ತಾಮ್ರದ ಪಾತ್ರೆಯ ಬಳಕೆ... ಒಂದು ವಿವೇಚನೆ

Upayuktha
0

ಮ್ಮ ದೈನಂದಿನ ಬದುಕಿನಲ್ಲಿ ತಾಮ್ರದ ಬಳಕೆ ಹಿಂದಿನಿಂದಲೂ ಇದೆ ಈ ಹಿಂದೆ ನಮ್ಮ ಪೂರ್ವಜರು ತಾಮ್ರದ ಪಾತ್ರೆಗಳಲ್ಲಿ ನೀರನ್ನು ಶೇಖರಿಸಲು, ಅಡುಗೆ ಮಾಡಲು ಪೂಜೆಯ ಸಾಮಗ್ರಿಗಳನ್ನಾಗಿ ಬಳಸುತ್ತಿದ್ದರು. 


ತಾಮ್ರವು ಅತ್ಯುತ್ತಮವಾದ ಲೋಹ ಪದಾರ್ಥವಾಗಿದ್ದು ಅದರಲ್ಲಿ ನೀರು ಸಂಗ್ರಹಿಸಿ ಬಳಸುವ ಮೂಲಕ ತಾಮ್ರದಲ್ಲಿರುವ ಒಳ್ಳೆಯ ಧಾತುಗಳು ನಮ್ಮ ದೇಹವನ್ನು ಸೇರುತ್ತಿದ್ದವು ಆ ಮೂಲಕ ನಮ್ಮ ದೇಹಕ್ಕೆ ಅಗತ್ಯವಾದ ತಾಮ್ರದ ಅಂಶದ ಪೂರೈಕೆ ನಡೆಯುತ್ತಿತ್ತು. ಈಗಿನಂತೆ ನೀರಿನ ಸೌಲಭ್ಯಗಳು ಇಲ್ಲದ ಕಾಲದಲ್ಲಿ ಜನರು ತಮ್ಮ ಮನೆಗೆ ಅಗತ್ಯವಾದ ಕುಡಿಯುವ ನೀರನ್ನು ಬಾವಿ ಹೊಳೆ ಹಳ್ಳಗಳಿಂದ ತಾಮ್ರದ ಕೊಡಗಳಲ್ಲಿ ತಂದು ಮನೆಯಲ್ಲಿರುವ ತಾಮ್ರ ಇಲ್ಲವೇ ಹಿತ್ತಾಳೆಯ ದೊಡ್ಡ ದೊಡ್ಡ ಹಂಡೆ, ತಪ್ಪಲೆ, ಉಪ್ಪಾರ ಕೊಡಗಳಲ್ಲಿ ಸಂಗ್ರಹಿಸಿ ಇಡುತ್ತಿದ್ದರು. 


ಪ್ರತಿ ಸೋಮವಾರ ಇಲ್ಲವೇ ಅಮಾವಾಸ್ಯೆ, ಹುಣ್ಣಿಮೆಗಳಿಗೆ ಮುನ್ನಾ ದಿನ ಹುಣಸೆ ಹಣ್ಣನ್ನು ಸವರಿ ಆ ಪಾತ್ರೆಗಳನ್ನು ತಿಕ್ಕಿ ಥಳಥಳ ಹೊಳೆಯುವಂತೆ ಮಾಡಿ ಮತ್ತೆ ಅವುಗಳಲ್ಲಿ ನೀರನ್ನು ಸಂಗ್ರಹಿಸಿ ಅಡುಗೆ ಹಾಗೂ ಕುಡಿಯುವ ನೀರಿಗೆ ಬಳಸುತ್ತಿದ್ದರು. ತಾಮ್ರದ ಪಾತ್ರೆಯನ್ನು ಬಳಸುವ ಪ್ರಯೋಜನವನ್ನು ನಮ್ಮ ಪೂರ್ವಜರು ಅರಿತಿದ್ದ ಕಾರಣವೇ ಅದು ಸ್ವಲ್ಪ ದುಬಾರಿಯಾದರೂ ಕೂಡ ಎಲ್ಲರ ಮನೆಗಳಲ್ಲಿ ಬಳಸಲ್ಪಡುತ್ತಿತ್ತು. 


ತಾಮ್ರದ ಪಾತ್ರೆಯು ನೀರನ್ನು ಶುದ್ಧವಾಗಿಸಲು ಅತ್ಯವಶ್ಯಕವಾದ ಆಂಟಿ ಮೈಕ್ರೋಬಿಯಲ್ ಗುಣಗಳನ್ನು ಹೊಂದಿರುವುದರಿಂದ ಇದರಲ್ಲಿ ಹಾಕಿ ಬಳಸಲ್ಪಡುವ ಕುಡಿಯುವ ನೀರು ಅತ್ಯಂತ ಶುದ್ಧ ರೂಪದಲ್ಲಿ ದೊರೆಯುತ್ತದೆ. ತಾಮ್ರದ ಪಾತ್ರೆಯ ನೀರನ್ನು ಕುಡಿಯಲು ಬಳಕೆ ಮಾಡುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿಯು ಹೆಚ್ಚಾಗಿ ದೇಹವು ಸಣ್ಣಪುಟ್ಟ ಕಾಯಿಲೆ ಕಸಾಲೆಗಳು ಹಾಗೂ ಮತ್ತಿತರ ತೊಂದರೆಗಳಿಂದ ಮುಕ್ತವಾಗುತ್ತದೆ.


ವೈಜ್ಞಾನಿಕವಾಗಿ ತಾಮ್ರದ ಪಾತ್ರೆಯಲ್ಲಿ ನೀರನ್ನು ಸಂಗ್ರಹಿಸಿ ಆರರಿಂದ ಎಂಟು ಗಂಟೆಗಳ ಕಾಲ ಇಟ್ಟಾಗ ತಾಮ್ರದ ಅಯಾನ್ ಧಾತುಗಳು ನೀರಿನಲ್ಲಿ ಅಸರಿಸುತ್ತವೆ. ಇದರಿಂದ ದೇಹದ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುವ ಬ್ಯಾಕ್ಟೀರಿಯಗಳ ಮೇಲೆ ಪರಿಣಾಮವನ್ನು ಉಂಟು ಮಾಡಿ ಅವುಗಳನ್ನು ನಾಶಪಡಿಸುತ್ತದೆ. ವಾತ, ಪಿತ್ತ ಹಾಗೂ ಕಫಗಳ ಸಮತೋಲನ ಮಾಡುವಲ್ಲಿ ತಾಮ್ರದ ಅಯಾನುಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತವೆ.


ಕರುಳಿನ ತೊಂದರೆಗೆ ಕಾರಣವಾಗುವ ಇ ಕೊಲಿ ಎಂಬ ಬ್ಯಾಕ್ಟೀರಿಯಾ ಇದರಿಂದ ನಾಶವಾಗುತ್ತದೆ. ತಾಮ್ರದ ಪಾತ್ರೆಯ ಸಂಗ್ರಹದ ನೀರಿನಿಂದ ಮಾಡುವ ಅಡುಗೆ ರುಚಿಕರವಾಗಿದ್ದು ಪೌಷ್ಟಿಕ ಅಂಶಗಳನ್ನು ಆಹಾರದಲ್ಲಿ ಉಳಿಸಿಕೊಳ್ಳಲು ಅನುಕೂಲಕರವಾಗಿರುತ್ತದೆ. ಅದೂ ಅಲ್ಲದೆ ಹೊಟ್ಟೆ ಉಬ್ಬರ, ಅಜೀರ್ಣ, ಉದರ ಬಾಧೆಯಂತಹ ಹೊಟ್ಟೆಗೆ ಸಂಬಂಧಪಟ್ಟ ತೊಂದರೆಗಳನ್ನು ನಿವಾರಿಸುತ್ತದೆ.


ತಾಮ್ರದಲ್ಲಿರುವ ಅಯಾನುಗಳು ದೇಹದ ಸತ್ವವನ್ನು ಹೆಚ್ಚಿಸುವ ಮೂಲಕ ರೋಗ ನಿರೋಧಕ ಶಕ್ತಿಗೆ ಕಾರಣವಾಗುತ್ತವೆ. ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿದ ನೀರು ಆಂಟಿ ಆಕ್ಸಿಡೆಂಟಗಳಿಂದ  ಸಮೃದ್ಧವಾಗಿದ್ದು ತ್ವಚೆ ಹಾಗೂ ಚರ್ಮದ ಆರೋಗ್ಯಕ್ಕೆ ಅತ್ಯುತ್ತಮ. ತಾಮ್ರದಲ್ಲಿರುವ ಸ್ವತಂತ್ರ ರಾಡಿಕಲ್ಗಳು ಆರೋಗ್ಯಕ್ಕೆ ರಕ್ಷಾ ಕವಚವಾಗಿ ಪರಿಣಮಿಸುತ್ತವೆ.


ತಾಮ್ರದ ಪಾತ್ರೆಯನ್ನು ನಮ್ಮ ಹಿಂದಿನವರು ಬಳಸುತ್ತಿದ್ದ ರೀತಿಗೆ ಅತ್ಯಂತ ವಿಭಿನ್ನವಾಗಿ ನಾವು ಬಳಸುತ್ತಿರುವುದು ಕೆಲ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿದೆ. ತಾಮ್ರದ ಪಾತ್ರೆಯ ಮೇಲೆ ನೀರು ಬಿದ್ದಾಗ ಉಂಟಾಗುವ ರಾಸಾಯನಿಕ ಕ್ರಿಯೆಗಳ ಪರಿಣಾಮವಾಗಿ ಅದು ತನ್ನ ಹೊಳಪನ್ನು ಕಳೆದುಕೊಳ್ಳುತ್ತದೆ ಇದನ್ನು ಆಕ್ಸಿಡೀಕರಣ ಎನ್ನುತ್ತಾರೆ. 


ನಮ್ಮ ಹಿರಿಯರು ವಾರಕ್ಕೆ ಇಲ್ಲವೇ 15 ದಿನಗಳಿಗೆ ಒಮ್ಮೆ ತಾಮ್ರದ ದೊಡ್ಡ ದೊಡ್ಡ ಹಂಡೆ,ಕೊಳಗ, ತಪ್ಪಲೆಗಳನ್ನು ನೆನೆಸಿಟ್ಟ ಹುಣಸೆಹಣ್ಣನ್ನು ಹಚ್ಚಿ ತಿಕ್ಕಿ ತೊಳೆಯುತ್ತಿದ್ದರು... ಆದರೆ ನಾವುಗಳು ಬದಲಾದ ಕಾಲಘಟ್ಟದಲ್ಲಿ ಹುಣಸೆ ಹಣ್ಣು, ನಿಂಬೆ ರಸಗಳ ಸಾರವನ್ನು ಒಳಗೊಂಡ ಆಧುನಿಕ ಮಾರ್ಗಗಳು ಹಾಗೂ ಪೌಡರ್ಗಳನ್ನು ಬಳಸುತ್ತಿದ್ದೇವೆ. ಅದರಲ್ಲೂ ತಾಮ್ರದ ಪಾತ್ರೆ ಸದಾ ಹೊಳೆಯುತ್ತಿರಬೇಕು ಎಂಬ ಕಾರಣಕ್ಕೆ ಪ್ರತಿದಿನ ಅದನ್ನು ತಿಕ್ಕಿ ಪಳಗುಟ್ಟಿಸುತ್ತೇವೆ ಇದು ಖಂಡಿತಾ ಸಲ್ಲದು.


ನಮ್ಮ ದೇಹಕ್ಕೆ ಬೇಕಾಗುವ ತಾಮ್ರದ ಪ್ರಮಾಣ ಅತ್ಯಂತ ಕಡಿಮೆ, ಆದರೆ ಈ ರೀತಿ ಪ್ರತಿದಿನ ತಿಕ್ಕಿ ತೊಳೆದ ಪಾತ್ರೆಗಳಲ್ಲಿ ತುಂಬಿಸಿಟ್ಟ ನೀರಿನಲ್ಲಿ ತಾಮ್ರದ ಅಯಾನುಗಳ ಪ್ರಮಾಣ ಹೆಚ್ಚಾಗಿ ಬಿಡುಗಡೆಯಾಗಿ ಅನವಶ್ಯಕ ತೊಂದರೆಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಪಾತ್ರೆಯ ಒಳಭಾಗವನ್ನು ಎರಡು ದಿನಕ್ಕೊಮ್ಮೆ ಯಾವ ಮಾರ್ಜಕಗಳನ್ನು ಬಳಸದೆ ಕೇವಲ ಬ್ರಷ್ ನಿಂದ ಇಲ್ಲವೇ ಕೈಯಾಡಿಸಿ ತೊಳೆದರೆ ಸಾಕು.


ನಿಂಬೆ ರಸ, ಹುಣಸೆರಸ, ಹಾಲು, ಹುಳಿಯಾದ ಶರಬತ್ತುಗಳು ಮತ್ತು ಬಿಸಿ ನೀರನ್ನು ತಾಮ್ರದ ಪಾತ್ರೆಯಲ್ಲಿ ಬಳಸಬಾರದು. ಅದು ಎಸಿಡ್ ಆಗಿ ಪರಿಣಮಿಸುತ್ತದೆ.
ಬಳಕೆಯ ಸರಿಯಾದ ವಿಧಾನಗಳನ್ನು ಅನುಸರಿಸಿದಾಗ ಮಾತ್ರ ನಮಗೆ ಉತ್ತಮ ಲಾಭಗಳು ದೊರೆಯುತ್ತವೆ ಎಂಬುದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಕಾರ್ಯನಿರ್ವಹಿಸಬೇಕು.
 ಏನಂತೀರಾ ಸ್ನೇಹಿತರೆ ?


 - ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ, ಗದಗ್ 
 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top