ಹಳ್ಳಿ ಎಂದರೆ ಪ್ರಕೃತಿಯ ಮಡಿಲಲ್ಲಿ ನೆಲೆಸಿರುವ ಸುಂದರ ಜಗತ್ತು. ಹಸಿರು ಹೊಲಗಳು, ತೆಂಗು, ಅಡಿಕೆ ಮತ್ತು ಮಾವಿನ ಮರಗಳು, ತಂಪಾದ ಗಾಳಿ, ಪಕ್ಷಿಗಳ ಚಿಲಿಪಿಲಿ ಹಾಗೂ ಸ್ವಚ್ಛವಾದ ವಾತಾವರಣ ಹಳ್ಳಿಯ ಸೌಂದರ್ಯವನ್ನು ಹೆಚ್ಚಿಸುತ್ತವೆ. ಬೆಳಗಿನ ಜಾವ ಕೋಳಿಯ ಕೂಗು, ದೇವಾಲಯದ ಗಂಟೆಯ ನಾದ ಮತ್ತು ರೈತರು ಹೊಲದ ಕಡೆಗೆ ತೆರಳುವ ದೃಶ್ಯ ಹಳ್ಳಿಯ ಜೀವನದ ವಿಶೇಷತೆಯಾಗಿದೆ. ಹಸಿರಿನಿಂದ ಕೂಡಿರುವ ವಿಶಾಲವಾದ ಗದ್ದೆಗಳು ಮತ್ತು ತೋಟಗಳು.ಪಕ್ಷಿಗಳ ಇಂಪಾದ ನಾದದೊಂದಿಗೆ ಶುರುವಾಗುವ ಮುಂಜಾನೆ.
ಹಳ್ಳಿಯ ಜನರು ಸರಳ ಮತ್ತು ಪ್ರಾಮಾಣಿಕ ಜೀವನವನ್ನು ನಡೆಸುತ್ತಾರೆ. ಅವರು ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಸಹಕಾರದಿಂದ ಬದುಕುತ್ತಾರೆ. ಯಾರಿಗಾದರೂ ಕಷ್ಟ ಬಂದರೆ ಎಲ್ಲರೂ ಸೇರಿ ಸಹಾಯ ಮಾಡುವುದು ಹಳ್ಳಿಯ ಉತ್ತಮ ಸಂಸ್ಕೃತಿಯಾಗಿದೆ. ಹಿರಿಯರಿಗೆ ಗೌರವ ನೀಡುವುದು ಮತ್ತು ಮಕ್ಕಳನ್ನು ಪ್ರೀತಿಯಿಂದ ಬೆಳೆಸುವುದು ಹಳ್ಳಿಯ ಜೀವನದ ಮತ್ತೊಂದು ಉತ್ತಮ ಗುಣವಾಗಿದೆ. ಹಳ್ಳಿಯ ಜನರ ಮುಖ್ಯ ಉದ್ಯೋಗ ಕೃಷಿ. ರೈತರು ಬೆವರು ಸುರಿಸಿ ಬೆಳೆಯುವ ಅಕ್ಕಿ, ತರಕಾರಿ, ಹಣ್ಣು ಮತ್ತು ಇತರ ಬೆಳೆಗಳಿಂದ ನಮ್ಮೆಲ್ಲರ ಆಹಾರದ ಅಗತ್ಯ ಪೂರೈಸಲಾಗುತ್ತದೆ. ಆದ್ದರಿಂದ ರೈತರ ಶ್ರಮಕ್ಕೆ ನಾವು ಸದಾ ಗೌರವ ನೀಡಬೇಕು. ಇದು ನಗರದ ಗದ್ದಲದಿಂದ ದೂರವಿರುವ ನೆಮ್ಮದಿಯ ಬದುಕು.



