ಪಾರಂಪರಿಕ ಆಚರಣೆಗಳ ವೈಜ್ಞಾನಿಕತೆಯನ್ನು ಸಮಾಜಕ್ಕೆ ತಿಳಿಸಬೇಕು: ರಾಮಚಂದ್ರಾಪುರ ಶ್ರೀ

Upayuktha
0

29.07.2026 ರಂದು ವ್ಯಾಸಪೂಜೆಯ ಮೂಲಕ ಚಾತುರ್ಮಾಸ್ಯಕ್ಕೆ ಚಾಲನೆ

ಚಾತುರ್ಮಾಸ್ಯದ ಅಂಗವಾಗಿ ನಡೆದ ಧಾನ್ಯಲಕ್ಷ್ಮೀ ಪೂಜೆ ಹಾಗೂ ಪೂರ್ವಸಿದ್ಧತಾ ಸಭೆ





ಗೋಕರ್ಣ: ನಮ್ಮ ಪ್ರಾಚೀನ ಆಚರಣೆಗಳ ಹಿನ್ನೆಲೆ ತಿಳಿಯದೇ ಇರುವುದರಿಂದ ನಮ್ಮ ಆಚಾರಗಳು ಕಂದಾಚಾರ ಇರಬಹುದು ಎಂದು ಭಾವಿಸಿ ಅನೇಕರು ಅವುಗಳನ್ನು ಕೈಬಿಟ್ಟಿದ್ದಾರೆ. ನಮ್ಮ ಪಾರಂಪರಿಕ ಆಚರಣೆಗಳ ವೈಜ್ಞಾನಿಕತೆ ಹಾಗೂ ಹಿನ್ನೆಲೆಯನ್ನು ಸಮಾಜಕ್ಕೆ ತಿಳಿಸಬೇಕಾದ ಅಗತ್ಯತೆ ಇದೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.



ಗೋಕರ್ಣದ ಅಶೋಕೆಯ ಪರಿಸರದಲ್ಲಿ ಅನ್ನಬ್ರಹ್ಮ ಚಾತುರ್ಮಾಸ್ಯದ ಅಂಗವಾಗಿ ಇಂದು (ಜು.27) ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಶ್ರೀಗಳು, ಬಂದವನನ್ನು ಭಗವಂತ ಎಂದು ಕಾಣಬೇಕು. ಮಠಕ್ಕೆ ಬಂದವನು ಶ್ರೀಮಂತನೋ ಅಥವಾ ಬಡವನೋ ಎಂದು ಬೇಧ ಭಾವ ಮಾಡಬಾರದು. ಮಠಕ್ಕೆ ಬಂದವರೆಲ್ಲರೂ ಸಂತೃಪ್ತರಾಗಿ ಹಿಂತಿರುಗುವಂತೆ ಮಾಡಬೇಕಾದ ಕರ್ತವ್ಯ ಕಾರ್ಯಕರ್ತರದ್ದು ಎಂದರು. 



ಇಂದು ಆಹಾರ ಹಾಗೂ ಊಟದ ವ್ಯವಸ್ಥೆಯಲ್ಲಿ ಅನೇಕ ಲೋಪಗಳಿವೆ. ನಾವು ಏನನ್ನು ತಿನ್ನುತ್ತೇವೆ ಹಾಗೂ ಹೇಗೆ ತಿನ್ನುತ್ತೇವೆ ಎಂಬುದು ನಮ್ಮ ಮೇಲೆ ಮಹತ್ತರವಾದ ಪರಿಣಾಮವನ್ನು ಉಂಟುಮಾಡುತ್ತದೆ. ಈ ಹಿನ್ನೆಲೆಯಲ್ಲಿ ನಮ್ಮ ಪ್ರಾಚೀನ ಆಚರಣೆಗಳನ್ನು ಪುನಃ ಆರಂಭಿಸಲೇ ಬೇಕಾದ ಅಗತ್ಯವಿದೆ. ಹಾಗಾಗಿ ಈ ಚಾತುರ್ಮಾಸ್ಯವನ್ನು ವಿಚಾರ ಪ್ರಧಾನ ಚಾತುರ್ಮಾಸ್ಯವಾಗಿ‌ ಆಚರಿಸಲಾಗುತ್ತಿದ್ದು; ಚಾತುರ್ಮಾಸ್ಯದಲ್ಲಿ ತತ್ತ್ವ ಸಂವಾದಗಳು ಇರಲಿವೆ ಎಂದರು. ಉತ್ತರ ಕನ್ನಡ- ಶಿವಮೊಗ್ಗ- ಮಂಗಳೂರು- ಬೆಂಗಳೂರು ಸೇರಿದಂತೆ ಎಲ್ಲಾ ಭಾಗಗಳಿಂದಲೂ ಚಾತುರ್ಮಾಸ್ಯಕ್ಕೆ ಈಗಾಗಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.



ಕಾರ್ಯಕ್ರಮದಲ್ಲಿ ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ್ ಹೆಗಡೆ, ವಿತ್ತಾಧ್ಯಕ್ಷ ಗಣೇಶ್ ಜೆ.ಎಲ್, ಶಾಸನತಂತ್ರದ ಕಾರ್ಯದರ್ಶಿ ಕೆ.ಪಿ. ಎಡಪ್ಪಾಡಿ, ಹವ್ಯಕ ಮಹಾಮಂಡಲದ ಅಧ್ಯಕ್ಷ ಹರಿಪ್ರಸಾದ್ ಪೆರಿಯಾಪು, ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ, ಮಂಜುನಾಥ ಸುವರ್ಣಗದ್ದೆ, ಚಾತುರ್ಮಾಸ್ಯದ ಪ್ರಧಾನ ಸಂಯೋಜಕ ಚಂದನ್ ಶಾಸ್ತ್ರಿ ಸೇರಿದಂತೆ ಎಲ್ಲಾ ಭಾಗಗಳ ಪ್ರಮುಖರು ಉಪಸ್ಥಿತರಿದ್ದರು.



ಅನ್ನಬ್ರಹ್ಮ ಚಾತುರ್ಮಾಸ್ಯ:

ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ಈ ವರ್ಷದ ಚಾತುರ್ಮಾಸ್ಯ ನಡೆಯಲಿದ್ದು, ದಿನಾಂಕ 29.07.2026 ರಿಂದ 26.09.2026 ವರೆಗೆ ಆಹಾರದ ಕುರಿತಾದ ಜಾಗೃತಿಯ 'ಅನ್ನಬ್ರಹ್ಮ ಚಾತುರ್ಮಾಸ್ಯ' ನಡೆಯಲಿದೆ. ದಿನಾಂಕ 29.07.2026 ಬುಧವಾರದಂದು ವ್ಯಾಸಪೂಜೆಯನ್ನು ಮಾಡುವ ಮೂಲಕ ಶ್ರೀಗಳು ತಮ್ಮ 33ನೇ ವರ್ಷದ ಚಾತುರ್ಮಾಸ್ಯದ ಸಂಕಲ್ಪವನ್ನು ಸ್ವೀಕರಿಸಲಿದ್ದಾರೆ. 



ಚಾತುರ್ಮಾಸ್ಯ ವ್ರತ ಗುರುಗಳಿಗಾದರೆ, ಶಿಷ್ಯಭಕ್ತರಿಗೆ ಇದು ಹಬ್ಬ ಎಂಬ ಪರಿಕಲ್ಪನೆಯಲ್ಲಿ ಪ್ರತಿವರ್ಷದ ಚಾತುರ್ಮಾಸ್ಯವನ್ನು ಸಮೂಹದ ಒಳಿತಿಗೆ ಪೂರಕವಾಗಿ ಯೋಜಿಸುತ್ತಾ ಬಂದಿದ್ದು, ಪ್ರತಿವರ್ಷ ಒಂದೊಂದು ವಿಷಯಾಧಾರಿತವಾಗಿ ಚಾತುರ್ಮಾಸ್ಯದಲ್ಲಿ ಸಮಾಜ ಜಾಗೃತಿಯನ್ನು ಮೂಡಿಸುತ್ತಿರುವುದು ಶ್ರೀರಾಮಚಂದ್ರಾಪುರ ಮಠದ ವಿಶೇಷತೆಯಾಗಿದೆ. 


ಈ ಚಾತುರ್ಮಾಸ್ಯದ ಸಮಯದಲ್ಲಿ ಆಹಾರದ ಕುರಿತಾಗಿ ಜಾಗೃತಿ ಮೂಡಿಸುವ ಅನೇಕ ಕಾರ್ಯಕ್ರಮಗಳು ಇರಲಿದ್ದು, ಪ್ರತಿದಿನ ಸ್ವತಃ ಶ್ರೀಗಳಿಂದ ಭೋಜನವೆಂಬ ತಪಸ್ಸು, ಆಹಾರ ಯಾವಾಗ ಸ್ವೀಕರಿಸಿದರೆ ಹಿತ? ಜಲಪಾನದ ನಿಯಮಗಳು, ಆಹಾರದ ಉದ್ದೇಶ, ಉಪವಾಸ, ಭೋಜನದ ಬಳಿಕ ಪಾಲಿಸಬೇಕಾದ ನಿಯಮಗಳು, ಭೋಜನ ಪಾತ್ರೆಗಳು ಸೇರಿದಂತೆ ಅನೇಕ ವಿಶಿಷ್ಟ ಪ್ರವಚನಗಳು ನಡೆಯಲಿವೆ. ಜ್ಞಾನೋದ್ದೀಪನದ ಜೊತೆಗೆ ಪ್ರಾಚೀನ ವಿಧಾನದ ಆಹಾರವೂ ಈ ಚಾತುರ್ಮಾಸ್ಯದಲ್ಲಿ ವಿಶೇಷತೆಯಾಗಿರಲಿದೆ. 



ಧಾನ್ಯ ಲಕ್ಷ್ಮೀ ಪೂಜೆ:

ಅನ್ನಬ್ರಹ್ಮ ಚಾತುರ್ಮಾಸ್ಯಕ್ಕಾಗಿ ನಾಡಿನಾದ್ಯಂತ ಶಿಷ್ಯ ಭಕ್ತರಿಂದ ವಿವಿಧ ಸುವಸ್ತುಗಳು ಸಮರ್ಪಿತವಾಗಿದ್ದು, ಶ್ರೀಮಠದ 11 ಮಂಡಲಗಳು, ಅಂಗಸಂಸ್ಥೆಗಳು ಹಾಗೂ ರಾಜ್ಯಾದ್ಯಂತದ ಶಿಷ್ಯಭಕ್ತರಿಂದ ಸಮರ್ಪಿತವಾದ ಧಾನ್ಯಲಕ್ಷ್ಮಿಗೆ ದಿನಾಂಕ 26.07.2026 ರಂದು ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಪೂಜೆಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಕುಮಟಾದ ಶಾಸಕ ದಿನಕರ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು. 



Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top