ಸಾಹಿತ್ಯ ಹೃದಯದ ಭಾಷೆಯೇ ಹೊರತು, ಬುದ್ಧಿಯದ್ದಲ್ಲ: ಡಾ. ರಾಜಲಕ್ಷ್ಮಿ ಎನ್.‌ ಕೆ.

Upayuktha
0

ಮಂಗಳೂರು: ಸಾಹಿತ್ಯವನ್ನು ಹೃದಯದಿಂದ ಮಾಡಬೇಕೇ ಹೊರತು ಕೇವಲ ಬುದ್ಧಿಯಿಂದಲ್ಲ. ವಾಸ್ತವವಾಗಿ ಅನುಭವಜನ್ಯವಾದುದೇ ಸಾಹಿತ್ಯ ಎನಿಸಿಕೊಳ್ಳುತ್ತದೆ ಎಂದು ನಿವೃತ್ತ ಆಂಗ್ಲಭಾಷಾ ಪ್ರಾಧ್ಯಾಪಕಿ ಡಾ. ರಾಜಲಕ್ಷ್ಮಿ ಎನ್‌. ಕೆ. ಅವರು ಹೇಳಿದರು.


ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಶಿವರಾಮ ಕಾರಂತ ಸಭಾ ಭವನದಲ್ಲಿ ಭಾಷಾ ಸಂಘ ಮತ್ತು ಆಂತರಿಕ ಗುಣಮಟ್ಟ ಖಾತ್ರಿ ಕೋಶದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ “ಸಣ್ಣ ಹೆಜ್ಜೆಗಳು, ದೀರ್ಘ ಜಿಗಿತಗಳು: ಸಾಹಿತ್ಯ ಅಧ್ಯಯನದ ವ್ಯಾಪ್ತಿಯ ಅನ್ವೇಷಣೆ” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.


ಆಂಗ್ಲ ಭಾಷೆ ಕೇವಲ ವಿಷಯವನ್ನು ವಿವರಿಸುತ್ತದೆ. ಆದರೆ ಸಾಹಿತ್ಯ ವಿವರಣೆ ಮಾತ್ರವಲ್ಲದೇ, ಸಾಹಿತಿಯ ಅನುಭವ ಪೂರ್ಣ ಬರಹವಾಗಿರುತ್ತದೆ. ಸಾಹಿತ್ಯದ ಕಲಿಕೆಗೂ ಬೇರೆ ವಿಷಯಗಳ ಕಲಿಕೆಗೂ ಸಾಕಷ್ಟು ವ್ಯತ್ಯಾಸವಿರುತ್ತದೆ.


ಸಾಹಿತ್ಯಕ್ಕೆ ಓದುಗರನ್ನು ಕಲ್ಪನಾ ಜಗತ್ತಿಗೆ ಕೊಂಡೊಯ್ಯುವ ಸಾಮರ್ಥ್ಯವಿದೆ. ಇಲ್ಲಿ ಕಲೆಯನ್ನು ಅನುಭವಿಸುವುದು ಬಹಳ ಮುಖ್ಯ. ಅನುಭವಜನ್ಯವಾಗಿ ಬರುವ ಸಾಹಿತ್ಯ ಎಂದಿಗೂ ಸತ್ಯವನ್ನೇ ಹೇಳುತ್ತದೆ. ನಿಜವಾದ ಸಾಹಿತ್ಯ ಜ್ಞಾನ ನಿಮ್ಮಲ್ಲಿದ್ದರೆ ಉದ್ಯೋಗವೇ ನಿಮ್ಮನ್ನು ಅರಸಿ ಬರುತ್ತದೆ. ವಾಸ್ತವವಾಗಿ ಸಾಹಿತ್ಯ ಎಂಬುದು ಯಾವುದಾದರೂ ಒಂದು ವಿಷಯದ ಆಳವಾದ ಅಧ್ಯಯನವೇ ಆಗಿದೆ ಎಂದು ಅಭಿಪ್ರಾಯಪಟ್ಟರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯವಂತ ನಾಯಕ್‌, ಓದುವ, ಆಲೋಚಿಸುವ ಹಾಗೂ ಪ್ರಶ್ನೆ ಮಾಡುವ ಮನೋಭಾವ ಬೌದ್ಧಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಯಾವುದೇ ಗುರಿಯನ್ನು ರಾತ್ರೋರಾತ್ರಿ ತಲುಪಲು ಸಾಧ್ಯವಿಲ್ಲ. ಅದೊಂದು ನಿರಂತರ ಪ್ರಕ್ರಿಯೆ. ಪಠ್ಯಕ್ರಮದ ಹೊರತಾಗಿಯೂ ಸಾಹಿತ್ಯ ಓದುವ ಅಭ್ಯಾಸ ಬೆಳೆಸಿಕೊಂಡರೆ ಬದುಕಿನಲ್ಲಿ ಪರಿಪೂರ್ಣತೆ ಕಡೆಗೆ ಸಾಗಬಹುದು. ಆ ನಿಟ್ಟಿನಲ್ಲಿ ವಿಭಿನ್ನ ದೃಷ್ಟಿಕೋನಗಳಿಂದ ಚಿಂತನೆ ನಡೆಸುವ ಅಭ್ಯಾಸ ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು.


ಆಂಗ್ಲಭಾಷಾ ವಿಭಾಗದ ಮುಖ್ಯಸ್ಥೆ ಸುಭಾಷಿಣಿ ಶ್ರೀವತ್ಸ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ವೇಳೆ ಐಕ್ಯುಎಸಿಯ ಐಕ್ಯುಎಸಿ ಸಂಯೋಜಕ ಡಾ. ಸಿದ್ದರಾಜು ಎಂ. ಎನ್. ಸೇರಿದಂತೆ ನಾನಾ ವಿಭಾಗಗಳ ಉಪನ್ಯಾಸಕರು ಉಪಸ್ಥಿತರಿದ್ದರು.


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top