ಸಂತ ಫಿಲೋಮಿನಾ ಪ.ಪೂ.ಕಾಲೇಜು: 'ಫಿಲೋ ಪ್ರತಿಭಾ- 2026' ಪ್ರಶಸ್ತಿ ವಿತರಣೆ ಮತ್ತು ಸಮಾರೋಪ ಸಮಾರಂಭ

Upayuktha
0

 


ಪುತ್ತೂರು : ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಪ್ರೌಢ ಶಾಲಾ ವಿದ್ಯಾರ್ಥಿಗಳ ಪ್ರತಿಭೆಯನ್ನು ಅನಾವರಣಗೊಳಿಸಲು ಆಯೋಜಿಸಲಾದ ಜಿಲ್ಲಾ ಮಟ್ಟದ 'ಫಿಲೋ ಪ್ರತಿಭಾ - 2026' ಕಾರ್ಯಕ್ರಮದ ಸಮಾರೋಪ ಸಮಾರಂಭವು ಆ. 6 ರಂದು ಕಾಲೇಜಿನ ಬೆಳ್ಳಿ ಹಬ್ಬ ಸಭಾಂಗಣದಲ್ಲಿ ನಡೆಯಿತು. 

ಮುಖ್ಯ ಅತಿಥಿಗಳಾಗಿ ಪುತ್ತೂರಿನ ಯಕ್ಷಗಾನ ಕಲಾವಿದೆ ಶುಭಾ ಅಡಿಗ ಮಾತನಾಡಿ, ಫಿಲೋ ಪ್ರತಿಭಾ 2026 ನ್ನು ಆಯೋಜಿಸಿದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಮತ್ತು ಆಯೋಜಕರನ್ನು ಅಭಿನಂದಿಸಿ, ಪ್ರೌಢ ಶಾಲಾ ವಿದ್ಯಾರ್ಥಿಗಳು ಉತ್ಸಾಹದ ಬುಗ್ಗೆಗಳು. ಅವರ ಉತ್ಸಾಹಕ್ಕೆ ಸರಿಯಾದ ವೇದಿಕೆಯು ಅಗತ್ಯವಿದ್ದು, ಅಂತಹ ಒಂದು ಅವಕಾಶ ಈ ಪ್ರತಿಭಾ ವೇದಿಕೆ. ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲಿ ಶ್ರಮಪಟ್ಟು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ಯಿಂದ ತೊಡಗಿಸಿಕೊಂಡರೆ ಮುಂದಿನ ಭವಿಷ್ಯ ಉತ್ತಮವಾಗಿರುತ್ತದೆ. ಜೀವನದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಆತ್ಮವಿಶ್ವಾಸವನ್ನು ಹೆಚ್ಚಿಸಲಿದೆ ಎಂದು ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
        
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ರೆ. ಫಾ. ಅಶೋಕ್ ರಾಯನ್ ಕ್ರಾಸ್ತಾ
ಮಾತನಾಡಿ, ವಿದ್ಯಾರ್ಥಿ ಜೀವನದ ಕಠಿಣ ಪರಿಶ್ರಮ ಜೀವನದಲ್ಲಿ ಯಶಸ್ಸನ್ನು ನೀಡಲಿದೆ.
ಭಾಗವಹಿಸಿದ ಎಲ್ಲಾ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಧನ್ಯವಾದಗಳನ್ನು ತಿಳಿಸಿ, ವಿಜೇತರಿಗೆ ಅಭಿನಂದನೆಗಳನ್ನು ತಿಳಿಸಿದರು. ಮುಂದಿನ ವಿದ್ಯಾಭ್ಯಾಸವನ್ನು ನಿಖರ ಗುರಿಯೊಂದಿಗೆ ಮುಂದುವರಿಸಿ ಎಂದು ಶುಭ ಹಾರೈಸಿದರು.
         
ವೇದಿಕೆಯಲ್ಲಿ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾI ಶ್ರೀ ಪ್ರಕಾಶ್ ಬಿ, ರಕ್ಷಕ- ಶಿಕ್ಷಕ ಸಂಘದ ಉಪಾಧ್ಯಕ್ಷ ಆಂಥೋನಿ ಒಲಿವೇರಾ ಹಾಗೂ 'ಫಿಲೋ ಪ್ರತಿಭಾ-2026' ರ ಸಂಯೋಜಕಿ  ಸುಮಾ ಪಿ. ಆರ್ ಉಪಸ್ಥಿತರಿದ್ದರು.
        
ಈ ಬಾರಿಯ 'ಫಿಲೋ ಪ್ರತಿಭಾ-2026' ಸ್ಪರ್ಧೆಯಲ್ಲಿ ಸಮಗ್ರ ಪ್ರಶಸ್ತಿಯನ್ನು ನರಿಮೊಗರು ಸಾಂದೀಪನಿ ಗ್ರಾಮೀಣ ಆಂಗ್ಲ ಮಾಧ್ಯಮ ಪ್ರೌಢಶಾಲೆ ಪಡೆದುಕೊಂಡಿತು. ಸುಳ್ಯದ ಸ್ನೇಹ ಪ್ರೌಢ ಶಾಲೆ ದ್ವಿತೀಯ ಸ್ಥಾನವನ್ನು ಹಾಗೂ ಪ್ರಗತಿ ವಿದ್ಯಾ ಸಂಸ್ಥೆ ಕಾಣಿಯೂರು ತೃತೀಯ ಸ್ಥಾನವನ್ನು ಪಡೆದುಕೊಂಡಿತು.
        
ದಕ್ಷಿಣ ಕನ್ನಡ ಜಿಲ್ಲೆಯ 37 ಪ್ರೌಢಶಾಲೆಗಳ 750ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ರಸಪ್ರಶ್ನೆ, ಇಂಗ್ಲಿಷ್ ವಿಚಾರ ಸಂಕಿರಣ, ಪೆನ್ಸಿಲ್ ಸ್ಕೆಚ್, ಮಣ್ಣಿನ ಮಾದರಿ ತಯಾರಿ, ವಿಜ್ಞಾನ ಮಾದರಿ ತಯಾರಿ,  ದೇಶ ಭಕ್ತಿ ಗಾಯನ, ಕೊಲಾಜ್ ತಯಾರಿಕೆ, ತ್ಯಾಜ್ಯದಿಂದ ಉಪಯುಕ್ತ ವಸ್ತು ತಯಾರಿ , ಫೇಸ್ ಪೈಂಟಿಂಗ್, ಛದ್ಮ ವೇಷ, ಲಾಂಚಿಂಗ್ ಪ್ರಾಡಕ್ಟ್, ಕನ್ನಡ ಕಂಠ ಪಾಠ, ರಂಗೋಲಿ ಹಾಗೂ ಜಾನಪದ ನೃತ್ಯ  ಹೀಗೆ 14 ವಿವಿಧ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.
        
ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪ್ರೌಢಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು, ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳು, ಕಾಲೇಜಿನ ಬೋಧಕ ಹಾಗೂ ಬೋಧಕೇತರ ವರ್ಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
        
ಉಪನ್ಯಾಸಕರಾದ ಉಷಾ ಎ ಸ್ವಾಗತಿಸಿ, ನಿರೂಪಿಸಿದರು. ಫಿಲೋ ಪ್ರತಿಭಾ 2026ರ  ಸಂಯೋಜಕ ರೋಹಿತ್ ಕುಮಾರ್. ಟಿ ವಂದಿಸಿದರು.

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top