(ಕಾಲ್ಪನಿಕ ಲಘು ಸಂಶೋಧನಾ ಬರಹ)
ಲಂಕೇಶನ ಹುಟ್ಟು ಹೆಸರು ದಶಗ್ರೀವ. ಬಹುಷಃ ಮೀನಾ ರಾಶಿ, ರೇವತಿ ನಕ್ಷತ್ರದಲ್ಲಿ ಹುಟ್ಟಿರಬಹುದು!? (ಲಂಕೆಯಿಂದ ಭಾರತಕ್ಕೆ ವೇಷ ಮರೆಸಿಕೊಂಡು, ನುಸುಳಿ ಬಂದಾಗಲೂ ಅವನಿಗೆ ಆಧಾರ್ ಕಾರ್ಡ್ ಆಗಲಿ, ಜಾತಕ ಪ್ರತಿಯಾಗಲಿ ಮಾಡಿಸಿದ ಸುಳಿವು ಸಿಕ್ಕಿಲ್ಲ!!)
ಇನ್ನು ಹುಟ್ಟುವಾಗಲೇ ಅವನಿಗೆ ಹತ್ತು ತಲೆ, ಹತ್ತು ಕುತ್ತಿಗೆ (ಗ್ರೀವ/ಕಂಠ) ಇದ್ದಿರಲಿಕ್ಕಿಲ್ಲ!!? ನಾಮಕರಣ ಆಗುವ ಸಂದರ್ಭದಲ್ಲಿ ಹತ್ತು ಜನರ ಬುದ್ಧಿವಂತಿಕೆಯನ್ನು ಮಗುವಿನಲ್ಲಿ, ತಂದೆಯಾದ ವಿಶ್ವವಸು ಗಮನಿಸಿರಬಹುದು?. ಅಥವಾ ಮುಂದೆ ಹತ್ತು ತಲೆಗಳಲ್ಲಿ ಇರಬಹುದಾದಷ್ಟು ಸ್ಟೋರೇಜ್ ಸ್ಪೇಸ್ ಇವನೊಬ್ಬನಲ್ಲೇ ಇರಲಿ, ಅಷ್ಟು ಜ್ಞಾನವಂತನಾಗಲಿ ಅನ್ನುವ ಹೆಬ್ಬಯಕೆಯಲ್ಲಿ ವಿಶ್ವಪ್ಪಯ್ಯ ಆಶೀರ್ವದಿಸಿ 'ದಶಗ್ರೀವ' ಅಂತ ಹೆಸರನ್ನು ಇಡಲಾಗಿದೆ ಎಂಬುದು ರಾಮಾಯಣ ಕಾಲದಲ್ಲಿದ್ದವರನ್ನು ಸಂದರ್ಶನ ಮಾಡಿದಾಗ ದೊರೆತ ಮಾಹಿತಿ!!.
ಹುಟ್ಟುವಾಗ ರಾವಣನಿಗೆ ಹತ್ತುತಲೆ ಇರಲಿಲ್ಲ. ಹುಟ್ಟುವಾಗಲೆ ಹತ್ತು ತಲೆ ಇದ್ರೆ ಹತ್ತಾರು ಸಮಸ್ಯೆಗಳೇ ಉದ್ಭವಿಸುತ್ತಿದ್ದವು!! ಏನೆಲ್ಲ ಸಮಸ್ಯೆಗಳು ಸಂಭವಿಸುತ್ತಿದ್ದವು ಅಂತ ಅವತ್ತು ರಾವಣನ ಹತ್ತಿರ ಇದ್ದು, ನಂತರ ರಾವಣನಿಂದ ದೂರ ಹೋದ, ಅವತ್ತಿನಿಂದ ಇವತ್ತಿನವರೆಗೂ ಜೀವಂತ ಇರುವ ಒಂದು ತಲೆಯನ್ನು ಸಂದರ್ಶಿಸಿದಾಗ ದೊರೆತ ಕೆಲವು ಕುತೂಹಲ, ಸ್ವಾರಸ್ಯಕರ ಮಾಹಿತಿಗಳು. ಇವು ರಾವಣನಿಗೆ ಹುಟ್ಟುವಾಗ ಹತ್ತು ತಲೆ ಇರಲಿಲ್ಲ ಎನ್ನುವುದಕ್ಕೆ ಸಾಕ್ಷಿಗಳು ಕೂಡ!!:
೧) ಮಲಗುವಾಗ ಸಮಸ್ಯೆ!! ರಾವಣ ಒಂದಾ ಬೋರಲ್ ಆಗಿ ಮಲಗಬೇಕು, ಇಲ್ಲ ಅಂಗಾತ ಮಲಗಬೇಕು!! ಎಡಕ್ಕೋ, ಬಲಕ್ಕೋ ಕೋಡಿ ಮಲಗುವ ಹಾಗಿಲ್ಲ!! ಮಲಗಿದರೆ, ದಿಂಬಿಗೆ ಕೊಟ್ಟ ತಲೆಗೆ ನಿದ್ದೆ ಹೇಗೆ ಬಂದೀತು!? ತಲೆಬಿಸಿ, ತಲೆನೋವು, ಅಪ್ಪಚ್ಚಿ ಆದರೆ ಅಂತ ಬೆಳಗಿನವರೆಗೂ ಕಣ್ಣು ಬಿಟ್ಟೇ ಮಲಗಬೇಕಾಗುವುದಿಲ್ವಾ?
೨) ನಿದ್ದೆ ಮಾಡುವಾಗ ಸಮಸ್ಯೆ!! ಒಂದು ನಾಲ್ಕು ತಲೆಗೆ ಭಯಂಕರ ನಿದ್ದೆ, ಉಳಿದಾರು ತಲೆಗಳಿಗೆ ಲೋಕದ ಚಿಂತೆ-ಮಾತುಕತೆ-ಗಲಾಟೆ-ಅಟ್ಟಹಾಸಗಳ ಆಸಕ್ತಿ. ರಾವಣನ ಕತೆ!!? ಮನೆಯೊಂದು ಮೂರು ಬಾಗಿಲು ಇದ್ದ ಹಾಗೆ, ದೇಹ ಒಂದು ಆರು ಬಾಯಿಗಳು. ಆರ್ ಚಾನಲ್‌ನಲ್ಲಿ ಆರು ಜನ ಕುಳಿತು ಗಟ್ಟಿ ಡಿಬೇಟ್ ಮಾಡಿದ ಹಾಗಿರ್ತಾ ಇತ್ತು. ಇಲ್ವಾ? ಯೋಚಿಸಿ.
೩) ರಾವಣ ಯಾರದ್ದಾದರು ಮನೆಗೆ ಹೋಗಬೇಕಾದಾರೆ ನೇರ ಹೋಗುವ ಹಾಗಿಲ್ಲ!! ಅಂಬರೀಷ್ ತೆರೆಯ ಮೇಲೆ ಡುಯಟ್ ಹಾಡುವಾಗ ನೆಡೆಯುವಂತೆ ನೆಡೆಯಬೇಕಾಗುತ್ತಿತ್ತು? ನೇರ ಹೋದರೆ.... ಆ ಕಡೆ ಮೂರು ತಲೆಗೆ, ಈ ಕಡೆ ಎರಡು ತಲೆಗೆ ಬಾಗಿಲ ನಿಲ ಬಂದು ಬಡಿದು ಅನಾಹುತ ಆಗುವ ಸಾಧ್ಯತೆ ಇರ್ತಾ ಇತ್ತು, ಅಲ್ವಾ?
೪) ಮಂಡೋದರಿ ಪ್ರೀತಿಯಿಂದ ಗಂಡನ ಕೆನ್ನೆಗೆ ಒಂದು ಸಿಹಿ ಚುಂಬನ ಕೊಡಬೇಕು ಅಂತಾದರೆ... ಮಧ್ಯದ ಎಲ್ಲಾ ಕೆನ್ನೆಗಳಿಗೂ ಬಹುಷಃ ಅವಕಾಶ ಇದ್ದಿರಲಿಕ್ಕಿಲ್ಲ!? ಆ ಕಡೆ ಕೊನೇಯ ಕೆನ್ನೆ, ಈ ಕಡೆಯ ಕೊನೇಯ ಕೆನ್ನೆ ಮಾತ್ರ ಅಂತಾದರೆ, ಮೂಲ ತಲೆಯ ಕೆನ್ನೆಗಳು ಚುಂಬನದಿಂದ ವಂಚಿತವಾಗುವ ಸಾಧ್ಯತೆ ಇತ್ತು. ಎರಡು ತಲೆಗಳ ಮಧ್ಯದ ಕೆನ್ನೆಗಳು V ಶೇಪ್‌ನಲ್ಲಿ ಇರುವುದರಿಂದ, 'ಕೆನ್ನೆ ಚುಂಬನ ಆಸೆ ಭಗ್ನ ಆಗ್ತಿತ್ತು!! ಇದು ಮಂಡೋದರಿ ಸಮಸ್ಯೆ ಮಾತ್ರ ಅಲ್ಲ, ರಾವಣನ ಬಾಲ್ಯದಲ್ಲಿ ತಾಯಿ ಕೈಕಸೆಗೂ, ರಾವಣನಿಗೆ ಮಕ್ಕಳಾದ ಮೇಲೆ ಆ ಮಕ್ಕಳಿಗೂ ಈ ಸಮಸ್ಯೆ!! ಅಲ್ವಾ?
೫) ಹತ್ತು ತಲೆ ಅನ್ನುವುದು ಗಣಿತ ಲೆಕ್ಕದಲ್ಲಿ 'ಸರಿ' (ಬೆಸ ಅಲ್ಲ). ಆದರೆ, ಸರಿಯಾಗಿ ಮಧ್ಯದಲ್ಲಿ ಇರುವ ಮೂಲ ತಲೆಗೆ ಒಂದು ಬದಿ ನಾಲ್ಕು, ಒಂದು ಬದಿಗೆ ಐದು ತಲೆ ಬಂದರೆ..... ಒಂದು ಕಡೆ ಸರಿ, ಒಂದು ಕಡೆ ಬೆಸ. ಆಗ್ತಾ ಇತ್ತಲ್ವಾ? ನೆಡೆಯುವಾಗ ಬ್ಯಾಲೆನ್ಸ್ ಕಷ್ಟ ಆಗುವುದಿಲ್ವಾ!? "ರಾಜಾಧಿರಾಜ, ರಾಜ ಮಾರ್ತಾಂಡ..." ಅನ್ನುವ ಸೇವಕರ ಉದ್ಘೋಷಣೆಯ ರಾಜ ಸಭೆಗೆ, ರಾವಣ ನೆಡೆದು ಬರುವಾಗ... ನೀರಿನ ಕೊಡಪಾನ ಹೊತ್ತ ನಾರಿಯ ಸೊಂಟ ಬಳುಕಿದಂತೆ, ಕಂಠ ಬಳುಕಿ ನೆಡೆಯುವ ಸ್ಥಿತಿ ರಾವಣನದಾಗುವುದಿಲ್ವೆ?
೬) ಇನ್ನು ಅಷ್ಟೂ ತಲೆಗಳಿಗೆ ಒಟ್ಟಿಗೆ ನೆಗಡಿಯಾದರೆ, ಥ್ರೋಟ್ ಇನ್ಫೆಕ್ಷನ್ ಆಗಿ ಕೆಮ್ಮು ಬಂದರೆ, ಸಾಸಿವೆ ಕಾಳಿನ ಒಗ್ಗರಣೆ ಅಲರ್ಜಿಯಾಗಿ ಸೀನುವ ಪರಿಸ್ಥಿತಿ ಬಂದರೆ ಹೇಗಿರಬಹುದು? ಮಧ್ಯದಲ್ಲಿ ಕೆಲವಷ್ಟು ತಲೆಗಳಿಗೆ ಮಾತ್ರ 'ದೆಗಡಿ, ಗೆಮ್ಮು ಶೀನು' ಬಂದ್ರೆ, ಉಳಿದ ಆರೋಗ್ಯವಂತ ತಲೆಗಳ ಪ್ರತಿಕ್ರಿಯೆ ಹೇಗಿರಬಹುದು? ಇದೆಲ್ಲವನ್ನು ರಾವಣ ಸಹಿಸಿಕೊಳ್ಳಬೇಕಲ್ಲ!? ಸಾಧ್ಯವಾ?
೭) ಇನ್ನು ಮೂರನೆ ತಲೆ ಸುವರ್ಣ ಚಾನಲ್ ಅಜಿತ್ ನ್ಯೂಸ್ ನೋಡೋಣ ಅನ್ನುವುದು, ಎಂಟನೆ ತಲೆ ಪಬ್ಲಿಕ್ ರಂಗಣ್ಣನ ಬ್ರೇಕಿಂಗ್ ನ್ಯೂಸ್ ನೋಡೋಕೆ ಇಷ್ಟ ಪಟ್ಟರೆ ರಾವಣ ಎಂಥ ಸಾಯಬೇಕು!!? ಇದು ನಿನಗೆ ಅರ್ಥ ಆಗಲಿ ಅಂತ ವರ್ತಮಾನದ ಉದಾಹರಣೆ ಕೊಟ್ಟಿದ್ದು. ಅವತ್ತು ಇದಕ್ಕೆ ದಿವ್ಯದೃಷ್ಠಿ ಅಂತಿದ್ವಿ (ಸಂದರ್ಶನದ ಮಧ್ಯದಲ್ಲಿ ಅತಿಥಿಗಳು ಸ್ಪಷ್ಟಪಡಿಸಿದ್ದು)
೮) ದ್ಯಾನಕ್ಕೆ, ಪೂಜೆಗೆ, ತಪಸ್ಸಿಗೆ ಕುಳಿತ ರಾವಣನಿಗೆ ಯಾವ ತಲೆಯಲ್ಲಿ ದ್ಯಾನ, ಪೂಜೆ, ತಪಸ್ಸು ಮಾಡುವುದು ಅನ್ನುವ ಗೊಂದಲ. ಬಹುಶಃ 'ಈ ತಲೆ ನೋವೇ ಬೇಡ' ಅಂತ, ಈಶ್ವರನ ಕುರಿತು ತಪಸ್ಸು ಮಾಡುವಾಗ... ಒಂದೊಂದೇ ತಲೆಯನ್ನು ಕಡಿದು ಕೊಡ್ತಾ ಇದ್ನಂತೆ. ಕೊನೆಗೆ ತಲೆ ಕಡಿಯುವ ಲೆಕ್ಕ ತಪ್ಪಿ ಹತ್ತನೇ ತಲೆಯನ್ನೂ ಕಡಿಯಲು ಮುಂದಾದಾಗ.... ದೇವರು ದೊಡ್ಡವನು, ಶಿವ ಪ್ರತ್ಯಕ್ಷ ಆದನಂತೆ!!. ಅಂತ ಕತೆ ನಿರ್ಮಾಣ ಆಗ್ತಿತ್ತು ಅಲ್ವಾ!!?
೯) ನಿದ್ದೆಗೆ ಸಂಬಂಧಿಸಿದಂತೆ ಇಲ್ಲಿ ಇನ್ನೂ ಒಂದು ಸಮಸ್ಯೆ ಇದೆ!! ಹತ್ತು ತಲೆಗಳಲ್ಲಿ ಕೆಲವು ಗೊರಕೆ ಅಭ್ಯಾಸ ಬೆಳೆಸಿಕೊಂಡಿರುವಂತಹ ತಲೆಗಳಾದರೆ, ಉಳಿದ ತಲೆಗಳಿಗೆ ನಿದ್ದೆ ಹ್ಯಾಗೆ ಬಂದೀತು!!? ಗಂಡ ಗೊರೆಕೆ ಹೊಡೆಯುತ್ತಾನೆ ಅಂತ ಹೆಂಡತಿ ಡೈವೋರ್ಸ್ ಅಪ್ಲೈ ಮಾಡಿದ ಕೇಸ್‌ಗಳು ಇವತ್ತು ಸುದ್ಧಿ ಆಗುತ್ತಿವೆ. ಒಂದು ಪಕ್ಷ ರಾವಣನಿಗೆ ಹತ್ತು ತಲೆಗಳಿದ್ದು, (ತಲೆಗಳು ಅಂದರೆ, ತಲೆಯಲ್ಲಿರುವ ಬಾಯಿ, ಮೂಗು, ಗಂಟಲುಗಳಿಂದ) ಅಷ್ಟೂ ತಲೆಗಳು ಗೊರೆಕೆ ತಲೆಗಳೇ ಆದರೆ... ಅದೂ ರಾಕ್ಷಸ ಗೊರಕೆ!!, ಪಾಪ ಮಂಡೋದರಿಯ ಕತೆ ಏನಾಗಿರಬಹುದು?
೧೦) ಇನ್ನು ರಾಕ್ಷಸರು ಮದ್ಯ ಪಾನ ಪ್ರಿಯರು. ರಾವಣನ ಯಾವ ಬಾಯಿ ಎಷ್ಟು ಮದ್ಯಪಾನ ಮಾಡಿದೆ ಅಂತ ಲೆಕ್ಕ ಇಡುವುದು ಹೇಗೆ? ಕೆಲವು ತಲೆಗಳು (ಕಂಠಗಳು) ಹೆಚ್ಚು ಕುಡಿಯುವುದು, ಹೆಚ್ಚು ಟೈಟಾಗುವುದು, ಕೆಲವು ಕಡಿಮೆ ಕುಡಿಯುವುದು, ಕೆಲವು "ಇವತ್ತು ಪಿತಾಜಿ ವಿಶ್ರವಸುರವರ ಜಯಂತಿ, ಕುಡಿಯುವುದಿಲ್ಲ" ಅಂತ ನಿರ್ಧರಿಸಿದರೆ... ಆ ಎಲ್ಲ ಹತ್ತು ತಲೆಗಳು ಒಂದೇ ದೇಹದ ಮೇಲೆ ಒಟ್ಟಿಗೆ ಹೇಗೆ ಇರ್ತಾ ಇದ್ದವು!!? ಆಗ್ತಿತ್ತಾ? ಇಲ್ಲ ಅಲ್ವಾ? ಆದುದರಿಂದ ರಾವಣನಿಗೆ ಹತ್ತು ತಲೆಗಳು ಇರಲಿಲ್ಲ. ಇದ್ದಿದ್ದು ಹತ್ತು ತಲೆಗಳಲ್ಲಿ ಇರಬಹುದಾದಷ್ಟು ಜ್ಞಾನ, ಬುದ್ದಿ, ಯೋಚನಾ ಶಕ್ತಿ... ಇತ್ಯಾದಿ. ಇದ್ದಿದ್ದು ಒಂದೇ ತಲೆ.
ಆದರೆ, ರಾವಣನಿಗೆ ತಪಸ್ಸು ಮಾಡಿದಾಗ ದೊರೆತ ಒಂದು ವಿಶೇಷ ತಪೋ ಶಕ್ತಿ ಅಂದರೆ, ಅದು ಅವನಿಗೆ ಇಷ್ಟ ಬಂದಾಗ ಹತ್ತು ತಲೆಗಳನ್ನು ಹೊಂದುವ ಅವಕಾಶ.
ರಾವಣನು ತುಂಬ ಉಗ್ರನಾಗಿದ್ದಾಗ, ತುಂಬ ಸಂತೋಷ-ಸಂಭ್ರಮದಲ್ಲಿದ್ದಾಗ, ಶಿವನು ಮೂರನೇ ಕಣ್ಣನ್ನು ತೆರೆಯುವಂತೆ ರಾವಣ ಹತ್ತು ಜೀವಂತ ತಲೆಗಳನ್ನು ಭೌತಿಕವಾಗಿ ಧರಿಸುತ್ತಿದ್ದ. ಹಾಗೆ ಧರಿಸಿದಾಗ, ರಾವಣನ ವಿರಾಟ್ ರೂಪವನ್ನು ನೋಡಿ, ಅವನ ಆಸ್ಥಾನದಲ್ಲಿ ಪಂಚಾಂಗ ಮಂತ್ರಿಯಾಗಿದ್ದ ಚತುರ್ಮುಖ ಬ್ರಹ್ಮನು ತನ್ನ ನಾಲ್ಕು ಮೂಗಿನ ಮೇಲೆ ಬೆರಳಿಟ್ಟು ವಿಸ್ಮಿತನಾಗುತ್ತಿದ್ದ. (ಹಾಗೆ ಬ್ರಹ್ಮ ವಿಸ್ಮಿತನಾದಾಗ, ಅವನ ಕೈಯಲ್ಲಿ ಸದಾ ಇರುತ್ತಿದ್ದ ಜಪಮಾಣಿ, ಕಮಂಡಲ ಮತ್ತು ವೇದಪುಸ್ತಕಗಳನ್ನು ಪಕ್ಕಕ್ಕೆ ಇಡುತ್ತಿದ್ದನಂತೆ)
ಇನ್ನು ದಶಗ್ರೀವನಿಗೆ ರಾವಣ ಅಂತ ಹೆಸರು ಬಂದ ರೋಚಕ ವಿಚಾರದ ಬಗ್ಗೆ ಅತಿಥಿಯನ್ನು ಕೇಳಿದಾಗ:
ಒಮ್ಮೆ ಅತ್ಯಂತ ಸಂಭ್ರಮದಲ್ಲಿದ್ದು, ಭೌತಿಕವಾಗಿಯೂ ದಶಶಿರನಾಗಿದ್ದ ದಶಗ್ರೀವನಿಗೆ ಅಷ್ಟೂ ತಲೆಗಳಲ್ಲಿ ಒಮ್ಮೆ ಹಿಮಾಲಯದಲ್ಲಿ ಕುಳಿತು ಚಿಲ್ಡ್ ಸುರಪಾನ ಸೇವಿಸುವ 'ಏಕೋ' ಬಯಕೆ ಆಯಿತಂತೆ.
ಆಯ್ತು, ಕುಡಿದು, ತೇಗಿ, ಹೊರಡಬೇಕು ಅನ್ನುವಾಗ, ಟೈಟಾಗಿದ್ದ ಒಂದು ಮಂಡೆಗೆ ಈ ಹಿಮಾಲಯದ ಒಂದು ಪರ್ವತವನ್ನು ಎತ್ತಿ ಲಂಕೆಗೆ ಕೊಂಡೊಯ್ದರೆ, ಪ್ರತೀ ಬಾರಿ ಚಿಲ್ಡ್ ಸೇವನೆಗೆ ಇಲ್ಲಿಯವರೆಗೆ ಬರವುದು ಬೇಡ ಅಂತ ಅನಿಸಿತಂತೆ. ಆ ಪರ್ಟಿಕುಲರ್ ತಲೆಯ ಮಿದುಳು ದಶಗ್ರೀವನ ಇಪ್ಪತ್ತು ಕೈಗಳಿಗೆ, ಪಕ್ಕದಲ್ಲಿ ಬಿಳೀ ಬಣ್ಣದ ಪರ್ವತಕ್ಕೆ ಕೈ ಹಾಕಲು ಸೂಚನೆ ಕೊಟ್ಟಿತಂತೆ.
ಗ್ರಹಚಾರ, ಅದು ಶಿವನ ಕೈಲಾಸ!!
ದಶಕಂಠನ ಪರ್ಟಿಕುಲರ್ ಟೈಟಾದ ತಲೆಯ ಕಣ್ಣುಗಳಿಗೆ ಕಂಡಿದ್ದು ಎರಡು ಕೈಲಾಸ ಪರ್ವತಗಳು!!
ಇದ್ದಕ್ಕಿದ್ದಂತೆ ಆ ಟೈಟಾದ ತಲೆಗೆ ಹೊಳೆದಿದ್ದು 'ಈ ಹಿಮಾಲಯದಲ್ಲಿ ಎರಡು ಕೈಲಾಸಗಳೇಕೆ? ಒಂದು ಇಲ್ಲಿರಲಿ, ಅದು ನೀಲಕಂಠೇಶ್ವರನಿಗಾಯ್ತು, ಒಂದು ಲಂಕೆಗೆ ಒಯ್ಯುವ, ಅದು ದಶಕಂಠೇಶ್ವರನಿಗಾಯ್ತು. ತೀರ್ಮಾನ ಕೈ ಪಕ್ಷಕ್ಕೆ ಹೋಯ್ತು (ಇಲ್ಲಿ ಇಪ್ಪತ್ತು ಕೈಗಳ ನಿಯೋಗಕ್ಕೆ ಪಕ್ಷ ಅಂತ ಹೆಸರಿಸಿದ್ದು 'ಗುಂಪು' ಎನ್ನುವ ಅರ್ಥದಲ್ಲಿ!! ಇದನ್ನು ಸಂದರ್ಶನದಲ್ಲಿ ಅತಿಥಿಯೇ ಹೇಳಿದ್ದು).
ಇಪ್ಪತ್ತು ಸಂಖ್ಯೆಯ ಕೈ ಪಕ್ಷದ ಬಾಹ್ಯ ಬೆಂಬಲದೊಂದಿಗೆ, ಪಾನ ಬಲ, ಅಹಂಕಾರ ಬಲ ಮತ್ತು ತಪೋ ಬಲಗಳೆಂಬ ಅಂತರ್ಗತ ಶಕ್ತಿಗಳೊಂದಿಗೆ, ದಶಗ್ರೀವನು ಕೈಲಾಸ ಪರ್ವತವನ್ನೇ ಅಲುಗಾಡಿಸಲು ಮುಂದಾದನು.
ಕೈಲಾಸ ಅಲುಗಾಡಿತು. ರಿಕ್ಟರ್ ಮಾಪಕದಲ್ಲಿ ಅಪಾಯದ ತೀವ್ರತೆಯನ್ನು ತೋರಿಸುವಷ್ಟು ಕೈಲಾಸ ಭೂಕಂಪನ ಆಯ್ತು.
ಕೈಲಾಸದ ಅಲುಗಾಟದ ಕಾರಣ ತಿಳಿದ, ಕೈಲಾಸದ ಮೇಲಿದ್ದ ನಟರಾಜ, ತನ್ನ ಕಾಲನಿಂದ ಪರ್ವತವನ್ನು ಜೋರಾಗಿ ತುಳಿದ.
ಕೈಲಾಸದ ಭೂ ಕಂಪನ ನಿಂತಿತು.
ಆದರೆ, ಕೈಲಾಸ ಒಂದು ಬಿಟ್ಟು, ಉಳಿದ ಭೂಖಂಡವೇ ವೈಬ್ರೇಟ್ ಆಗುವಷ್ಟು ಒಂದು ಧ್ವನಿ ಕೇಳಿಬಂತು. ಮೂಲ ಸಂದರ್ಶನದಲ್ಲಿ ಇದನ್ನು 'ಮಹಾಗರ್ಜನೆ' ಎಂದು ಕರೆಯಲಾಗಿದೆ.
ಆ ಸ್ವರ ಹೊರಟಿದ್ದು ಲಂಕೇಶನ ಹತ್ತು ಕಂಠಗಳಿಂದ ಏಕ ಕಾಲದಲ್ಲಿ!!
ಅದಕ್ಕೆ ಕಾರಣ ಇಷ್ಟೆ, ಕೈಲಾಸ ಪರ್ವತವನ್ನು ಎತ್ತಲು ಹೊರಟ ದಶಕಂಠನ ಕೈ ಪಕ್ಷದ ನೂರು ಸದಸ್ಯ ಬೆರಳುಗಳು ಕೈಲಾಸ ಪರ್ವತದ ಅಡಿ ಸಿಕ್ಕಿ ಹಾಕಿಕೊಂಡಿದ್ದು!!.
ಶಿವನು ಪರ್ವತವನ್ನು ತುಳಿದಾಗ, ಪರ್ವತದ ಅಡಿ ಸಿಕ್ಕಿ ಹಾಕಿಕೊಂಡ ಬೆರಳುಗಳು ಕೊರಳಿಗೆ ಕೂಗುವಂತೆ ಸಂದೇಶ ಕೊಟ್ಟವು (ಬೆರಳಿಗೆ ಕೊರಳ್ - ಸಂದೇಶ). ದಶಕಂಠನ ಹತ್ತು ಕೊರಳ ಕಂಠಗಳು ಗರ್ಜಿಸಿದವು.
ಈಶ್ವರನು ಒತ್ತಿದ್ದ ಕಾಲನ್ನು ಹಗುರ ಮಾಡಿದ. ಪರ್ವತ ಸ್ವಲ್ಪ ಮೇಲೆ ಬಂತು. ಕೈ ಪಕ್ಷ ಸುಧಾರಿಸಿಕೊಂಡಿತು.
ಮಹಾಗರ್ಜನೆ ಮಾಡಿದ ದಶಕಂಠನಿಗೆ ಅವತ್ತು ಕಲಾಸದಲ್ಲಿ ಅಡಿಷನಲ್ ಮರುನಾಮಕರಣ 'ರಾವಣ' ಅಂತಾಯ್ತು.
ನಾಮಕರಣ ಮಾಡಿದ್ದು ಈಶ್ವರನಾಗಿದ್ದರಿಂದ, ದಿನ ಕಳೆದಂತೆ ರಾವಣ 'ರಾವಣೇಶ್ವರ'ನಾದ.
ರಾವಣನ ತಮ್ಮನಾದ ಚಿರಂಜೀವಿ ವಿಭೀಷಣನೊಂದಿಗೆ ಮಾಡಿದ ಕಾಲ್ಪನಿಕ ಸಂದರ್ಶನವನ್ನು ಸಂಕ್ಷಿಪ್ತ ರೂಪಕ್ಕೆ ಇಳಿಸಿ ಈ ಸಂಶೋಧನಾ ಬರಹವನ್ನು ಸಿದ್ಧಗೊಳಿಸಲಾಗಿದೆ.
- ಅರವಿಂದ ಸಿಗದಾಳ್, ಮೇಲುಕೊಪ್ಪ
9449631248
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

