ಟೇ ಸಮಯ, ಪ್ರಧಾನಮಂತ್ರಿಗೂ ಅಷ್ಟೇ ಸಮಯ, ಜನಸಾಮಾನ್ಯನಿಗೂ ಅಷ್ಟೇ ಸಮಯ. ಆದರೆ ಆ ಸಮಯವನ್ನು ಯಾರು ಹೇಗೆ ಬಳಸಿಕೊಳ್ಳುತ್ತಾರೆ ಎಂಬುದರ ಮೇಲೆ ಅವರ ಯಶಸ್ಸು, ಸಾಧನೆ ಮತ್ತು ಗುರಿ ನಿರ್ಧಾರವಾಗುತ್ತದೆ.

ಆದ್ದರಿಂದ ಯುವಜನಾಂಗ, ಅದರಲ್ಲೂ ವಿದ್ಯಾರ್ಥಿಗಳು ಈ ಸತ್ಯವನ್ನು ಅರಿತು ತಮ್ಮ ಪ್ರತಿಯೊಂದು ಹೆಜ್ಜೆಯನ್ನೂ ಎಚ್ಚರಿಕೆಯಿಂದ ಇಡುವುದು ಅತ್ಯಂತ ಅಗತ್ಯ.


ಒಂದು ವರ್ಷದ ಬೆಲೆ ಯಾರಿಗೆ ಗೊತ್ತು?


ಪರೀಕ್ಷೆಯಲ್ಲಿ ಅನುತ್ತೀರ್ಣನಾದ ವಿದ್ಯಾರ್ಥಿಯನ್ನು ಕೇಳಿ—ಒಂದು ವರ್ಷದ ಮಹತ್ವವೇನೆಂದು. ಒಂದು ವರ್ಷ ಕಳೆದುಕೊಂಡ ನೋವು ಆತನಿಗೆ ಮಾತ್ರ ಹೆಚ್ಚು ಅರಿವಾಗುತ್ತದೆ. ವಾರಪೂರ್ತಿ ಯಜಮಾನನ ಅಡಿಯಲ್ಲಿ ಕಷ್ಟಪಟ್ಟು, ಬೆವರು ಸುರಿಸಿ ದುಡಿದು, ವಾರ ಮುಗಿಯುವುದನ್ನೇ ಕಾಯುತ್ತಾ ಕೂಲಿಗಾಗಿ ಎದುರು ನೋಡುವ ಬಡ ಕಾರ್ಮಿಕನನ್ನು ಕೇಳಿ—ಒಂದು ವಾರದ ಮಹತ್ವವೇನೆಂದು.


ಅಪಘಾತವೊಂದರಲ್ಲಿ ಒಂದು ಕ್ಷಣ ದಿಕ್ಕು ಬದಲಿಸಿ ಪ್ರಾಣಾಪಾಯದಿಂದ ಪಾರಾದ ವ್ಯಕ್ತಿಯನ್ನು ಕೇಳಿ—ಒಂದು ಕ್ಷಣದ ಮಹತ್ವವೇನೆಂದು.


ಹೀಗೆ ನೋಡಿದರೆ ಜೀವನದಲ್ಲಿ ಪ್ರತಿಯೊಂದು ಕ್ಷಣಕ್ಕೂ ತನ್ನದೇ ಆದ ಮಹತ್ವವಿದೆ. ಇಂತಹ ಸಾವಿರಾರು ಘಟನೆಗಳು ನಮ್ಮ ಸುತ್ತಮುತ್ತ ನಡೆಯುತ್ತಲೇ ಇರುತ್ತವೆ. ಆದರೆ ಅವುಗಳಿಂದ ಪಾಠ ಕಲಿತು, ಸಮಯದ ಬೆಲೆಯನ್ನು ವಿದ್ಯಾರ್ಥಿ ಜೀವನದಲ್ಲಿಯೇ ಅರಿತು ಮುನ್ನಡೆಯುವವರು ಮಾತ್ರ ಜೀವನದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ.


ಸಮಯಪಾಲನೆಯೇ ಯಶಸ್ಸಿನ ಮೆಟ್ಟಿಲು


ವಿದ್ಯಾರ್ಥಿ ಜೀವನವು ವ್ಯಕ್ತಿತ್ವ ನಿರ್ಮಾಣದ ಅತ್ಯಂತ ಪ್ರಮುಖ ಹಂತ. ಈ ಅವಧಿಯಲ್ಲಿ ರೂಢಿಸಿಕೊಂಡ ಶಿಸ್ತು, ಸಮಯಪಾಲನೆ, ಪರಿಶ್ರಮ ಮತ್ತು ಸಂಯಮ ಮುಂದಿನ ಬದುಕಿನುದ್ದಕ್ಕೂ ಜೊತೆಗಿರುತ್ತವೆ. ನಿಗದಿತ ಸಮಯಕ್ಕೆ ಎದ್ದು, ಅಧ್ಯಯನಕ್ಕೆ ಸಮಯ ಮೀಸಲಿಟ್ಟು, ಆಟ-ವ್ಯಾಯಾಮ, ವಿಶ್ರಾಂತಿ, ಮನರಂಜನೆ ಹಾಗೂ ಇತರ ಚಟುವಟಿಕೆಗಳಿಗೆ ಸೂಕ್ತ ಸಮಯವನ್ನು ನಿಗದಿಪಡಿಸಿಕೊಂಡು ಬದುಕುವುದರಿಂದ ವಿದ್ಯಾರ್ಥಿಯ ಜೀವನದಲ್ಲಿ ಕ್ರಮಬದ್ಧತೆ ಮೂಡುತ್ತದೆ.


ಸಮಯವನ್ನು ಗೌರವಿಸುವವನು ತನ್ನ ಬದುಕನ್ನು ಗೌರವಿಸುತ್ತಾನೆ. ಶಿಸ್ತನ್ನು ಪಾಲಿಸುವವನು ತನ್ನ ಭವಿಷ್ಯವನ್ನು ಕಟ್ಟಿಕೊಳ್ಳುತ್ತಾನೆ.

ಆದ್ದರಿಂದ ವಿದ್ಯಾರ್ಥಿಗಳು ಸಮಯವನ್ನು ಪೋಲು ಮಾಡದೆ, ಮೊಬೈಲ್, ಅನಗತ್ಯ ಮನರಂಜನೆ ಹಾಗೂ ಕಾಲಹರಣದ ಚಟುವಟಿಕೆಗಳಿಗೆ ಮಿತಿಯನ್ನು ಹಾಕಿಕೊಂಡು ತಮ್ಮ ಗುರಿಯತ್ತ ಗಮನ ಹರಿಸಬೇಕು.


ಕೆಲವು ಅವಕಾಶಗಳು ಒಮ್ಮೆ ಮಾತ್ರ ಬರುತ್ತವೆ. ಅವುಗಳನ್ನು ಗುರುತಿಸಿ, ಸೂಕ್ತ ಸಮಯದಲ್ಲಿ ಬಳಸಿಕೊಂಡಾಗಲೇ ಯಶಸ್ಸಿನ ಬಾಗಿಲು ತೆರೆದುಕೊಳ್ಳುತ್ತದೆ. ಸಿಕ್ಕ ಅವಕಾಶಗಳನ್ನು ಆಯಾ ಸಮಯದಲ್ಲಿ ಸರಿಯಾಗಿ ಬಳಸಿಕೊಳ್ಳುತ್ತಾ ಹೋದರೆ, ಶಿಸ್ತಿನ ಜೊತೆಯಲ್ಲಿ ಸಾಧನೆಯ ಗರಿಯೂ ನಮ್ಮನ್ನು ಬೆನ್ನುಹತ್ತಿ ಬರುತ್ತದೆ.


ವಿದ್ಯಾರ್ಥಿಗಳೇ, ಸಮಯವನ್ನು ಕಳೆದುಕೊಳ್ಳಬೇಡಿ; ಸಮಯವನ್ನು ಸದುಪಯೋಗಪಡಿಸಿಕೊಳ್ಳಿ. ಶಿಸ್ತನ್ನು ಹೊರೆಯೆಂದು ಭಾವಿಸಬೇಡಿ; ಅದನ್ನೇ ನಿಮ್ಮ ಬದುಕಿನ ಶಕ್ತಿಯನ್ನಾಗಿ ಮಾಡಿಕೊಳ್ಳಿ. ಇಂದು ನೀವು ಸಮಯಕ್ಕೆ ಕೊಡುವ ಗೌರವವೇ ನಾಳೆ ನಿಮ್ಮ ಯಶಸ್ಸಿನ ರೂಪದಲ್ಲಿ ಮರಳಿ ಬರುತ್ತದೆ.


ಸಮಯದ ಸದ್ಬಳಕೆ + ಶಿಸ್ತುಬದ್ಧ ಜೀವನ + ನಿರಂತರ ಪರಿಶ್ರಮ = ಯಶಸ್ಸಿನ ಸೂತ್ರ. ವಿದ್ಯಾರ್ಥಿ ಜೀವನದಲ್ಲಿ ಈ ಸೂತ್ರವನ್ನು ಅಳವಡಿಸಿಕೊಂಡರೆ, ಗುರಿ ದೂರವಾಗುವುದಿಲ್ಲ; ಸಾಧನೆ ಅಸಾಧ್ಯವಾಗುವುದಿಲ್ಲ.


- ಉಮೇಶ ಮುಂಡಳ್ಳಿ, ಭಟ್ಕಳ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top