ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯಿಂದ 43ನೇ ಸಾಹಿತ್ಯ ಪಯಣ ಹೆಜ್ಜೆ

Upayuktha
0

 



ಹಾಸನ : ಕೊಟ್ರೇಶ್ ಎಸ್. ಉಪ್ಪಾರ್ ಅವರ “ಪುಟ್ಟಗೂಡಿನ ಪಟ್ಟದರಸಿ” ಕಾದಂಬರಿ ನೈಜ ಬದುಕಿನ ಪ್ರತಿಬಿಂಬವಾಗಿದೆ. ಮಾನವೀಯ ಮೌಲ್ಯಗಳನ್ನು ಅರಹುವಲ್ಲಿ ಕಾದಂಬರಿ ಮಹತ್ತರ ಪಾತ್ರ ವಹಿಸುತ್ತದೆ ಎಂದು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಹಾಸನ ಜಿಲ್ಲಾ ಕಾರ್ಯದರ್ಶಿ ಪ್ರತಿಭಾ ಸುದರ್ಶನ್ ಅಭಿಪ್ರಾಯಪಟ್ಟರು.


ಅವರು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಹಾಸನ ತಾಲ್ಲೂಕು ಘಟಕ ನಗರದ ರಿಂಗ್ ರಸ್ತೆಯಲ್ಲಿರುವ ಉಡುಪಿ ಹೊಟೆಲ್ ಮೊದಲ ಮಹಡಿಯಲ್ಲಿ ಕವಯಿತ್ರಿ ಪದ್ಮಾವತಿ ವೆಂಕಟೇಶ್ ಪ್ರಾಯೋಜಕತ್ವದಲ್ಲಿ ಹಮ್ಮಿಕೊಂಡಿದ್ದ ೪೩ನೇ ಸಾಹಿತ್ಯ ಪಯಣ ಹೆಜ್ಜೆ ಕಾರ್ಯಕ್ರಮದಲ್ಲಿ ಸಾಹಿತಿ ಕೊಟ್ರೇಶ್ ಎಸ್. ಉಪ್ಪಾರ್ ಅವರ “ಪುಟ್ಟಗೂಡಿನ ಪಟ್ಟದರಸಿ” ಕಾದಂಬರಿ ಕುರಿತು ಮಾತನಾಡುತ್ತಿದ್ದರು.


ಬದುಕನ್ನು ಹೀಗೆ ಬದುಕಬೇಕು  ಎಂದು ಬೆಟ್ಟದಷ್ಟು ಆಸೆ ಹೊತ್ತ ಬಡತನದ ರೇಖೆಯ ಒಂದು ಕುಟುಂಬದ ಹೆಣ್ಣುಮಗಳಾದ ಕಮಲಿಯ ಕಥೆ.  ತಂದೆ ತಾಯಿಯ ಮುದ್ದಿನ ಕೂಸಾದವಳು, ಶಾಲೆಯ ಎಲ್ಲ ಶಿಕ್ಷಕರ ನೆಚ್ಚಿನ ವಿದ್ಯಾರ್ಥಿಯಾಗಿ, ಸ್ನೇಹಿತರ ಉತ್ತಮ ಸಹಪಾಠಿಯಾಗಿ, ಮನೆಗೆ, ಶಾಲೆಗೆ, ಊರಿಗೆ ಹೆಸರನ್ನು ತಂದವಳ ಕಥೆ, ಆರಂಭದಲ್ಲಿ ಮನೆಯ ಶಾಲೆಯ ಜೊತೆ ಅವಳ ಒಡನಾಟವನ್ನು, ಅವಳ ಸಾಧನೆಯನ್ನು ಚಿತ್ರಿಸಿರುವ ಪರಿ, ನನ್ನನ್ನೇ ನಾನು ೨೫ವರ್ಷಗಳ ಹಿಂದೆ ಕಂಡಂತಾಗಿ ಮನಸ್ಸು ಭಾವೋದ್ವೇಗಕ್ಕೆ ಒಳಗಾಗಿದ್ದಂತೂ ಸತ್ಯ. ಆಟ, ಪಾಠ, ಕಲೆ, ಭಾಷಣ, ಬರವಣಿಗೆಯ ಜೊತೆ ನಾನು ಅವಳಂತೆ ಸ್ಕೌಟ್ಸ್ ಗೈಡ್ಸ್ ಬದಲಾಗಿ, ಎನ್.ಸಿ.ಸಿ. ಕೆಡೆಟ್ ಆಗಿ ಎಲ್ಲರೊಳಗಿದ್ದು ವಿಭಿನ್ನವಾದ ಪ್ರತಿಭೆ ಹೊಂದಿದ್ದ ಕಾಲವನ್ನು ಈ ಕೃತಿ ಮೇಲುಕು ಹಾಕುವಂತೆ ಮಾಡಿದೆ ಎಂದರು.


ಏನನ್ನೋ ಸಾಧಿಸಬೇಕೆಂಬ ಹಂಬಲ ಹೊತ್ತವಳ ಪಾಲಿಗೆ ಎಲ್ಲವೂ ತನ್ನ ಶ್ರಮಕ್ಕೆ ತಕ್ಕಂತೆ ಪ್ರತಿಫಲ ದೊರೆಯುತ್ತಿದೆ, ಎನ್ನುವ ಕಾಲದಲ್ಲಿ ಏನು ಇಲ್ಲದೆಯೂ ತನ್ನ ಮಗಳಿಗಾಗಿ ಸರ್ವಸ್ವವನ್ನೇ ಧಾರೆ ಎರೆಯುತ್ತಿದ್ದ ಆಕೆಯ ತಂದೆ ತಾಯಿಯನ್ನು ಕಳೆದುಕೊಳ್ಳುವ ಸಂಧರ್ಭ ನಾನು ವಿಧಿಯನ್ನು ಶಪಿಸುವಂತೆ ಮಾಡಿತ್ತು. ಸಕಲವೂ ಆಗಿದ್ದ ಹೆತ್ತವರು, ಶಾಲೆ, ವಿದ್ಯೆಯನ್ನು ಅಗಲಿ, ಅಜ್ಜಿಯೊಂದಿಗೆ ಇನ್ನೂ ಕೀಳಾದ ಬಡತನದ ಜೀವನವನ್ನು ಬಾಳುವುದು, ತನ್ನಿಂದ ಅಜ್ಜಿಗೆ ನೋವಾಗಬಾರದು ಎಂದು ತನ್ನ ಆಸೆ ಕನಸನ್ನು ಬಲಿ ಕೊಟ್ಟ ಆ ಪುಟ್ಟ ಬಾಲೆಯನ್ನು ನೋಡಿದಾಗ ನನ್ನ ೧೩ ವರ್ಷದ ಹಿಂದಿನ ದಿನಗಳು ನೆನೆದು ಎಲ್ಲರ ಬಾಳು ಹೀಗೆಯೇ ಎಂದು ರೋಧಿಸಿದೆ. ಬಣ್ಣದ ಮಾತಿಂದ ಬೆರಗು ಮಾಡಿ, ಆಕೆಯನ್ನು ಅಪಹರಿಸಿದವಳ ಶಪಿಸಿದೆ, ಪುನಃ ಮಂತ್ರಿಗಳು, ಶಿಕ್ಷಕರು, ಮುಖಂಡರು, ಪೊಲೀಸರು ಜೊತೆಗೆ ಆಕೆಯ ಸ್ಕೌಟ್ಸ್ ಗೈಡ್ಸ್ ವಿಧ್ಯಾರ್ಥಿಗಳ ನೆರವಿನಿಂದ, ಮತ್ತು ಕಮಲಿಯ ಸಮಯ ಪ್ರಜ್ಞೆ ಇಂದ, ತನ್ನನು, ಇತರ ಮಕ್ಕಳನ್ನು, ಮತ್ತು ಮುಂದೆ ಆಗಬಹುದಾದ ಅನಾಹುತವನ್ನು ತಪ್ಪಿಸಿದ ಜಾಣ್ಮೆಯನ್ನು ಕಂಡು ಭೇಷ್ ಮಗಳೇ ಎನ್ನುವಷ್ಟು ಹಿಗ್ಗಿದೆ..ಮತ್ತೆ ಅವಳ ಬದುಕು, ಅವಳ ಓದು ಮತ್ತು ಅವಳ ಅಜ್ಜಿಯ ಜೀವನಕ್ಕೆ ಅನುವು ಮಾಡಿಕೊಟ್ಟ ಎಲ್ಲರಿಗೂ ಮನದಲ್ಲೇ ಕೃತಜ್ಞಿಸಿಸಿದೆ ಎಂದರು.


ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಗೌರವಾಧ್ಯಕ್ಷ ರವಿ ನಾಕಲಗೂಡು ಮಾತನಾಡಿ ಕೊಟ್ರೇಶ್ ಎಸ್. ಉಪ್ಪಾರ್ ಅವರು ಸಾಹಿತ್ಯಿಕವಾಗಿ ಹಾಗೂ ಸಂಘಟನಾತ್ಮಕವಾಗಿ ರಾಜ್ಯದಾದ್ಯಂತ ಸಂಚಲನ ಮೂಡಿಸಿದ್ದಾರೆ. ತಾವು ಬೆಳೆಯುವುದಲ್ಲದೇ ಅನೇಕ ಯುವ ಪ್ರತಿಭೆಗಳನ್ನು ಬೆಳೆಸುತ್ತಿದ್ದಾರೆ. ಅವರಿಗೆ ಕನ್ನಡ ಸಾರಸ್ವತ ಕ್ಷೇತ್ರದಲ್ಲಿ ಉಜ್ವಲ ಭವಿಷ್ಯವಿದೆ ಎಂದರು.


ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಜಿಲ್ಲಾಧ್ಯಕ್ಷ ವಾಸು ಸಮುದ್ರವಳ್ಳಿ ಮಾತನಾಡಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಅನೇಕ ಹೊಸ ಬರಹಗಾರರನ್ನು ಬೆಳಕಿಗೆ ತಂದಿರುವಲ್ಲದೇ ಎಲೆಮರೆ ಕಾಯಿಯಂತಹ ಸಾಧಕರನ್ನು ಗುರುತಿಸಿ ಮುನ್ನೆಲೆಗೆ ತರುವಲ್ಲಿ ಕಳೆದ ಏಳೆಂಟು ವರ್ಷಗಳಿಂದ ಸತತವಾಗಿ ಕಾರ್ಯನಿರ್ವಹಿಸುತ್ತಿದೆ. ಕೊಟ್ರೇಶ್ ಎಸ್. ಉಪ್ಪಾರ್ ಅವರ ಸಾರಥ್ಯದಲ್ಲಿ ಜಿಲ್ಲೆಯಲ್ಲದೇ ರಾಜ್ಯದಾದ್ಯಂತ ಅನೇಕ ಯುವ ಪ್ರತಿಭೆಗಳನ್ನು ಮುಖ್ಯವಾಹಿನಿಗೆ ತರುವಲ್ಲಿ ನಮ್ಮ ವೇದಿಕೆ ಯಶಸ್ವೀಯಾಗಿದೆ ಎಂದರು.


ತಾಲ್ಲೂಕು ಅಧ್ಯಕ್ಷ ಕೆ.ಸಿ. ಗೀತಾ ಮಾತನಾಡಿ ಸಾಹಿತ್ಯ ವೇದಿಕೆ ನನ್ನಂತಹ ಅದೆಷ್ಟೋ ಬರಹಗಾರ್ತಿಯರಿಗೆ ಹೊಸ ಬೆಳಕನ್ನು ನೀಡಿದೆ. ಇಲ್ಲಿನ ಕೌಟುಂಬಿಕ ಬಾಂಧವ್ಯ, ಸಮಾನ ಮನಸ್ಸಿನ ಪ್ರೀತಿ, ಸಹೋದರತೆ ನಾವು ಗಟ್ಟಿಯಾಗಿ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದೆ ಎಂದರು.


ಪ್ರಾಯೋಜಕಿ ಹಾಗೂ ಕವಯಿತ್ರಿ ಪದ್ಮಾವತಿ ವೆಂಕಟೇಶ್ ಮಾತನಾಡಿ ಕೊಟ್ರೇಶ್ ಅವರ ಮಾರ್ಗದರ್ಶನದಲ್ಲಿ ನಾವು ಸಾಹಿತ್ಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿ ಕವನ ಸಂಕಲನವನ್ನೂ ಜನಾರ್ಪಣೆ ಮಾಡಿದೆ. ಬರೆದಂತಹ ಕವಿತೆಗಳನ್ನು ತಿದ್ದಿತೀಡಿ ಮಾರ್ಗದರ್ಶನ ಮಾಡುವ ಅವರ ಔದಾರ್ಯಕ್ಕೆ ಚಿರ ಋಣಿ ಎಂದರು.


ವೇದಿಕೆಯಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್, ಜಿಲ್ಲಾಧ್ಯಕ್ಷ ವಾಸು ಸಮುದ್ರವಳ್ಳಿ, ತಾಲ್ಲೂಕು ಅಧ್ಯಕ್ಷೆ ಕೆ.ಸಿ.ಗೀತಾ, ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದೆ ಪೂಜಾ ರಘುನಂದನ್, ಕವಯಿತ್ರಿ ಪದ್ಮಾವತಿ ವೆಂಕಟೇಶ್ ಸೇರಿದಂತೆ ಹಲವರು ಮಾತನಾಡಿದರು.


ಜಿಲ್ಲಾಮಟ್ಟದ ಕವಿಗೋಷ್ಠಿ


ನಂತರ ನಡೆದ ಜಿಲ್ಲಾಮಟ್ಟದ ಕವಿಗೋಷ್ಠಿಯಲ್ಲಿ ಜಿಲ್ಲಾ ಲೇಖಕಿಯರ ಬಳಗದ ಅಧ್ಯಕ್ಷೆ ರಾಜೇಶ್ವರಿ ಹುಲ್ಲೇನಹಳ್ಳಿಯವರ ಹಾಸ್ಯ ಚುಟುಕುಗಳು, ಜಯಾ ರಮೇಶ್ ಅವರ ನಗು, ಎಚ್.ಬಿ. ಚೂಡಾಮಣಿಯವರ ನಿನ್ನ ಸಮೀಪ, ಸಿ.ಎನ್. ನೀಲಾವತಿಯವರ ಭರತಭೂಮಿ, ಚಂದ್ರಕಲಾ ಎಂ. ಆಲೂರುರವರ ನಾವೇಕೆ ಬಡವರಯ್ಯಾ?, ಮಂಜುಳಾ ಪ್ರಸಾದ್ ಅವರ ಬಿಕ್ಕುತಿವೆ ಸರಕಾರಿ ಶಾಲೆಗಳು, ಎಚ್.ಎನ್. ಭಾರತಿಯವರ ಬದುಕುಳಿದರ‍್ಯಾರು, ಸಂತೋಷ ಕುಮಾರಿಯವರ ನನ್ನ ದೇಶ ಕವಿತೆ, ಗಿರಿಜಾ ನಾಗೇಶ್ ಅವರ ಚುಟುಕುಗಳು ಸೇರಿದಂತೆ ಅನೇಕರ ಕಾವ್ಯವಾಚನ ಗಮನಸೆಳೆಯಿತು. 


ಈ ಸಂದರ್ಭದಲ್ಲಿ ಪ್ರಾಯೋಜಕರಾದ ವೆಂಕಟೇಶ್, ಸುರೇಶ್ ಪಿಡಬ್ಯೂಡಿ, ಜಿಲ್ಲಾ ಸಹ ಕಾರ್ಯದರ್ಶಿ ರಶ್ಮಿ, ಜಿಲ್ಲಾ ನಿರ್ದೇಶಕಿ ರೂಪಾ, ಸ್ವಾಮಿಗೌಡ ಸೇರಿದಂತೆ ಹಲವರು ಹಾಜರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top