ಮಂಗಳೂರು: ಭಾರತ ಸರ್ಕಾರದ ಆಯುಷ್ ಸಚಿವಾಲಯ ಹಾಗೂ ರಾಷ್ಟ್ರೀಯ ಭಾರತೀಯ ವೈದ್ಯಕೀಯ ವ್ಯವಸ್ಥೆಗಳ ಆಯೋಗದ (NCISM) ನಿಯಮಾವಳಿಗಳ ಅಡಿಯಲ್ಲಿ, ಪ್ರಾಚೀನ ಗುರುಕುಲ ಪರಂಪರೆಯನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಮಂಗಳೂರಿನಲ್ಲಿ ‘ಮೈತ್ರೇಯೀ ಆಯುರ್ವೇದ ಗುರುಕುಲ’ವು 7.5 ವರ್ಷಗಳ ಕಡ್ಡಾಯ ವಸತಿ ಸಹಿತ ಆಯುರ್ವೇದ ಶಿಕ್ಷಣ ಕಾರ್ಯಕ್ರಮವನ್ನು ಪ್ರಾರಂಭಿಸುತ್ತಿದೆ.
ಸ್ಥಳೀಯವಾಗಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಜೇಯ ಟ್ರಸ್ಟ್‌ನ ಅಧ್ಯಕ್ಷ ಸುಬ್ರಾಯ ಪೈ, ಟ್ರಸ್ಟಿ ಡಾ. ಸುಧಾ ರಾವ್, ಕಾರ್ಯದರ್ಶಿ ರೂಪಲೇಖಾ ಹಾಗೂ ಮೈತ್ರೇಯೀ ಆಯುರ್ವೇದ ಗುರುಕುಲದ ಪ್ರಾಂಶುಪಾಲ ಡಾ. ರವಿಗಣೇಶ್ ಮೊಗ್ರ ಅವರು ಈ ಕುರಿತು ವಿಸ್ತೃತ ಮಾಹಿತಿ ನೀಡಿದರು.
ಪದವಿ ಸ್ವರೂಪ: 10ನೇ ತರಗತಿ ಉತ್ತೀರ್ಣರಾದ ವಿದ್ಯಾರ್ಥಿನಿಯರಿಗೆ 2 ವರ್ಷದ ಪಿಯುಸಿ, 4.5 ವರ್ಷದ ಬಿ.ಎ.ಎಮ್.ಎಸ್ (BAMS) ಹಾಗೂ 1 ವರ್ಷದ ಇಂಟರ್ನ್‌ಶಿಪ್ ಒಳಗೊಂಡ ಒಟ್ಟು 7.5 ವರ್ಷಗಳ ಸಮಗ್ರ ಶಿಕ್ಷಣವನ್ನು ನೀಡಲಾಗುತ್ತದೆ.
ಪ್ರವೇಶ ಪ್ರಕ್ರಿಯೆ: ಹೆಣ್ಣು ಮಕ್ಕಳಿಗೆ ಮಾತ್ರ ಅವಕಾಶವಿದ್ದು, NEET–PA (Pre-Ayurveda Programme) ಮೂಲಕ ಪ್ರತಿ ಬ್ಯಾಚ್‌ಗೆ 50 ವಿದ್ಯಾರ್ಥಿನಿಯರನ್ನು ಆಯ್ಕೆ ಮಾಡಲಾಗುತ್ತದೆ. 2026ನೇ ಸಾಲಿನ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಲು ಆಗಸ್ಟ್ 20, 2026 ಕೊನೆಯ ದಿನಾಂಕವಾಗಿದೆ.
ಕೇಂದ್ರ ಮಾನ್ಯತೆ: ಪ್ರತಿ ರಾಜ್ಯದ 5 ಕೋಟಿ ಜನಸಂಖ್ಯೆಗೆ ಒಂದರಂತೆ ಅನುಮತಿ ನೀಡಲಾದ ಈ ಗುರುಕುಲ ಯೋಜನೆಗೆ ಕರ್ನಾಟಕದಲ್ಲಿ ಆಯ್ಕೆಯಾದ ಪ್ರಥಮ ಸಂಸ್ಥೆ ಮೈತ್ರೇಯೀ ಆಯುರ್ವೇದ ಗುರುಕುಲ. ಸಂಸ್ಥೆಯು ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾನಿಲಯದಿಂದ ಮಾನ್ಯತೆ ಪಡೆದಿದೆ.
ಪಠ್ಯಕ್ರಮ: ಪ್ರಿ-ಆಯುರ್ವೇದ (PUC) ಅವಧಿಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಗಣಿತ, ಸಂಸ್ಕೃತ, ಇಂಗ್ಲಿಷ್ ಹಾಗೂ ಆಯುರ್ವೇದದ ಮೂಲಭೂತ ತತ್ವಗಳನ್ನು ಬೋಧಿಸಲಾಗುತ್ತದೆ.
ಆಸ್ಪತ್ರೆ ಮತ್ತು ಶೈಕ್ಷಣಿಕ ಸೌಲಭ್ಯಗಳು:
ಗುರುಕುಲದ ಅಂಗವಾಗಿ ಸ್ಥಾಪನೆಯಾಗುತ್ತಿರುವ 60 ಹಾಸಿಗೆಗಳ ಆಯುರ್ವೇದ ಆಸ್ಪತ್ರೆಯು ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳ ಗ್ರಾಮೀಣ ಹಾಗೂ ಅರೆನಗರ ಪ್ರದೇಶಗಳ ಜನರಿಗೆ ಪಂಚಕರ್ಮ, ಕಾಯಕಲ್ಪ ಸೇರಿದಂತೆ ಉನ್ನತ ದರ್ಜೆಯ ಚಿಕಿತ್ಸಾ ಸೇವೆಗಳನ್ನು ಒದಗಿಸಲಿದೆ. ಇದೇ ಆಸ್ಪತ್ರೆಯು ವಿದ್ಯಾರ್ಥಿನಿಯರಿಗೆ ಪ್ರಾಯೋಗಿಕ ಕ್ಲಿನಿಕಲ್ ತರಬೇತಿ ಮತ್ತು ಸಂಶೋಧನೆಗೂ ವೇದಿಕೆಯಾಗಲಿದೆ.
ಮೈತ್ರೇಯಿ ಗುರುಕುಲದ ಹಿನ್ನೆಲೆ:
1994ರಿಂದ ಮೌಲ್ಯಾಧಾರಿತ ಶಿಕ್ಷಣ ಕ್ಷೇತ್ರದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಮೈತ್ರೇಯಿ ಗುರುಕುಲವು ಉಚಿತ ಶಿಕ್ಷಣ, ಉಚಿತ ವಸತಿ ಮತ್ತು ಆಹಾರ ಸೌಲಭ್ಯದೊಂದಿಗೆ 'ಪಂಚಮುಖೀ ಶಿಕ್ಷಣ' (ವೇದ, ಯೋಗ, ವಿಜ್ಞಾನ, ಕೃಷಿ ಮತ್ತು ಕಲಾಕೌಶಲ) ಪದ್ಧತಿಯನ್ನು ಅನುಸರಿಸಿಕೊಂಡು ಬರುತ್ತಿದೆ.
"ಸಂಸ್ಕಾರಯುತ ಶಿಕ್ಷಣ – ಸಮಗ್ರ ಆರೋಗ್ಯ – ಸಬಲ ಸಮಾಜ" ಎಂಬ ಧೈಯವಾಕ್ಯದೊಂದಿಗೆ ಭಾರತೀಯ ಜ್ಞಾನ ಪರಂಪರೆ ಮತ್ತು ಆಧುನಿಕ ಶಿಕ್ಷಣದ ಸಮನ್ವಯದ ಮೂಲಕ ಸಮಾಜಮುಖಿ, ನೈತಿಕ ಹಾಗೂ ರಾಷ್ಟ್ರನಿಷ್ಠ ವೈದ್ಯರನ್ನು ರೂಪಿಸುವುದೇ ಈ ಯೋಜನೆಯ ಮುಖ್ಯ ಉದ್ದೇಶ ಎಂದು ಸಂಸ್ಥೆಯ ಪದಾಧಿಕಾರಿಗಳು ತಿಳಿಸಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


