ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿಯೇ ಅತಿ ದೊಡ್ಡ ಹಾಗೂ ಅತ್ಯಂತ ವೈಶಿಷ್ಟ್ಯಪೂರ್ಣ ಜಾತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಪ್ರಸಿದ್ಧ ಮಾರಿ ಜಾತ್ರೆ ಭಕ್ತಿಭಾವ, ಸಂಪ್ರದಾಯ ಮತ್ತು ಸಾಂಸ್ಕೃತಿಕ ವೈಭವದ ನಡುವೆ ವಿಧಿವತ್ತಾಗಿ ಆರಂಭಗೊಳ್ಳುತ್ತದೆ. ಜನರ ಕಷ್ಟ-ಕಾರ್ಪಣ್ಯಗಳನ್ನು ನಿವಾರಿಸುವ ಶಕ್ತಿದೇವಿಯಾಗಿ ಆರಾಧಿಸಲ್ಪಡುವ ಮಾರಿಯಮ್ಮನ ಮೇಲಿನ ಜನರ ಅಪಾರ ನಂಬಿಕೆ, ಈ ಜಾತ್ರೆಯ ಪ್ರತಿಯೊಂದು ಆಚರಣೆಯಲ್ಲೂ ಸ್ಪಷ್ಟವಾಗಿ ಗೋಚರಿಸುತ್ತದೆ.
ಬೆಳಗಿನ ಜಾವ ಐದು ಗಂಟೆಗೆ ಮಣ್ಕುಳಿಯ ಮಾರುತಿ ಆಚಾರಿಯವರ ಮನೆಯಿಂದ ಉತ್ಸವ ಮೂರ್ತಿಯನ್ನು ಮೆರವಣಿಗೆಯ ಮೂಲಕ ಕರೆತಂದು, ಬೆಳಿಗ್ಗೆ ಆರು ಗಂಟೆಗೆ ಪೂಜಾ-ಪುನಸ್ಕಾರಗಳೊಂದಿಗೆ ಮಾರಿಗುಡಿಯ ಗದ್ದುಗೆಯಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಮುಂಜಾನೆಯಿಂದಲೇ ದೂರದೂರಿನ ಗ್ರಾಮಗಳಿಂದ ಸಾವಿರಾರು ಭಕ್ತರು ಆಗಮಿಸಿ ದೇವಿಗೆ ಪೂಜೆ ಸಲ್ಲಿಸಿ ತಮ್ಮ ಹರಕೆಗಳನ್ನು ಸಮರ್ಪಿಸುತ್ತಾರೆ
ತಲೆತಲಾಂತರಗಳಿಂದ ನಡೆದು ಬಂದಿರುವ ಈ ಜಾತ್ರೆ ಕೇವಲ ಧಾರ್ಮಿಕ ಆಚರಣೆಯಲ್ಲ; ಜನಪದ ನಂಬಿಕೆ, ಸಾಮಾಜಿಕ ಪರಂಪರೆ ಮತ್ತು ಸಾಂಸ್ಕೃತಿಕ ಬದುಕಿನ ಪ್ರತೀಕವಾಗಿದೆ. ಮಾರಿ ಜಾತ್ರೆಯ ಉಗಮದ ಕುರಿತು ಹಲವು ಕಥೆಗಳು ಜನಮಾನಸದಲ್ಲಿ ಜೀವಂತವಾಗಿವೆ. ಸಂಪ್ರದಾಯಬದ್ಧ ಮನೆತನದ ಹೆಣ್ಣನ್ನು ವರಿಸಿದ ಕೆಳವರ್ಗದ ಯುವಕನನ್ನು ಮಾರಿಯಾಗಿ ಬೆನ್ನಟ್ಟಿದ ಕಥೆಯೊಂದು ಪ್ರಸಿದ್ಧವಾಗಿದ್ದರೆ, ಮತ್ತೊಂದೆಡೆ ಊರನ್ನು ಸಾಂಕ್ರಾಮಿಕ ರೋಗಗಳಿಂದ ರಕ್ಷಿಸುವ ಶಕ್ತಿ ಸ್ವರೂಪಳಾಗಿ ಮಾರಿಯಮ್ಮನನ್ನು ಆರಾಧಿಸುವ ನಂಬಿಕೆಯೂ ಇದೆ.
ಎರಡು ದಿನಗಳ ಕಾಲ ಮಾರಿಕಾಂಬಾ ದೇವಾಲಯದ ಗದ್ದುಗೆಯಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಎರಡನೇ ದಿನ ಸಂಜೆ ಸಾವಿರಾರು ಭಕ್ತರ ಭವ್ಯ ಮೆರವಣಿಗೆಯೊಂದಿಗೆ ಮಾರಿಯಮ್ಮನ ಉತ್ಸವ ಮೂರ್ತಿಯನ್ನು ಸುಮಾರು ಐದಾರು ಕಿಲೋಮೀಟರ್ ದೂರದ ಜಾಲಿಕೋಡಿ ಸಮುದ್ರ ತೀರಕ್ಕೆ ಕೊಂಡೊಯ್ದು ವಿಸರ್ಜಿಸಲಾಗುತ್ತದೆ. ಮರದಿಂದ ನಿರ್ಮಿಸಿದ ಮೂರ್ತಿಯ ಅಂಗಗಳನ್ನು ಬೇರ್ಪಡಿಸುವ ಮೂಲಕ ಊರಿಗೆ ಯಾವುದೇ ರೋಗ-ರುಜಿನಗಳು ಬಾರದಿರಲಿ ಎಂದು ಭಕ್ತರು ಪ್ರಾರ್ಥಿಸುವುದು ಇಲ್ಲಿನ ವಿಶಿಷ್ಟ ಆಚರಣೆ. ಈ ಸಂದರ್ಭ ಸಮುದ್ರ ತೀರದಲ್ಲಿ ಭಕ್ತಸಾಗರವೇ ನೆರೆದಿರುತ್ತದೆ.
ಹಿಂದೆ ಹರಕೆ ತೀರಿಸುವ ಸಲುವಾಗಿ ಕುರಿ ಮತ್ತು ಕೋಳಿಗಳನ್ನು ಬಲಿ ನೀಡುವ ಪದ್ಧತಿ ಇದ್ದಿತೆಂದು ಹಿರಿಯರು ನೆನಪಿಸುತ್ತಾರೆ. ಆದರೆ ಸರ್ಕಾರದ ಪ್ರಾಣಿ ಬಲಿ ನಿಷೇಧ ಕಾಯ್ದೆ ಹಾಗೂ ಸಮಾಜದ ಒಮ್ಮತದ ಹಿನ್ನೆಲೆಯಲ್ಲಿ ಈಗ ಆ ಪದ್ಧತಿ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಅದರ ಬದಲಾಗಿ ಭಕ್ತರು ಹೂವು, ಹಣ್ಣು, ಬೆಳ್ಳಿಯ ಕಣ್ಣು, ಹಸಿರು ಬಳೆ, ಉಡಿ, ಸೀರೆ, ದೇವಿಗೆ ಬಣ್ಣ ಬಳಿಯುವ ಸೇವೆ, ಹೂವಿನ ಟೋಪಿ ಮುಂತಾದ ಕಾಣಿಕೆಗಳನ್ನು ಸಮರ್ಪಿಸಿ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ.
ಹಿಂದೆ ಮಾರಿಕಟ್ಟೆಯಲ್ಲಿದ್ದ ಆಲದ ಮರದ ಬುಡದಲ್ಲಿ ನಡೆಯುತ್ತಿದ್ದ ಈ ಜಾತ್ರೆ, ಕಾಲಾನುಸಾರ ಕೆಲವು ಬದಲಾವಣೆಗಳನ್ನು ಕಂಡರೂ ತನ್ನ ಮೂಲ ಸಂಪ್ರದಾಯ ಮತ್ತು ಉದ್ದೇಶವನ್ನು ಉಳಿಸಿಕೊಂಡೇ ಇಂದು ಮಾರಿಗುಡಿಯಲ್ಲಿ ವಿಜೃಂಭಣೆಯಿಂದ ನಡೆಯುತ್ತದೆ.
ಆಷಾಢ ಅಮಾವಾಸ್ಯೆಯ ಹಿಂದಿನ ಗುರುವಾರಕ್ಕೆ ಎಂಟು ದಿನ ಮೊದಲು ಊರ ಹೊರವಲಯದಲ್ಲಿರುವ ಅಮಟೆ ಮರವನ್ನು ಆಯ್ಕೆ ಮಾಡಿ ವಿಶೇಷ ಪೂಜೆ ಸಲ್ಲಿಸಿ ಕಡಿದು, ಸಂಪ್ರದಾಯದಂತೆ ಮಣ್ಕುಳಿಕೇರಿಯ ಮಾರುತಿ ಆಚಾರಿಯವರ ಮನೆಗೆ ತರಲಾಗುತ್ತದೆ. ಈ ವರ್ಷ ಮುಂಡಳ್ಳಿಯ ಗಣಪತಿ ದೇವಡಿಗ ಬದ್ರಯ್ಯನ ಮನೆಯವರ ತೋಟದ ಅಮಟೆ ಮರವನ್ನು ಅಯ್ಕೆ ಮಾಡಿ ಅಲ್ಲಿಯೇ ಮೂರು ದಿನಗಳ ಕಾಲ ಮೂರ್ತಿಯ ದೇಹ ಮುಖ ಭಾಗವನ್ನು ನಿರ್ಮಿಸಿ ಮುಂಡಳ್ಳಿಯ ಸಮಸ್ತ ಸಮಾಜ ಬಾಂಧವರು ಮತ್ತು ಹೆಂಗಳೆಯರಿಂದ ಉಡಿ ತುಂಬುವ ಕಾರ್ಯ ಮಾಡಿ ಮೆರವಣಿಗೆ ಮೂಲಕ ಶುಕ್ರವಾರ ಮಣ್ಕುಳಿ ಮಾರಿ ಗದ್ದುಗೆಗೆ ತರಲಾಯಿತು. ಅಲ್ಲಿಂದ ಆಚಾರಿ ಕುಟುಂಬದವರು ತಮ್ಮ ಮನೆಯಲ್ಲಿ ಮಾರಿಯಮ್ಮನ ಮೂರ್ತಿಗೆ ಪೂರ್ಣ ರೂಪ ಕೊಡಲು ಆರಂಭಿಸುತ್ತಾರೆ. ಜಾತ್ರೆಯ ಮುನ್ನಾದಿನ ರಾತ್ರಿ ಸಮಾಜದವರಿಗೆ ಅನ್ನಸಂತರ್ಪಣೆ ನಡೆಸಿ, ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಮರುದಿನ ಬೆಳಿಗ್ಗೆ ಭವ್ಯ ಮೆರವಣಿಗೆಯೊಂದಿಗೆ ಮಾರಿಯಮ್ಮನನ್ನು ಮಾರಿಗುಡಿಗೆ ಕರೆತಂದು ಪ್ರತಿಷ್ಠಾಪಿಸಿದ ಬಳಿಕ ಜಾತ್ರೆಯ ಅಧಿಕೃತ ಕಾರ್ಯಕ್ರಮಗಳಿಗೆ ಚಾಲನೆ ದೊರೆಯುತ್ತದೆ.
ಮಾರಿ ಜಾತ್ರೆಯ ಮತ್ತೊಂದು ವಿಶೇಷವೆಂದರೆ ಮೊದಲ ದಿನ ಗ್ರಾಮೀಣ ಭಾಗದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪೂಜೆ ಸಲ್ಲಿಸಿದರೆ, ಎರಡನೇ ದಿನ ಪಟ್ಟಣ ಭಾಗದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವುದು. ಹೊಸದಾಗಿ ವಿವಾಹವಾದ ದಂಪತಿಗಳು ದೇವಿಯ ಆಶೀರ್ವಾದ ಪಡೆಯಲು ಆಗಮಿಸುವುದು ಈ ಜಾತ್ರೆಯ ಮತ್ತೊಂದು ವಿಶೇಷ ಆಕರ್ಷಣೆ.
ಶಕ್ತಿಯ ಪ್ರತೀಕವಾಗಿರುವ ಮಾರಿಯಮ್ಮನಿಗೆ ಬೆಳ್ಳಿಯ ಕಣ್ಣು ಸಮರ್ಪಿಸುವ ಪದ್ಧತಿ ಅತ್ಯಂತ ಜನಪ್ರಿಯವಾಗಿದೆ. ಜಾತ್ರೆಯ ವೇಳೆ "ಕಣ್ಣು... ಕಣ್ಣು..." ಎಂದು ಕೂಗುತ್ತಾ ಬೆಳ್ಳಿಯ ಕಣ್ಣುಗಳನ್ನು ಮಾರುವ ಸುವರ್ಣಕಾರರ ಧ್ವನಿಯೇ ಜಾತ್ರೆಯ ಕಳೆ ಹೆಚ್ಚಿಸುತ್ತದೆ. ಭಕ್ತರ ಹೆಸರಿನಲ್ಲಿ ದೇವಿಗೆ ಬಣ್ಣ ಬಳಿಯುವ ಹರಕೆಯೂ ವಿಶೇಷವಾಗಿ ನೆರವೇರುತ್ತದೆ.
ಎರಡು ದಿನಗಳಷ್ಟೇ ನಡೆಯುವ ಈ ಜಾತ್ರೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ತಮ್ಮ ಹರಕೆಗಳನ್ನು ಸಲ್ಲಿಸಿ ಕೃತಾರ್ಥರಾಗುತ್ತಾರೆ. ಮಳೆಗಾಲದ ಆರಂಭದಲ್ಲಿ ಸಂಬಂಧಿಗಳನ್ನು ಒಂದೆಡೆ ಸೇರಿಸುವ, ಹೊಸ ದಾಂಪತ್ಯ ಜೀವನಕ್ಕೆ ಶುಭಾರಂಭದ ಸಂಕೇತವಾಗುವ, ಸಾಂಕ್ರಾಮಿಕ ರೋಗಗಳಿಂದ ಸಮಾಜವನ್ನು ಕಾಪಾಡಲೆಂದು ದೇವಿಯಲ್ಲಿ ಪ್ರಾರ್ಥಿಸುವ ಜನರ ಭಕ್ತಿ ಮತ್ತು ನಂಬಿಕೆಯ ಮಹಾ ಸಂಭ್ರಮವೇ ಭಟ್ಕಳದ ಮಾರಿ ಜಾತ್ರೆ.
ಸಂಪ್ರದಾಯ, ಸಂಸ್ಕೃತಿ, ಸಮುದಾಯ ಮತ್ತು ಭಕ್ತಿಯ ಸಮ್ಮಿಲನವೇ ಭಟ್ಕಳದ ಮಾರಿ ಜಾತ್ರೆ. ಕಾಲ ಬದಲಾದರೂ ಅದರ ನಂಬಿಕೆ, ಆಚರಣೆ ಮತ್ತು ವೈಭವ ಮಾತ್ರ ಇಂದಿಗೂ ಅಚಲವಾಗಿ ಉಳಿದಿದೆ. ಉಳಿಯುತ್ತಲೇ ಇರುತ್ತದೆ.ಜೈ ಮಾರಿಕಾಂಬೆ.
- ಉಮೇಶ ಮುಂಡಳ್ಳಿ, ಭಟ್ಕಳ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


