ಅನುಭವ ಕಥನ- ಡಿಂಜರ್ ಯಾನೆ ಜಿಂಜರ್ ಸೋಡಾ

Upayuktha
0

 ‎


ಸುಮಾರು 1957-58ರ ಕಾಲದಲ್ಲಿ ನನಗಾದ ಅನುಭವ ಇದು.

‎‎

‎ಕಾಸರಗೋಡಿನ ಕೆ.ಪಿ. ರಾಘವೇಂದ್ರ ರಾವ್ ರಸ್ತೆಯ (K.P.R.Rao Road) ಬದಿಯಲ್ಲಿರುವ ಕಿಣಿಯರ ಸರಸ್ವತಿ ವಿಲಾಸ ಹೋಟೆಲಿನ ಎದುರು ಭಾಗದಲ್ಲಿತ್ತು ಕ್ಯಾಪ್ಟನ್ ಡಾ. ಕೆ. ಅನಂತರಾಮ ಶೆಟ್ಟರ ಆಸ್ಪತ್ರೆ. (ಈಗಿನ ಏರ್‌ಲೈನ್ಸ್ ಕಟ್ಟಡದ ಎದುರು).  ಶೆಟ್ಟಿ ಡಾಕ್ಟ್ರ ಆಸ್ಪತ್ರೆಗೆ ಹೋಗುವ ದಾರಿಯ ಬಲಬದಿಯಲ್ಲಿ ಸೈಕಲ್ ರಾಂಪಣ್ಣನ ಅಂಗಡಿ ಇತ್ತು.‌  ಸೈಕಲ್ ಬಾಡಿಗೆಗೆ ಕೊಡುವುದು, ರಿಪೇರಿ ಮಾಡುವುದು ಮಾತ್ರವಲ್ಲದೆ 'ಚಟ್ಟೆ' (ಸಟ್ಟಾ, ಬಿಡ್ಡು ಇತ್ಯಾದಿ) ಸಂಗ್ರಹದ ಕೇಂದ್ರವೂ ಆಗಿತ್ತು ರಾಂಪಣ್ಣನ ಈ ಅಂಗಡಿ.  

‎‎

‎ಇದೇ ರೀತಿಯ ಇನ್ನೊಂದು ಚಟ್ಟೆ ಕೇಂದ್ರ ತಾಲೂಕಾಪೀಸಿನ ಎದುರು ಭಾಗದಲ್ಲಿದ್ದ 'ರಾಮ ನಾಯಕ್ & ಸನ್ಸ್' ಅಂಗಡಿಯ ಪಕ್ಕದಲ್ಲಿದ್ದ ಸಣ್ಣದೊಂದು ಹೋಟೆಲಿನಲ್ಲಿತ್ತು.  ಮೆಟ್ಟಿಲು ಹತ್ತಿ ಮೇಲೆ ಹೋಗಬಹುದಾದಷ್ಟು ಎತ್ತರದಲ್ಲಿ, ಕಬ್ಬಿಣದ ದಳಿಗಳಿದ್ದ ಆ ಹೋಟೆಲಿಗೆ ನಾನು ಹೋದ ನೆನಪಿಲ್ಲ.  ಅಲ್ಲಿ ಚಾಯ ಹೊರತು ಪಡಿಸಿ ಬೇರೆ ಹೇಳುವಂತ ತಿಂಡಿಗಳೇನೂ ಸಿಗುತ್ತಿರಲಿಲ್ಲ ಎಂದು ಕಾಣ್ತದೆ.  ಅದು ಹೋಟೆಲು ಎನ್ನುವುದಕ್ಕಿಂತಲೂ ಚಟ್ಟೆ ನಂಬರಿನ ವಿಷಯ ಚರ್ಚಿಸುತ್ತಿದ್ದ ಚಟ್ಟೆಪ್ರಿಯೆರ ಚರ್ಚಾ ಕೇಂದ್ರವಾಗಿತ್ತೆಂದೇ ಹೇಳಬಹುದು.  ಈ ಚಟ್ಟೆ ಪ್ರಿಯರು ಸಂಜೆ ಮದ್ರಾಸ್ ಮೈಲಿನಲ್ಲಿ ಬರುತ್ತಿದ್ದ 'ದಿ ಮೈಲ್' ಇಂಗ್ಲೀಷು ಪತ್ರಿಕೆಯ ಕೊನೆಯ ಪುಟದಲ್ಲಿ ಕಾಣುತ್ತಿದ್ದ ಯಾವುದೋ ಇಂಗ್ಲೀಷ್ ಕಾರ್ಟೂನನ್ನು ಹಲವು ಕೋನಗಳಲ್ಲಿ ಅಡ್ಡಕ್ಕೆ ಉದ್ದಕ್ಕೆ ತಿರುಗಿಸಿ, ಕುತ್ತಕಂಡೆ ಮಾಡಿ ನೋಡಿ, ಅವರಿಗೆ ಮಾತ್ರ ಗೋಚರವಾಗುವ ನಂಬರನ್ನು ಕಂಡು ಹಿಡಿದು ಆ ನಂಬರಿಗೆ ಹಣ ಕಟ್ಟುತ್ತಿದ್ದರಂತೆ.  ಬೆಳಿಗ್ಗೆ 'ನವಭಾರತ'  ಪತ್ರಿಕೆಯಲ್ಲಿ ಬರುವ ನ್ಯೂಯೋರ್ಕ್ ಅರಳೆ ಧಾರಣೆಯ ಕೊನೆಯ ಎರಡು ನಂಬರುಗಳೇ ಇವರ ಅದೃಷ್ಟ ಸಂಖ್ಯೆ.   ಶಾಲೆಯ ಮೆಟ್ಟಿಲನ್ನು ಏರದವರು ಕೂಡಾ 'ದಿ ಮೈಲ್' ಪತ್ರಿಕೆಯನ್ನು ಸುರುಳಿ ಸುತ್ತಿ ಕಂಕುಳದಡಿಯಲ್ಲಿಟ್ಟು ತಿರುಗುವುದನ್ನು ನೋಡಿ ಅಂದು ಆಶ್ಚರ್ಯಪಟ್ಟಿದ್ದೆ. 

‎  ‎

‎ಇನ್ನು ನನ್ನ ಕಥಾ ಕೇಂದ್ರವಾದ  ಬಾಯಮ್ಮನ 'ಹೋಲಿ ಫ್ಯಾಮಿಲಿ ಸೋಡಾ ಫೇಕ್ಟರಿ' ಎನ್ನುವ ಗೋಲಿ ಸೋಡಾ ಅಂಗಡಿ, ಶೆಟ್ಟಿ ಡಾಕ್ಟ್ರ ಆಸ್ಪತ್ರೆಗೆ ಹೋಗುವ ದಾರಿಯ ಎಡಬದಿಯಲ್ಲಿ ಸ್ವಲ್ಪ ಎತ್ತರದ ಜಾಗಲ್ಲಿತ್ತು.  ಸವೆದು ನೈಸಾದ ಕಲ್ಲಿನ ಮೆಟ್ಟಿಲನ್ನು ಏರಿ, ಹಂಚು ಹಾಸಿದ ತಗ್ಗು ಮಾಡಿನ ಅಂಗಡಿಯ ಒಳಗೆ ತಲೆ ಬಗ್ಗಿಸಿಯೇ ಮೇಲೆ ಹತ್ತಬೇಕಿತ್ತು.  ಅಂಗಡಿಯ ಒಳಗೆ ಒಂದು ಬದಿಯಲ್ಲಿ ಗಿರಾಕಿಗಳಿಗೆ ಕೂತುಕೊಳ್ಳಲು ಕೈಯಿದ್ದ ಮರದ ಒಂದು ಒರಗು ಬೆಂಚು.  ಒಳಗಿನ ಮೇಜಿನ ಮೇಲೆ ಸಾಲು ಸಾಲಾಗಿ ಇರಿಸಿದ ಸೋಡಾ ಮತ್ತು ಲೆಮ್ಲೇಟಿನ (ಲೆಮನೇಡ್) ಕುಪ್ಪಿಗಳು.  ಕೆಲವು ಕುಪ್ಪಿಗಳ ಮೇಲೆ ಗರಿಗಳಿಲ್ಲದ ರಾಜನ ಕಿರೀಟಗಳಂತೆ ತೋರುತ್ತಿದ್ದ ಮರದ ಸೋಡಾ 'ತೆರೆಗ'ಗಳು (Opener).  ಬದಿಯ ಗೋಡೆಗೆ ಒರಗಿಸಿಟ್ಟ ಕಳ್ಳಿ ಕಪಾಟುಗಳ ತುಂಬಾ 'ಚಂದಮಾಮ'ದ ಒಕ್ಕಣ್ಣ ರಾಕ್ಷಸನ ನೀಲಿಕಣ್ಣನ್ನು ನೆನಪಿಸುವ ಗೋಲಿ ಸೋಡಾ ಕುಪ್ಪಿಗಳ ಸಾಲು ಸಾಲು.

‎‎ಕೋಣೆಯ ಒಳಗೆ ಒಂದು ಸೋಡಾ ಮಾಡುವ ಯಂತ್ರ.  ಅದರ ಪಕ್ಕದಲ್ಲಿ ಕುತ್ತನೆ ನಿಲ್ಲಿಸಿದ ಸೋಡಾ ಗ್ಯಾಸಿನ ಸಿಲಿಂಡರು.  ಆ ಯಂತ್ರಕ್ಕೆ ಜೋಡಿಸಿದ ಮುಚ್ಚಳವಿದ್ದ ಕಬ್ಬಿಣದ ಪೆಟ್ಟಿಗೆಯಲ್ಲಿ ನೀರು ಅಥವಾ ಬಣ್ಣದ ಎಸೆನ್ಸ್ ಬೆರಸಿದ ನೀರು  ತುಂಬಿಸಿದ ಮೂರು ಸೋಡಾ ಬಾಟಲುಗಳನ್ನಿಟ್ಟು ಪೆಟ್ಟಿಗೆಯ ಮುಚ್ಚಳ ಮುಚ್ಚಿ, ಗ್ಯಾಸಿನ ಬಿರಡೆ ತೆರೆದು, ಸ್ವಲ್ಪ ಹೊತ್ತು ಪೆಟ್ಟಿಗೆಯನ್ನು ಗರಗರನೆ ತಿರುಗಿಸಿ ತೆಗೆದಾಗ, ಕುಪ್ಪಿಯಲ್ಲಿ ಗ್ಯಾಸು ತುಂಬಿ ಕುಪ್ಪಿಯ ನಡುವಿನಲ್ಲಿ ಗಣಗಣಿಸುತ್ತಿದ್ದ ಗೋಲಿ ಕುಪ್ಪಿಯ ಮುಸುಂಟಿನಲ್ಲಿ ಮೌನವಾಗಿ ಬಂದು ಭದ್ರವಾಗಿ ನಿಂತಿದೆ ಎಂದರೆ ಸೋಡಾ ರೆಡಿಯಾಯ್ತು ಎಂದೇ ಅರ್ಥ.

‎ಅಂಗಡಿಯ ಮುಂಭಾಗದ ರಸ್ತೆಯ ಬದಿಯಲ್ಲಿ, ಲಡ್ಕಾಸು ಸೈಕಲ್ ಒಂದರ ಅಗಲದ ಕ್ಯಾರಿಯರ್‌ನ ಮೇಲೆ ಹಗ್ಗದಿಂದ ಬಿಗಿದು ಕಟ್ಟಿದ್ದು, ಸಣ್ಣ ಸಣ್ಣ ಕಳ್ಳಿಗಳಿದ್ದ ಮರದ ಪೆಟ್ಟಿಗೆಗಳ ತುಂಬಾ ಸೋಡಾ ಕುಪ್ಪಿಗಳನ್ನು ಕುತ್ತಕಂಡೆ ಏರಿಸಿ ಸೊಲೂಪ ಹೊತ್ತು ಬಚ್ಚೆಲು (ಆಯಾಸ) ತಣಿಸಿಯೇ ಮುಂದಿನ ಕಾರ್ಯ ಎನ್ನುವಂತೆ, ಸೈಕಲನ್ನು ಸ್ಟೇಂಡಿಗೆ ಹಾಕದೆ ತನ್ನ  ಸೊಂಟಕ್ಕೆ ತಾಂಗಿಸಿ ನಿಂತಿದ್ದ ಬೆನ್ನುವೋ ಬೆನ್ನಿಯೋ ಹೆಸರಿದ್ದ ಸೋಡಾ ಸರಬರಾಜುಗಾರ.  ಮೊಳಕಾಲುವರೆಗೆ ಮಡಚಿದ ಬಣ್ಣ ಮಾಸಿದ ಪರ್ಕಟೆ ಖಾಕಿ ಪ್ಯಾಂಟು, ಗುಬ್ಬಿಯ ಬದಲಿಗೆ ಪಿನ್ನು ಕುತ್ತಿದ ಕುರ್ತಟೆ (ಕೊಳಕು) ಅಂಗಿ ಹಾಕಿ, ತಾಳೆಯಾಗದ ಯಾವುದೋ ಹಳೆಯ ಲೆಕ್ಕಾಚಾರದ ಬಿಸಿಯಲ್ಲಿದ್ದಂತೆ ತೋರುತ್ತಿದ್ದರೂ ಯಾರೋ ಎಲ್ಲೋ ಯಾವಾಗಲೋ ಹೇಳಿದ್ದ ಜೋಕು ಇಂದು ಅರ್ಥವಾಗಿ, ಎಂತಾ ಬೋಳಪ್ಪ ತಾನು ಎನ್ನುವಂತೆ ತನ್ನಷ್ಟಕ್ಕೆ ತಾನು ನಗುತ್ತಾ, ಇನ್ನು ಹೊರಡುವಾ ಎಂಬಂತೆ ಸೈಕಲಿನ ಹ್ಯಾಂಡಲ್ ಹಿಡಿದು ದೂಡಲು ತಯಾರಾಗಿ ನಿಂತಿದ್ದ ಬೆನ್ನಿ ಯಾನೆ ಬೆನ್ನು.  ಅವನು ಇಂಗ್ರೋಜಿಗೋ, ಇನ್ನಿತರ ಸಮಾರಂಭಗಳಿಗೋ ಹೋಗುವಾಗ ಠೀಕುಠಾಕಾಗಿ ಡ್ರೆಸ್ ಮಾಡಿ ಹೋಗುತ್ತಿದ್ದದ್ದನ್ನು ನಾನು ಹಲವು ಬಾರಿ ನೋಡಿದ್ದೆ.  ಸೋಡಾ ಕಂಪೆನಿಯ ಒಡತಿಯ ಸಂಬಂಧಿಕನೂ ಆಗಿರುವ ಬೆನ್ನಿ, ನನ್ನ ಸಹಪಾಠಿ ಜೋ ಕೈರಣ್ಣನ  ಸಂಬಂಧಿಕನೂ ಹೌದು.


‎ಅಂಗಡಿಯ ಒಳಗೆ ಒಂದು ಬದಿಯಲ್ಲಿ ಅರ್ಧ ನೀರು ತುಂಬಿದ ಮರದ ತೊಟ್ಟಿಯ ತುಂಬಾ ಹಾಕಿಟ್ಟ ಖಾಲಿ ಸೋಡಾ ಕುಪ್ಪಿಗಳು.  ಅಲ್ಲಲ್ಲಿ ತೂತು ಬಿದ್ದ ಚಂಡಿ ಬನಿಯಾನು ಧರಿಸಿ, ಎತ್ತಿ ಸುತ್ತಿ ಕಟ್ಟಿದ ಬಣ್ಣ ಮಾಸಿದ ಲುಂಗಿ ಉಟ್ಟು, ತೊಟ್ಟಿಯ ಹಿಂದಿನ ಸಣ್ಣ ಸ್ಟೂಲಿನ ಮೇಲೆ ಕಾಲೆರಡನ್ನು ಅಗಲಿಸಿ ಕೂತು, ಕಣಂ ಕಣಾಂ‌ ಎನ್ನುವ ಸೋಡಾ ಕುಪ್ಪಿಯೊಳಗಿನ ಗೋಲಿಯ ಸದ್ದು ಲೋಕಕ್ಕೇ ಕೇಳಲಿ ಎನ್ನುವಂತೆ ಕುಪ್ಪಿಯನ್ನು ಬ್ರಷ್ಷಿನಿಂದ ಗಸಗಸನೆ ತಿಕ್ಕುತ್ತಾ, ಕೆಲಸದ ಏಕತಾನತೆಯನ್ನು ಮರೆಯಲೋ ಎಂಬಂತೆ ಯಾವುದೋ ಎಂ. ಜಿ. ಆರ್. ಸಿನಮಾದ ಹಾಡನ್ನು ಅಪಸ್ವರದಲ್ಲಿ ಗುನುಗುತ್ತಾ ಕುಪ್ಪಿ ತೊಳೆಯುವ ಕೆಲಸದಲ್ಲಿ ಮಗ್ನನಾಗಿರುತ್ತಿದ್ದ ಸೋಡಾ ಅಂಗಡಿಯ 'ಕುಪ್ಪಿ ಸ್ವಚ್ಛಕ'.

‎‎

‎ಚಿರುಂಟಿದ ಅಳು ಮುಖ ನೋಡಿದರೆ, ಅಮ್ಮನತ್ರ ಏನೋ ಡಿಮಾಂಡ್ ಇಟ್ಟು ಅಸಫಲರಾದಂತೆ ತೋರುವ, ಸಮವಸ್ತ್ರದಂತೆ ಒಂದೇ ರೀತಿಯ ಅಂಗಿ ಚಡ್ಡಿ ಹಾಕಿ 'ಪುಳಿಯಾಯಿ ನಾಯಿ'ಯಂತೆ (ಕಜ್ಜಿ ನಾಯಿ) ಪೆಡಚಾಡುತ್ತಾ, ಸೋಡಾ ಅಂಗಡಿ ಇಡೀ ಓಡಾಡಿ ಪೊರ್ಬು ಭಾಷೆಯಲ್ಲಿ ಏನೇನೋ ಪರಂಚುತ್ತಿದ್ದ ಬಾಯಮ್ಮನ (ಅವರ ಹೆಸರು ಮೇರಿ ಆಗಿರಬೇಕು) ಅವಳಿ ಮಕ್ಕಳು.

‎‎

‎ಬಾಲ್ಯದ ದಿನಗಳಲ್ಲಿ 'ಕಿಯೋಂ' ಸದ್ದಿನಿಂದಲೇ ಬಾಯಲ್ಲಿ ನೀರೂರಿ ಕಣ್ಣು ಮಿನುಗುವಂತೆ ಮಾಡುತ್ತಿದ್ದ ಕೆಂಪು, ಹಳದಿ, ಪಚ್ಚೆ ಬಣ್ಣಗಳ ಲೆಮ್ಲೇಟುಗಳು (Lemonade), ಮೂಗು ಕಣ್ಣುಗಳಲ್ಲಿ ನೀರು ಬಂದು, ಕಿವಿಯಿಂದಲೂ ಹೊಗೆ ಬಂದ ಅನುಭವ ಆಗಬಹುದಾದಂತಹ ‎ಡಿಂಜರ್ (ಜಿಂಜರ್) ಸೋಡ ಕುಡಿಯಲೇ ಬೇಕೆನ್ನುವ ನನ್ನ ಆಸೆ, ತಾಲೂಕಾಪೀಸಿನ  ಎದುರಿನ ಗಣಪತಿ ರಾಯರ ಸೋಡಾ ಅಂಗಡಿಯನ್ನೋ ಬಾಯಮ್ಮನ ಸೋಡಾ ಅಂಗಡಿಯನ್ನೋ ಕಾಣುವಾಗಲೆಲ್ಲಾ ಗರಿಗೆದರುತ್ತಿತ್ತು.

‎‎

‎ಹಾಗೆ, ನಾನು ಐದನೆಯೋ ಆರನೆಯೋ ಕ್ಲಾಸಿನಲ್ಲಿರುವಾಗ ಒಂದು ದಿನ ಅಮ್ಮನ ಅಂಗರಕ್ಷಕನಾಗಿ ಪೇಟೆಗೆ ಹೋಗಿ ವಾಪಾಸು ಬರುವಾಗ ಬಾಯಮ್ಮನ ಸೋಡಾ ಅಂಗಡಿಯ ಬಳಿ ಬಂದಂತೆ, ಅಮ್ಮನ ಕೈ ಹಿಡಿದು ಎಳೆಯುತ್ತಾ ಡಿಂಜರ್ ಸೋಡಾ ಬೇಕೇ ಬೇಕೆಂದು ಅರ್ಗಂಟು (ಹಠ) ಮಾಡಿ, ಅಮ್ಮನ ಯಾವ ಕೊಂಗಾಟದ ಮಾತಿಗೂ ಅರ್ಗೀಸ (ಸರ್ವಥಾ) ಬಗ್ಗದಾದಾಗ "ಆಣ್ ಪರ್. ನನ ಸೋಡಾ ಸಿಕ್ಕಿರೀಂದ್ ಅಟ್ಟಾಸ್ ಕೊಳ್ಪುಣ ಬೋತ್ರಿ" (ಆಯ್ತು ಕುಡಿ. ಇನ್ನು  ಸೋಡಾ ಸಿಗ್ಲಿಲ್ಲಾಂತ ಗಲಾಟೆ ಮಾಡುದು ಬೇಡ) ಎಂದು ಅಮ್ಮನಿಂದ ಹೇಳಿಸಿಕೊಂಡು, ಕಿಯೋಂ ಸದ್ದಿನೊಂದಿಗೆ ಕೈಗೆ ಸಿಕ್ಕಿದ ಡಿಂಜರನ್ನು ಸಂಭ್ರಮದಿಂದ ಒಳಗಿನ ಗೋಲಿ ಅಡ್ಡ ಬರದ ಹಾಗೆ ಜಾಗ್ರತೆಯಿಂದ ಎರಡು ಮುಕ್ಳಿ (ಗುಟುಕು) ಕುಡಿದು,‌ ಕುಡಿದ ಮುಕ್ಳಿ ನಾನು ಎಣಿಸಿದ್ದಕ್ಕಿಂತಲೂ ದೊಡ್ಡದಾಗಿ,‌ ಕುಡಿಯಲಾರದೆ ಕುಡಿಯಲು ಪ್ರಯತ್ನಿಸಿ,‌ ಬಂಜಾರ (ಹೊಟ್ಟೆ ತುಂಬಾ) ಆಗುವ ಬದಲು, ಬಾಯಿ ಮೂಗಿನಿಂದ ಸೋಡಾ ಡೇಂಜರಾಗಿ ಹೊರಗೆ ರಟ್ಟಿ ಅಂಗಿ ಚಂಡಿಯಾಗಿ, ಅದಕ್ಕಿಂತಲೂ ಜಾಸ್ತಿ ಖಾರವಾಗಿ, ಮೂಗು ಕಣ್ಣಿನಿಂದ ನೀರು ಇಳಿದು, ಕಿವಿಯಿಂದಲೂ ಹೊಗೆ ಬಂದಂತಾಗಿ, "ಡಿಂಜರ್ ಸೋಡ ಇಂಚ ಪೂರ ಇಂಡ್ಂದ್ ಏರೆಗ್ ಗೊಂತ್.  ಛೆ...ಹಠ ಮಾಂಪಿಯರೆ ಆತ್ವಣ್.  ಬಣ್ಣತ ಲೆಮ್ಲೇಟೆ ಆತುತುತೆ" (ಡಿಂಜರ್ ಸೋಡ ಹೀಗೆಲ್ಲ ಇರ್ತದೇಂತ ಯಾರಿಗೆ ಗೊತ್ತು.  ಛೆ...ಹಠ ಮಾಡ್ಬಾರ್ದಿತ್ತು. ಬಣ್ಣದ ಲೆಮ್ಲೇಟೆ ಆಗ್ಬಹುದಿತ್ತು) ಎಂದು ಮನಸ್ಸಿನಲ್ಲೇ ಕಿರಾವುತ್ತಾ (ಗೊಣಗುಟ್ಟು) ಮೆಲ್ಲ ಕುಪ್ಪಿಯನ್ನು ಅಮ್ಮನ ಕೈಗೆ ದಾಟಿಸಿ, ಅಮ್ಮನ ಕೈ ಎತ್ತದಷ್ಟು‌ ದೂರದಲ್ಲಿ ಅಮ್ಮನನ್ನೇ ನೋಡುತ್ತಾ ನಿಂತಿದ್ದೆ.  

‎‎

‎ದುಡ್ಡು ಕೊಟ್ಟಿದ್ದಲ್ವಾ ಸುಮ್ಮನೆ ದಂಡ ಮಾಡುವುದು ಯಾಕೆ ಎಂದು ಅಮ್ಮ ಗಿಣಿ ಗಿಣಿ ಸದ್ದು ಮಾಡುತ್ತಾ ಸೋಡಾ ಕುಪ್ಪಿಯನ್ನು ಕುತ್ತ ಮಾಡಿ ಕುಡಿಯುವಾಗ, ನಾನು ಸಿಂಬಳ ಸುರಿಯುವ ಮೂಗನ್ನು ಅಂಗಿಯ ಚುಂಗಿನಿಂದಲೂ, ಒದ್ದೆಯಾದ ಕಣ್ಣುಗಳನ್ನು ಅಂಗಿಯ ಕೈಯಿಂದಲೂ ಒರಸಿಕೊಳ್ಳುತ್ತಾ,‌ ಅಮ್ಮ ಪೆಟ್ಟು ಕೊಡಬಹುದೋ ಏನೋ ಎಂಬ ಚಿಂತೆಯಲ್ಲಿ ಮುಳುಗಿ, ಅಳುಗಣ್ಣಿನಿಂದ ಅಮ್ಮನ ಮುಖವನ್ನೇ ನೋಡುತ್ತಾ ದೂರ ಸರಿದು ನಿಂತಿದ್ದೆ.

‎‎

- ‎ಮುರಳೀಧರ ಕಾಸರಗೋಡು


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top