ಅಥಣಿ ದೇಸಾಯಿ ಸರ್ಕಲ್‌ನಲ್ಲಿ ಬೃಹತ್ ಚರಂಡಿ ಅವ್ಯವಸ್ಥೆ: ಪುರಸಭೆ, ತಹಶೀಲ್ದಾರರಿಗೆ ಮತ್ತೆ ಮನವಿ

Upayuktha
0

 

ಅಥಣಿ: ಪಟ್ಟಣದ ಅತ್ಯಂತ ಜನನಿಬಿಡ ಪ್ರದೇಶವಾದ ದೇಸಾಯಿ ಸರ್ಕಲ್ ಎದುರಿಗಿರುವ ದತ್ತ ಮಂದಿರ ಕಾಂಪ್ಲೆಕ್ಸ್ ಮುಂಭಾಗದ ಬೃಹತ್ ಚರಂಡಿಯ (ಗಟರ್) ಮುಚ್ಚಳ ಸಂಪೂರ್ಣವಾಗಿ ಮುರಿದುಬಿದ್ದು ಸಾರ್ವಜನಿಕರ ಜೀವಕ್ಕೆ ಕಂಟಕವಾಗಿ ಪರಿಣಮಿಸಿದೆ. ಆಡಳಿತ ಯಂತ್ರ ಸಂಪೂರ್ಣ ನಿರ್ಲಕ್ಷ್ಯ ವಹಿಸಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.


ಪ್ರಾಣಾಪಾಯದ ಭೀತಿಯಲ್ಲಿ ಸಾರ್ವಜನಿಕರು:

ಸದರಿ ಕಾಂಪ್ಲೆಕ್ಸ್‌ನಲ್ಲಿ ಜೆರಾಕ್ಸ್ ಅಂಗಡಿಗಳು, ಉಪಹಾರ ಗೃಹಗಳು, ವೈದ್ಯಕೀಯ ಮಳಿಗೆಗಳು ಹಾಗೂ ಹಲವಾರು ವಾಣಿಜ್ಯ ಸಂಸ್ಥೆಗಳಿದ್ದು, ದಿನನಿತ್ಯ ನೂರಾರು ಗ್ರಾಹಕರು, ಹಿರಿಯ ನಾಗರಿಕರು ಮತ್ತು ಮಹಿಳೆಯರು ಇದೇ ಮಾರ್ಗವಾಗಿ ಸಂಚರಿಸುತ್ತಾರೆ. ಅಪಾಯಕಾರಿ ಗಟರ್‌ಗೆ ಕಾಲು ಜಾರಿ ಬಿದ್ದು ಈಗಾಗಲೇ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರಸ್ತುತ ಮಳೆ ಪ್ರಾರಂಭವಾಗಿರುವುದರಿಂದ ಸಿಮೆಂಟ್ ಮುಚ್ಚಳ ಸಂಪೂರ್ಣವಾಗಿ ಸಡಿಲಗೊಂಡಿದ್ದು, ಯಾವುದೇ ಕ್ಷಣದಲ್ಲಿ ಒಳಗಡೆ ಕುಸಿದುಬೀಳುವ ಭೀತಿ ಎದುರಾಗಿದೆ.


ಪುರಸಭೆ ಹಾಗೂ ತಾಲೂಕು ಆಡಳಿತಕ್ಕೆ ಮನವಿ:

ಈ ಅಪಾಯಕಾರಿ ಸ್ಥಿತಿಯ ಕುರಿತು ಕೇವಲ ಭರವಸೆ ನೀಡುವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಮಸ್ಯೆಗೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ನಾಗರಿಕರು ಆರೋಪಿಸಿದ್ದಾರೆ. "ದಿನಾಂಕ 04.03.2023 ರಂದೇ ಪುರಸಭೆ ಕಾರ್ಯಾಲಯಕ್ಕೆ ಲಿಖಿತ ಮನವಿ ಸಲ್ಲಿಸಲಾಗಿತ್ತು. ವರ್ಷ ಕಳೆದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ, ಇಂದು ಪುರಸಭೆ ಮುಖ್ಯಾಧಿಕಾರಿಗಳಿಗೆ ಹಾಗೂ ತಹಶೀಲ್ದಾರರಿಗೆ ಮತ್ತೊಮ್ಮೆ ಮನವಿ ಪತ್ರ ಸಲ್ಲಿಸಿ ತಕ್ಷಣ ಹೊಸ ಚರಂಡಿ ನಿರ್ಮಾಣ ಹಾಗೂ ದೃಢವಾದ ಮುಚ್ಚಳಿಕೆ ಅಳವಡಿಕೆಗೆ ಆಗ್ರಹಿಸಲಾಗಿದೆ" ಎಂದು ಕರ್ನಾಟಕ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ ಮಹಿಳಾ ಸಬಲೀಕರಣ ಹೋರಾಟ ಸಮಿತಿಯ ರಾಜ್ಯ ಮಾಧ್ಯಮ ವಕ್ತಾರ ಮಹೇಶ್ ಎಂ. ಶರ್ಮಾ ತಿಳಿಸಿದ್ದಾರೆ.


ಉಗ್ರ ಹೋರಾಟದ ಎಚ್ಚರಿಕೆ:

ಯಾವುದೇ ದೊಡ್ಡ ಅನಾಹುತ ಅಥವಾ ಜೀವಹಾನಿ ಸಂಭವಿಸುವ ಮುನ್ನವೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮತ್ತು ತಹಶೀಲ್ದಾರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ತಕ್ಷಣವೇ ಹೊಸ ಚರಂಡಿ ನಿರ್ಮಾಣ ಮಾಡಿ ಸುಸಜ್ಜಿತ ಮುಚ್ಚಳಗಳನ್ನು ಅಳವಡಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತಾಲೂಕು ಆಡಳಿತದ ವಿರುದ್ಧ ಉಗ್ರ ಸ್ವರೂಪದ ಹೋರಾಟ ರೂಪಿಸಲಾಗುವುದು ಎಂದು ಸಾರ್ವಜನಿಕರು ಹಾಗೂ ಹೋರಾಟಗಾರರು ಎಚ್ಚರಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top