ವ್ಯಕ್ತಿತ್ವ ನಿರ್ಮಾಣಕ್ಕೆ ಶಿಕ್ಷಣದೊಂದಿಗೆ ಸಂಸ್ಕಾರವೂ ಬೇಕು: ಪುರೋಹಿತ ನಾಗರಾಜ ಭಟ್
ಪುತ್ತೂರು: ವ್ಯಾಸ ಪೂರ್ಣಿಮೆಯು ಅಜ್ಞಾನದ ಕತ್ತಲೆಯನ್ನು ದೂರ ಮಾಡಿ ಜ್ಞಾನದ ದೀಪ ಬೆಳಗಿಸಿದ ಮಹರ್ಷಿ ವ್ಯಾಸರನ್ನು ಸ್ಮರಿಸುವ ಅತ್ಯಂತ ಶ್ರೇಷ್ಠ ದಿನವಾಗಿದೆ. ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೆ ಶಿಕ್ಷಣದೊಂದಿಗೆ ಸಂಸ್ಕಾರವೂ ಅಗತ್ಯವಾಗಿದ್ದು, ಪ್ರತಿಯೊಬ್ಬರ ಜೀವನದಲ್ಲಿ ಗುರುವಿನ ಸ್ಥಾನ ಅತ್ಯುನ್ನತವಾಗಿದೆ ಎಂದು ಬ್ರಹ್ಮಶ್ರೀ ಪುರೋಹಿತ ನಾಗರಾಜ ಭಟ್ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿ.ಬಿ.ಎಸ್.ಇ. ಸಂಸ್ಥೆಯಲ್ಲಿ ಆಯೋಜಿಸಲಾದ ವ್ಯಾಸ ಪೂರ್ಣಿಮಾ ಆಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಬುಧವಾರ ಮಾತನಾಡಿದರು.
ಸಮರ್ಥ ರಾಮದಾಸರು ಛತ್ರಪತಿ ಶಿವಾಜಿ ಮಹಾರಾಜರ ರಾಜಕೀಯ ಹಾಗೂ ಆಧ್ಯಾತ್ಮಿಕ ಜೀವನಕ್ಕೆ ಮಾರ್ಗದರ್ಶಕರಾಗಿದ್ದರು. ಹರಿಹರ ಮತ್ತು ಬುಕ್ಕರಾಯರಿಗೆ ವಿದ್ಯಾರಣ್ಯ ಸ್ವಾಮಿಗಳು ಮಾರ್ಗದರ್ಶನ ನೀಡಿ ಸಾಮ್ರಾಜ್ಯ ನಿರ್ಮಾಣಕ್ಕೆ ಪ್ರೇರಣೆಯಾಗಿದ್ದರು. ಶ್ರೀರಾಮಕೃಷ್ಣ ಪರಮಹಂಸರು ಸ್ವಾಮಿ ವಿವೇಕಾನಂದರ ಸಂಶಯಗಳನ್ನು ನಿವಾರಿಸಿ ಅವರನ್ನು ವಿಶ್ವಪ್ರಸಿದ್ಧ ಆಧ್ಯಾತ್ಮಿಕ ನಾಯಕನನ್ನಾಗಿ ರೂಪಿಸಿದರು. ಹೀಗೆ ಪ್ರತಿಯೊಬ್ಬ ಮಹಾನ್ ವ್ಯಕ್ತಿಯ ಯಶಸ್ಸಿನ ಹಿಂದೆ ಒಬ್ಬ ಶ್ರೇಷ್ಠ ಗುರುವಿನ ಮಾರ್ಗದರ್ಶನ ಇರುತ್ತದೆ ಎಂದು ಹೇಳಿದರು.
ಗುರುಪರಂಪರೆಯನ್ನು ಉಳಿಸಿ, ಸನಾತನ ಸಂಸ್ಕೃತಿಯನ್ನು ಬೆಳೆಸುತ್ತಾ ದೈಹಿಕ, ಮಾನಸಿಕ ಮತ್ತು ಶೈಕ್ಷಣಿಕ ಸಂಸ್ಕಾರಗಳನ್ನು ಅಳವಡಿಸಿಕೊಂಡು ಗುಣ, ವಿನಯಗಳಿಂದ ಕೂಡಿದ ಜೀವನ ನಡೆಸಿದಾಗ ಬದುಕು ಸಾರ್ಥಕವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿಗಳು ಬ್ರಹ್ಮಶ್ರೀ ಪುರೋಹಿತ ನಾಗರಾಜ ಭಟ್ ಅವರ ಪಾದಪೂಜೆ ನೆರವೇರಿಸುವ ಮೂಲಕ ಗುರುವಂದನೆ ನಡೆಸಿದರು.
ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ದೇವರ ಸ್ಥಾನ ನೀಡಲಾಗಿದೆ. ಆಚಾರ್ಯ ದೇವೋ ಭವ ಎಂಬ ಸಂದೇಶವು ಗುರುವಿನ ಮಹತ್ವವನ್ನು ಸಾರುತ್ತದೆ. ಗುರುಭಕ್ತಿ, ನಿಷ್ಠೆ ಹಾಗೂ ಶ್ರದ್ಧೆಯಿಂದ ವಿದ್ಯೆಯನ್ನು ಸಂಪಾದಿಸಿದಾಗ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ ನುಡಿದರು.
ಪ್ರಾಂಶುಪಾಲೆ ಮಾಲತಿ ಡಿ ಹಾಗೂ ಉಪಪ್ರಾಂಶುಪಾಲೆ ಸುಜನಿ ಬೋರ್ಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಗುರುಸ್ತುತಿಯನ್ನು ಸ್ತುತಿಸಿದರು. ಗುರುವಿನ ಮಹತ್ವದ ಕುರಿತು ಕೆ ಎಮ್ ಶಮಿತ ಭಟ್ ಮಾತನಾಡಿದರು. ಶಿಕ್ಷಕಿ ಪ್ರಿಯಶ್ರೀ ಅತಿಥಿಗಳನ್ನು ಪರಿಚಯಿಸಿ, ಅನನ್ಯಾ ಬಿ ಸ್ವಾಗತಿಸಿದರು. ಗುರುಪೂರ್ಣಿಮೆಯ ಬಗ್ಗೆ ಸುಧನ್ವ ಕೆ ಪ್ರಸ್ತಾವನೆಗೈದರು. ಲಾವಣ್ಯ ಪಟ್ಟೆ ವಂದಿಸಿ, ಮನಸ್ವಿ ಎಮ್ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದ ಅಂತ್ಯದಲ್ಲಿ ಮಹರ್ಷಿ ವ್ಯಾಸರ ಭಾವಚಿತ್ರಕ್ಕೆ ಆರತಿ ಬೆಳಗಿ ಗೌರವ ಸಮರ್ಪಿಸಲಾಯಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


