ಕೃಷಿಕರು ವಯಸ್ಸಾದರೆ ನೌಕರರು ನಿವೃತ್ತರಾದರೆ ಯೋಧ ಸಾಕಾದರೆ ಪೊಲೀಸ್ ದೈಹಿಕ ಶಕ್ತಿ ಕುಂದಿದರೆ ಹೀಗೇ ಸಹಸ್ರ ಸಹಸ್ರ ವಲಯಗಳಿಂದ ಹಿರಿಯ ನಾಗರಿಕರು ಮರೆಗೆ ಸಲ್ಲುತ್ತಾರೆ. ಇಂಥವರು ತಂತಮ್ಮ ಕ್ಷೇತ್ರಗಳಲ್ಲಿ ಅಪಾರ ಅನುಭವ ಗಳಿಸಿದ್ದರೂ ಅವರ ಪ್ರತಿಭೆ ನಮ್ಮ ದೇಶದಲ್ಲಿ ಅಷ್ಟಾಗಿ ಬಳಸಲ್ಪಡುವುದಿಲ್ಲ. ಇದಕ್ಕೆ ಕಾರಣ ಏರಿರುವ ಜನಸಂಖ್ಯೆ. ಕಿರಿಯರಿಗೆ ಅವಕಾಶ ಮಾಡಿಕೊಡುವುದಕ್ಕಾಗಿ ಹಿರಿಯರು ಬದಿಗೆ ಸರಿಯುವುದು ಧರ್ಮ.
ರಾಜಕೀಯ ವಲಯದಲ್ಲಿ ಮಾತ್ರ ಹಿರಿಯರಿಗೆ ನಿವೃತ್ತಿ ಇಲ್ಲ. ಹಾಗೆಂದು ಎಲ್ಲರಿಗೂ ಆ ವಲಯದಲ್ಲಿ ಅವಕಾಶ ಇಲ್ಲ. ನಾನೊಬ್ಬ ನಿವೃತ್ತ ನೌಕರ. ಅಧ್ಯಾಪಕನಾಗಿ ದುಡಿದವನು. ಆದ್ದರಿಂದ ಕೆಲವು ವಿದ್ಯಾರ್ಥಿಗಳು ಏನೋ ಉತ್ತರ ಕೇಳ ಬರುತ್ತಿದ್ದರು. ಕ್ರಮೇಣ ಅದೂ ನಿಂತುಹೋಯಿತು. ಎಲ್ಲದಕ್ಕೂ ನೆಟ್ಟಿನಲ್ಲಿ ಮಾಹಿತಿ ಇದೆ ತಾನೆ.
ಅಂದೊಮ್ಮೆ ಎಪ್ಪತ್ತೈದರ ಸ್ವಾತಂತ್ರ್ಯ ದಿನಾಚರಣೆಗೆ ಕರೆದಾಗ ಹೊರಗಿಳಿದೆ. ಸ್ವಾತಂತ್ರ್ಯ ಹೋರಾಟಗಾರ ಅಲ್ಲದಿದ್ದರೂ ಅವರಿಗೊಬ್ಬ ಮುದುಕ ಬೇಕಿತ್ತು. ಆದರೆ ಜಗತ್ತು ಅಷ್ಟೆಲ್ಲ ಬದಲಾದದ್ದನ್ನು ನಾನು ಊಹಿಸಿರಲಿಲ್ಲ. ವಂದೇ ಮಾತರಂ ಮತ್ತು ಜನಗಣಮನಕ್ಕೆ ಅಲ್ಲಿ ನಿಷೇಧ ಇತ್ತು. ಧ್ವಜ ಸಂಹಿತೆ, ದಿನಾಚರಣೆಗಳಲ್ಲಿ- ಪ್ರಾಂಶುಪಾಲ ಆಗಿದ್ದಾಗಲೂ ಮೊದಲೂ ಸುಮಾರು ಹದಿನೈದಿಪ್ಪತ್ತು ವರ್ಷ ಎನ್ ಸಿ ಸಿ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಗೌರವಿಸಿದ್ದ ನನಗೆ ಸ್ವಲ್ಪ ಮುಜುಗರ ಇತ್ತು. ಹಳಬನ ಹಳೇ ಸಂಪ್ರದಾಯವನ್ನು ಊಹಿಸಿದ್ದ ಅಲ್ಲಿನ ಸಂಬಂಧ ಪಟ್ಟವರು ಭಾಷಣ ಮಾಡದಂತೆ ನಿಯಂತ್ರಿಸಿದರು. ಅನೇಕ ಕಡೆ ಧ್ವಜಾರೋಹಣ ನಡೆಸಬೇಕಾಗಿದ್ದುದರಿಂದ ಇರ ಬಹುದು ಆ ಗಣ್ಯರ ಆಜ್ಞೆಯೇ ಇತರರಿಗೆ ಮುಖ್ಯವಾಯಿತು.
ಹಿರಿಯ ನಾಗರಿಕರು ಬಾಯಿ ಮುಚ್ಚಿರಬೇಕೆಂಬುದು ಇಂದಿನ ಕಿರಿಯರ ಇರಾದೆ. ಅದು ನಮಗೆ ಅರ್ಥವಾಗುತ್ತದೆ. ಆದರೆ ಅರ್ಥವಾದವರಂತೆ ನಡಕೊಂಡರೂ ಕಿರಿಯರಿಗೆ ಸಿಟ್ಟು ಬರುತ್ತದಲ್ಲ.. ಮಕ್ಕಳೇ ಹಿರಿಯರನ್ನು ಎಚ್ಚರಿಸುತ್ತಾರೆ. "ಅಜ್ಜ ನೀವು ಸುಮ್ಮನೆ ಕೂರಿ. ಇನ್ನು ಏನಾದರೂ ಹೇಳಿ ಮುಜುಗರ ಉಂಟುಮಾಡಬೇಡಿ ಆಯಿತಾ"!
ಕೆಲವು ವರ್ಷಗಳ ಹಿಂದೆ ಒಂದುಕಡೆ ಮದುವೆ ಸಮಾರಂಭ ಇತ್ತು. ಬಫೆ ಊಟ. ಸಾಲಾಗಿ ನಿಂತಿದ್ದವರ ನಡುವೆ ಯು ಪಿ ಉಪಾಧ್ಯಾಯರನ್ನು ಗಮನಿಸಿ ಅವಾಕ್ಕಾದೆ. ಸಿಕ್ಕಿದ ತಟ್ಟೆ ಒಂದು ಕೈಯಲ್ಲಿ ಹಿಡಿದಾಗ ನಡುಕ ಇತ್ತು. ನಾನು ಅವರ ಬಳಿ ಹೋಗಿ ತಟ್ಟೆ ಆನಿಸಿ ಒಂದೆಡೆ ಕೂತು ಕೊಳ್ಳಿಸಿದಾಗ ಯಾರೊ ನಕ್ಕರು. "ಇಂಥ ಮುದುಕನಿಗೂ ಮದುವೆ ಹುಚ್ಚು ಎಂದು ಆ ವ್ಯಕ್ತಿಯ ಕಣ್ಣುಗಳು ಹೇಳಿದಂತನ್ನಿಸಿತು. ಹಿಂದೆ ಮೈಸೂರಿನಲ್ಲಿ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ಇತ್ತಲ್ಲ. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಜನರ ಆರೋಗಣೆ ನಡೆಯುತ್ತಿತ್ತು. ಒಂದು ಸಾಲಲ್ಲಿ ನಾನಿದ್ದೆ. ನನ್ನ ಮುಂದೆ ಒಬ್ಬ ಹಿರಿಯರು. ಅವರು ತಟ್ಟೆ ಹಿಡಿದು ದಾರಿಯಾಚೆ ಗಿಡದ ಅಡಿ ಕೂತದ್ದು ಕಂಡೆ. ಈಚೆಯಿಂದ ಸ್ವಯಂಸೇವಕನೊಬ್ಬ "ಏಳು ಏಳು ಇಲ್ಲಿ ಕೂತು ಊಟ ಇಲ್ಲ." ಎಂದು ಗಜರಿದ. ಇನ್ನೂ ಕುತೂಹಲದಿಂದ ಆ ಕಡೆ ಮತ್ತೆ ನೋಡಿ ಹತ್ತಿರ ಹೋದೆ. "ತಾವು ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅಲ್ಲವಾ" ಎಂದು ಪ್ರಶ್ನಿಸಿದೆ.
"ಹೌದು" ಎಂದರು. ಯುವಕನದ್ದೇನೂ ತಪ್ಪಿರಲಿಲ್ಲವೆನ್ನಿ. ಅವನಿಗೆ ಅವರು ಗೊರೂರರು ಎಂದು ಗೊತ್ತಿರಬೇಕಾದ ಅಗತ್ಯ ಇಲ್ಲವಲ್ಲ. ಆದರೆ ಆ ವ್ಯಕ್ತಿ ಒಬ್ಬ ಮುದುಕ ಎಂದು ಹೊಳೆಯಬೇಕಿತ್ತು. ತಾನು ಗೊರೂರೇ ಎಂದು ಆ ಮುದಿಯ ಸುಳ್ಳೇ ಹೇಳಿದ್ದರೂ ಕೊಟ್ಟ ಗೌರವವನ್ನು ನಾನು ಕ್ಯಾನ್ಸಲ್ ಮಾಡುತ್ತಿರಲಿಲ್ಲ.
ವಿಟ್ಲದಲ್ಲಿ ಬಸ್ಸೊಂದರ ನಡುವೆ ನಿಂತಿದ್ದ ಅವರಿಗೆ ಕ್ರಮೇಣ ಯುವಕ ಯುವತಿಯರು ಹತ್ತಿರ ಬಂದಾಗ ಗಾಬರಿ ಆಯಿತು. ಕಂಡಕ್ಟರ್ ಅವರನ್ನು ಕೆಳಗಿಳಿಸಿದರು. ಯಾರೋ ಹೇಳಿದ್ದು ಕಿವಿಗೆ ಬಿತ್ತು "ಈ ಮುದಿಯನಿಗೆ ಹುಡುಗಿಯರು ಹೋಗುವ ಬಸ್ಸೇ ಆಗಬೇಕ?" ನನಗೂ ಘಾಟಿ ಮುದುಕ ಅನ್ನಿಸಿತು. ಕೆಳಗಡೆ ಇದ್ದವನು ಮಾತಾಡಿಸಿದಾಗ ಆತ ಪುತ್ತೂರಿನ ಸಾಹಿತ್ಯ ಸಂಘ ನಡೆಸಿದ ಸೆಮಿನಾರಲ್ಲಿ ಭಾಷಣ ಮಾಡಿ ಬರುತ್ತಿರುವವರೆಂದೂ ಈ ರೂಟಲ್ಲಿ ಮೊದಲ ಬಾರಿ ಬಂದದ್ದಾಗಿಯೂ ತಿಳಿದು ಅವಾಕ್ಕಾದೆ. ಬಸ್ಸಿನ ಎದುರು ನಿಂತಿದ್ದ ಇಬ್ಬರು ಸಿಬ್ಬಂದಿ ಜನ ಅವರನ್ನು ಅಲ್ಲಿಗೇ ಬಿಡದೆ, "ಸ್ವಾಮಿ, ನಿಮಗೆ ಕಾರಿನಲ್ಲಿ ಹೋಗಬಾರದ" ಎಂದು ಹಂಗಿಸಿದ್ದು ಕೇಳಿ ಬೆಚ್ಚಿ ಬಿದ್ದೆ. ಅದೂ ಸರಿಯೆ . ಹಿರೀಕರು ತುಂಬ ಹಣ ಗಳಿಸಿ ಇಟ್ಟುಕೊಂಡರೆ ವಯಸ್ಸಾದಾಗ ಸಮಸ್ಯೆ ಬಾರದು. ಆದರೆ "ನಿಮಗೆ ಹಣ ಯಾಕಪ್ಪ ಪಾಲು ಮಾಡಿ ಹಂಚಿಬಿಡಿ" ಎನ್ನುವ ಕಿರಿಯರೇ ಹೆಚ್ಚಿದ್ದಾರಲ್ಲ. ಈಗ ನೋಡಿ ಬಸ್ಸು ಸಿಬ್ಬಂದಿ ಬನ್ನಿ ಬನ್ನಿ ಎಂದು ಪ್ರಯಾಣಿಕರನ್ನು ಕೈ ಬೀಸಿ ಕರೆಯುತ್ತಿದ್ದಾರೆ. ಆದರೆ ಹೆಚ್ಚಿನವರು ಸ್ವಂತ ಕಾರು ಇಟ್ಟುಕೊಂಡು ಅದರಲ್ಲಿ ನೆರೆಕರೆಯವರನ್ನು ಕರಕೊಂಡು ಹೋಗುವ ಸೌಜನ್ಯವನ್ನೂ ತೋರುತ್ತಾರೆ ! ಹೀಗೆ ಆಗ ಬಾರದಿತ್ತು. ಆದರೆ ಆಗಿ ಹೋಗಿದೆ.
ತನ್ನ ಇರುವಿಕೆಯನ್ನು ಸಹಿಸದ ಕಿರಿಯರ ಮೇಲೆ ಆನೆ ಲದ್ದಿ ಹಾಕಲಿ ಎಂದು ಶಾಪ ಕೊಟ್ಟು ಬಿಡಬೇಡಿ ಎಂದು ಒತ್ತಾಯ ಮಾಡುತ್ತೇನೆ. ಯಾಕೆಂದರೆ ಶಾಪಕ್ಕೆ ಈಗಲೂ ಪರಿಣಾಮ ಇದೆ ಎಂದು ನಂಬುವ ಮೂರ್ಖರು ಅಂತಹ ಪ್ರಸಂಗ ಬಾರದಿರಲೆಂದು ಎಲ್ಲ ಆನೆಗಳನ್ನೂ ನಿವಾರಿಸಿ ಬಿಡುವ ಸಾಧ್ಯತೆ ಇದೆ. ಅಷ್ಟೂ ಉತ್ಸಾಹವುಳ್ಳವರು ಸುತ್ತಾ ಇದ್ದಾರೆ !
ಅಂತೂ ಸರ್ವೇ ಜನಾ ಸುಖಿನೋ ಭವಂತು ಅನ್ನುವ ಹಿರಿಯರು ಮಕ್ಕಳಿಗೆ ಹರಸುತ್ತಿರಬೇಕು. ಯಾಕೆಂದರೆ ಅವರು ನಮ್ಮ ಮಕ್ಕಳು. ಈ ದೇಶದ ವೈರಿಗಳಲ್ಲ.
- ಪ್ರೊ. ಪಿ ಎನ್ ಮೂಡಿತ್ತಾಯ


