Doctor's Dairy: ವೈದ್ಯಧರ್ಮ, ಮಾನವೀಯತೆ ಮತ್ತು ಕೃತಜ್ಞತೆಯ ಪ್ರಶ್ನೆ

Upayuktha
0



ಅದೊಂದು ಎರಡನೇ ಶನಿವಾರ, ಹಿಂದಿನ ದಿನ 24 ಗಂಟೆ ಪಾಳಿ ಕರ್ತವ್ಯ, ಆದರೆ ಹಿಂದಿನ ದಿನ ಬಹಳಷ್ಟು ಸಮಯ ಶಸ್ತ್ರ ಚಿಕಿತ್ಸೆ ಕೊಠಡಿಯಲ್ಲೇ ಇದ್ದುದರಿಂದ opdಯಲ್ಲಿ ರೋಗಿಗಳ ರಿಪೋರ್ಟ್ ಗಳು ಮಧ್ಯಾಹ್ನದ ನಂತರ ನನಗೆ ನೋಡಲು ಅಸಾಧ್ಯವಾಗಿತ್ತು, ಮತ್ತೆ ನಾಳೆ ಭಾನುವಾರ, ಹಾಗಾಗಿ ಆ ದಿನ ರಜೆ ಇದ್ದರೂ 3 ಗಂಟೆ ರೋಗಿಗಳ ಚಿಕಿತ್ಸೆಗೆ ಬರುವುದಾಗಿ ತಿಳಿಸಿದ್ದೆ. ಬೆಳಿಗ್ಗೆ ಇನ್ನೇನು ಆಸ್ಪತ್ರೆಗೆ ಹೊರಡುವ ಸಮಯ, ಹೆರಿಗೆ ಕೊಠಡಿ ಸಿಸ್ಟರ್ ಕರೆ ಮಾಡಿ ಒಂದು ಗರ್ಭಿಣಿ ಹೆರಿಗೆ ನೋವಲ್ಲಿ ಬಂದಿರುವುದು ತಿಳಿಸಿದರು, ನಾನು ಅಗತ್ಯ ಪರೀಕ್ಷೆ ಮುಗಿಸಿ ಬರುವೆ ಎಂದೆ.


ಆಸ್ಪತ್ರೆಗೆ ಹೋದ ತಕ್ಷಣ ಆ ಗರ್ಭಿಣಿಯನ್ನು ತಪಾಸಣೆ ಮಾಡಿದೆ, ಈಗಾಗಲೇ ಹೆರಿಗೆ ನೋವಲ್ಲಿ ಬಂದಿರುವುದು, ಸಹಜ ಹೆರಿಗೆಯಾಗುವ ಸಾಧ್ಯತೆಗಳು ಇರುವುದು ಮನವರಿಕೆಯಾಯಿತು. ಆದರೆ ಆ ದಿನ ನಮ್ಮಲ್ಲಿ ಅನಸ್ತೇಶಿಯಾ ವೈದ್ಯರು ಇರಲಿಲ್ಲ, ರಜೆ ಇದ್ದರು. ಯಾವ ಹೆರಿಗೆಯಲ್ಲಿ ಯಾವಾಗ ಸಿಸೇರಿಯನ್ ಅವಶ್ಯಕತೆ ಬರಬಹುದು ನಾವು ಹೇಳಲಾಗುವುದಿಲ್ಲ, ಹಾಗಾಗಿ ಆ ತಾಯಿಗೆ ಸಧ್ಯದ ಪರಿಸ್ಥಿತಿಯಲ್ಲಿ ಸಹಜ ಹೆರಿಗೆಯಾಗುವ ಸಾಧ್ಯತೆ ಉಂಟು, ಕೊನೆ ಹಂತಕ್ಕೆ ಏನಾದರೂ ತೊಂದರೆ ಉಂಟಾದರೆ ನೀವು ಕೆ ವಿ ಜಿ ಆಸ್ಪತ್ರೆಗೆ ಹೋಗಲು ತಯಾರಿದ್ದರೆ ನಾನು ಹೆರಿಗೆಗೆ ದಾಖಲಾತಿ ಮಾಡುವೆ, ಇಲ್ಲವೇ ಈಗಲೇ ಮಂಗಳೂರು ಸರ್ಕಾರಿ ಆಸ್ಪತ್ರೆಗೆ ಹೋಗಬಹುದು ಎಂದೆ. ಅವರು ತೊಂದರೆ ಬಂದರೆ ಕೆ ವಿ ಜಿ ಗೆ ಹೋಗಲು ಸಿದ್ಧ, ಸಹಜ ಹೆರಿಗೆ ಇಲ್ಲಿಯೇ ಆಗುವುದಾದರೆ ಆಗಲಿ ಎಂದು ಸಮ್ಮತಿಸಿ ಸಹಿ ಹಾಕಿದ ಬಳಿಕವೇ ಅವಳನ್ನು ದಾಖಲಾತಿ ಮಾಡಿದೆವು.


ಈಗ ಒಬ್ಬರೇ ಅನಸ್ತೇಶಿಯಾ ವೈದ್ಯರು ಇರುವುದಾ? ಅವರ ಅನುಪಸ್ಥಿತಿಗೆ ಬದಲಿ ಯಾರು ಪ್ರಶ್ನೆ ನಿಮ್ಮಲ್ಲಿ ಬರಬಹುದು. ಬಹುತೇಕ ತಾಲ್ಲೂಕು ಆಸ್ಪತ್ರೆಗಳಲ್ಲಿ ಎಲ್ಲಾ ವಿಭಾಗದಲ್ಲೂ ಒಬ್ಬರೇ ವೈದ್ಯರು. ಪ್ರಸೂತಿ ತಜ್ಞರು, ಅನಸ್ತೇಶಿಯಾ, ಮಕ್ಕಳ ತಜ್ಞರು ಇಬ್ಬರಾದರೂ ಇರಲಿ ಎಂದು ಸಮುದಾಯ ಆರೋಗ್ಯ ಕೇಂದ್ರಗಳನ್ನು ಮುಚ್ಚಿ ವೈದ್ಯರನ್ನು ವರ್ಗಾವಣೆ ಮಾಡುವ ಪ್ರಯತ್ನ ಸರ್ಕಾರ ಮಾಡಿದರೂ ಆ ಪ್ರಯತ್ನ ವಿಫಲವಾಗಿದೆ.


ನಾನು ರಜೆ ಎಂದರೆ ಎಲ್ಲಾ ರೋಗಿಗಳೂ ಬೇರೆ ಆಸ್ಪತ್ರೆ ಹುಡುಕಿಕೊಳ್ಳಬೇಕು, ಅದೇ ರೀತಿ ಅನಸ್ತೇಶಿಯಾ ವೈದ್ಯರು ರಜೆ ಎಂದರೆ ನಾನು ರೋಗಿಗಳನ್ನು ಹೆರಿಗೆಗೆ ತೆಗೆದುಕೊಳ್ಳುವಾಗ ಸಹಜ ಹೆರಿಗೆಯಾದರೆ ಮಾಡುವೆ, ತುರ್ತು ಸಮಯ ಸಿಸೇರಿಯನ್ ಎಂದರೆ ಹತ್ತಿರದ ಖಾಸಗಿ ಆಸ್ಪತ್ರೆಗೆ ಅವರು ಹೋಗಲು ತಯಾರಿದ್ದಾರೆ ಎಂದು ಖಾತರಿ ಪಡಿಸಿಕೊಂಡೇ ಅವರನ್ನು ದಾಖಲು ಮಾಡಬೇಕು. ಬಹಳಷ್ಟು ಸಮಯ ಸಹಜ ಹೆರಿಗೆ ಆಗಿ ಏನೂ ತೊಂದರೆಯಾಗಿಲ್ಲ, ಮತ್ತೆ ಕೆಲವು ಸಮಯ ಖಾಸಗಿ ಆಸ್ಪತ್ರೆಗೆ ಹೋಗಿದ್ದಾರೆ - ಆದರೆ ಆ ಸಂಖ್ಯೆ ಸ್ವಲ್ಪ ಕಡಿಮೆಯೇ, ಹಾಗಾಗಿ ರೋಗಿ ಪರಿಸ್ಥಿತಿಯ ಮೇಲೆ ಆ ದಿನ ನಮ್ಮ ನಿರ್ಧಾರ ನಿಲ್ಲುತ್ತದೆ.


ಇರಲಿ, ಈ ಹೆಂಗಸು ದಾಖಲಾದಳು, ನಾನು ಉಳಿದ ಹೊರ ರೋಗಿ ಪರೀಕ್ಷೆ ಮುಗಿಸಿ ಅವಳನ್ನು ಮತ್ತೆ ನೋಡಿ, ಸುಮಾರು 5 ಗಂಟೆ ಹೊತ್ತಿಗೆ ಹೆರಿಗೆ ಆಗಬಹುದು ಯೋಚಿಸಿ ಸಿಸ್ಟರ್ ಗೆ ಗಮನ ಇಡಲು ಹೇಳಿ ಮನೆ ಕಡೆ ಹೊರಟೆ.


ಸುಮಾರು 4.30ಕ್ಕೆ ಅವಳಿಗೆ ನೋವು ಹೆಚ್ಚಿದೆ ಕರೆ ಬಂತು, ನಾನು ಆಸ್ಪತ್ರೆಗೆ ಬಂದು ಪರೀಕ್ಷಿಸಿದೆ, ಎಣಿಸಿದಂತೆ ಅವಳು ಹೆರಿಗೆಗೆ ಚೆನ್ನಾಗಿ ತಯಾರಾಗಿದ್ದಳು.. ನಾನು ಹೆರಿಗೆ ಮಾಡಿಸಲು ನಿಂತೆ.... ಸುಮಾರು ಮುಕ್ಕಾಲು ಗಂಟೆಯಾದರೂ ತಲೆ ಕೆಳಗೆ ಬರಲಿಲ್ಲ, ಮಗುವಿನ ಹೃದಯ ಬಡಿತ ಸ್ವಲ್ಪ ವ್ಯತ್ಯಾಸವಾಯಿತು. ಸರಿ, Vaccum delivery ಮಾಡಿದರೆ ಬಹುಶಃ ಸಾಕು ಎಂಬ ನಿರ್ಧಾರ ತೆಗೆದುಕೊಂಡು ಹೆರಿಗೆಗೆ ತಯಾರಿ ಮಾಡಿಕೊಂಡೆವು, ಆದರೆ "ಹೆರಿಗೆ ಎಂಬುದೇ ನಮ್ಮ ಎಲ್ಲಾ ಲೆಕ್ಕಾಚಾರ ತಲೆಕೆಳಗೆ ಮಾಡುವ ಪ್ರಕ್ರಿಯೆ". ಎರಡು ಬಾರಿ vaccum ಹಾಕಿದರೂ ಮಗುವಿನ ತಲೆ ಕೊಂಚವೂ ಕೆಳಗೆ ಜಗ್ಗಲಿಲ್ಲ, ಇನ್ನೂ ಪ್ರಯತ್ನ ಮಾಡಿ ಉಪಯೋಗವಿಲ್ಲ- "Obstructed labour"- ಸಿಸೇರಿಯನ್ ಬೇಕು, ಅವಳಿಗೆ ಕೆ ವಿ ಜಿ ಗೆ ಹೋಗಲೇಬೇಕು, ಕಡೆ ಹಂತದ ಸಮಯ, ಅಲ್ಲಿಯ ವೈದ್ಯರಿಗೆ ಎಲ್ಲಾ ತಯಾರು ಮಾಡಿಕೊಳ್ಳಲು ಹೇಳಿ ಕಳುಹಿಸೋಣ ಎಂದು ಹೊರಗಡೆ ಅವರ ಸಂಬಂಧಿಕರ ಬಳಿ ಬಂದರೆ ಬೆಳಿಗ್ಗೆಯೇ ಇದೊಂದು ಪರಿಸ್ಥಿತಿ ಬರಬಹುದು ಎಂದು ಚೆನ್ನಾಗಿ ವಿವರಿಸಿದರೂ ಆಕೆಯ ಮನೆಯಿಂದ ಒಬ್ಬರೂ ಗಂಡಸರು ಬಂದಿರಲಿಲ್ಲ, ವಯಸ್ಸಾದ ಅಮ್ಮ ಪ್ರಾಯದ ಎರಡು ತಂಗಿಯರು, ಕೆ ವಿ ಜಿ ಗೆ ಹೋಗಲು ಅನುಕೂಲವಿಲ್ಲ ಎಂಬಂತೆ ಅಸಹಕಾರವಾಗಿ ನಿಂತರು. 


ಅಲ್ಲಿಯ ವೈದ್ಯರಿಗೆ ಕರೆ ಹಚ್ಚಿದ್ದ ನಾನು ಇವರನ್ನು ನೋಡಿ ಕರೆ ಕತ್ತರಿಸಿದೆ, ಖಾಸಗಿ ಆಸ್ಪತ್ರೆ ಎಂದ ಮೇಲೆ ಬರುವ ಖರ್ಚು ವೆಚ್ಚವನ್ನು, ತಲೆ ತಗ್ಗಿಸಿ ನಿಂತ ಇವರ ಪರಿಸ್ಥಿತಿ ಲೆಕ್ಕ ಹಾಕಿ ಏನು ಮಾಡಲಿ, ಬೈಯಲು ಕೂಗಾಡಲು ನನ್ನ ಬಳಿ ಸಮಯವಿಲ್ಲ ಎಂದು ಯೋಚಿಸಲು, ಅದು ಏನೋ?!! ಯಾರಾದರೂ ಖಾಸಗಿ ಅನಸ್ತೇಶಿಯಾ ವೈದ್ಯರು ಮಾನವೀಯ ದೃಷ್ಟಿಯಿಂದ ಬರಬಹುದೇ ಎಂಬ ವಿಚಾರ ಮನದಲ್ಲಿ ಬರಲು, ಎಂದೂ ಆ ನಿಟ್ಟಿನಲ್ಲಿ ಯೋಚಿಸಿರದ ನಾನು ಆ ದಿಕ್ಕಿನಲ್ಲಿ ಯೋಚಿಸಿದೆ, ಬಹುಶಃ ಆ ಕ್ಷಣ ದೇವರ ಆದೇಶ. ಆದರೆ ಊರಲ್ಲಿ ವಾಸವಿರುವ ಅನಸ್ತೇಶಿಯಾ ವೈದ್ಯರು ಬಹಳ ಕಡಿಮೆ, ಏನು ಮಾಡುವುದು?? ಹಾಗೂ ಹೀಗೂ ಸಧ್ಯದ ಪರಿಸ್ಥಿತಿ ಮನಸ್ಸಿನಲ್ಲಿ ಯೋಚಿಸಿ ಒಬ್ಬರು ವೈದ್ಯರ ದೂರವಾಣಿ ಸಂಖ್ಯೆ ಹುಡುಕಿ ಕರೆಮಾಡಿದೆ.


ಇಬ್ಬರಿಗೂ ಒಬ್ಬರಿಗೊಬ್ಬರ ಪರಿಚಯವಿಲ್ಲ, ಆದರೆ ಅವರ ವಿಷಯ ಪರಿಣಿತಿ ಬಗ್ಗೆ ನಂಬಿಕೆ ಇತ್ತು, ಅದೇ ಧೈರ್ಯದಲ್ಲಿ ಅವರಿಗೆ ನನ್ನ ಪರಿಚಯ ಹೇಳಿ ವಿನಂತಿಸಲು ಅವರು ಊರಿಂದ ಹೊರಗೆ ಇರುವುದಾಗಿ ತಿಳಿಸಿದರು. ನನಗೆ ಇದ್ದ ಒಂದು ಆಸರೆಯೂ ಕೈ ತಪ್ಪಲು ಅವಳನ್ನು ಖಾಸಗಿ ಆಸ್ಪತ್ರೆಗೆ ರವಾನಿಸಲು ಅವಳ ಮತ್ತು ಮಗುವಿನ ಆರೋಗ್ಯ ಸ್ಥಿತಿ ಮಗದೊಮ್ಮೆ ಪರಿಶೀಲಿಸಲು ಮುಂದಾದೆ. ತಲೆಯಲ್ಲಿ ಸುನಾಮಿ.


ಅಪರಿಚಿತಳಾದರೂ ಅವರನ್ನು ವಿನಂತಿಸಿದ ಪರಿಗೆ ಆ ವೈದ್ಯರಿಗೆ ನನ್ನ ಇಕ್ಕಟ್ಟಿನ ಪರಿಸ್ಥಿತಿ ಅರ್ಥವಾಗಿ ಅವರೇ ಕರೆ ಮಾಡಿ ನಾನು ಮಂಗಳೂರಿಗೆ ಹೊರಟಿದ್ದೇನೆ, ಸುಮಾರು ಮೂರ್ನಾಕು ಕಿಲೋಮೀಟರ್ ದೂರ ಇರುವೆ, ಅಷ್ಟು ಸಮಯ ನಿಮ್ಮಲ್ಲಿ ಇದ್ದರೆ ot ಗೆ ರೋಗಿಯನ್ನು ರವಾನಿಸಿ ಹತ್ತು ನಿಮಿಷದ ಒಳಗೆ ಬರುವೆ ಎನ್ನಲು ಲಡ್ಡು ಬಂದು ಬಾಯಿಗೆ ಬಿದ್ದಂತಾಯಿತು. ನಾನು ತಕ್ಷಣ ot ಗೆ ಎಲ್ಲಾ ತಯಾರು ಮಾಡಿ ರೋಗಿಯನ್ನು ರವಾನಿಸಲು ಕರೆ ನೀಡಿದೆ.


ಆ ಹಂತಕ್ಕೂ ಆ ವೈದ್ಯರು ಬರುವುದಕ್ಕೆ ಒಪ್ಪಿದ್ದು ಆ ರೋಗಿಗೆ ಸಾವಿರಾರು ರೂಪಾಯಿ ಉಳಿದ ಉಡುಗೊರೆ, ಹಾಗಾಗಿ ಅವರು ಬಂದ ಮೇಲೆ ಏನಾದರೂ ಅಲ್ಪ ಸ್ವಲ್ಪ ಹಣ ಕೇಳಿದರೆ ನೀವು ತಯಾರಾ? ರೋಗಿಯನ್ನು ಕೇಳಲು ಅವರು ಯಾವುದೇ ಅಡ್ಡಿಯಿಲ್ಲ, ತಾಯಿ ಮಗು ಕ್ಷೇಮವಾದರೆ ಸಾಕು ಎಂಬ ವಿನಂತಿ ಇಟ್ಟರು. 


ನಾವು ತಕ್ಷಣ ಎಲ್ಲಾ ತಯಾರು ಮಾಡಿದೆವು, ಅಪರಿಚಿತ ವೈದ್ಯರು ಆ ಸಮಯಕ್ಕೆ ದೇವರಂತೆ ಬಂದರು. Second stage section- ಅದರ ಅಪಾಯಗಳು, ರಕ್ತದ ಅವಶ್ಯಕತೆ, ರಕ್ತಸ್ರಾವ ತಡೆಗಟ್ಟಲು ಕ್ರಮ ಎಲ್ಲವನ್ನೂ ಕ್ಷಣಮಾತ್ರಕ್ಕೆ ತಂಡಕ್ಕೆ ವಿವರಿಸಿ, ಆಡಳಿತ ವೈದ್ಯಾಧಿಕಾರಿಗಳಿಗೆ ಒಮ್ಮೆ ವಿಷಯ ತಿಳಿಸಲು ಶುಶ್ರೂಷಕಿಗೆ ಹೇಳಿ ನಾನು ಶಸ್ತ್ರ ಚಿಕಿತ್ಸೆಗೆ ನಿಂತೆ. 


ಮಗು ಸ್ವಲ್ಪ ಸುಸ್ತಾಗಿತ್ತು, ನಮ್ಮ ಮಕ್ಕಳ ವೈದ್ಯರು ಅವರ ತಂಡದೊಂದಿಗೆ ತಯಾರಿದ್ದರು, ಮಗು ಚೇತರಿಸಿಕೊಂಡಿತು, ಅವರ ಪ್ರಕಾರ ಇನ್ನೊಂದು ಹತ್ತು ಹದಿನೈದು ನಿಮಿಷ ತಡವಾಗಿದ್ದರೂ ಮಗುವಿಗೆ ಅಪಾಯವಿತ್ತು. ಅನಸ್ತೇಶಿಯಾ ವೈದ್ಯರು ಮಂಗಳೂರಿಗೆ ಹೊರಟಿದ್ದ ಕಾರು ತಿರುಗಿ ಬಂದದ್ದು ಆ ಕ್ಷಣ ಬೆಟ್ಟದಂಥ ಅಪಾಯ ಹೂವು ಎತ್ತಿದಂತೆ ಮುಗಿದು ಹೋಗಿತ್ತು. ಏನೂ ತೊಂದರೆಯಿಲ್ಲದೆ ತಾಯಿ ಮಗು ಶಸ್ತ್ರ ಚಿಕಿತ್ಸೆ ಕೊಠಡಿಯಿಂದ ಹೊರಹೋದರು. 


ಅನಸ್ತೇಶಿಯಾ ವೈದ್ಯರಿಗೆ ಅದೆಷ್ಟು ಧನ್ಯವಾದ ಹೇಳಿದರೂ ಕಡಿಮೆಯೇ, ಆದರೆ ಅಂದು ತಾಯಿ ಮಗುವಿನ ಜೀವದ ಪ್ರಶ್ನೆ ಎಂದು ಮೊರೆ ಇಟ್ಟಾಗ ಯಾವುದೇ ವೈದ್ಯರಿಗಾದರೂ ಅವರ ಅಂತರಾಳದ ಕೂಗು ಮಾನವೀಯತೆಗೆ ಮಿಡಿಯುವಂತೆ, ಅವರೂ ಅಂದು ಅದೇ ಒಂದು ಕಳಕಳಿಯಲ್ಲಿ ಕಾರು ಹಿಂದಿರುಗಿಸಿ ನಮ್ಮ ಸಹಾಯಕ್ಕೆ ಬಂದರು. ಫೀಸ್ ಎಂದಾಗಲೂ ಪರವಾಗಿಲ್ಲ, ತಾಯಿ ಮಗು ಉಳಿದರು ಸಾಕು ಎಂದರು- ಆದರೆ ಅದು ಅವರ ಒಳ್ಳೆಯತನದ ದುರುಪಯೋಗವಾಗಬಾರದೆಂದು ನಾನು ಮರು ಮನವಿ ಮಾಡಲು ಅವರು ಸ್ಥಿತಿವಂತರಾದ್ರೆ ಅವರಿಗೆ ಏನು ಸಾಧ್ಯ ಅದು ಕೊಡಲಿ, ಇಲ್ಲವೇ ಯಾವುದೇ ಅಡ್ಡಿಯಿಲ್ಲ, ನೀವು ನನ್ನ ನಂಬರ್ ಇಟ್ಟುಕೊಳ್ಳಿ, ಏನಾದ್ರೂ ಪರಿಸ್ಥಿತಿ ನನ್ನ ಬರುವಿಕೆ ರೋಗಿಗೆ ಉಪಕಾರ ಎನಿಸಿದರೆ ಖಂಡಿತ ಬರುವೆ ಎಂದರು. 


ಹಣಕ್ಕಾಗಿ ರೋಗಿಗಳನ್ನು ಇಲ್ಲ ಸಲ್ಲದ ಕಾರಣ ಹೇಳಿ ಸರ್ಕಾರಿ ಆಸ್ಪತ್ರೆಯಿಂದ ಸಾಗಿ ಹಾಕುವ ಕೆಲವು ಅನಸ್ತೇಶಿಯಾ ವೈದ್ಯರ ಕಥೆ ಕೇಳಿದ್ದ ನನಗೆ ಅವರು ಮಾನವೀಯ ಮೌಲ್ಯದ ಪರಿಭಾಷೆಯಾದರು, ಅವರ ನಡೆಗೆ ವೃತ್ತಿಯ ಬಗ್ಗೆ ಹೆಮ್ಮೆ ಎನಿಸಿತು.


ಹೊರಬಂದವಳೇ ಅವಳ ತಂಗಿಯನ್ನು ಕರೆದು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ ತಕ್ಷಣ ನಿಮ್ಮ ಜವಾಬ್ಧಾರಿ ಮುಗಿಯಲ್ಲ, ಯಾರಿಗೆ ಯಾವ ಪರಿಸ್ಥಿತಿ ಯಾವಾಗ ಎದುರಾಗಬಹುದು ಯಾರೂ ಎಣಿಸಲಾಗುವುದಿಲ್ಲ, ಒಬ್ಬರೂ ಗಂಡಸರಿಲ್ಲದೆ ಕೈಲಿ ಬಿಡಿಗಾಸಿಲ್ಲದೆ ಹೆರಿಗೆಗೆ ಬಂದರೆ ಹೇಗೆ?? ನಿಮ್ಮ ಗಂಡಸರು ಬಂದರೆ ನನಗೆ ತಿಳಿಸಿ ಎಂದು ಸ್ವಲ್ಪ ಬೈದು ಹೊರಡುವಾಗ ಮಗುವನ್ನು ವಿಡಿಯೋ ಕಾಲ್ ಮಾಡಿ ಅವರ ಕಡೆ ಸಂಬಂಧಿಕರಿಗೆ ತೋರಿಸುತ್ತಿರುವುದು ಗಮನಿಸಿದೆ, ಈ ಫೋನ್ ತಂತ್ರಜ್ಞಾನ ಇವಕ್ಕೆಲ್ಲಾ ಹಣ ಇರುತ್ತೆ, ಆರೋಗ್ಯ ಎಂದರೆ ಅಸಡ್ಡೆ ಎಂದು ಬೈಕೊಂಡು ಹೊರಟೆ.


ಕೆಳಗೆ ಇಳಿದರೆ ಇನ್ನೊಂದು ಹುಡುಗಿ ಹೆರಿಗೆಗೆ ನಿಂತಿದ್ದಳು, ಈಗಾಗಲೇ ಒಂದು ಸಾಹಸ ಮುಗಿಸಿ ಬಂದಿದ್ದೆ, ಆದರೆ "ಈ ಸಮಸ್ಯೆಗಳ ಸವಾಲಲ್ಲಿ ಈಜುವುದೇ ನಮ್ಮ ಬದುಕು". ಅವರಿಗೂ ಪರಿಸ್ಥಿತಿ ತಿಳಿಸಿ ಖಾಸಗಿ ಆಸ್ಪತ್ರೆ ಹೋಗಬೇಕಾದರೆ ಸಮ್ಮತಿ ಇದೆಯಾ ಕೇಳಿ ದಾಖಲಿಸಿ ರಾತ್ರಿ ಸಹಜ ಹೆರಿಗೆ ನಮ್ಮಲ್ಲಿಯೇ ಆಗಲು ನಿಟ್ಟುಸಿರು ಬಿಟ್ಟು ಮಲಗಿದೆ.


ಪ್ರತಿ ದಿನ ರೌಂಡ್ಸ್ ಮಾಡುವಾಗ ಅವರ ಗಂಡಸರು ಬಂದು ನನ್ನ ಭೇಟಿ ಮಾಡಿಲ್ಲ ಎಂಬುದನ್ನು ಅವರಿಗೆ ನೆನಪಿಸಿದೆ, ಕಡೇ ಪಕ್ಷ ಡಿಸ್ಚಾರ್ಜ್ ದಿನ ಬರಲಿ, ನೀನು ನಿನ್ನ ಗಂಡ ಮಗು ಸಮೇತ ಅನಸ್ತೇಶಿಯಾ ವೈದ್ಯರನ್ನು ಭೇಟಿ ಮಾಡಿ ಕನಿಷ್ಠ ಸ್ವಲ್ಪ ಸಿಹಿ ಹಣ್ಣಾದರೂ ಕೊಟ್ಟು ಅವರಿಗೆ ಧನ್ಯವಾದ ಹೇಳಿ ಬನ್ನಿ ಎಂದು ಪ್ರತಿ ದಿನ ಹೇಳಿದೆ. ಅವಳು ಪ್ರತಿ ಬಾರಿ "ಸರಿ ಮೇಡಂ " ಎನ್ನುತ್ತಿದ್ದಳು. 


ನನ್ನ ಉದ್ದೇಶ "ಮಾನವೀಯ ಗುಣವುಳ್ಳ ವೈದ್ಯರು ಕ್ಷೀಣಿಸಿ ಹಣವೇ ಕೈ ಮೇಲೆ ಮಾಡಿ ವೈದ್ಯ ವೃತ್ತಿ ಪಾವಿತ್ರ್ಯತೆ ವ್ಯಾಪಾರೀಕರಣವಾಗುತ್ತಿರಲು ಇಂತಹ ವೈದ್ಯರಿಗೆ ಅಭಿನಂದಿಸಿ ಗೌರವಿಸಿ ಮುಂದೊಮ್ಮೆ ಯಾರಾದರೂ ಅವರನ್ನು ವಿನಂತಿಸಿದರೆ ಈ ಬಾರಿಯಂತೆ ಅವರ ಕಾರಿನ ಚಕ್ರ ತಿರುಗಿ ರೋಗಿ ಜೀವ ಉಳಿಸುವಂತಾಗಲಿ ಹೊರತು ಮತ್ತೇನಿಲ್ಲ". ನಮ್ಮ ಕೆಲಸದ ಶ್ರೇಷ್ಠತೆ ನಾವಲ್ಲದೆ ಮತ್ತ್ಯಾರು ಜನರಿಗೆ ಮನವರಿಕೆ ಮಾಡಲು ಸಾಧ್ಯ, ಅವಳು ನನ್ನ ಪ್ರತಿ ಮಾತಿಗೂ ತಲೆಯಾಡಿಸಿ ಸರಿ ಎಂದಳು.


ಅಂದು ಅವಳ ಡಿಸ್ಚಾರ್ಜ್ ದಿನ, ನಾನು ಅವಳನ್ನು ಪರೀಕ್ಷಿಸಿ ಸರಿ ಮನೆಗೆ ಹೋಗಬಹುದು ಎಂದು ಹೇಳಿದ್ದೆ. ಎಲ್ಲಾ ಪ್ರಕ್ರಿಯೆ ಮುಗಿಸಿ ನನ್ನ ಬಳಿ ಅನಸ್ತೇಶಿಯಾ ವೈದ್ಯರಿಗೆ ಧನ್ಯವಾದ ಹೇಗೆ ಹೇಳುವುದು ಕೇಳಲು ಬರುತ್ತಾರೆ, ಕನಿಷ್ಠ ಅವರಲ್ಲಿ ಹಣ ಇಲ್ಲವಾದರೆ ನಾನೇ ಒಂದು box ಸಿಹಿ ಹಾಗೂ ಹಣ್ಣು ತರಿಸಿ ಇವರನ್ನು ಅಲ್ಲಿಗೆ ಕಳುಹಿಸೋಣ ಎಂದು ಯೋಚಿಸಿದ್ದೆ. ಸಂಜೆಯಾದರೂ ಅವರ ಸುಳಿವಿಲ್ಲ, ವಾರ್ಡ್ ಗೆ ಹೋಗಿ ನೋಡಿದರೆ ಮಧ್ಯಾಹ್ನವೇ ಗಂಟು ಮೂಟೆ ಕಟ್ಟಿ ಜೂಟ್.


ನನಗೆ ಆಗ ನಗಬೇಕೋ? ಕೋಪ ಮಾಡಿಕೊಳ್ಳಬೇಕೋ?? ತಿಳಿಯಲಿಲ್ಲ, ಏಕೆಂದರೆ ನನಗೆ ಇದು ಮೊದಲಲ್ಲ. ಅವರ ಆರ್ಥಿಕ ಪರಿಸ್ಥಿತಿ, ಮನೆಯ ಪರಿಸ್ಥಿತಿ ಎಲ್ಲಾ ಅರ್ಥ ಮಾಡಿಕೊಂಡು ಅವರಿಗೆ ಹೊರೆಯಾಗಬಾರದೆಂದು ಎಷ್ಟೋ ಬಾರಿ ಎಷ್ಟೋ ಸಮಸ್ಯೆ ಮೈ ಮೇಲೆ ಎಳೆದುಕೊಂಡ ಮೇಲೂ ಕನಿಷ್ಠ ಸೌಜನ್ಯಕ್ಕೂ ಒಂದು ಧನ್ಯವಾದ ಹೇಳಲು ಬರದೆ ಹೋಗುವ ರೋಗಿಗಳ ಗುಂಪು ಸರ್ವೇಸಾಮಾನ್ಯ. ಇಂಥವರಿಂದಲೇ ರೋಗಿ ವೈದ್ಯರ ಸಂಬಂಧ ಹದಗೆಟ್ಟು ಪ್ರತಿ ವೈದ್ಯ ರೋಗಿಯನ್ನು ಒಬ್ಬ ಸಂಚು ಹಾಕಿ ಮೋಸ ಮಾಡುವ ಸಮಯ ಸಾಧಕರಂತೆ ನೋಡುವ ಹಂತಕ್ಕೆ ವ್ಯವಸ್ಥೆ ತಲುಪಿರುವುದು ಕಹಿ ವಾಸ್ತವ.


ನನ್ನ ಪೋಸ್ಟ್ ಡ್ಯೂಟಿ ಆಫ್ ದಿನ, ಅನಸ್ತೇಶಿಯಾ ವೈದ್ಯರು ಇರಲಿಲ್ಲ, ಸುಮ್ಮನೆ ಬೆಳಿಗ್ಗೆಯೇ ಮಂಗಳೂರಿಗೆ ಸಾಗು ಹಾಕಿದ್ದರೆ, ಅಥವಾ ಲಿಖಿತವಾಗಿ ಅನಸ್ತೇಶಿಯಾ ವೈದ್ಯರು ಇಲ್ಲದ ಕಾರಣ ಕೊನೆ ಹಂತಕ್ಕೆ ತುರ್ತು ಪರಿಸ್ಥಿತಿ ಎದುರಾದರೆ ಹತ್ತಿರದ ಖಾಸಗಿ ಆಸ್ಪತ್ರೆಗೆ ಹೋಗಲು ಅವರಿಂದ ಸಮ್ಮತಿ ಪತ್ರವಿತ್ತು- ಸಂಜೆ ಸುಮ್ಮನೆ ಆಂಬುಲೆನ್ಸ್ ಕೊಟ್ಟು ಹೋಗಿ ಎಂದಿದ್ದರೂ ಯಾರೂ ನನ್ನನ್ನು ಪ್ರಶ್ನಿಸುತ್ತಿರಲಿಲ್ಲ, ಆದರೆ ಒಂಬತ್ತು ತಿಂಗಳು ಸತತ ನಮ್ಮಲ್ಲಿ ಪರೀಕ್ಷೆಗೆ ಬಂದ ಹುಡುಗಿ, ಏನಾದರೂ ಸಹಾಯವಾದರೆ, ಇಲ್ಲಿಯೇ ಸಹಜ ಹೆರಿಗೆಯಾದರೆ ಎನ್ನುವ ನನ್ನ ಹೆಂಗರುಳು ಅಂದು ಮತ್ತೆ ಸೋತಿತ್ತು. ಅನಸ್ತೇಶಿಯಾ ವೈದ್ಯರು ಅವರಿಗೆ ಅಪರಿಚಿತರು, ಕನಿಷ್ಠ ಅವರಿಗಾಗಿ ಅಷ್ಟು ಒದ್ದಾಡಿದ ನನ್ನನ್ನೂ ಅವರು ಕಾಣಲು ಬರದೇ ಹೋದಾಗ, ಆ ದಿನ ಏನಾದರೂ ಅಪಾಯವಾಗಿ ಮಗು ಅಥವಾ ತಾಯಿಗೆ ಅಪಾಯವಾಗಿದ್ದರೆ ಆ ಗಂಡಸರು ಹೀಗೆ ಮನೆಯಲ್ಲಿ ಸುಮ್ಮನೆ ಕೂರುತ್ತಿದ್ದರಾ?? ನನ್ನ ಮೇಲೆ ದೊಂಬಿ ಎಬ್ಬಿಸಿ ಸುದ್ದಿ ಮಾಡಿ ಗಲಾಟೆ ಮಾಡುತ್ತಿರಲಿಲ್ಲವಾ?? "ಅಪಾಯವಾದರೆ ವೈದ್ಯರು ಕಾರಣ, ಉಪಕಾರ ಮಾಡಿದರೆ ಅವರ ಪಾತ್ರ ಶೂನ್ಯ- ಅದು ಕೇವಲ ಅವರ ಸಂಬಳಕ್ಕೆ ಅವರು ಮಾಡಿದ ಕರ್ತವ್ಯ" ನಮ್ಮ ರೋಗಿಗಳ ಲೆಕ್ಕಾಚಾರಕ್ಕೆ ನಕ್ಕು ಸುಮ್ಮನಾದೆ.


ನನಗೇನೂ ನನ್ನ ರೋಗಿ, ಸರ್ಕಾರಿ ವೈದ್ಯ ಜವಾಬ್ಧಾರಿ, ಆದರೆ ಆ ಖಾಸಗಿ ವೈದ್ಯರು ಮಾನವೀಯ ದೃಷ್ಟಿಯಿಂದ ಬಂದರು, ಅವರಿಗೆ ಕನಿಷ್ಠ ಒಂದು ಧನ್ಯವಾದ ತಲುಪಲಿಲ್ಲ ಬೇಸರ ತುಂಬಾ ಕಾಡಲು, ರೋಗಿಯೇ ಕೊಟ್ಟದ್ದು ಎಂದು ಅವರಿಗೆ ಧನ್ಯವಾದದ ರೂಪದಲ್ಲಿ ಅವರ ಕೃತಜ್ಞತೆ ತಲುಪಿಸಿದ ಮೇಲೆ ಸ್ವಲ್ಪ ಸಮಾಧಾನವಾಯಿತು. ಏಕೆಂದರೆ ಅಂದು ಅವರು ವಾಪಸ್ಸು ಬರದೇ ಮುಂದೆ ಹೋಗಿದ್ದರೆ ನಮ್ಮೆದುರು ಬಹಳಷ್ಟು ಅಪಾಯಗಳ ಸರಮಾಲೆಯೇ ಎದುರು ನಿಲ್ಲುತ್ತಿತ್ತು. ರೋಗಿಗಳು ಇಲ್ಲಿ ಏನಾಗಿದ್ದರೂ- ನಮ್ಮೆಲ್ಲರ ಉದ್ದೇಶ ಅಂದು ಎಲ್ಲರನ್ನೂ ಕಾದಿತ್ತು.


ಹೀಗೆ ಬಹಳಷ್ಟು ರೋಗಿಗಳು ನಾವು ಅವರಿಗಾಗಿ ತನು ಮನ ಧನ ಎಲ್ಲವನ್ನೂ ಸಮರ್ಪಣೆ ಮಾಡಿದರೂ ಎಲ್ಲವೂ ಕ್ಷುಲ್ಲಕ ಎಂಬಂತೆ ಗಂಟು ಮೂಟೆ ಕಟ್ಟಿಕೊಂಡು ಮರೆಯಾಗಿಬಿಡುತ್ತಾರೆ. ಬಹುಶಃ ಇದೊಂದು ಕಾರಣ ಸಾಕು ನಾವು ರೋಗಿಗಳನ್ನು ನಂಬದಿರಲು, ಪ್ರಶ್ನಿಸಲು, ಅಸಹನೆ ತೋರಲು. ಮುಂದೆ ಎಂದೇ ಅನಸ್ತೇಶಿಯಾ ವೈದ್ಯರ ಅನುಪಸ್ಥಿತಿ ದಿನ ರೋಗಿಗಳನ್ನು ಇನ್ನೇನು ಕೆಲವೇ ಗಂಟೆಯಲ್ಲಿ ಸಹಜ ಹೆರಿಗೆಯಾಗಬಹುದು ಎಂದರು ಧೈರ್ಯವಾಗಿ ದಾಖಲಿಸಲು ಈ ಘಟನೆ ನಮ್ಮನ್ನು ಪ್ರಶ್ನಿಸುತ್ತದೆ, ಈಗ ಸಮ್ಮತಿಸಿ ಮುಂದೆ ತಿರುಗಿ ಬಿದ್ದರೆ ಎಂಬ ಅನುಮಾನಗಳು ಎಚ್ಚರಿಕೆ ಗಂಟೆಯಾಗುತ್ತದೆ.


ಅದೇನೇ ಇರಲಿ "ಎಲ್ಲಿಯವರೆಗೂ ರೋಗಿ ವೈದ್ಯರ ಮಧ್ಯೆ ನಂಬಿಕೆ ಎಂಬ ಬುನಾದಿ ಗಟ್ಟಿಯಾಗುವುದಿಲ್ಲ ಅಲ್ಲಿಯವರೆಗೂ ಯಾವುದೇ ಔಷಧಿ ಕೆಲಸ ಮಾಡುವುದಿಲ್ಲ" . 


ನಮ್ಮ ರೋಗಿ ನಮ್ಮ ಮಾತು ತೆಗೆದು ಹಾಕುವುದಿಲ್ಲ, ಹಾಕಿದ ಗೆರೆ ದಾಟುವುದಿಲ್ಲ, ಅವರಿಗಾಗಿ ನಾವು ಶಕ್ತಿಮೀರಿ ಪ್ರಯತ್ನ ಮಾಡಬೇಕು ಎಂಬ ಸಂಕಲ್ಪ ನಮಗಿರಬೇಕು, ಅಂತೆಯೇ ವೈದ್ಯರು ಬರೀ ಬಾಯಿ ಮಾತಿಗಷ್ಟೇ ದೇವರಾಗದೆ, ಅವರ ನಿರ್ಧಾರ ನಮ್ಮ ಒಳಿತಿಗೇ, ಅವರಿಗೆ ಶಿರಬಾಗಿ ನಮ್ಮನ್ನು ಸಮರ್ಪಿಸಿಕೊಂಡು ಗುಣಮುಖರಾಗಬೇಕು ಎಂಬ ಭಾವ ರೋಗಿಗಿರಬೇಕು. ಈ ಮಧ್ಯೆ ಎಂದು ಹಣ, ಅಪನಂಬಿಕೆಯ ಗೋಡೆ ಎದ್ದು ನಿಲ್ಲುತ್ತದೆಯೋ ಅಲ್ಲಿಗೆ ವೃತ್ತಿ ತನ್ನ ಪಾವಿತ್ರ್ಯತೆ ಕಳೆದುಕೊಂಡು ಅದರ ಘನತೆ ಕುಂದುತ್ತದೆ.


ನಿಮಗಾಗಿ ನಾವಿರಬೇಕೆಂದರೆ, ನಮ್ಮ ಜೊತೆಯಾಗಿ ನೀವು ಬರಬೇಕಲ್ಲವೇ??


ವೈದ್ಯ ವೃತ್ತಿ ಘನತೆ ಕಾಯುವ ಬದ್ಧತೆ ನಮಗೆಷ್ಟು ಜವಾಬ್ಧಾರಿಯೋ, ನಿಮ್ಮ ನಡುವಳಿಕೆ ನಂಬಿಕೆ ವೈದ್ಯರ ಅಸ್ತಿತ್ವಕ್ಕೆ ಒಂದು ಸುಸ್ಥಿರ ಕೊಡುಗೆ ಎನ್ನುವುದು ಅಷ್ಟೇ ವಾಸ್ತವ.


ಇಬ್ಬರೂ ಸಮಯಸಾಧಕರಾಗದೆ ಆ ಸಮಯ ನಮ್ಮಿಂದ ಬಯಸುವ ಒಂದು ಕೈಂಕರ್ಯಕ್ಕೆ ಜೊತೆಯಾದರೆ ಮಾನವೀಯ ಸಂಬಂಧಗಳು ಇನ್ನೂ ಬೆಳೆಯುತ್ತವೆ, ವೈದ್ಯಕೀಯ ಕ್ಷೇತ್ರ ಇನ್ನೂ ಪಾವಿತ್ರ್ಯತೆ ಕಂಡುಕೊಳ್ಳುತ್ತದೆ.


- ಡಾ ಶಾಲಿನಿ ವಿ ಎಲ್ 

ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆ 

ಸಾರ್ವಜನಿಕ ಆಸ್ಪತ್ರೆ ಸುಳ್ಯ

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top