ಆರೋಗ್ಯದ ಹೆಸರಲ್ಲಿ 'ಆತಂಕ': ಕೊನೆ ಎಲ್ಲಿದೆ ಗುರುವೇ?

Upayuktha
0


ಹಳ ವೈರಲ್ ಆದ ಒಂದು ಮೆಸೇಜ್‌ಗೆ, ಒಂದು ಪ್ರಾಮಾಣಿಕ ಅಭಿಪ್ರಾಯ ವ್ಯಕ್ತಪಡಿಸಲೇಬೇಕು ಅಂತ ಬಲಗೈ ಹೆಬ್ಬರಳಿಗೆ ತುರಿಕೆ ಶುರುವಾಗಿದೆ!!


"For fun... ಕೊನೆ ಎಲ್ಲಿದೆ ಗುರುವೇ?" ಎಂದು ಶುರುವಾದ ಈ ಬರಹ ಬರೆದವರು ಯಾರೋ ಗೊತ್ತಿಲ್ಲ. ಬರಹ ಮಾತ್ರ ಎಲ್ಲರೂ ಓದಬೇಕಾದ್ದು, ಚಿಂತಿಸಬೇಕಾದ್ದು.  For fun... ಅಂತಿದ್ರೂ, ಈ ಬರಹ For think also!!



***


For fun..


ಕೊನೆ ಎಲ್ಲಿದೆ ಗುರುವೇ??


ಮೊದಲು, "ಯೋಗ ದೇಹಕ್ಕೆ ಬಹಳ ಒಳ್ಳೆಯದು" ಅಂದರು; ಬೆಳಗ್ಗೆ ಐದು ಗಂಟೆಗೆ ಎದ್ದು ಯೋಗಾಸನ ಕಲಿತೆವು.


"ಹೃದಯ ಗಟ್ಟಿಯಾಗಬೇಕಾದ್ರೆ ದಿನಾ ಓಡಲೇಬೇಕು" ಅಂದರು;  ಶೂ ಹಾಕಿಕೊಂಡು ರಸ್ತೆಯಲ್ಲಿ ಓಡುವುದನ್ನೂ ಕಲಿತೆವು.


"ಹೊಟ್ಟೆ ಕರಗಿಸಬೇಕಾ? ಮೊದಲು ಆ ಸಕ್ಕರೆ ಬಿಡಿ" ಅಂದರು; ನಮ್ಮಿಷ್ಟದ ಜಿಲೇಬಿ, ಮೈಸೂರ್‌ಪಾಕ್ ಎಲ್ಲವನ್ನೂ ತ್ಯಜಿಸಿದೆವು.


"ಊಟವಾದ ತಕ್ಷಣ ಮಲಗದೆ , ನೂರು ಹೆಜ್ಜೆ ನಡೆಯಿರಿ" ಅಂದರು; ರಾತ್ರಿ ಊಟವಾದ  ಮೇಲೆ ಗಲ್ಲಿ ಗಲ್ಲಿಯಲ್ಲೆಲ್ಲ ನಡೆಯುವುದನ್ನೂ ಕಲಿತೆವು.


"ಮನಸ್ಸಿನ ಹತೋಟಿಗೆ ಪ್ರಾಣಾಯಾಮ ಒಂದೇ ದಾರಿ" ಅಂದರು; ಮೂಗು ಹಿಡಿದುಕೊಂಡು ಉಸಿರು ಬಿಡುವುದನ್ನೂ ಕಲಿತೆವು.


"ತೂಕ ಇಳಿಯಬೇಕಾದ್ರೆ ಉಪವಾಸ (Intermittent Fasting) ಮಾಡಿ" ಅಂದರು; ಹೊಟ್ಟೆ ಹಸಿದು ಉರಿಯುತ್ತಿದ್ದರೂ ಪತ್ಯ ಕಾಯುವುದನ್ನು ಪಾಲಿಸಿದೆವು.


"ವಯಸ್ಸಾದಂತೆ ಸ್ನಾಯು ಕರಗಬಾರದು, ವೈಟ್ಸ್ (Weights) ಎತ್ತಿ" ಅಂದರು; ಜಿಮ್ಮಿಗೆ ಹೋಗಿ ಕಬ್ಬಿಣ ಎತ್ತಲು ಆರಂಭಿಸಿದೆವು!


"ನೆಮ್ಮದಿಯ ನಿದ್ರೆಗೆ ರಾತ್ರಿ ಮೊಬೈಲ್ ನೋಡಬೇಡಿ" ಅಂದರು; ರಾತ್ರಿ ಒಂಬತ್ತಕ್ಕೇ ಮೊಬೈಲ್ ಸ್ವಿಚ್ ಆಫ್ ಮಾಡಿ ಮಲಗಿದೆವು.


"ಆಯುಷ್ಯ ಗಟ್ಟಿಯಾಗಲು ಅಲ್ಕಲೈನ್ (Alkaline) ನೀರೇ ಕುಡಿಯಿರಿ" ಅಂದರು; ಮನೆಯ ದುಬಾರಿ RO ಫಿಲ್ಟರ್ ಅನ್ನೇ ಕಿತ್ತು ಎಸೆದೆವು!


"ಮನಸ್ಸಿಗೆ ಶಾಂತಿಗೆ  ಪ್ರಕೃತಿಯ ಮಡಿಲಿಗೆ ಹೋಗಿ, ಟ್ರೆಕ್ಕಿಂಗ್ ಮಾಡಿ" ಅಂದರು; ಕೈಯಲ್ಲಿ ಕೋಲು ಹಿಡಿದುಕೊಂಡು ಊರೂರು, ಗುಡ್ಡ-ಬೆಟ್ಟಗಳನ್ನೆಲ್ಲ ಅಲೆದೆವು.


ಕುಳಿತುಕೊಳ್ಳುವುದು ಹೊಗೆಸೊಪ್ಪಿಗಿಂತ ಅಪಾಯಕಾರಿ, ನಿಂತುಕೊಂಡೇ ಕೆಲಸ ಮಾಡಿ" ಅಂದರು; ಕಾಲಿನ ನರಗಳು ಹಿಡಿದುಕೊಳ್ಳುವವರೆಗೆ ನಿಂತುಕೊಂಡೇ ಕೆಲಸ ಮಾಡಿದೆವು!


"ದೇಹದಲ್ಲಿ 'ವಿಟಮಿನ್ ಡಿ' ಕಮ್ಮಿಯಾಗಿದೆ, ಬೆಳಗಿನ ಬಿಸಿಲಿಗೆ ಮೈ ಒಡ್ಡಿ" ಅಂದರು; ಬೆಳಗ್ಗೆ ಎದ್ದು ಸೂರ್ಯನ ಕಡೆ ಮುಖ ಮಾಡಿ, ಕಾಗೆಗಳು ತಲೆಯ ಮೇಲೆ ಹಾದುಹೋಗುವವರೆಗೆ ಬಿಸಿಲಿನಲ್ಲಿ ನಿಂತುಕೊಂಡೆವು.


"ಸಾಮಾನ್ಯ ಎಣ್ಣೆ ಬೇಡ, ಕೋಲ್ಡ್ ಪ್ರೆಸ್ಡ್ ಗಾಣದ ಎಣ್ಣೆ ಅಥವಾ ಆಲಿವ್ ಆಯಿಲ್ ಬಳಸಿ" ಅಂದರು; ದುಬಾರಿ ಎಣ್ಣೆ ತಂದು, ತರಕಾರಿ ಒಗ್ಗರಣೆಗೆ ಬೊಗಸೆ ಗಟ್ಟಲೆ ದುಡ್ಡು ಸುರಿದೆವು.


 ಸಾದಾ ಅಕ್ಕಿಯಿಂದ Glycemic  ಇಂಡೆಕ್ಸ್ ಹೆಚ್ಚಾಗುತ್ತೆ ಬ್ರೌನ್ ರೈಸ್ ಬಳಸಿ ಎಂದರು; ಕಷ್ಟಪಟ್ಟು ಹುಡುಕಿ ತಂದು ತಿಂದೆವು.


ಸಕ್ಕರೆಯಿಂದ ಇನ್ಸುಲಿನ್ ಹೆಚ್ಚಾಗುತ್ತೆ ಬೆಲ್ಲ ತಿನ್ನಿ ಅಂದರು; ಬೆಲ್ಲದ ಚಹಾ ಕುಡಿಯುವರ ಮುಖ ನೋಡದವರು ಬೆಲ್ಲದ ಪೆಂಟಿ ತಂದೆವು. 


ಈಗ ಹೊಸದಾಗಿ ರಿಸರ್ಚ್ ಬಂದಿದೆಯಂತೆ—"ಇಷ್ಟೆಲ್ಲಾ ಮಾಡಿ ದಿನಾ 'ಸ್ಟ್ರೆಸ್' ತಗೊಂಡ್ರೆ ಎಲ್ಲವೂ ವೇಸ್ಟ್, ಸುಮ್ಮನೆ ಪ್ರಶಾಂತವಾಗಿ ವಿಶ್ರಾಂತಿ ತಗೊಳ್ಳಿ!" ಅಂತಿದ್ದಾರೆ.


ಅಲ್ಲಾ ಸ್ವಾಮಿ, ಇಷ್ಟೆಲ್ಲಾ ಸಾಯುವಷ್ಟು ಕಷ್ಟಪಟ್ಟು ಬದುಕುವುದು ಬದುಕುವುದಕ್ಕೋ? ಅಥವಾ ಜೀವಂತವಾಗಿದ್ದೇವೆ ಅಂತ ಲೋಕಕ್ಕೆ ತೋರಿಸುವುದಕ್ಕೋ?


ಇಷ್ಟೆಲ್ಲಾ ಮಾಡಿದ ಮೇಲೆಯೂ, "ಆ ಬಿಸ್ಕತ್ತು ತಿಂದ್ಯಾ? ಈ ಎಣ್ಣೆ ತಿಂದ್ಯಾ?" ಅಂತ ಇನ್ನೊಬ್ಬರು ಬೆಟ್ಟು ಮಾಡಿ ತೋರಿಸುತ್ತಾರೆ.


ಕೊನೆಗೆ ನಾವು ಬದುಕುವುದು ನಮಗಾಗಿಯೋ? ಅಥವಾ ಇನ್ನೊಬ್ಬರಿಗೆ ನಮ್ಮ ದೇಹ ತೋರಿಸಲಿಕ್ಕೋ? ಕಾಪಾಡು ಗುರು ನಾರಾಯಣ ನರಸಿಂಹ ಶಿವಾ  ಕಾಪಾಡು ಈ ದಿನಕ್ಕೊಂದು ಸಲಹೆ ಕೊಡುವ 'ಆರೋಗ್ಯ ಜ್ಞಾನಿಗಳಿಂದ'!


***


ಮೇಲಿನ 'For Fun...' ಬರಹಕ್ಕೆ ಹೆಬ್ಬೆರಳಿನ ತುರಿಕೆ ಪ್ರತಿಕ್ರಿಯೆ!:


ಅಪರೂಪಕ್ಕೊಮ್ಮೆ ಸ್ವಲ್ಪ ಲಘು ಗಂಭೀರವಾಗಿ ಯೋಚಿಸುವುದಾದರೆ.....


ಅವರು ಹಾಗೆ ಹೇಳಿದರು, ನಾವು ಹಾಗೇ ಮಾಡಿದೆವು. 84 ಕೆಜಿ ಇದ್ದೀರಿ, ಶುಗರ್ LOC ದಾಟಿದೆ, ಬಿಪಿ POK ದಾಟಿದೆ. ದಿನಕ್ಕೆ ನಾಲ್ಕು ಕಿಮೀ ವಾಕಿಂಗ್ ಮಾಡಲೇಬೇಕು ಅಂದ್ರು.


ನಗುನಗುತ್ತ 'ವಾಕಿಂಗ್' ಮಾಡಿದ್ರೆ ನಾವು 'ಕಿಂಗ್' ಆಗಿರ್ತಿದ್ವಿ, ಕ್ವೀನ್ ಆಗಿರ್ತಿದ್ವಿ!!


ಉಹೂಂ.


ದಿನಾ ವಾಕಿಂಗ್ ಬೇಕಾಗಿಲ್ಲ ಅಂತ ವಾಕಿಂಗ್‌ಗೆ ವೀಕ್ಲಿ ಒಂದೆರಡು ರಜ ಕೊಟ್ವಿ!! ವಾಕಿಂಗ್ ಹೋಗುವಾಗ ಗಿಡಗಳು ಹೂ ಬಿಟ್ಟಿದ್ದು ನೋಡ್ಲಿಲ್ಲ.  ಮನಸ್ಸಿನಲ್ಲಿ ಇವತ್ತಿನ ದಿನಚರಿ ಟಾಸ್ಕ್, ದೂರದಲ್ಲಿ ಪಕ್ಷಿಗಳ ಚಿಲಿಪಿಲಿ ಬದಲಿಗೆ ಕಿವಿ ಒಳಗಿನ ಇಯರ್ ಫೋನ್‌ನಲ್ಲಿ 'ಟಾಕ್ಸಿಕ್' ಡ್ರಮ್ ಬಡಿತ, ಬುದ್ಧಿಯಲ್ಲಿ ಯಾರಿಗೋ ಕೌಂಟರ್ ಕೊಡೋದಕ್ಕೆ ಷಡ್ಯಂತ್ರ!!.


"ಈ ದರಿದ್ರ ವಾಕಿಂಗ್ ಒಂದು ಮಾಡ್ಬೇಕಲಪ್ಪಾ?", "ವಾಕಿಂಗ್ ಒಂದು ಯಾವನ್ ಕಂಡು ಹಿಡಿದ್ನೇನಾ?", "ಮೂರು ತಿಂಗಳಾಯ್ತು ವಾಕಿಂಗ್ ಶುರುಮಾಡಿ, ಮುನ್ನೂರ್ ಗ್ರಾಮೂ ಕಮ್ಮಿಯಾಗಿಲ್ಲ".... ಅಂತೆಲ್ಲ ಬಾಯಲ್ಲಿ ಗೊಣಗುತ್ತಾ, ಅದನ್ನೇ ಇಂಟರ್‌ನಲ್ ಸ್ಟೋರೇಜ್ ಸ್ಪೇಸ್‌ನಲ್ಲಿ ಸಂಚಿತಗೊಳಿಸುತ್ತ ವಾಕಿಂಗ್ ಆಯ್ತು!!


ಖುಷಿ ಖುಷಿಯಿಂದ ವಾಕಂಗ್ ಮಾಡ್ಳಿಲ್ಲ, ವಾಕಿಂಗ್ ನಮ್ಮ ಪ್ರೀತಿಯ ಆದ್ಯತೆ ಆಗಲಿಲ್ಲ, ವಾಕಿಂಗ್ ಫಲಿತಾಂಶವನ್ನು ಆಗಾಗ ವೇಯಿಂಗ್ ಸ್ಕೇಲಲ್ಲಿ ನಮ್ಮ ತೂಕ ಪರೀಕ್ಷಿಸಿ ನಿರ್ಧರಿಸಿ ವಾಕಿಂಗ್‌ಗೂ ಒಂದು ನೆಗೆಟಿವ್ ಸರ್ಟಿಫಿಕೇಟ್ ಕೊಟ್ವಿ!! ವಾಕಿಂಗ್ ಮನಸ್ಸಿಗೂ ಹಿಡಿಸಲಿಲ್ಲ, ದೇಹಕ್ಕೂ ಹಿಡಿಸಲಿಲ್ಲ, ಬುದ್ದಿಗೂ ಹಿಡಿಸಲಿಲ್ಲ!! ನಮ್ಮ ವಾಕಿಂಗ್‌ನಿಂದ ಬೆಳಗ್ಗೆ ಬೆಳಗ್ಗೆ ನಿರ್ಜೀವ 'ಅಲಾರಾಂ' ಕೂಡ ಬೈಸಿಕೊಳ್ತು!! ಕರಗಿದ್ದು ಸಾವಿರದೆಂಟುನೂರು ರುಪಾಯಿ ಬೆಲೆಯ ಷೂ ಸೋಲ್!! 


ಮೇಲಿನ " ಕೊನೆ ಎಲ್ಲಿದೆ ಗುರುವೇ?..." ಎಂದು ಶುರುವಾದ ಬರಹದಲ್ಲಿನ ಎಲ್ಲ ಪಾಯಿಂಟ್‌ಗಳನ್ನೂ ನಾವು ಹೀಗೆ ಸ್ವೀಕರಿಸಿದ್ದು, ಅನುಸರಿಸಿದ್ದು!


ವೈದ್ಯರ ಸಲಹೆ, ಸುಭಾಷಿತ, ಯೋಗ, ಆರೋಗ್ಯ ವಿಜ್ಞಾನ, ಗೀತೆಯ ಉಪದೇಶ, ಉಪನಿಷತ್‌ನ SOP... ಎಲ್ಲವನ್ನು ಪ್ರೀತಿಯಿಂದ ಸ್ವೀಕರಿಸಿ, ಕೊಟ್ಟವರನ್ನೂ ನಂಬಿ, ಸ್ವೀಕರಿಸಿದ್ದನ್ನು 'ಬಂಧನ' ಎಂದು ಭಾವಿಸದೆ ಪ್ರೀತಿಯಿಂದಲೇ ಅನುಷ್ಠಾನಕ್ಕೆ ಇಳಿಸಿದ್ದರೆ... ಚಿರಂಜೀವಿ ವಿಭೀಷಣನಿಗಿಂತಲೂ ನಾಲ್ಕು ವರ್ಷ ಹೆಚ್ಚು ಮತ್ತು ಆರೋಗ್ಯವಾಗಿ ಬದುಕುತ್ತಿದ್ದೆವೇನೋ?


ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಕ್ಲಿನಿಕ್, ಮೆಡಿಕಲ್ ಶಾಪ್‌ಗಳಿಗಿಂತ ಪ್ರಾವಿಸನ್ ಸ್ಟೋರ್ಸ್ ಹೆಚ್ಚು ಇರ್ತಿದ್ದವೇನೋ!?

ಹಾಗಾಗಲಿಲ್ಲ.

ಅವರು ಹಾಗೆ ಹೇಳಿದರು, ನಾವು ಒಂದಷ್ಟು ದಿವಸ ಹಾಗೇ ಮಾಡಿದೆವು. ಅಷ್ಟೆ.

ಮಾಡುವಾಗ ಪ್ರೀತಿ ಇರಲಿಲ್ಲ, ನಂಬಿಕೆ ಇರಲಿಲ್ಲ, ಶ್ರದ್ಧೆ ಇರಲಿಲ್ಲ, ಚಿಂತನೆ ಇರಲಿಲ್ಲ, ಸಂಭ್ರಮ ಇರಲಿಲ್ಲ.  


'ಪ್ರೀತಿ ಇಲ್ಲದ ಮೇಲೆ' ಒಂದು ಪೆಗ್ ರಿಯಲ್ ಅಮೃತ ಕೊಟ್ಟರೂ, ಅದನ್ನು ಅಸಡ್ಡೆಯಿಂದ ಸ್ವೀಕರಿಸಿ, ಗಟಗಟ ಕುಡಿದರೂ ಮೂರನೇ ದಿನ ಹಾರ್ಟ್‌ ಅಟ್ಯಾಕ್ ಆಗಬಹುದು.

ಮೋರ್ ಆರ್ ಲೆಸ್ ಆಗುತ್ತಿರುವುದು ಅದೆ!!

ಅಮೃತ ಕೊಟ್ಟವರು "ಮತ್ತೆ ಹುಟ್ಟಿ ಬಾ" ಅಂತ 'ಶಪಿಸಿ' ಬ್ಯಾನರ್ ಕಟ್ಟಿಯಾರು!!?


ಮೆಡಿಕಲ್ ಶಾಪ್‌ಗಳಲ್ಲಿ ವ್ಯಾಪಾರ ಆಗುವುದು ಮಿಲಿಗ್ರಾಮ್ ಲೆಕ್ಕದಲ್ಲಾದರೂ (ಡೋಲೋ 650mg, ಅಮೋಕ್ಸಿಸಿಲಿನ್ 250 mg,....) ವ್ಯಾಪಾರದ ಟೋಟಲ್ ಕ್ವಾಂಟಿಟಿ ಕ್ವಿಂಟಾಲ್‌ಗಟ್ಳೆ!!


**

ಇಷ್ಟು ಗೀಚಿದ ಮೇಲೂ... ಬೆಳಗ್ಗೆ ವಾಕಿಂಗ್‌ಗೆ ಏಳಿಸುವ ನಿರ್ಜೀವ ಗಡಿಯಾರದ ತಲೆ ಮೇಲೆ ಕೆಲವೊಮ್ಮೆ ಹೊಡೆದು ಮುಸುಕು ಎಳೆದುಕೊಳ್ಳುವ ಮುಖ್ಯವಾಹಿನಿಯಲ್ಲೇ ಗೀಚಿದ ಹೆಬ್ಬೆರಳು ಇರುವುದು ಎಂಬುದು ವಾಸ್ತವ ಕಠೋರ ಕಹಿ ಸತ್ಯ!! 


- ಅರವಿಂದ ಸಿಗದಾಳ್, ಮೇಲುಕೊಪ್ಪ

9449631248



Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top