ಮಂಗಳೂರು: ದೇರಳೆಕಟ್ಟೆ ಸಮೀಪ ಪೆಲತ್ತಡಿಯಲ್ಲಿರುವ ಅನಾಥ ಹೆಂಗಳೆಯರ ಸೇವಾಶ್ರಮದಲ್ಲಿ ಸಂತ್ರಸ್ತ ಮಹಿಳೆಯರಿಗೆ ಮನರಂಜನೆ ನೀಡುವ ಸಲುವಾಗಿ ಜೂನ್ 28ರಂದು ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ಜರಗಿತು. ಪ್ರವೀಣ್ ರೈ ಎಲಿಯಾರ್ ಪದವು ಮತ್ತು ಬಳಗದವರು ಕಾರ್ಯಕ್ರಮವನ್ನು ಸಂಯೋಜಿಸಿದ್ದರು.
ರಂಜಿಸಿದ 'ಕರ್ಣಾರ್ಜುನ':
ಕಳೆದ 14 ವರ್ಷಗಳಿಂದ ಸಮಾಜಸೇವಕರಾದ ಜಿ.ಆರ್. ಶೆಟ್ಟಿ ಮತ್ತು ಗೀತಾ ಆರ್ ಶೆಟ್ಟಿ ದಂಪತಿ ಬೆಲ್ಮ ಪಂಚಾಯತಿಗೆ ಸೇರಿದ ಪೆಲತ್ತಡಿಯಲ್ಲಿ ನಡೆಸುತ್ತಿರುವ ಮಾತೆಯರ ಸೇವಾಶ್ರಮದಲ್ಲಿ ಸುಮಾರು 70 ರಷ್ಟು ಅನಾಥ ಮಹಿಳೆಯರಿದ್ದಾರೆ. ಅವರಿಗಾಗಿ ವಿವಿಧ ಸೇವಾ ಸಂಸ್ಥೆಗಳು ಆಯ್ದ ಕೆಲವು ಧಾರ್ಮಿಕ - ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ ಆಶ್ರಮವಾಸಿಗಳಿಗೆ ಮನಶ್ಯಾಂತಿ ನೀಡುತ್ತಿರುವುದು ವಾಡಿಕೆಯಾಗಿದೆ. ಅದರಂತೆ ಪ್ರಬುದ್ಧ ಕಲಾವಿದರನ್ನು ಕಲೆಹಾಕಿ ಮಹಾಭಾರತದೊಳಗಣ 'ಕರ್ಣಾರ್ಜುನ' ಪ್ರಸಂಗದ ತಾಳಮದ್ದಳೆಯನ್ನು ಏರ್ಪಡಿಸಲಾಗಿತ್ತು.
ಯಕ್ಷಗಾನರಂಗದ ಪ್ರಬುದ್ಧ ಕಲಾವಿದರಾದ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ (ಕರ್ಣ), ಗಣೇಶ ಕಾವ ಅಂಡಾಲಬೀಡು (ಅರ್ಜುನ), ವಿದ್ಯಾಧರ ಶೆಟ್ಟಿ ಪೊಸಕುರಲ್ (ಶಲ್ಯ), ಪ್ರವೀಣ್ ರೈ ಎಲಿಯಾರ್ (ಶ್ರೀ ಕೃಷ್ಣ), ಹರಿಶ್ಚಂದ್ರ ಮಾಡೂರು (ಅಶ್ವಸೇನ) ಮತ್ತು ರಾಜೇಶ್ ಆಚಾರ್ಯ ಕಂಡಿಲ (ವೃದ್ಧ ವಿಪ್ರ) ಅರ್ಥಧಾರಿಗಳಾಗಿ ರಂಜಿಸಿದರು. ಪ್ರದೀಪ ಗಟ್ಟಿ ಕಂಬಳಪದವು (ಭಾಗವತರು), ಹರಿಶ್ಚಂದ್ರ ನಾಯಗ (ಚಂಡೆ) ಮತ್ತು ಕೇಶವ ಆಚಾರ್ಯ ಕಿನ್ಯಾ(ಮದ್ದಳೆ) ಹಿಮ್ಮೇಳದಲ್ಲಿ ಸಹಕರಿಸಿದರು.
ಕಲಾವಿದರಿಗೆ ಗೌರವಾರ್ಪಣೆ:
ಸೇವಾಶ್ರಮದ ಆಡಳಿತ ಟ್ರಸ್ಟಿ ಜಿ.ಆರ್. ಶೆಟ್ಟಿ ಮಾತನಾಡಿ 'ಗಂಡನನ್ನು ಕಳೆದುಕೊಂಡು ಮಕ್ಕಳೂ ಇಲ್ಲದೆ ನಿರ್ಗತಿಕರಾಗಿರುವ ಮಹಿಳೆಯರಿಗೆ ಸೇವಾಶ್ರಮದಲ್ಲಿ ಉಚಿತ ಆಶ್ರಯ ನೀಡಿ ಅವರ ಆರೈಕೆ ಮಾಡಲಾಗುತ್ತಿದೆ. ಅಂಥವರ ಮನಸ್ಸಿಗೆ ಸಂತೋಷ ನೀಡುವ ಕಲಾ ಕಾರ್ಯಕ್ರಮಗಳನ್ನು ಉದಾರ ಬುದ್ಧಿಯಿಂದ ನಡೆಸುವ ಕಲಾತಂಡಗಳಿಗೆ ದೇವರ ಅನುಗ್ರಹವಿರಲಿ' ಎಂದು ನುಡಿದರು. ತಾಳಮದ್ದಳೆಯಲ್ಲಿ ಭಾಗವಹಿಸಿದ ಕಲಾವಿದರ ಪರವಾಗಿ ಹಿರಿಯ ಅರ್ಥಧಾರಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ, ಭಾಗವತ ಪ್ರದೀಪ್ ಗಟ್ಟಿ ಹಾಗೂ ಸಂಘಟಕ ಗಣೇಶ್ ಕಾವ ಅವರನ್ನು ಶಾಲು ಹೊದಿಸಿ ಜಿ.ಆರ್.ಶೆಟ್ಟಿ ಗೌರವಿಸಿದರು.
ಕಲಾವಿದ ಗಣೇಶ ಕಾವ ತಲ್ಲಂಗಡಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರವೀಣ್ ರೈ ಎಲಿಯಾರ್ ವಂದಿಸಿದರು. ಕೆ. ಲಕ್ಷ್ಮೀನಾರಾಯಣ ರೈ ಹರೇಕಳ ಮತ್ತು ಶಶಿಧರ ಬಳ್ಳಾಲ್ ಚಿಪ್ಪಾರು ಸಹಕರಿಸಿದರು. ಸೇವಾಶ್ರಮ ಚ್ಯಾರಿಟೇಬಲ್ ಟ್ರಸ್ಟ್ ಸದಸ್ಯರು, ಸೇವಾಕರ್ತರು ಮತ್ತು ಮಾತೆಯರು, ಅಣ್ಣಂದಿರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


