ಗುರುವಿನ ಮಾರ್ಗದರ್ಶನದಿಂದ ಬದುಕಿನಲ್ಲಿ ಯಶಸ್ಸು ಸಾಧ್ಯ: ವಿದ್ವಾನ್ ನಾಗೇಶ್ ಬಪ್ಪನಾಡು

Upayuktha
0

ಭರತಾಂಜಲಿಯಿಂದ ಗುರುಪೂರ್ಣಿಮೆ, ಗುರುನಮನ ಹಾಗೂ ಮಾತಾಪಿತೃ ಚರಣ ಪೂಜನ



ಸುರತ್ಕಲ್: ಜೀವಕೋಟಿಗಳಲ್ಲಿ ಮನುಷ್ಯ ಜನ್ಮವೇ ಶ್ರೇಷ್ಠವಾದುದು. ಮನುಷ್ಯರಲ್ಲಿ ಅನೇಕ ಮಹಾತ್ಮರಿದ್ದರೂ, ಗುರು ಸ್ಥಾನದಲ್ಲಿರುವವರು ಅವರೆಲ್ಲರಿಗಿಂತಲೂ ಅತ್ಯಂತ ಶ್ರೇಷ್ಠರು ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾದಸ್ವರ ವಿದ್ವಾಂಸ ನಾಗೇಶ್ ಬಪ್ಪನಾಡು ಅಭಿಪ್ರಾಯಪಟ್ಟರು.


ಸುರತ್ಕಲ್‌ನ ಶ್ರೀ ಕ್ಷೇತ್ರ ಗಣೇಶಪುರದಲ್ಲಿ ಕೊಟ್ಟಾರದ 'ಶ್ರೀ ಭರತಾಂಜಲಿ ಸಂಸ್ಥೆ'ಯ ವತಿಯಿಂದ ಗುರುಪೂರ್ಣಿಮೆಯ ಅಂಗವಾಗಿ ಆಯೋಜಿಸಲಾಗಿದ್ದ ಗುರುನಮನ ಹಾಗೂ ಮಾತಾಪಿತೃ ಪೂಜನ ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.


ಜಗತ್ತಿಗೆ ವೇದಗಳನ್ನು ಧಾರೆ ಎರೆದ ವೇದವ್ಯಾಸರ ಜನ್ಮದಿನವನ್ನು ಗುರುಪೂರ್ಣಿಮೆಯಾಗಿ ಆಚರಿಸಲಾಗುತ್ತದೆ. ಇದು ಸನಾತನ ಹಿಂದೂ ಸಂಸ್ಕೃತಿಯ ಅತ್ಯಂತ ಪವಿತ್ರ ಹಬ್ಬವಾಗಿದ್ದು, ಎಲ್ಲ ದೇವತೆಗಳಲ್ಲೂ ಪ್ರಕಾಶಿಸುವ ಪರಾತ್ಪರ ತತ್ತ್ವವೇ ಗುರು. ಗುರು-ಶಿಷ್ಯ ಪರಂಪರೆಯು ವಿಶ್ವಕ್ಕೆ ನಮ್ಮ ಸಂಸ್ಕೃತಿ ನೀಡಿದ ಅಮೂಲ್ಯ ಕೊಡುಗೆ. ಗುರುವಿನ ಮಾರ್ಗದರ್ಶನದಲ್ಲಿ ಮುನ್ನಡೆದಾಗ ಮಾತ್ರ ಬದುಕಿನಲ್ಲಿ ಸಾಧನೆ ಮಾಡಲು ಸಾಧ್ಯ. ತಾವು ಇಂದಿಗೂ ತಮಿಳುನಾಡಿನಲ್ಲಿರುವ ಗುರುಗಳ ಬಳಿಗೆ ತೆರಳಿ ಪಾಠ-ಅಧ್ಯಯನ ನಡೆಸುತ್ತಿದ್ದು, ಗುರುಗಳ ಅನುಗ್ರಹವೇ ತಮ್ಮ ಯಶಸ್ಸಿಗೆ ಕಾರಣ ಎಂದು ತಮ್ಮ ಅನುಭವ ಹಂಚಿಕೊಂಡರು. ಅಲ್ಲದೆ, ಮಕ್ಕಳು ಪೋಷಕರನ್ನು ಪೂಜಿಸಿ ಗೌರವಿಸುವ ಇಂತಹ ಕಾರ್ಯಕ್ರಮಗಳು ಸಮಾಜಕ್ಕೆ ಮಾದರಿಯಾಗಿವೆ ಎಂದರು.


ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿಶ್ವೇಶ್ವರ ಬದವೈದೆ ಮಾತನಾಡಿ, ಆಧುನಿಕ ಕಾಲಘಟ್ಟದಲ್ಲಿ ಗುರು-ಶಿಷ್ಯರ ಪವಿತ್ರ ಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಅಗತ್ಯವಿದೆ. ಗುರು ಕೇವಲ ವಿದ್ಯೆಯನ್ನು ಬೋಧಿಸುವವನಲ್ಲ, ಬದಲಿಗೆ ಅಜ್ಞಾನದ ಅಂಧಕಾರವನ್ನು ದೂರಮಾಡಿ ಜ್ಞಾನದ ಬೆಳಕು ನೀಡುವ ಮಾರ್ಗದರ್ಶಕ ಎಂದರು.


ಶ್ರೀಕ್ಷೇತ್ರದ ಮಾಜಿ ಆಡಳಿತ ಮಂಡಳಿ ಸದಸ್ಯ ಧರ್ಮೇಂದ್ರ ಗಣೇಶಪುರ ಮಾತನಾಡಿ, ಭರತಾಂಜಲಿ ಸಂಸ್ಥೆಯು ನೃತ್ಯ ಶಿಕ್ಷಣದ ಜೊತೆಗೆ ಮಕ್ಕಳಿಗೆ ಸಾಂಸ್ಕೃತಿಕ ಹಾಗೂ ನೈತಿಕ ಮೌಲ್ಯಗಳನ್ನು ಧಾರೆ ಎರೆಯುವ ಮೂಲಕ ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ನೀಡುತ್ತಿದೆ ಎಂದು ಶ್ಲಾಘಿಸಿದರು.


ಇದೇ ಸಂದರ್ಭದಲ್ಲಿ ಪ್ರಕ್ಷಿಲಾ ಜೈನ್, ವಿದುಷಿ ಅನನ್ಯ ಕೆ. ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಫೆಲೋಶಿಪ್ ಪಡೆದ ನೀತಾ ಶಾಸ್ತ್ರಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ತದನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವಿದುಷಿ ಅದಿತಿ ಪೂಜಾರಿ, ವಿದುಷಿ ಅನನ್ಯ ಕೆ. ಹಾಗೂ ಧ್ರುವಿ ಮಡಿವಾಳ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.


ಸಂಸ್ಥೆಯ ನಿರ್ದೇಶಕ ಶ್ರೀಧರ ಹೊಳ್ಳ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಿರ್ದೇಶಕಿ ಪ್ರತಿಮಾ ಶ್ರೀಧರ ಸನ್ಮಾನಿತರ ಪರಿಚಯ ನೀಡಿದರು. ವಿದುಷಿ ಅನನ್ಯ ಜೆ. ಕಾರ್ಯಕ್ರಮ ನಿರೂಪಿಸಿದರೆ, ಪ್ರಕ್ಷಿಲಾ ಜೈನ್ ಧನ್ಯವಾದ ಸಮರ್ಪಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಕೇಂದ್ರ ಸರಕಾರ ಸಂಸ್ಕೃತಿ ಸಚಿವಾಲಯದ ಸಹಯೋಗದಲ್ಲಿ ಕಾರ್ಯಕ್ರಮ ಜರಗಿತು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top