ಅದೃಶ್ಯ ಶಕ್ತಿಗಳೊಂದಿಗೆ ಮೋಹನಣ್ಣನ ಭೇಟಿಯ ಕತೆ - ಭಾಗ 1

Upayuktha
0

ಗುಳಿಗನ ಸೂಟೆ ಮತ್ತು ಕತ್ತಲ ಹಾದಿಯ ಕೌತುಕ



ಜೆಮಿನಿ ಎಐ ಚಿತ್ರ


(ಓದುಗರಲ್ಲಿ ಮನವಿ: ಈ ಲೇಖನದಲ್ಲಿ ಬರೆದ ಎಲ್ಲಾ ವಿವರಗಳೂ ನನ್ನ ಸ್ವಂತ ಅನುಭವದವುಗಳು. ಇದರಲ್ಲಿ ನಾನು ಭೂತ ಅಥವಾ ದೈವಗಳ ಬಗ್ಗೆ ಬರೆದಿದ್ದರೆ, ಅದು ಆ ಸಂದರ್ಭದ ಕಥಾನಕಕ್ಕೆ ಹೊಂದಿ ಬರೆದುದೇ ಹೊರತು ಯಾವುದೇ ದೈವಗಳನ್ನಾಗಲಿ, ನಂಬಿಕೆಗಳನ್ನಾಗಲಿ ತುಚ್ಛೀಕರಿಸುವ ಉದ್ದೇಶದಿಂದಲ್ಲ. ಇದೇ ಭಾವನೆಯಿಂದ ಈ ಲೇಖನವನ್ನು ಹಾಗೂ ಮುಂದೆ ಬರುವ ಭಾಗಗಳನ್ನು ಓದಬೇಕಾಗಿ ವಿನಂತಿ.


ಈ ಲೇಖನಗಳನ್ನು 2018-19ರ ಆದಿ ಭಾಗದಲ್ಲಿ ನಾನು ಫೇಸ್‌ಬುಕ್‌ನಲ್ಲಿ ಬರೆದಿದ್ದೆ. ಅದೇ ಲೇಖನಗಳನ್ನು ಇಂದು ಪುನಃ ಸರಿಪಡಿಸಿ ನಿಮ್ಮ ಮುಂದಿಡುತ್ತಿದ್ದೇನೆ. ನಿಮ್ಮ ಸಲಹೆ-ಅಭಿಪ್ರಾಯಗಳೇ ನನ್ನ ಬರಹಗಳಿಗೆ ಸ್ಪೂರ್ತಿ. ಹಾಗಾಗಿ ಯಾವುದೇ ಜಿಪುಣತೆ ಮಾಡದೆ ಧಾರಾಳವಾಗಿ ನಿಮ್ಮ ಅನಿಸಿಕೆಗಳನ್ನು ತಿಳಿಸಿ.)


***


ಸ್ವಾಮೀ, ಈ ಬರೆಯೋದು ಇದೆಯಲ್ಲ, ಅದೂ ಒಂದು ರೀತಿಯ ಚಟವೇ! ಶರಾಬು ಕುಡಿಯುವವನಿಗೆ ಅದಿಲ್ಲದೆ ಹೇಗೆ ಇರಲಾಗುವುದಿಲ್ಲವೋ, ಹಾಗೆಯೇ ಬರೆಯುವ ಹುಚ್ಚಿಗೆ ಬಿದ್ದವನಿಗೆ ಬರೆಯದಿದ್ದರೆ ಏನೋ ಕಳೆದುಕೊಂಡ ಭಾವ. ಹಾಗೆಂದು ನಾನು ಬರೆದು ಕಡಿದು ಗುಡ್ಡೆ ಹಾಕುವುದಾಗಲಿ ಅಥವಾ ಸಮಾಜೋದ್ಧಾರ ಮಾಡುವುದಾಗಲಿ ಏನೂ ಇಲ್ಲ ಬಿಡಿ. ಆದರೂ ಇದೊಂದು ತೆವಲು! ಇಲ್ಲೇನೋ ಬರೆದು ಒಂದಿಷ್ಟು ಕೈಚಪ್ಪಾಳೆ ಬಿದ್ದಾಗ ರಾಜಸಿಂಹಾಸನದಲ್ಲಿ ಕುಳಿತ ಅನುಭವ! ಆ ಅನುಭವದ ಅಮಲಿನಲ್ಲಿ ಇನ್ನಷ್ಟು ಬರೆಯುವ ಹುಚ್ಚು. "ಅಂತೂ ಈ ಮುದುಕನ ಸಹವಾಸವೇ ಬೇಡ" ಎಂದು ನೀವೆಲ್ಲರೂ ಕೈಬಿಡುವವರೆಗೂ ಈ ಹುಚ್ಚನ್ನು ಮುಂದುವರಿಸುವ ನಿರ್ಧಾರ ಮಾಡಿದ್ದೇನೆ.


ಚಿಕ್ಕಂದಿನಲ್ಲಿ ನಮ್ಮ ಮನೆಯ ಮಕ್ಕಳ ಪೈಕಿ ನಾನು ಸ್ವಲ್ಪ ತುಂಟ ಎಂದೇ ಕರೆಸಿಕೊಂಡವ (ನಾನು ಅಂದೂ-ಇಂದೂ ಸಂಪೂರ್ಣ ಸಭ್ಯನೇ ಸ್ವಾಮಿ, ಏನು ಮಾಡುವುದು ಹೇಳಿ? "ಕುಚ್ ತೋ ಲೋಗ್ ಕಹೇಂಗೇ, ಲೋಗೋಂ ಕಾ ಕಾಮ್ ಹೈ ಕೆಹನಾ..." ಎಂದು ಮುಂದುವರಿಯುವವ ನಾನು). ಯಾವ ಕೆಲಸ ಹೇಳಿದರೂ ಎದೆಯುಬ್ಬಿಸಿ "ನಾನು ಮಾಡುತ್ತೇನೆ" ಎಂದು ಮೊದಲು ಹೋಗಿ ನಿಲ್ಲುತ್ತಿದ್ದವನು ನಾನೇ. ಎಲ್ಲಾದರೂ ಸೋತರೂ "ನಾನು ಸೋಲಲಿಲ್ಲ" ಎಂದು ವಾದ ಮಾಡುವುದರಲ್ಲಿಯೂ ಎಂದೂ ಹಿಂದೆ ಬಿದ್ದವನಲ್ಲ. 


ನಮ್ಮ ಬಾಲ್ಯದಲ್ಲಿ ನನ್ನ ತಂಗಿಯಂದಿರಿಗೆ ಭೂತ, ಪ್ರೇತ, ಕುಲೆ, ಗುಮ್ಮ ಅಂದಾಕ್ಷಣ ತುಂಬಾ ಹೆದರಿಕೆ. ನಾನು ಮತ್ತು ನನ್ನ ತಮ್ಮ (ಇವನು ನನ್ನಷ್ಟು ದೊಡ್ಡ ಉಸ್ತಾದ್ ಅಲ್ಲದಿದ್ದರೂ ನನಗೆ ಸವಾಲು ಒಡ್ಡಲು ಯತ್ನಿಸುವಷ್ಟು ಬೆಳೆದಿದ್ದ), ಅಪ್ಪ ಮನೆಯಲ್ಲಿ ಇಲ್ಲದಿದ್ದರೆ ತಂಗಿಯರನ್ನು ಹೆದರಿಸಲು ಯಾವುದಾದರೂ ಕಥೆ ಕಟ್ಟಿ ಹೇಳುವ ಅಭ್ಯಾಸ ಇಟ್ಟುಕೊಂಡಿದ್ದೆವು. ಆದರೆ, ಮುಂದೊಂದು ದಿನ ಆ ಕಥೆಗಳಂತೆಯೇ ನಿಜ ಜೀವನದಲ್ಲೂ ಘಟನೆಗಳು ನಡೆದಾಗ ಹೆದರಿಕೊಳ್ಳಲು ನಾವು ಹೆಣೆದ ಕಥೆಗಳೇ ಕಾರಣವಾಗಿದ್ದು ವಿಪರ್ಯಾಸ!


ನನಗೆ ನೆನಪಿರುವ ಘಟನೆಗಳಲ್ಲಿ ಮೊದಲನೆಯದರಿಂದಲೇ ಶುರು ಮಾಡುತ್ತೇನೆ:


ನನ್ನ ದೊಡ್ಡ ಸೋದರಮಾವನಿಗೆ ಕುಳಮರ್ವದಿಂದ ವಿವಾಹವಾಗಿತ್ತು. ಕಾಸರಗೋಡಿನ ಪ್ರಸಿದ್ಧ ಹಲ್ಲಿನ ಡಾಕ್ಟರ್ ಗಣಪತಿ ಭಟ್ಟರ ಅಕ್ಕನೇ ನನ್ನ ಅತ್ತೆ. ನಾನು ಹೈಸ್ಕೂಲ್ ತರಗತಿಗೆ ಹೋಗುತ್ತಿದ್ದಾಗ ಮಾವನ ಮದುವೆಯಾಗಿತ್ತು. ವಿವಾಹವಾದ ಸ್ವಲ್ಪ ದಿನಗಳಲ್ಲೇ ಕುಳಮರ್ವದಲ್ಲಿ ಒಂದು ರಾತ್ರಿ ಕಾರ್ಯಕ್ರಮವಿತ್ತು. ಮನೆಯಿಂದ ಯಾರಾದರೂ ಒಬ್ಬರು ಹೋಗಲೇಬೇಕಾಗಿದ್ದರಿಂದ, ನನ್ನನ್ನು ಮತ್ತೊಬ್ಬ ಸೋದರಮಾವನ ಜೊತೆ ಕಳುಹಿಸಲು ಅಪ್ಪ ತೀರ್ಮಾನಿಸಿದರು. 


ಆ ದಿನಗಳಲ್ಲಿ ನಾವು ಮಾಯಿಪ್ಪಾಡಿಯಿಂದ ಶಾಲೆಗೆ ನಡೆದುಕೊಂಡೇ ಹೋಗುತ್ತಿದ್ದೆವು. ಸೀತಾಂಗೋಳಿಗೆ ೨ ಮೈಲು; ಅಲ್ಲಿ ಬಸ್ ಸಿಗದಿದ್ದರೆ ಬದಿಯಡ್ಕದ ಕಡೆಗೆ ಮತ್ತೆ ೫ ಮೈಲು ನಡಿಗೆ! ಬೆಳಿಗ್ಗೆ ೭:೩೦ಕ್ಕೆ ಒಂದು ಬಸ್ ಇತ್ತು, ಅದು ತಪ್ಪಿದರೆ ನಡೆದೇ ಹೋಗಬೇಕಿತ್ತು. ಹಾಗಾಗಿ ನಡೆಯುವುದು ನನಗಷ್ಟೇ ಅಲ್ಲ, ಆ ಕಾಲದ ಹೆಚ್ಚಿನವರಿಗೂ ಅಭ್ಯಾಸವಾಗಿತ್ತು.


ಕುಳಮರ್ವಕ್ಕೆ ನಮ್ಮ ಮನೆಯಿಂದ ಹೆಚ್ಚು-ಕಡಿಮೆ ಹತ್ತು ಮೈಲು ದೂರ. "ಎರಡು ಗುಡ್ಡ ಹತ್ತಿ, ಎರಡು ಗುಡ್ಡ ಇಳಿದು ಸ್ವಲ್ಪ ನಡೆದರೆ ಕುಳಮರ್ವ ತಲುಪಬಹುದು" ಎನ್ನುತ್ತಿದ್ದರು ಮಾವ. ಆ ದಿನ ನಾನು ಶಾಲೆಯಿಂದ ಸ್ವಲ್ಪ ಬೇಗನೇ ಬಂದಿದ್ದೆ. ಬಂದ ಕೂಡಲೇ ಸಂಭ್ರಮದಿಂದ ಪೆಟ್ಟಿಗೆಯಲ್ಲಿದ್ದ ಹೊಸ ಅಂಗಿ-ಚಡ್ಡಿ ಹಾಕಿ ಹೊರಡಲು ತಯಾರಾದೆ. ನಮ್ಮ ಪಯಣ ಸಂಜೆ ೫:೩೦ಕ್ಕೆ ಶುರುವಾಯಿತು. "ಇಲ್ಲಿ ಒಳದಾರಿಯಲ್ಲಿ ಹೋದರೆ ತುಂಬಾ ಹತ್ತಿರ" ಎಂದು ಮಾವ ಕರೆದುಕೊಂಡು ಹೋದ ಹಾದಿಯಲ್ಲೇ ಹೆಜ್ಜೆ ಹಾಕಿದೆ. 


ಅಂತೂ ಸ್ವಲ್ಪ ಕಲ್ಲು ಡಂಖಿಸಿಕೊಂಡು, ಮುಳ್ಳು ಚುಚ್ಚಿಸಿಕೊಂಡು ಕುಳಮರ್ವ ತಲುಪಿದೆವು. ಅಲ್ಲಿಯ ಕಾರ್ಯಕ್ರಮಗಳೆಲ್ಲ ಮುಗಿದು, ಅವರ ಆತಿಥ್ಯವನ್ನೂ ಸ್ವೀಕರಿಸಿ ಹೊರಡುವಾಗ ರಾತ್ರಿ ಗಂಟೆ ಹನ್ನೊಂದಾಗಿತ್ತು. ನಾವು ಹೊರಡುವಾಗ ಕುಳಮರ್ವ ಅಜ್ಜ, "ರಾತ್ರಿಯಾಯಿತು, ಪ್ರೇತ-ಪಿಶಾಚಿಗಳು ಸುಳಿದಾಡುವ ಸಮಯ. ನಾಳೆ ಬೆಳಿಗ್ಗೆ ಹೋಗಿ" ಎಂದರು. ಆದರೆ ನನಗೆ ನಾಳೆ ಶಾಲೆಯಿದ್ದ ಕಾರಣ "ಹೋಗಲೇಬೇಕು" ಎಂದು ಮಾವ ನನ್ನ ನೆಪ ಹೇಳಿ ಹೊರಟೇ ಬಿಟ್ಟರು. ನಾನು ಹಿಂದಿನಿಂದ ನಿದ್ದೆಗಣ್ಣಿನಲ್ಲೇ ಹೆಜ್ಜೆ ಹಾಕುತ್ತಿದ್ದೆ.


ಇಂದು ನಿಮಗೆ ಆ ದಿನಗಳನ್ನು ಕಲ್ಪಿಸಿಕೊಳ್ಳುವುದೂ ಕಷ್ಟವಾಗಬಹುದು. ಎರಡು ಬ್ಯಾಟರಿಯ ಎವರೆಡಿ ಟಾರ್ಚ್ ಮಿಣಿ-ಮಿಣಿ ಉರಿದರೆ ಹೆಚ್ಚು, ಇಲ್ಲವಾದರೆ ನಕ್ಷತ್ರಗಳ ಬೆಳಕೇ ಗತಿ! ಅಥವಾ ಮಿಣುಕುಹುಳುಗಳ ಬೆಳಕು. ಕತ್ತಲ ರಾತ್ರಿ, ಜನಸಂಚಾರವಿಲ್ಲದಿದ್ದರೂ ಬಂಡೆಗಳ ಮೇಲೆ ಪಾದಾಚಾರಿಗಳು ನಡೆದಾಡಿ ಸವೆಸಿದ ದಾರಿಯನ್ನೇ ಹಿಡಿದು ಸಾಗಬೇಕಿತ್ತು. 


ಕುಳಮರ್ವದಿಂದ ಹೊರಟು ಬೇಳ ದಾಟಿ, ದರ್ಭೆತ್ತಡ್ಕ ಕಾನ್ವೆಂಟ್ ಹಿಂಬದಿಯಲ್ಲಿ ನಡೆದು ಸ್ವಲ್ಪ ಮುಂದೆ ಹೋಗುತ್ತಿದ್ದಂತೆ ನನಗೆ ಹಿಂಬದಿಯಿಂದ ಬೆಳಕು ಬಿದ್ದಂತೆ ಅನ್ನಿಸಿತು. ಮಾವನ ಬಳಿ ಹೇಳಿದೆ. ಅವರು ಏನೂ ಮಾತನಾಡದೆ "ಬೇಗ ಬಾ" ಎಂದು ಸನ್ನೆ ಮಾಡಿದರು. ಪುನಃ ಎರಡು-ಮೂರು ಸಲ ಮೈಮೇಲೆ ಬೆಳಕು ಬಿದ್ದ ಅನುಭವವಾಯಿತು. ಮಾವ ನಿಲ್ಲದೆ ನಡೆಯುತ್ತಲೇ ಇದ್ದರು. ಮುಂದೆ ಬಂದು ಚೌಕ್ಕಾರು ಗುಡ್ಡ ತಲುಪುತ್ತಿದ್ದಂತೆಯೇ, ಅದರ ತುತ್ತತುದಿಯಲ್ಲಿ ನಿಂತು, "ನಿನಗೆ ಹೆದರಿಕೆ ಇದೆಯಾ?" ಎಂದು ಕೇಳಿದರು. 


"ಇಲ್ಲ ಮಾವ, ನೀವಿರುವಾಗ ನನಗೇಕೆ ಹೆದರಿಕೆ?" ಎಂದೆ.


"ನಿನಗೆ ಹೆದರಿಕೆಯಾದರೆ ಜನಿವಾರದ ಬ್ರಹ್ಮಗಂಟು ಹಿಡಿದು ಗಾಯತ್ರಿ ಜಪ ಮಾಡು. ನಾನೀಗ ನಿನಗೊಂದು ವಿಶೇಷ ತೋರಿಸುತ್ತೇನೆ" ಎಂದರು. 


ಈಗ ಸೀತಾಂಗೋಳಿ ಪೆಟ್ರೋಲ್ ಬಂಕ್ ಇದೆಯಲ್ಲ, ಅದರ ಹಿಂಭಾಗದ ಗುಡ್ಡದ ಕಡೆ ತೋರಿಸಿದರು. ಅಲ್ಲಿ ಮೂರು-ನಾಲ್ಕು ಸೂಟೆಗಳು (ಬೆಳಕಿನ ಪಂಜುಗಳು) ಮೇಲೆ-ಕೆಳಗೆ ಕುಣಿಯುತ್ತಿದ್ದವು. "ಅದು ಯಾರು ಮಾವ ಇಷ್ಟು ಹೊತ್ತಿನಲ್ಲಿ ಸೂಟೆ ಹಿಡಿದು ಕುಣಿಯುವುದು?" ಎಂದು ಕೇಳಿದೆ. 


"ಅದು ಗುಳಿಗನ ಸೂಟೆ. ಹೆದರಿದರೆ ಹೆದರಿಸುತ್ತದೆ, ಇಲ್ಲದಿದ್ದರೆ ಸುಮ್ಮನಾಗುತ್ತದೆ" ಎಂದರು. 


ಒಳಗಿನಿಂದ ಹೆದರಿಕೆಯಾದರೂ ಹೊರಗೆ ತೋರಿಸಿಕೊಳ್ಳದೆ, "ಅದನ್ನು ಸ್ವಲ್ಪ ಹೊತ್ತು ನೋಡಬಹುದಾ ಮಾವ?" ಎಂದಾಗ, "ಧೈರ್ಯವಿದ್ದರೆ ನೋಡು. ನೋಡಿದ ಮೇಲೆ ಹೆದರಬಾರದು ಅಷ್ಟೇ" ಎಂದರು. ಆಮೇಲೆ, "ಇವುಗಳಿಗೆಲ್ಲ ಒಂದು ಗಡಿ ಅಂತ ಇರುತ್ತದೆ, ಆ ಗಡಿ ದಾಟಿ ಇವು ಬರುವುದಿಲ್ಲ. ಅದಕ್ಕಾಗಿಯೇ ನಾನು ಆ ಗಡಿ ದಾಟಲಿ ಎಂದು ನಿನ್ನೊಡನೆ ಮಾತನಾಡದೆ ಕರೆದುಕೊಂಡು ಬಂದಿದ್ದು. ಈಗ ಗಡಿ ದಾಟಿದ್ದೇವೆ, ಇನ್ನು ಭಯ ಬೇಡ. ನೋಡು, ಅದನ್ನು ಸ್ವಲ್ಪ ಆಟ ಆಡಿಸೋಣ" ಎಂದರು. ನಾನು ತಲೆ ಅಲ್ಲಾಡಿಸಿದ್ದು ಅವರಿಗೆ ಕಾಣಿಸಿತೋ ಇಲ್ಲವೋ ತಿಳಿಯದು.


ಕೂಡಲೇ ಮಾವ ಗಟ್ಟಿಯಾದ ಧ್ವನಿಯಲ್ಲಿ, "ನಿಮ್ಮ ಆಟವೆಲ್ಲ ಆಯಿತಾ? ನಾವೇನು ಹೆದರಿಸಿದರೆ ಹೆದರುವ ಮಕ್ಕಳು ಅಂದುಕೊಂಡಿದ್ದೀರಾ? ನಾವು ಮೂರು ಹೊತ್ತು ಗಾಯತ್ರಿ ಜಪ ಮಾಡುವ ಬ್ರಾಹ್ಮಣರು, ನಮ್ಮ ಬಳಿ ನಿಮ್ಮ ಆಟ ನಡೆಯುವುದಿಲ್ಲ!" ಎಂದರು. ಆಮೇಲೆ, "ಏನಾದರೂ ನೃತ್ಯ ಕಾರ್ಯಕ್ರಮವಿದ್ದರೆ ಮಾಡಿಬಿಡಿ, ಅಳಿಯ ಬಂದಿದ್ದಾನೆ, ಅವನೂ ನೋಡಲಿ" ಎಂದರು. 


ನೋಡ-ನೋಡುತ್ತಿದ್ದಂತೆಯೇ ಅಲ್ಲಿ ನಾಲ್ಕರ ಬದಲು ಹತ್ತು-ವಿಪ್ಪತ್ತು ಸೂಟೆಗಳು ಕುಣಿಯತೊಡಗಿದವು! ಧೈರ್ಯಕ್ಕಾಗಿ ಮಾವನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡೆ. "ಹೆದರಿಕೆ ಆಗುತ್ತಿದೆಯಾ?" ಎಂದು ಕೇಳಿದಾಗ "ಇಲ್ಲ" ಎಂದೆ. 


ಅವರು ಧ್ವನಿ ಏರಿಸಿ, "ಏ ಗುಳಿಗನ ಸೂಟೆಗಳೇ, ಧೈರ್ಯವಿದ್ದರೆ ಇಲ್ಲಿಗೆ ಬನ್ನಿ; ಇಲ್ಲವಾದರೆ ನಿಮ್ಮ ನೃತ್ಯ ಬೇಗ ಮುಗಿಸಿ, ನಮಗೆ ತಡವಾಗುತ್ತಿದೆ" ಎಂದರು. ಅಷ್ಟರಲ್ಲಿ ಇಡೀ ಗುಡ್ಡಕ್ಕೇ ಬೆಂಕಿ ಹಿಡಿದಿದೆಯೇನೋ ಎನ್ನುವಂತೆ ಸಾವಿರಾರು ಸೂಟೆಗಳು ಕುಣಿಯತೊಡಗಿದವು! ಅವುಗಳ ಕುಣಿತ ಜೋರಾಗುತ್ತಿದ್ದಂತೆ ನನ್ನ ಧೈರ್ಯ ಕುಸಿಯಿತು, ಗಂಟಲ ಪಸೆ ಆರಿಹೋಯಿತು. 


ಮಾವ ಈಗ ನನ್ನ ಬೆನ್ನಿಗೆ ತಟ್ಟುತ್ತ ಧೈರ್ಯ ತುಂಬುತ್ತಿದ್ದರು. ಅವರು ಆ ದೃಶ್ಯವನ್ನು ಆಸ್ವಾದಿಸುತ್ತಿದ್ದರು, ನನ್ನ ಬಳಿಯೂ ಆಸ್ವಾದಿಸಲು ಹೇಳುತ್ತಿದ್ದರು. ಹೆದರಿಕೆಯಾದರೆ ಗಾಯತ್ರಿ ಮಂತ್ರ ಹೇಳು ಎಂದು ಆಗಾಗ ಎಚ್ಚರಿಸುತ್ತಿದ್ದರು. ಅಲ್ಲಿ ಬೆಂಕಿಯ ಜ್ವಾಲೆಗಳು ಗಗನದೆತ್ತರಕ್ಕೆ ಚಿಮ್ಮುತ್ತಿವೆಯೇನೋ ಎನ್ನುವಂತೆ ಜ್ವಲಿಸತೊಡಗಿದಾಗ, ಆ ಕುಳಿರ್ಗಾಳಿಯ ನಡುವೆಯೂ ನಾನು ಬೆವತುಹೋಗಿದ್ದೆ. 


ಮಾವ, "ಬಹುಶಃ ಇದು ಇವರ ಕೊನೆಯ ನೃತ್ಯ ಇರಬೇಕು" ಎಂದರು. ಅವರು ಹೇಳಿ ಮುಗಿಸುತ್ತಿದ್ದಂತೆಯೇ ಆ ಬೆಂಕಿಯ ಜ್ವಾಲೆಗಳು ಮೆಲ್ಲನೆ ಕೆಳಕ್ಕಿಳಿದು, ನೆಲಕ್ಕೆ ಸಮಾನವಾಗಿ ತಲುಪಿ, ನೆಲದೊಳಗೆ ಇಳಿದಂತೆ ಕಂಡವು! ಕೆಲವೇ ಕ್ಷಣಗಳಲ್ಲಿ ಅಲ್ಲಿ ಹಾಗೊಂದು ಘಟನೆ ನಡೆದಿದ್ದಕ್ಕೇ ಸಾಕ್ಷಿಯಿಲ್ಲದಂತೆ ಸಂಪೂರ್ಣ ಕತ್ತಲು ಆವರಿಸಿತು!


"ಇನ್ನು ಹೋಗುವ" ಎಂದು ಮಾವ ಹೇಳಿದಾಗ ನಡುಗುವ ಕೈ-ಕಾಲುಗಳೊಂದಿಗೆ ಹೇಗೆ ಹೆಜ್ಜೆ ಹಾಕಿದೆನೋ ತಿಳಿಯದು. ಮನೆ ತಲುಪಿದ ತಕ್ಷಣ ಗಟಗಟನೆ ಒಂದು ಚೆಂಬು ನೀರು ಕುಡಿದೆ. ಯಾರು ಏನು ಹೇಳಿದರೂ, ಕೇಳಿದರೂ ಉತ್ತರಿಸದೆ ಮುಸುಕು ಹಾಕಿ ಮಲಗಿಬಿಟ್ಟೆ. ಬೆಳಿಗ್ಗೆ ಜ್ವರ ಬರುವಂತಾಗಿದ್ದರಿಂದ ಏಳದೆ ಸುಮ್ಮನೆ ಮಲಗಿದ್ದೆ. ಮಾವನಿಂದ ಕಥೆ ಕೇಳಿದ್ದ ಅಪ್ಪ, "ಇವತ್ತು ಶಾಲೆಗೆ ಹೋಗುವುದು ಬೇಡ" ಎಂದರು. ಶಾಲೆಗೆ ಕಳುಹಿಸುವುದಿಲ್ಲ ಎಂದು ಧೈರ್ಯ ಬಂದಮೇಲೆಯೇ ಎದ್ದು ಹಾರಾಡತೊಡಗಿದ್ದೆ! ಆ ಘಟನೆಯ ನಂತರ ಮಕ್ಕಳ ನಡುವೆ ನಾನೊಬ್ಬ ‘ಧೀರ’ ನಾಯಕನಾಗಿದ್ದೆ.


ಆದರೆ, ಕೆಲವೇ ದಿನಗಳಲ್ಲಿ ನಮ್ಮ ವಿಜ್ಞಾನ ಶಿಕ್ಷಕರಾಗಿದ್ದ ಶ್ರೀ ಕೃಷ್ಣ ಭಟ್ಟರು ಮೀಥೇನ್ ಅನಿಲ (CH4) ಭೂಮಿಯಿಂದ ಹೊರಬಂದು, ವಾತಾವರಣದೊಂದಿಗೆ ಸೇರಿ ಬೆಂಕಿಯಾಗಿ ಪರಿವರ್ತನೆ ಹೊಂದುವುದು ಹೇಗೆ ಎಂಬುದನ್ನು ವಿವರವಾಗಿ ತಿಳಿಸಿಕೊಟ್ಟರು. ಅದರೊಂದಿಗೆ ‘ಗುಳಿಗನ ಸೂಟೆ’ಯ ರಹಸ್ಯ ಬಯಲಾಗಿತ್ತು!


ವಿಜ್ಞಾನದ ವಿವರಣೆ:

• ಮಾರ್ಷ್ ಗ್ಯಾಸ್ (Marsh Gas): ಸಸ್ಯಗಳು, ಎಲೆಗಳು ಮತ್ತು ಜೈವಿಕ ತ್ಯಾಜ್ಯಗಳು ತೇವಾಂಶವಿರುವ ಜಾಗದಲ್ಲಿ ಕೊಳೆಯುವಾಗ ಬ್ಯಾಕ್ಟೀರಿಯಾಗಳಿಂದ ಮೀಥೇನ್ ಅನಿಲ ಉತ್ಪತ್ತಿಯಾಗುತ್ತದೆ. ಇದನ್ನು "ಮಾರ್ಷ್ ಗ್ಯಾಸ್" ಎನ್ನುತ್ತಾರೆ.

• ಸ್ವಯಂ ದಹನ (Self-combustion): ಮೀಥೇನ್ ಜೊತೆಗೆ ಸಾವಯವ ವಸ್ತುಗಳು ಕೊಳೆಯುವಾಗ ಸಣ್ಣ ಪ್ರಮಾಣದಲ್ಲಿ ಫಾಸ್ಫೈನ್ (PH3) ಮತ್ತು ಡಿಫಾಸ್ಫೇನ್ (P2H4) ಎಂಬ ಅನಿಲಗಳೂ ಬಿಡುಗಡೆಯಾಗುತ್ತವೆ. ಡಿಫಾಸ್ಫೇನ್ ಗಾಳಿಯ ಸಂಪರ್ಕಕ್ಕೆ ಬಂದ ತಕ್ಷಣ ತಾನಾಗಿಯೇ ಹೊತ್ತಿಕೊಳ್ಳುವ ಗುಣ ಹೊಂದಿದೆ.

• ಸೂಟೆಯಂತೆ ಕಾಣಲು ಕಾರಣ: ಡಿಫಾಸ್ಫೇನ್ ಗಾಳಿಯಲ್ಲಿ ಹೊತ್ತಿಕೊಂಡಾಗ, ಅದು ತನ್ನ ಜೊತೆಗಿರುವ ಮೀಥೇನ್ ಅನಿಲವನ್ನು ಉರಿಸುತ್ತದೆ. ಇದರಿಂದಾಗಿ ರಾತ್ರಿ ವೇಳೆ ಗುಡ್ಡಗಳಲ್ಲಿ ಸಣ್ಣ ಬೆಂಕಿಯ ಕಿಡಿಗಳು ಅಥವಾ ಸೂಟೆಗಳು ಹೊತ್ತಿ ಉರಿಯುತ್ತಿರುವಂತೆ ಕಾಣಿಸುತ್ತದೆ. 

• ಇದನ್ನು ಹಿಂದಿನ ಕಾಲದಲ್ಲಿ "ಗುಳಿಗನ ಸೂಟೆ" ಅಥವಾ "ಕೊಳ್ಳಿದೇವ್ವ" (Will-o'-the-wisp) ಎಂದು ಕರೆಯುತ್ತಿದ್ದರು.


ವಿಜ್ಞಾನದಲ್ಲಿ ಇದು ಸ್ವಾಭಾವಿಕವಾಗಿ ನಡೆಯುವ ಒಂದು ರಾಸಾಯನಿಕ ಕ್ರಿಯೆಯಾಗಿದೆ. 


ಈಗ ಅಂದಿನ ಗುಡ್ಡ-ಕಾಡುಗಳೂ ಇಲ್ಲ, ಕೊಳೆಯುವ ಸಸ್ಯದ ಭಾಗಗಳು ಹಾಗೂ ಜೈವಿಕ ವಸ್ತುಗಳೂ ಇಲ್ಲ. ಆದ್ದರಿಂದ ಇಂದಿನ ಮಕ್ಕಳಿಗೆ ಆ 'ಗುಳಿಗನ ಸೂಟೆ'ಯನ್ನು ನೋಡುವ ಸೌಭಾಗ್ಯ ಸಿಗುವ ಸಂದರ್ಭವೇ ಇಲ್ಲ ಎನ್ನಿಸುತ್ತದೆ.


ಆದರೆ, ಆ ಸ್ಥಿತಿಯಲ್ಲಿ ನಿಮ್ಮನ್ನೊಮ್ಮೆ ಊಹಿಸಿಕೊಳ್ಳಿ: ಸುತ್ತಲೂ ಕಡುಕತ್ತಲು, ಜೊತೆಗೆ ಅದು ‘ಗುಳಿಗನ ಸೂಟೆ’ ಎಂದೇ ನಂಬಿದ ಮಾವ, ಮುಖಕ್ಕೆ ಹಿಡಿದರೆ ಮಾತ್ರ ಬೆಳಕು ಕೊಡುವ ಟಾರ್ಚ್, ಬರಿಗಾಲು, ಹತ್ತಿರದಲ್ಲಿ ಮನೆಗಳಿಲ್ಲ... ಇಷ್ಟೇ ಅಲ್ಲ, ಸ್ವಲ್ಪ ಮುಂದೆ ಬಂದರೆ ಆ ಕಾಲಕ್ಕೆ ಚಿರತೆಗಳಿದ್ದ ಅರಮನೆ ಕಾಡು! 


ಅಂದು ನಾವು ಮಕ್ಕಳ ಪೈಕಿ ನಾನು ಧೈರ್ಯವಂತ ಎಂದು ಕರೆಸಿಕೊಂಡಿದ್ದಕ್ಕೆ ಚಡ್ಡಿಯಲ್ಲಿ ಉಚ್ಚೆ ಮಾಡಿಕೊಳ್ಳದೆ ಮನೆಗೆ ತಲುಪಿದ್ದೇ ಸಾಕ್ಷಿ, ಏನಂತೀರಾ?


***

ಅದೃಶ್ಯ ಶಕ್ತಿಗಳೊಂದಿಗಿನ ತನ್ನ ಅನುಭವವನ್ನು ಹಂಚಿಕೊಂಡವರು: 

- ಎಡನಾಡು ಕೃಷ್ಣ ಮೋಹನ ಭಟ್ಟ

85475 22364



إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top