ದೈಹಿಕ ನ್ಯೂನತೆ ಎಂದಿಗೂ ಸಾಧನೆಗೆ ತಡೆಯಾಗಲಾರದು; ದೃಢ ಸಂಕಲ್ಪ ಮತ್ತು ಮಾನಸಿಕ ಸ್ಥೈರ್ಯವಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಜೀವಂತ ನಿದರ್ಶನವಾಗಿ ಹೊರಹೊಮ್ಮಿದವರು ಕುಮಾರಿ ಆಶಾ. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ತಮ್ಮ ಸ್ವಯಂ ಶ್ರಮದಿಂದ ಅತ್ಯುತ್ತಮ ಅಂಕಗಳನ್ನು ಗಳಿಸಿ ಉತ್ತೀರ್ಣರಾಗುವ ಮೂಲಕ, ಇಡೀ ವಿದ್ಯಾರ್ಥಿ ಸಮೂಹಕ್ಕೆ ಮಾದರಿಯಾಗಿದ್ದಾರೆ.
ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಕುದುಕ್ಕುಳಿಯ ನಿವಾಸಿಗಳಾದ ಶ್ರೀ ಶೂಲಪಾಣಿ ಭಟ್ ಮತ್ತು ಶ್ರೀಮತಿ ಅನುರಾಧಾ ದಂಪತಿಯ ಪುತ್ರಿಯಾಗಿ 16.11.2005 ರಂದು ಜನಿಸಿದ ಆಶಾ, ಬಾಲ್ಯದಿಂದಲೇ ಕಲಿಯುವ ಅಪಾರ ಛಲ ಹೊಂದಿದ್ದವರು. ಹೊಕ್ಕಿಲ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ನಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿ, ಉಜಿರೆಯ ಹಳೇಪೇಟೆಯ ಸರಕಾರಿ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣ ಹಾಗೂ ನಡ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಪಿಯುಸಿ ಶಿಕ್ಷಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ನಡೆಯಲು ದೈಹಿಕವಾಗಿ ಅಸಾಧ್ಯವಾದರೂ, ಕಲಿಯುವ ಅದಮ್ಯ ಛಲ, ಹೆತ್ತವರ ನಿರಂತರ ಪ್ರೋತ್ಸಾಹ ಮತ್ತು ಶಿಕ್ಷಕರ ಮಾರ್ಗದರ್ಶನದಿಂದಾಗಿ ಶಿಕ್ಷಣ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಬರಿ ಪಠ್ಯ ಮಾತ್ರವಲ್ಲದೆ ನೃತ್ಯ, ಸಂಗೀತ, ಆಧ್ಯಾತ್ಮ ಹಾಗೂ ಕ್ರಾಫ್ಟ್ (ಕರಕುಶಲ) ಕ್ಷೇತ್ರಗಳಲ್ಲೂ ಇವರಿಗೆ ಅಪಾರ ಆಸಕ್ತಿಯಿದೆ. ಇತ್ತೀಚೆಗೆ 'ಗೀತಾ ಪರಿವಾರ' ಆನ್‌ಲೈನ್ ಮುಖಾಂತರ ಆಯೋಜಿಸಿದ್ದ ಶ್ರೀ ವಿಷ್ಣುಸಹಸ್ರನಾಮ, ಶ್ರೀ ರಾಮರಕ್ಷಾ ಸ್ತೋತ್ರ, ಶ್ರೀ ಹನುಮಾನ್ ಚಾಲೀಸಾ ಹಾಗೂ ಶ್ರೀಮದ್ಭಗವದ್ಗೀತೆಯ ಅಭ್ಯಾಸವನ್ನು ಸಂಪೂರ್ಣವಾಗಿ ಪೂರೈಸಿ, ಶಿಷ್ಯವೃಂದದಲ್ಲೇ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ದೈಹಿಕ ಇತಿಮಿತಿಗಳಿದ್ದಾಗ್ಯೂ ಅಡುಗೆ ಕಲೆಯಲ್ಲಿ ಅತೀವ ಆಸಕ್ತಿ ಹೊಂದಿರುವ ಆಶಾ, ಇದೀಗ ತಮ್ಮ ತಂದೆ, ತಾಯಿ ಹಾಗೂ ಅಣ್ಣನ ಬೆಂಬಲದೊಂದಿಗೆ 'ಕಾಕುಂಜೆ ಕ್ರಿಯೇಷನ್ಸ್' (Kakunje Creations) ಎಂಬ ಯೂಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸಿದ್ದಾರೆ.
ದೈಹಿಕ ವಿಕಲತೆಗೆ ಧೃತಿಗೆಡದೆ, "ದೃಢ ಸಂಕಲ್ಪದಿಂದ ಮುನ್ನಡೆದರೆ ವೈಯಕ್ತಿಕ ವಿಕಸನ ಸಾಧ್ಯ" ಎಂಬುದನ್ನು ನಿದರ್ಶನ ಸಹಿತ ತೋರಿಸಿಕೊಡುತ್ತಿರುವ ಕು. ಆಶಾ ಕೆ. ಎಸ್. ಅವರ ಈ ಹೊಸ ಪ್ರಯತ್ನಕ್ಕೆ ಹಾಗೂ ಮುಂದಿನ ಭವಿಷ್ಯಕ್ಕೆ ಶುಭ ಹಾರೈಕೆಗಳು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


