ಖಾಸಗಿ ಶಾಲೆಗಳನ್ನು ನೆಡೆಸುವವರನ್ನು MLA, ಮಿನಿಷ್ಟ್ರು ಮಾಡಿದಿವಿ.
ಸರಿಯಾಗಿ ಕನ್ನಡ ಓದಲು ಬಾರದವರನ್ನು ಶಿಕ್ಷಣ ಸಚಿವರನ್ನಾಗಿಸಿದ್ದೀವಿ.
ಸರಕಾರಿ ಶಾಲಾ ಟೀಚರ್‌ಗಳಿಗೆ ಜಾತಿ ಗಣತಿ, ಮತದಾರರ ಪಟ್ಟಿ ಸಿದ್ಧ ಪಡಿಸುವುದು, ಮೊಟ್ಟೆ ಲೆಕ್ಕ, ಅಂಗಡಿಯಿಂದ ಬಾಳೆ ಹಣ್ಣು ತರುವುದು, ಬೀದಿ ನಾಯಿಗಳ ನಿರ್ವಹಣೆ, ಶೂ-ಸಮವಸ್ತ್ರ ಲೆಕ್ಕ, ಬಿಸಿ ಊಟಕ್ಕೆ ಕರಿಬೇವಿನ ಸೊಪ್ಪನ್ನು ಲೆಕ್ಕ ಮಾಡಿ- ಉಪ್ಪು ತೊಗರಿಬೇಳೆ ಗ್ರಾಮ್ ಲೆಕ್ಕದಲ್ಲಿ ಕೌಂಟ್ ಮಾಡಿ ಅಡಿಗೆಯವರಿಗೆ ಕೊಡುವುದು... ಇತ್ಯಾದಿ ನಿರ್ವಹಣೆ ಜವಾಬ್ದಾರಿಯನ್ನು ಪ್ರಥಮ ಆಧ್ಯತಯಾಗಿಸಿ ಸರಕಾರದ ಮೂಲಕ ಕೊಡಿಸಿದಿವಿ!!
ಎಲ್ಲಾ ಸರಕಾರಿ ಶಾಲೆಗಳು ಇನ್ನೂ ಮುಚ್ಚದೇ ಇರುವುದು ಆಶ್ಚರ್ಯ!!!.
ನಾನು ಒಂದನೇ ತರಗತಿ ಓದಿದ ಶಾಲೆ ಮುಚ್ಚಿ ದಶಕಗಳೇ ಕಳಿದಿವೆ. ಶೃಂಗೇರಿಯಿಂದ 3-4 ಕಿ ಮೀ ದೂರದ ಉಳುವೆ ಸ್ಕೂಲ್.
ನಾನು ಈಗ ವಾಸ ಮಾಡುತ್ತಿರುವ ಮೇಲುಕೊಪ್ಪದಿಂದ ಎರಡು ಕಿ.ಮೀ. ದೂರದಲ್ಲಿನ ಹೊಕ್ಕಳಿಕೆ ಎಂಬ ಹಳ್ಳಿಯಲ್ಲಿ ಸಾಕಷ್ಟು ಜನ ಇರುವ ಪ್ರದೇಶದ ಸರಕಾರಿ ಶಾಲೆ ಮುಚ್ಚಿ ಮೂರು ವರ್ಷ ಆಯ್ತು. (ಅಲ್ಲಿ ಇನ್ನೂ ಒಂದು ತಮಾಷೆ ಇದೆ! ಶಾಲೆ ಮುಚ್ಚಿ ಒಂದುವರೆ ವರ್ಷ ಆದ ಮೇಲೆ ಆ ಶಾಲೆಗೆ ಸರಕಾರದ ವತಿಯಿಂದ ಒಂದು ಕಾಂಪೌಂಡ್ ಕಟ್ಟಲಾಗಿದೆ!! ಯಾಕೆ ಅಂತ ವಿದ್ಯಾದಿ ದೇವತೆ ಶೃಂಗೇರಿ ಶಾರದಾಂಬೆಗೂ ಗೊತ್ತಿರಲಿಕ್ಕಿಲ್ಲ!)
ಇನ್ನು ಇದೇ ಮೇಲುಕೊಪ್ಪದಿಂದ ಅರ್ಧ ಕಿ ಮೀ ಇರುವ ಮೇಲುಕೊಪ್ಪ ಸರಕಾರಿ ಶಾಲೆಯಲ್ಲಿ 8 ಜನ ಮಕ್ಕಳಿದ್ದಾರೆ. ಇನ್ನು ಒಂದು ಅಥವಾ ಎರಡು ವರ್ಷದಲ್ಲಿ ಅದೂ ಮುಚ್ಚಬಹದು!? (ಹಾಗಾಗದಿರಲಿ)
ಡಿವಿಜಿಯವರು ತೃಣ(ಹುಲ್ಲು)ಕೆ ಹಸಿರು ಎಲ್ಲಿಂದ ಬಂತು? ಯಾವುದು ಕಾರಣ ಎಂದು ಪ್ರಶ್ನಿಸಿ, ಕೊನೆಗೆ ಅವರೇ ಹೇಳುತ್ತಾರೆ "ಹುಲ್ಲಿನ ಹಸಿರು ಗುಣಕ್ಕೆ ಕಾರಣ ಒಂದಲ್ಲ ಹಲಾವಾರು ಅಂತ.
"ತೃಣಕೆ ಹಸಿರೆಲ್ಲಿಯದು? ಬೇರಿನದೆ? ಮಣ್ಣಿನದೆ? ದಿನಪನದೆ? ಚಂದ್ರನದೆ? ನೀರಿನದೆ? ನಿನದೆ?
ತಣಿತಣಿವ ನಿನ್ನ ಕಣ್ಣಿನ ಪುಣ್ಯವೋ? ನೋಡು ಗುಣಕೆ ಕಾರಣವೊಂದೆ?" ಅಂತ
ಹಾಗೆ ಸರಕಾರಿ ಶಾಲೆ ಮುಚ್ಚುವುದಕ್ಕೆ ಕಾರಣಗಳು ಒಂದಲ್ಲ ಹಲವಾರು!!
ಕೆಲವಷ್ಟನ್ನು ಹೀಗೆ ಹೇಳಬಹುದು:
೧) ಸರಕಾರ ಖಾಸಗಿಯವರಿಗೆ ಶಾಲಾ ಉದ್ದಿಮೆ ಸ್ಥಾಪಿಸಿ, ಲಾಭದ ವ್ಯವಹಾರಕ್ಕೆ ಅವಕಾಶ ನೀಡಿದ್ದು.
೨) ಜನಪ್ರತಿನಿಧಿಗಳು ಖಾಸಗೀ ಶಾಲಾ ಉದ್ದಿಮೆ ಹೊಂದುವಂತಾಗಿದ್ದು ಮತ್ತು ಅವರುಗಳಿಂದ ಸರಕಾರಿ ಶಾಲೆಗಳ ಅಸ್ತಿತ್ವಕ್ಕೆ ಅಪಾಯ ಉಂಟಾಗುವಂತಾಗಿದ್ದು.
೩) ಖಾಸಗೀ ಶಾಲೆಗಳಲ್ಲಿ ಇಂಗ್ಲೀಷ್ ಭಾಷೆಗೆ ಹೆಚ್ಚು ಒತ್ತು ಕೊಟ್ಟಿದ್ದು, ಖಾಸಗೀ ಶಾಲೆಗಳಲ್ಲಿ ಮಾಧ್ಯಮ ಭಾಷೆಯಾಗಿ ಇಂಗ್ಲೀಷ್ ಬಂದಾಗ, ಸರಕಾರ ಒಪ್ಪಿಗೆ ಕೊಟ್ಟಿದ್ದು. ಅದೇ ಸಮಯದಲ್ಲಿ ಸರಕಾರಿ ಶಾಲೆಗಳಲ್ಲಿ ಕಲಿಕೆ ಮಾತ್ತು ಮಾಧ್ಯಮವಾಗಿ ಇಂಗ್ಲೀಷ್ ಭಾಷೆ ಆಗದೇ ಹೋಗಿದ್ದು.
೪) ಖಾಸಗೀ ಶಾಲೆಗಳಲ್ಲಿ LKG, UKG, ಪ್ರೀ ನರ್ಸರಿಗೆ ಅವಕಾಶ ಕೊಟ್ಟಿದ್ದು, ಸರಕಾರಿ ಶಾಲೆಯಲ್ಲಿ LKG, UKG, ಪ್ರೀ ನರ್ಸರಿಗೆ ಅವಕಾಶವಿಲ್ಲದೇ ಹೋಗಿದ್ದು. ಇತ್ತೀಚೆಗೆ ಸರಕಾರಿ ಶಾಲೆಯಲ್ಲಿ LKG, UKG, ಪ್ರೀ ನರ್ಸರಿಗೆ ಅವಕಾಶ ಕಲ್ಪಿಸಿದರೂ... ಕಾಲ ಮಿಂಚಿ ಹೋಗಿದ್ದು.
೫) ಖಾಸಗೀ ಶಿಕ್ಷಣ ಸಂಸ್ಥೆಗಳಲ್ಲಿನ ಆಕರ್ಷಣೆಗಳನ್ನು (ಟ್ರೈನಿಂಗ್ ಮೆಟೀರಿಯಲ್ಸ್, ಆಟದ ವಸ್ತುಗಳು, ಯುನಿಫಾರಂ, ಟೈ, ಬೆಲ್ಟ್, ಶೂ ಇತ್ಯಾದಿಗಳಲ್ಲಿ) ಸರಕಾರ ಸರಕಾರಿ ಶಾಲೆಗಳಲ್ಲಿ ಅಳವಡಿಸಲು ಹಿಂದೆ ಬಿದ್ದಿದ್ದು.
೬) ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ನೇಮಕದಲ್ಲಿ ಸಮರ್ಥ ಶಿಕ್ಷಕರನ್ನು ನೇಮಿಸುವಲ್ಲಿ ವಿಫಲವಾಗಿದ್ದು. ಭಾಷೆ, ಗಣಿತ, ವಿಜ್ಞಾನದಂತಹ ಸಬ್ಜೆಕ್ಟ್‌ನಲ್ಲಿ ಹೆಚ್ಚು ಜ್ಞಾನವಿರುವ ಶಿಕ್ಷಕರನ್ನು ಆಯ್ಕೆ ಮಾಡದೆ ಬೇರೆ ಬೇರೆ ಕಾರಣಗಳಿಗೆ ಸಡಿಲತೆ ಕೊಟ್ಟು, ಸಾಧಾರಣ ಜ್ಞಾನದ ಶಿಕ್ಷಕರ ನೇಮಕ ಮಾಡಿದ್ದೂ ಒಂದು ಕಾರಣ.
೭) ಖಾಸಗೀ ಶಾಲೆಗಳಂತೆ ಸರಕಾರಿ ಶಾಲೆಗಳ ಮಕ್ಕಳಿಗೆ ವಾಹನ ಸೌಲಭ್ಯವನ್ನು ಸರಕಾರ ಕಲ್ಪಿಸದೇ ಇರುವುದು.
೮) ನಿರ್ಧಿಷ್ಟ ಕಮ್ಯುನಿಟಿಯವರು (ಉದಾ: ಜೈನರು, ಲಿಂಗಾಯತರಲ್ಲಿ ಕೆಲವರು, ಬ್ರಾಹ್ಮಣರು) ಆಹಾರವಾಗಿ ಬಳಸದ ಮೊಟ್ಟೆಯನ್ನು ಮಕ್ಕಳಿಗೆ ಶಾಲೆಗಳಲ್ಲಿ ಹಂಚುವಂತೆ ಮಾಡಿ, ಕೆಲವು ಕಮ್ಯುನಿಟಿಯವರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಕಳಿಸದಂತಹ ವಾತಾವರಣ ನಿರ್ಮಿಸಿದ್ದು
೯) ಸರಕಾರಿ ಶಾಲೆಗಳ ಶಿಕ್ಷಕರನ್ನು ಮಕ್ಕಳಿಗೆ ಶಿಕ್ಷಣ ಕೊಡುವ ಕೆಲಸಕ್ಕಿಂತ ಇತರ ಕೆಲಸಗಳಿಗಾಗಿ ಹೆಚ್ಚು ಬಳಸಿಕೊಳ್ಳುವುದು, ಪರಿಣಾಮ ಶಿಕ್ಷಣದಲ್ಲಿ ಮಕ್ಕಳ ಏಳಿಗೆಯಲ್ಲಿ ಹಿನ್ನಡೆ ಉಂಟಾಗಿ, ಪೋಷಕರು ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳಿಸುವಂತಾಗಿದ್ದು.
೧೦) ಖಾಸಗಿ ಶಾಲೆಗಳ ಕಟ್ಟಡದ ಆಕರ್ಷಣೆಯೂ ಸರಕಾರಿ ಶಾಲಾ ಕಟ್ಟಡಗಳಲ್ಲಿ ಇಲ್ಲದಿರುವುದು.
ಹೀಗೆ ಹತ್ತು ಹಲವು ಕಾರಣಗಳಿಂದಾಗಿ ಸರಕಾರಿ ಶಾಲೆಗಳು ಸಂಪೂರ್ಣ ಅವಸಾನದತ್ತ ಹೋಗುತ್ತಿವೆ.
ಮುಚ್ಚಿದ ಶಾಲೆಗಳ ಹಂಚು ಬಿದ್ದು ಹೋದ ಮೇಲೆ, ಅದನ್ನು ಸರಕಾರಿ ಸ್ವಾಮ್ಯದ MSIL (ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್)ಗೆ ವಹಿಸಬಹುದು!!
ಒಂದು ಕಾಲದಲ್ಲಿ ವಿದ್ಯಾರ್ಥಿಗಳು ಬಳಸುವ ಸಾಲಿಡ್ ವಿದ್ಯಾ ನೋಟ್‌ಬುಕ್‌ಗಳನ್ನು ಮಾರ್ಕೇಟ್ ಮಾಡುತ್ತಿದ್ದ MSIL ಇವತ್ತು Retail Liquor ಲಿಕ್ವಿಡ್ ಬಿಸನೆಸ್ ಮಾಡ್ತಾ ಇದೆ!!
ಮುಚ್ಚಿದ ಶಾಲೆಯ ಆವರಣವನ್ನು MSILಗೆ ಕೊಟ್ಟರೆ... ಪ್ರತೀ ಹಳ್ಳಿಯಲ್ಲಿ ಅವರು ಹೋಲ್‌ಸೇಲ್ ಲಿಕ್ವಿಡ್ ವ್ಯಾಪಾರ ಮಾಡಬಹುದು. ಸರಕಾರದ ಆದಾಯವೂ ಹೆಚ್ಚುತ್ತದೆ!!
- ಅರವಿಂದ ಸಿಗದಾಳ್, ಮೇಲುಕೊಪ್ಪ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

