ಎಸ್‌ಎಸ್‌ಐ ಮಂತ್ರ ರೋಬೋಟಿಕ್ ಸಿಸ್ಟಮ್‌ನಿಂದ ನೂತನ ದಾಖಲೆ

Upayuktha
0

22,000 ಕಿ.ಮೀ ದೂರದಿಂದ ಯಶಸ್ವಿ ರೋಬೋಟಿಕ್ ಟೆಲಿಸರ್ಜರಿ 



ಮಂಗಳೂರು: ಭಾರತದ ಸ್ವದೇಶಿ ವೈದ್ಯಕೀಯ ತಂತ್ರಜ್ಞಾನದ ಜಾಗತಿಕ ಸಾಮರ್ಥ್ಯವನ್ನು ಜಗತ್ತಿಗೆ ಸಾರುವ ಘಟನೆಯೊಂದು ನಡೆದಿದ್ದು, ಎಸ್‌ಎಸ್ ಇನ್ನೋವೇಶನ್ಸ್ ಇಂಟರ್‌ನ್ಯಾಷನಲ್ ಸಂಸ್ಥೆಯು ಸುಮಾರು 22,000 ಕಿ.ಮೀ ದೂರದಲ್ಲಿರುವ ಕೊಲಂಬಿಯಾದ ಹಾಸ್ಪಿಟಲ್ ಇಂಟರ್‌ ನ್ಯಾಷನಲ್ ಡೆ ಕೊಲಂಬಿಯಾ ಮತ್ತು ಮಧ್ಯಪ್ರದೇಶದ ಇಂದೋರ್‌ ನಲ್ಲಿರುವ ಮೊಹಕ್ ಬೇರಿಯಾಟ್ರಿಕ್ಸ್ ಅಂಡ್ ರೋಬೋಟಿಕ್ಸ್ ಆಸ್ಪತ್ರೆಯ ನಡುವೆ ಫೈಬರ್ ನೆಟ್‌ ವರ್ಕ್ ಮೂಲಕ ಅತ್ಯಂತ ಯಶಸ್ವಿ ರೋಬೋಟಿಕ್ ಟೆಲಿಸರ್ಜರಿ (ದೂರದಲ್ಲಿದ್ದು ನಡೆಸುವ ಶಸ್ತ್ರಚಿಕಿತ್ಸೆ) ನಡೆಸಿ ದಾಖಲೆ ಮಾಡಿದೆ.


ಭಾರತದಲ್ಲೇ ತಯಾರಾದ ಎಸ್‌ಎಸ್‌ಐ ಮಂತ್ರ ರೋಬೋಟಿಕ್ ಶಸ್ತ್ರಚಿಕಿತ್ಸಾ ವ್ಯವಸ್ಥೆಯು, ವಿಶ್ವದ ಪ್ರಮುಖ ಶಸ್ತ್ರಚಿಕಿತ್ಸಕರಿಗೆ ಖಂಡಾಂತರ ದಾಟಿ ಕಾರ್ಯಾಚರಣೆ ನಡೆಸಲು ನೆರವಾಗುವ ಮೂಲಕ ಆಧುನಿಕ ಶಸ್ತ್ರಚಿಕಿತ್ಸಾ ರಂಗದಲ್ಲಿ ಸಂಚಲನ ಸೃಷ್ಟಿಸಿದೆ.


ರೊಬೋಟಿಕ್ ಸ್ಲೀವ್ ಗ್ಯಾಸ್ಟ್ರೆಕ್ಟಮಿ (ಜಠರದ ಶಸ್ತ್ರಚಿಕಿತ್ಸೆ) ಎಂಬ ಈ ಚಿಕಿತ್ಸೆಯನ್ನು ಕೊಲಂಬಿಯಾದಿಂದ ಎಸ್‌ಎಸ್ ಇನ್ನೋವೇಶನ್ಸ್‌ ನ ಸಂಸ್ಥಾಪಕ ಮತ್ತು ಸಿಇಓ ಡಾ. ಸುಧೀರ್ ಶ್ರೀವಾಸ್ತವ್, ಡಾ. ವಿಕ್ಟರ್ ರಾವುಲ್ ಕ್ಯಾಸ್ಟಿಲ್ಲೊ ಮಂಟಿಲ್ಲಾ ಮತ್ತು ಡಾ. ಜೊನಾಥನ್ ಕ್ಯಾಸೆರೆಸ್ ಪ್ರಾಡಾ ಅವರು ರಿಮೋಟ್ ಮೂಲಕ ನಡೆಸಿದರು.


ಅತ್ತ ಇಂದೋರ್‌ ನಲ್ಲಿ ರೋಗಿಯ ಕಡೆ ಇದ್ದ ಶಸ್ತ್ರಚಿಕಿತ್ಸಕ ತಂಡದ ನೇತೃತ್ವವನ್ನು ಖ್ಯಾತ ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸಕ ಡಾ. ಮೋಹಿತ್ ಭಂಡಾರಿ ವಹಿಸಿದ್ದು, ಡಾ. ಅಭಿಷೇಕ್ ತಿವಾರಿ ಸಾಥ್ ನೀಡಿದರು. 22,000 ಕಿ.ಮೀ ಸುದೀರ್ಘ ಅಂತರವಿದ್ದರೂ ನೆಟ್‌ ವರ್ಕ್ ವೇಗವು ಕೇವಲ 275-285 ಮಿಲಿಸೆಕೆಂಡ್‌ಗಳ ಅತ್ಯಲ್ಪ ವಿಳಂಬದಲ್ಲಿ ಕಾರ್ಯನಿರ್ವಹಿಸಿದ್ದು, ಎಸ್‌ಎಸ್‌ಐ ಮಂತ್ರ ತಂತ್ರಜ್ಞಾನದ ನಿಖರತೆ ಮತ್ತು ಸತತ ಸ್ಥಿರತೆಗೆ ಸಾಕ್ಷಿಯಾಯಿತು.


ಸಾಮಾನ್ಯವಾಗಿ ವಿದೇಶಿ ರೋಬೋಟಿಕ್ ಉಪಕರಣಗಳು ಅತ್ಯಂತ ದುಬಾರಿಯಾಗಿರುತ್ತವೆ. ಆದರೆ ಎಸ್‌ಎಸ್‌ಐ ಮಂತ್ರ ವ್ಯವಸ್ಥೆಯನ್ನು ಭಾರತದಲ್ಲೇ ವಿನ್ಯಾಸಗೊಳಿಸಿ ತಯಾರಿಸಲಾಗಿದ್ದು, ಕಡಿಮೆ ವೆಚ್ಚದಲ್ಲಿ ಸಿಗುವಂತೆ ಮಾಡಲಾಗಿದೆ. ಇದರಿಂದಾಗಿ ದ್ವಿತೀಯ ಮತ್ತು ತೃತೀಯ ಹಂತದ ನಗರಗಳ ಆಸ್ಪತ್ರೆಗಳೂ ಸಹ ರೋಬೋಟಿಕ್ ಶಸ್ತ್ರಚಿಕಿತ್ಸಾ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಸಾಧ್ಯವಾಗಲಿದೆ.


ಎಸ್‌ಎಸ್ ಇನ್ನೋವೇಶನ್ಸ್ ಸಂಸ್ಥಾಪಕ ಹಾಗೂ ಸಿಇಒ ಡಾ. ಸುಧೀರ್ ಶ್ರೀವಾಸ್ತವ್ ಅವರು ಮಾತನಾಡಿ, "ಕೊಲಂಬಿಯಾ ಮತ್ತು ಭಾರತದ ನಡುವೆ ನೆರವೇರಿದ ಈ ಯಶಸ್ವಿ ಟೆಲಿಸರ್ಜರಿಯು, ಭೌಗೋಳಿಕ ಅಂತರವು ಇನ್ನು ಮುಂದೆ ಉತ್ತಮ ವೈದ್ಯಕೀಯ ಸೇವೆಗೆ ತಡೆಯಾಗುವುದಿಲ್ಲ ಎಂಬುದನ್ನು ನಿರೂಪಿಸಿದೆ. ವಿಶ್ವದರ್ಜೆಯ ವೈದ್ಯಕೀಯ ಸಾಮರ್ಥ್ಯವನ್ನು ನೀಡುವುದಲ್ಲದೆ, ಪ್ರಪಂಚದಾದ್ಯಂತದ ಆಸ್ಪತ್ರೆಗಳಿಗೆ ರೋಬೋಟಿಕ್ ಶಸ್ತ್ರಚಿಕಿತ್ಸೆಯನ್ನು ಕೈಗೆಟುಕುವಂತೆ ಮಾಡುವುದು ನಮ್ಮ ಮೂಲ ಉದ್ದೇಶವಾಗಿದೆ. ಪ್ರತಿಯೊಬ್ಬ ರೋಗಿಗೂ ಆಧುನಿಕ ಶಸ್ತ್ರಚಿಕಿತ್ಸೆ ಸಿಗುವಂತಾಗಬೇಕು" ಎಂದು ಹೇಳಿದರು.


ಮೊಹಕ್ ಬೇರಿಯಾಟ್ರಿಕ್ಸ್ ಮತ್ತು ರೋಬೋಟಿಕ್ಸ್ ಸಂಸ್ಥೆಯ ನಿರ್ದೇಶಕರಾದ ಡಾ. ಮೋಹಿತ್ ಭಂಡಾರಿ ಅವರು ಮಾತನಾಡಿ, "ಟೆಲಿಸರ್ಜರಿಯು ವೈದ್ಯಕೀಯ ರಂಗದಲ್ಲಿ ಹೊಸ ಕ್ರಾಂತಿ ಸೃಷ್ಟಿಸಲಿದೆ. ರೋಗಿಗಳು ದೂರದ ನಗರಗಳಿಗೆ ಪ್ರಯಾಣಿಸದೆ ತಜ್ಞ ವೈದ್ಯರ ಸೇವೆಯನ್ನು ಪಡೆಯಲು ಎಸ್‌ಎಸ್‌ಐ ಮಂತ್ರದಂತಹ ಕಡಿಮೆ ವೆಚ್ಚದ ಸ್ವದೇಶಿ ತಂತ್ರಜ್ಞಾನಗಳು ಸಹಕಾರಿಯಾಗಲಿವೆ. ಕೆಲವು ಪ್ರಮುಖ ಆಸ್ಪತ್ರೆಗಳಿಗೆ ಮಾತ್ರ ಸೀಮಿತವಾಗಿದ್ದ ರೋಬೋಟಿಕ್ ಚಿಕಿತ್ಸೆಯನ್ನು ಭಾರತ ಸೇರಿದಂತೆ ಅಭಿವೃದ್ಧಿಶೀಲ ರಾಷ್ಟ್ರಗಳಾದ್ಯಂತ ಪಸರಿಸಲು ಇದು ಸಹಕಾರಿ" ಎಂದು ಹೇಳಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top