ಅಜೆಕಾರು ಕಲಾಭಿಮಾನಿ ಬಳಗದ ತಾಳಮದ್ದಳೆ ಸರಣಿ ಉದ್ಘಾಟನೆ

Upayuktha
0

ಬಳಗದ ರಜತ ಪರ್ವದಲ್ಲಿ ಜೊತೆಯಾಗೋಣ: ಪೆರಣಂಕಿಲ ಹರಿದಾಸ ಭಟ್



ಮುಂಬಯಿ: 'ಯಕ್ಷಗುರು ಅಜೆಕಾರು ಬಾಲಕೃಷ್ಣ ಶೆಟ್ಟರ ನೇತೃತ್ವದಲ್ಲಿ ಅಜೆಕಾರು ಕಲಾಭಿಮಾನಿ ಬಳಗವು ಮುಂಬೈ ನಗರದಲ್ಲಿ ಯಕ್ಷಗಾನದ ಜಯಭೇರಿ ಬಾರಿಸಿದೆ. 2001ರಲ್ಲಿ ಇದೇ ದೇವಸ್ಥಾನದಲ್ಲಿ ಆರಂಭಗೊಂಡ ತಾಳಮದ್ದಳೆ ಸರಣಿಯ 25ನೇ ವರ್ಷದ ಕಾರ್ಯಕ್ರಮವು ಮತ್ತೆ ಇಲ್ಲಿಂದಲೇ ಆರಂಭಗೊಳ್ಳುವುದು ಯೋಗಾಯೋಗ. ಬಳಗದ ರಜತ ಪರ್ವದ ಸಲುವಾಗಿ ಅಕ್ಟೋಬರ್ ತಿಂಗಳಲ್ಲಿ ನಡೆಯುವ ಮುಂಬೈ ಯಕ್ಷಗಾನ ಸಮ್ಮೇಳನದಲ್ಲಿ ಎಲ್ಲಾ ಕಲಾಭಿಮಾನಿಗಳೂ, ಕಲಾಪೋಷಕರೂ ಜೊತೆಯಾಗಿ ಅದನ್ನು ಮುನ್ನಡೆಸೋಣ' ಎಂದು ವಿದ್ಯಾವಿಹಾರ್ ಶ್ರೀ ಅಂಬಿಕಾ ಆದಿನಾಥೇಶ್ವರ ಮಹಾ ಗಣಪತಿ ದೇವಸ್ಥಾನದ ವೇ|ಮೂ| ಪೆರಣಂಕಿಲ ಹರಿದಾಸಭಟ್ಟರು ಹೇಳಿದ್ದಾರೆ. 

ಆಗಸ್ಟ್ 15ರಂದು ಶನಿವಾರ ದೇವಸ್ಥಾನದಲ್ಲಿ ಜರಗಿದ ಮುಂಬಯಿ ಅಜೆಕಾರು ಕಲಾಭಿಮಾನಿ ಬಳಗದ 2026 ನೇ ಸಾಲಿನ ಸರಣಿ ತಾಳಮದ್ದಳೆಯನ್ನು ಉದ್ಘಾಟಿಸಿ ಅವರು ಆಶೀರ್ವಚನವಿತ್ತರು.


ಮುಂಬೈಯ ಹಿರಿಯ ಅರ್ಥಧಾರಿ ಕೆ.ಕೆ.ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. 'ವರ್ಷದಿಂದ ವರ್ಷಕ್ಕೆ ಊರಿನ ಪ್ರಮುಖ ಕಲಾವಿದರನ್ನು ಬರಮಾಡಿಕೊಂಡು ಉತ್ತಮ ಗುಣಮಟ್ಟದ ಯಕ್ಷಗಾನ ತಾಳಮದ್ದಳೆ ಮತ್ತು ಬಯಲಾಟ ಕಾರ್ಯಕ್ರಮಗಳನ್ನು ನೀಡುತ್ತಿರುವ ಅಜೆಕಾರು ಕಲಾಭಿಮಾನಿ ಬಳಗ ಮಹಾನಗರದಲ್ಲಿ ಮುಂದಕ್ಕೂ ಈ ಸಂಸ್ಕೃತಿಯನ್ನು ಬೆಳೆಸಿ ಯಕ್ಷಗಾನ ಕಲೆಯ ಪ್ರವರ್ಧಮಾನಕ್ಕೆ ಕಾರಣವಾಗಲಿ' ಎಂದವರು ಹಾರೈಸಿದರು. ಪ್ರಸಿದ್ಧ ಭಾಗವತ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ ಮತ್ತು ದೇವಳದ ಟ್ರಸ್ಟಿ ಹರಿದಾಸ ಶೆಟ್ಟಿ ಅವರು ಮುಖ್ಯ ಅತಿಥಿಗಳಾಗಿ ಶುಭ ಕೋರಿದರು.


ತವರೂರ ತಂಡದ ಹಿರಿಯ ಅರ್ಥಧಾರಿ ಹಾಗೂ ಮುಂಬಯಿ ಯಕ್ಷಗಾನ ಸಮ್ಮೇಳನದ ಪ್ರಧಾನ ಸಂಚಾಲಕ ಪ್ರೊ| ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಅವರು ಮಾತನಾಡಿ 'ಇದೇ ಅಕ್ಟೋಬರ್ 3 ಮತ್ತು 4ರಂದು ಎರಡು ದಿನ ಮುಂಬೈ ಬಂಟರ ಭವನದಲ್ಲಿ ನಡೆಯುವ 'ಮುಂಬಯಿ ಯಕ್ಷಗಾನ ಸಮ್ಮೇಳನ -2026'  ವಿವಿಧ ಗೋಷ್ಠಿಗಳು, ಯಕ್ಷಗಾನ ಪ್ರದರ್ಶನ, ಪ್ರಾತ್ಯಕ್ಷಿಕೆ, ತಾಳಮದ್ದಲೆ,ಸ್ಮೃತಿ ಸಂಪುಟ ಬಿಡುಗಡೆ, ಕಲಾವಿದರು - ಕಲಾ ಪೋಷಕರ ಸಂಮಾನ ಮತ್ತು ಪ್ರಶಸ್ತಿ ಪ್ರದಾನಗಳೊಂದಿಗೆ ಸಂಪನ್ನವಾಗಲಿದೆ' ಎಂದು ಕಾರ್ಯಕ್ರಮದ ವಿವರಗಳನ್ನು ನೀಡಿದರು. ಅಜೆಕಾರು ಕಲಾಭಿಮಾನಿ ಬಳಗದ ಅಧ್ಯಕ್ಷ ಅಜೆಕಾರು ಬಾಲಕೃಷ್ಣ ಶೆಟ್ಟಿ ಅತಿಥಿಗಳನ್ನು ಗೌರವಿಸಿ ವಂದನಾರ್ಪಣೆ ಸಲ್ಲಿಸಿದರು.


'ಸುದರ್ಶನ ವಿಜಯ' ತಾಳಮದ್ದಳೆ:


ಬಳಗದ 2026 ನೇ ಸಾಲಿನ ಸರಣಿ ತಾಳಮದ್ದಳೆಯ ಪ್ರಥಮ ಕಾರ್ಯಕ್ರಮವಾಗಿ ವಿದ್ಯಾ ವಿಹಾರ್ ಅಂಬಿಕಾ ಮಂದಿರದಲ್ಲಿ 'ಸುದರ್ಶನ ವಿಜಯ' ಪ್ರಸಂಗದ ತಾಳಮದ್ದಳೆ ಜರಗಿತು. ಈ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ 'ಸುದರ್ಶನ ವಿಜಯ' ಪ್ರಸಂಗ ಕರ್ತ ಮತ್ತು ಭಾಗವತ ಮಧುಕುಮಾರ್ ಬೋಳೂರು ಅವರಿಗೆ ಸಭೆಯಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು.


ಹಿಮ್ಮೇಳದಲ್ಲಿ ದೇವಿಪ್ರಸಾದ್ ಆಳ್ವ ತಲಪಾಡಿ ಭಾಗವತರಾಗಿ, ದೇಲಂತಮಜಲು ಸುಬ್ರಹ್ಮಣ್ಯ ಭಟ್ ಮತ್ತು ಪ್ರಶಾಂತ ಶೆಟ್ಟಿ ವಗೆನಾಡು ಚೆಂಡೆ ಮದ್ದಳೆಗಳಲ್ಲಿ ಸಹಕರಿಸಿದರು. ಪ್ರೊ|ಭಾಸ್ಕರ ರೈ ಕುಕ್ಕುವಳ್ಳಿ(ಮಹಾವಿಷ್ಣು), ಜಯಪ್ರಕಾಶ ಶೆಟ್ಟಿ ಪೆರ್ಮುದೆ (ಲಕ್ಷ್ಮಿ), ದಿನೇಶ್ ಶೆಟ್ಟಿ ಕಾವಳಕಟ್ಟೆ (ಸುದರ್ಶನ), ಸದಾಶಿವ ಆಳ್ವ ತಲಪಾಡಿ (ಶತ್ರುಪ್ರಸೂದನ)  ಮತ್ತು ಪ್ರಜ್ವಲ್ ಕುಮಾರ್ ಶೆಟ್ಟಿ  ಗುರುವಾಯನಕೆರೆ (ದೇವೇಂದ್ರ) ಅರ್ಥಧಾರಿಗಳಾಗಿ ಭಾಗವಹಿಸಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top