ಬದುಕನ್ನು ಬಂದಂತೆ ಸ್ವೀಕರಿಸಿ, ಸವಾಲುಗಳನ್ನು ಎದುರಿಸಿ ನಗುನಗುತ್ತಾ ಸಾಗುವುದೇ ಜೀವನದ ಸಾರ್ಥಕತೆ
«“ಬದುಕು ಜಟಕಾಬಂಡಿ, ವಿಧಿ ಅದರ ಸಾಹೇಬ ।
ಕುದುರೆ ನೀನ್, ಅವನು ಪೇಳ್ದಂತೆ ಪಯಣಿಗರು ॥
ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು ।
ಪದ ಕುಸಿಯೆ ನೆಲವಿಹುದು ॥”
- ಮಂಕುತಿಮ್ಮ»
ಜೀವನವೆಂಬುದು ನಮ್ಮ ಕೈಯಲ್ಲಿರುವ ಸಂಪೂರ್ಣ ನಿಯಂತ್ರಿತ ಪಯಣವಲ್ಲ. ವಿಧಿಯೆಂಬ ಸಾರಥಿಯ ಸೂಚನೆಯಂತೆ ಸಾಗುವ ಜಟಕಾಬಂಡಿಯ ಪಯಣದಂತೆ ಅದು. ನಾವು ಅದರಲ್ಲಿರುವ ಪಯಣಿಗರು. ಎಲ್ಲಿ ತಲುಪಬೇಕು, ಯಾವ ತಿರುವು ಎದುರಾಗಬೇಕು ಎಂಬುದನ್ನು ಸಂಪೂರ್ಣವಾಗಿ ಮೊದಲೇ ನಿರ್ಧರಿಸಲು ಸಾಧ್ಯವಿಲ್ಲ.
ಸಾಮಾನ್ಯ ಹುಲುಮಾನವರಾದ ನಾವು ಅಂದುಕೊಂಡಂತೆ, ಗ್ರಹಿಸಿದಂತೆ ಬದುಕು ಯಾವಾಗಲೂ ಹಸನಾಗಿರುವುದಿಲ್ಲ. ಜೀವನದ ಪ್ರತಿ ಹಂತದಲ್ಲೂ ಒಂದಲ್ಲ ಒಂದು ತೊಡಕು, ಸಂಕಷ್ಟ, ಸವಾಲುಗಳು ಎದುರಾಗುತ್ತಲೇ ಇರುತ್ತವೆ. ಒಂದರ ಹಿಂದೆ ಮತ್ತೊಂದು ಸಮಸ್ಯೆ ಬಂದಾಗಲೂ ಅವುಗಳಿಂದ ಕುಗ್ಗದೆ, ಅವುಗಳನ್ನು ಎದುರಿಸಿ ಬದುಕನ್ನು ಬಂದಂತೆ ಸ್ವೀಕರಿಸುವ ಮನೋಭಾವ ನಮ್ಮದಾಗಬೇಕು.
ವಿಫಲತೆಯಲ್ಲೂ ಹೊಸ ದಾರಿ
ಜೀವನದಲ್ಲಿ ನಮ್ಮ ಯೋಜನೆಗಳು ವಿಫಲವಾದಾಗ ನಿರಾಶೆಗೊಳ್ಳುವುದು ಸಹಜ. ಆದರೆ ಅಲ್ಲಿಯೇ ನಿಂತು ಚಿಂತಿಸುವುದಕ್ಕಿಂತ, “ಮುಂದೇನು ಮಾಡಬೇಕು?” ಎಂದು ಯೋಚಿಸುವುದು ಮುಖ್ಯ.
ಕಷ್ಟದ ಸಮಯದಲ್ಲಿ ಕುಗ್ಗದೆ, ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಅದಕ್ಕೆ ತಕ್ಕಂತೆ ನಮ್ಮ ಮನಸ್ಥಿತಿಯನ್ನು ಹಾಗೂ ಕಾರ್ಯವಿಧಾನವನ್ನು ಬದಲಾಯಿಸಿಕೊಳ್ಳುವ ಆತ್ಮಸ್ಥೈರ್ಯವನ್ನು ಬೆಳೆಸಿಕೊಳ್ಳಬೇಕು. ಆಗ ಮಾತ್ರ ಬದುಕಿಗೊಂದು ಅರ್ಥ, ಜೀವನಕ್ಕೊಂದು ಸಾರ್ಥಕತೆ ದೊರೆಯುತ್ತದೆ.
ಜೀವನದಲ್ಲಿ ಬರುವ ಏರಿಳಿತಗಳು, ಸವಾಲುಗಳು ಹಾಗೂ ಸಂತೋಷಗಳನ್ನು ಯಥಾವತ್ತಾಗಿ ಸ್ವೀಕರಿಸಿ, ಪರಿಸ್ಥಿತಿಗಳಿಗೆ ಹೊಂದಿಕೊಂಡು ಸಾಗುವುದು ಒಂದು ಉತ್ತಮ ಜೀವನತತ್ವವೂ ಹೌದು. ಇದರಿಂದ ಅನಗತ್ಯ ಒತ್ತಡ ಕಡಿಮೆಯಾಗುತ್ತದೆ; ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ.
ಬದಲಾಯಿಸಲಾಗದ್ದನ್ನು ಒಪ್ಪಿಕೊಳ್ಳೋಣ
ಜೀವನದಲ್ಲಿ ಅನಿರೀಕ್ಷಿತ ಘಟನೆಗಳು, ಸಂಕಷ್ಟಗಳು ಎದುರಾದಾಗ ಅವುಗಳ ವಿರುದ್ಧ ನಿರಂತರವಾಗಿ ಹೋರಾಡುವುದಕ್ಕಿಂತ, ಮೊದಲು ಅವುಗಳನ್ನು ಒಪ್ಪಿಕೊಳ್ಳುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು.
ನಮ್ಮಿಂದ ಬದಲಾಯಿಸಲಾಗದ ಸಂಗತಿಗಳ ಬಗ್ಗೆ ನಿರಂತರವಾಗಿ ಚಿಂತಿಸುತ್ತಾ ಕುಳಿತರೆ ಸಮಸ್ಯೆ ಪರಿಹಾರವಾಗುವುದಿಲ್ಲ. ಬದಲಾಗಿ, ಪರಿಸ್ಥಿತಿಗೆ ತಕ್ಕಂತೆ ನಮ್ಮ ಆಲೋಚನೆ ಮತ್ತು ಕ್ರಿಯೆಗಳನ್ನು ಬದಲಾಯಿಸಿಕೊಂಡಾಗ ಬದುಕು ಮತ್ತಷ್ಟು ಸರಳವಾಗುತ್ತದೆ.
ಬದಲಾಯಿಸಲಾಗದ ಸಂಗತಿಯನ್ನು ಒಪ್ಪಿಕೊಳ್ಳುವುದು ಸೋಲಲ್ಲ; ಬದಲಾಗಿ, ಮುಂದುವರಿಯುವ ಬುದ್ಧಿವಂತಿಕೆ.
ಅಲೆಗಳಿಗೆ ಅಂಜಿ ಈಜುವುದನ್ನು ಮರೆಯದಿರೋಣ
ಸಮುದ್ರಕ್ಕೆ ಬಿದ್ದ ಮೇಲೆ ಅಲೆಗಳ ರಭಸಕ್ಕೆ ಅಂಜಿ ಈಜುವುದನ್ನೇ ಮರೆತರೆ ಹೇಗೆ?
ಅಂತೆಯೇ ನಮ್ಮ ಬದುಕೂ ಕೂಡ. ಕಷ್ಟಗಳು ಬಂದವೆಂದು ಬದುಕಿನ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳಬಾರದು. ಸಮಸ್ಯೆಗಳ ಅಲೆಗಳು ಎಷ್ಟೇ ರಭಸದಿಂದ ಬಂದರೂ, ಅವುಗಳ ನಡುವೆ ಈಜುತ್ತಾ ದಡ ಸೇರುವ ಛಲವನ್ನು ಬೆಳೆಸಿಕೊಳ್ಳಬೇಕು.
ಸಾವಿಗೆ ಅಂಜದೆ, ಬದುಕಿಗಾಗಿ ಅತಿಯಾದ ಪರದಾಟ ಮಾಡದೆ, ಜೀವನವನ್ನು ಅದರ ಸಿಹಿ–ಕಹಿಗಳೊಂದಿಗೆ ಸ್ವೀಕರಿಸಿ ಮುನ್ನಡೆದಾಗ ಮಾತ್ರ ಸುಂದರ ಬದುಕಿನ ಮಾಲೀಕರಾಗಲು ಸಾಧ್ಯ.
ನಮಗಿರುವ ಅಲ್ಪ ಆಯಸ್ಸನ್ನು ಕೇವಲ ಬದುಕಿನ ಆಕರ್ಷಣೆಗಳಲ್ಲಿ ಮುಳುಗಿ ಕಳೆಯದೆ, ಬದುಕನ್ನು ಅನುಭವಿಸಬೇಕು. ಆದರೆ ನಮ್ಮ ಬದುಕಿನಿಂದ ಮತ್ತೊಬ್ಬರಿಗೆ ಅಪಕಾರವಾಗದಂತೆ, ಸಾಧ್ಯವಾದಷ್ಟು ಉಪಕಾರಿಯಾಗಿ ಬದುಕಬೇಕು. ಇದೇ ಜೀವನದ ನಿಜವಾದ ಸಾರ್ಥಕತೆ.
ನಗುನಗುತ ಬಾಳು
ಮಂಕುತಿಮ್ಮನ ಮತ್ತೊಂದು ಕಗ್ಗ ಜೀವನದ ಈ ತತ್ವವನ್ನು ಮತ್ತಷ್ಟು ಆಳವಾಗಿ ತಿಳಿಸುತ್ತದೆ.
«“ನಗು, ಮನದಿ ಲೋಗರ ವಿಕಾರಂಗಳನು ನೋಡಿ
ಬಿಗಿ ತುಟಿಯ; ದುಡಿವಂದು ನೋವಪಡುವಂದು
ಪೋಗು; ವಿಶ್ವಜೀವನದ ಜೀವಾಂತರಂಗದಲಿ
ನಗುನಗುತ ಬಾಳ್; ತೆರಳು.”
— ಮಂಕುತಿಮ್ಮ»
ಲೋಕದ ವಿಚಿತ್ರಗಳನ್ನು, ಜನರ ನಡವಳಿಕೆಗಳನ್ನು ಕಂಡು ಮನಸ್ಸಿನಲ್ಲೇ ನಗಬೇಕು. ಕಷ್ಟ ಬಂದಾಗ ತುಟಿ ಕಚ್ಚಿ, ನೋವನ್ನು ಸಹಿಸಿಕೊಂಡು ದುಡಿಯಬೇಕು. ಜೀವನದ ಸುಖ–ದುಃಖಗಳನ್ನು ಸಮಾನವಾಗಿ ಸ್ವೀಕರಿಸಬೇಕು. ಈ ಜಗತ್ತಿನ ಲೀಲೆಗಳನ್ನು ಒಬ್ಬ ಸಾಕ್ಷಿಯಂತೆ ಗಮನಿಸುತ್ತಾ, ಸಾಧ್ಯವಾದಷ್ಟು ನಗುನಗುತ್ತಾ ಬದುಕಿ, ನಗುನಗುತ್ತಲೇ ಈ ಲೋಕದಿಂದ ನಿರ್ಗಮಿಸಬೇಕು ಎಂಬ ತಾತ್ವಿಕ ಸಂದೇಶವನ್ನು ಈ ಕಗ್ಗ ಸಾರುತ್ತದೆ.
ಚಿಂತೆಗಿಂತ ಚಿಂತನೆ ಮುಖ್ಯ
ಜೀವನದಲ್ಲಿ ಚಿಂತೆಗಳು ಬರುವುದು ಸಹಜ. ಆದರೆ ಪ್ರತಿಯೊಂದು ಚಿಂತೆಯನ್ನೂ ಹೊತ್ತುಕೊಂಡು ನಡೆಯಬೇಕೆಂದಿಲ್ಲ.
ಚಿಂತೆ ನಮ್ಮನ್ನು ಕುಗ್ಗಿಸುತ್ತದೆ; ಚಿಂತನೆ ನಮ್ಮನ್ನು ಬೆಳೆಸುತ್ತದೆ.
ಆದ್ದರಿಂದ ಸಮಸ್ಯೆ ಬಂದಾಗ ‘ಏಕೆ ಹೀಗಾಯಿತು?’ ಎಂದು ಕೊರಗುವುದಕ್ಕಿಂತ ‘ಇದರಿಂದ ನಾನು ಏನು ಕಲಿಯಬಹುದು?’ ಎಂದು ಯೋಚಿಸಬೇಕು. ಸೋಲು ಬಂದಾಗ ‘ನಾನು ಸೋತೆ’ ಎನ್ನುವುದಕ್ಕಿಂತ ‘ಮುಂದಿನ ಬಾರಿ ಹೇಗೆ ಗೆಲ್ಲಬಹುದು?’ ಎಂಬ ಚಿಂತನೆ ಬೆಳೆಸಿಕೊಳ್ಳಬೇಕು.
ಜೀವನವೆಂಬುದು ಸದಾ ನಮ್ಮ ಇಚ್ಛೆಯಂತೆ ಸಾಗುವ ದಾರಿಯಲ್ಲ. ಕೆಲವೊಮ್ಮೆ ಅದು ಕಲ್ಲು–ಮುಳ್ಳಿನ ಹಾದಿಯಾಗಬಹುದು; ಕೆಲವೊಮ್ಮೆ ಹೂವಿನ ಹಾದಿಯಾಗಬಹುದು. ಆದರೆ ಎರಡೂ ನಮ್ಮ ಪಯಣದ ಭಾಗವೇ.
ಹೀಗಾಗಿ ಜಗದ ಸಂತೆಯಲ್ಲಿ ಚಿಂತೆಗಳನ್ನು ಮರೆಯೋಣ. ಕಷ್ಟಗಳ ನಡುವೆ ನಗುವುದನ್ನು ಕಲಿಯೋಣ. ಬದಲಾಯಿಸಲಾಗದ್ದನ್ನು ಒಪ್ಪಿಕೊಂಡು, ಬದಲಾಯಿಸಬಹುದಾದುದನ್ನು ಬದಲಾಯಿಸುವ ಪ್ರಯತ್ನ ಮಾಡೋಣ.
ಜೀವನ ಸಿಕ್ಕಿರುವುದು ಕೇವಲ ಬದುಕುವುದಕ್ಕಾಗಿ ಅಲ್ಲ; ಬದುಕನ್ನು ಅರ್ಥಪೂರ್ಣವಾಗಿಸುವುದಕ್ಕಾಗಿ.
ನಮ್ಮಿಂದ ಯಾರಿಗಾದರೂ ಒಂದು ನಗು ಸಿಗಲಿ, ಒಂದು ಸಾಂತ್ವನದ ಮಾತು ಸಿಗಲಿ, ಒಂದು ಸಹಾಯದ ಹಸ್ತ ದೊರೆಯಲಿ. ಆಗ ನಮ್ಮ ಬದುಕು ಕೇವಲ ನಮ್ಮದಾಗದೆ, ಮತ್ತೊಬ್ಬರ ಬದುಕಿಗೂ ಬೆಳಕಾಗುತ್ತದೆ.
ಕಷ್ಟ ಬಂದಾಗ ಕುಗ್ಗದಿರೋಣ,
ಸುಖ ಬಂದಾಗ ಹಿಗ್ಗದಿರೋಣ;
ಜೀವನದ ಏರಿಳಿತಗಳ ನಡುವೆ
ನಗುನಗುತ ಸಾಗೋಣ.
ಜಗದ ಸಂತೆಯಲ್ಲಿ ಚಿಂತೆಗಳನ್ನೆಲ್ಲ ಬದಿಗಿಟ್ಟು, ಬದುಕಿನ ಪ್ರತಿಕ್ಷಣವನ್ನೂ ಅನುಭವಿಸುತ್ತಾ, ಸಾಧ್ಯವಾದಷ್ಟು ಒಳ್ಳೆಯದನ್ನು ಮಾಡುತ್ತಾ, ನಗುನಗುತ ಬಾಳೋಣ… ನಗುನಗುತಲೇ ತೆರಳೋಣ
ಬರಹ: ಶ್ರೀಮತಿ ರೇಷ್ಮಾ ಉಮೇಶ
ಶಿಕ್ಷಕರು, ಶ್ರೀವಲ್ಲಿ ಪ್ರೌಢಶಾಲೆ, ಚಿತ್ರಾಪುರ, ಭಟ್ಕಳ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

