ಪುತ್ತೂರು: ಯುವ ಸಮೂಹವೆಂದರೆ ದೇಶಕ್ಕೆ ಶಕ್ತಿಯಾಗಿ ನಿಂತು ಹೊಸ ಚಿತ್ರಣವನ್ನು ನೀಡಬಲ್ಲವರು. ಸಕಲ ಸೌಲಭ್ಯಗಳನ್ನು ಹೊಂದಿರುವ ಇಂದಿನ ವಿದ್ಯಾರ್ಥಿಗಳು ಅವುಗಳ ಸದುಪಯೋಗ ಪಡೆದು ಜಯಿಸಬೇಕು. ನಮ್ಮ ದೇಶದಲ್ಲಿ ಸ್ವಂತ ಸ್ಟಾರ್ಟಪ್ ಇತ್ಯಾದಿ ಉದ್ಯಮಗಳನ್ನು ಪ್ರಾರಂಭಿಸಿ ಉತ್ಪಾದನೆ, ಸಾಗಾಟ ಮುಂತಾದ ಹಂತಗಳಲ್ಲಿನ ಮಿತಿಗಳನ್ನು ಮೀರಲು ನಾವು ಪ್ರಯತ್ನಿಸಬೇಕು.
ಸರ್ಕಾರ ಔಷದ ಉತ್ಪಾದನೆ, ಚಿಕಿತ್ಸೆ ಮುಂತಾದವುಗಳಿಗೆ ದೊಡ್ಡ ಮೊತ್ತದ ಹಣವನ್ನು ಮೀಸಲಿಟ್ಟು ಹಲವಾರು ರೀತಿಗಳಿಂದ ಪ್ರೋತ್ಸಾಹಿಸಲಿದೆ. ಭಾರತ ಔಷಧೀಯ ವಿಜ್ಞಾನ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಲು ಯುವ ಔಷಧ ವಿಜ್ಞಾನಿಗಳ ಕೊಡುಗೆ ಅತ್ಯಮೂಲ್ಯ ಎಂದು ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತಿಯನ್ನು ವಹಿಸಿ ದಕ್ಷಿಣ ಕನ್ನಡ ಜಿಲ್ಲಾ ಸಂಸದ ಕ್ಯಾ. ಬ್ರಿಜೇಶ್ ಚೌಟ ಮಾತನಾಡಿದರು.
ಇವರು ವಿವೇಕಾನಂದ ಇನ್ಸ್ಟಿಟ್ಯೂಟ್ ಆಫ್ ಫಾರ್ಮಸ್ಯುಟಿಕಲ್ ಸೈನ್ಸಸ್ ಇದರ 2025-26ನೇ ವಾರ್ಷಿಕೋತ್ಸವ "ಆರೋಹಣಂ"ನಲ್ಲಿ ಗೌರವಾನ್ವಿತ ಅತಿಥಿಯಾಗಿ ಮಾತನಾಡಿದರು.
ನಮ್ಮ ಸಾಮರ್ಥ್ಯದ ಮೇಲೆ ನಮಗೆ ನಂಬಿಕೆ ಸದಾ ಇರಬೇಕು. ಹೊಸತನ್ನು ಕಂಡುಹಿಡಿಯುವ ಹಾಗೂ ನಮ್ಮ ಕೆಲಸಗಳಲ್ಲಿ ನಿರಂತರವಾಗಿ ತೊಡಗಿಕೊಳ್ಳುವ ಉತ್ಸಾಹ ನಮ್ಮಲ್ಲಿರಬೇಕಾದ್ದು ಅವಶ್ಯ. ಇಂದು ಎಲ್ಲೆಡೆಯೂ ಜಾಗತೀಕರಣದ ಪ್ರಭಾವ ಗೋಚರಿಸುತ್ತಿದ್ದು ಹೊಸ ಅವಕಾಶಗಳು ಸೃಷ್ಟಿಯಾಗುತ್ತಿವೆ. ಕಾಲಕ್ಕೆ ತಕ್ಕಂತೆ ಹೊಂದಿಕೊಳ್ಳುವುದು ಹಾಗೂ ಡಿಜಿಟಲ್ ಸಾಕ್ಷರತೆ ಪ್ರಸ್ತುತ ಕಾಲದಲ್ಲಿ ತುಂಬಾ ಅವಶ್ಯಕ ಎಂದು ಬೆಂಗಳೂರಿನ ಭಟ್ ಬಯೋ-ಟೆಕ್ ಪ್ರೈ.ಲಿ ಸಂಸ್ಥೆಯ ಪ್ರಚಾರಕ, ಅಧ್ಯಕ್ಷ ಹಾಗೂ ಪುತ್ತೂರು ನವಚೇತನ ಹಿರಿಯ ನಾಗರಿಕರ ಬಡಾವಣೆಯ ಪ್ರವರ್ತಕ ಡಾ. ಶ್ಯಾಮ ಭಟ್ ನುಡಿದರು.
ಇವರು ವಿವೇಕಾನಂದ ಇನ್ಸ್ಟಿಟ್ಯೂಟ್ ಆಫ್ ಫಾರ್ಮಸ್ಯುಟಿಕಲ್ ಸೈನ್ಸಸ್ ಇದರ 2025-26ನೇ ವಾರ್ಷಿಕೋತ್ಸವ "ಆರೋಹಣಂ"ನಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ನವೀನ ತಂತ್ರಜ್ಞಾನ, ಜಾಗತೀಕರಣ ಇತ್ಯಾದಿ ಕಾರಣಗಳಿಂದ ಔಷಧ ವಿಜ್ಞಾನ ಕ್ಷೇತ್ರ ಬಹಳ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಈ ಸಂದರ್ಭದಲ್ಲಿ ಹೊಸ ಔಷಧ ಪದ್ಧತಿಗಳನ್ನು, ಚಿಕಿತ್ಸಾ ಕ್ರಮಗಳನ್ನು ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ. ಆದ್ದರಿಂದ ಜವಾಬ್ದಾರಿಯುತ ಔಷಧ ವಿಜ್ಞಾನಿಗಳು ರೂಪುಗೊಳ್ಳಬೇಕು ಎಂದು ಆಶಿಸಿದರು.
ಅಧ್ಯಕ್ಷೀಯ ನುಡಿಗಳನ್ನಾಡಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕೃಷ್ಣಕುಮಾರ್ ಶೆಟ್ಟಿ ಪರಿಣತ ಉಪನ್ಯಾಸಕ ವೃಂದದಿಂದ ಅತ್ಯುತ್ತಮ ಮಾರ್ಗದರ್ಶನ ಪಡೆದ ವಿದ್ಯಾರ್ಥಿಗಳು ಸಮಾಜಕ್ಕೆ ಒಳ್ಳೆಯ ಕೊಡುಗೆಯಾಗಬಲ್ಲರು. ಇಂದು ವಿವಿಧ ಉದ್ಯಮ ಕ್ಷೇತ್ರಗಳಲ್ಲಿ ವಿಪುಲವಾದ ಅವಕಾಶಗಳಿವೆ. ಹಾಗೂ ಪುರುಷರು ಹಾಗೂ ಮಹಿಳೆಯರಿಬ್ಬರೂ ನಮ್ಮ ಸಾಧನೆಗೆ ಸ್ಫೂರ್ತಿಯಾಗುವಂತೆ ಸಮಾಜ ಬೆಳೆದಿದೆ. ಇಂತಹಾ ಉತ್ಕೃಷ್ಟ ಚಿಂತನೆಗಳಿಂದ ಸಮಾಜವನ್ನು ರೂಪಿಸಬಲ್ಲ ವಿದ್ಯಾರ್ಥಿಗಳು ಹಾಗೂ ಬೋಧಕರನ್ನು ಶ್ಲಾಘಿಸಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ. ಗುರುರಾಜ ಎಂ.ಪಿ ವಾರ್ಷಿಕ ವರದಿಯನ್ನು ವಾಚಿಸಿದರು.
ಶೈಕ್ಷಣಿಕವಾಗಿ ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಹಾಗೂ ವಿವಿಧ ಸ್ಪರ್ಧೆಗಳ ಬಹುಮಾನ ವಿಜೇತರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಕೆ ಅಶೋಕ ಪ್ರಭು, ಕೋಶಾಧಿಕಾರಿ ಮೂಲಚಂದ್ರ ಹಾಗೂ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಗೌತಮಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಗೋವಿಂದ ಪ್ರಕಾಶ್ ಸಾಯ ಸ್ವಾಗತಿಸಿ ಕಾಲೇಜಿನ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಪ್ರಗತಿ ವಂದಿಸಿದರು.
ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಸಂಧ್ಯಾ ಸಾವಿತ್ರಿ ಎ ಹಾಗೂ ವಿದ್ಯಾ ಮುರುಗೇಶ್ವರಿ ಅವರು ನಿರೂಪಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

%20(1).png)
