ಮಂಗಳೂರು: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಮಾತನಾಡಿದ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸುವ ರಮಾನಾಥ ರೈ ಅವರೇ, ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ತಾಯಿಯ ವಿರುದ್ಧವೂ ಅವಾಚ್ಯ ಶಬ್ದಗಳಲ್ಲಿ ನಿಂದಿಸುವ ನಿಮ್ಮ ಪಕ್ಷದ ಮುಖಂಡರನ್ನು ಏನು ಮಾಡಬೇಕು? ಎಂದು ದ.ಕ ಜಿಲ್ಲಾ ಬಿಜೆಪಿ ಜಿಲ್ಲಾ ವಕ್ತಾರ ರಾಜಗೋಪಾಲ್ ರೈ ಪ್ರಶ್ನಿಸಿದ್ದಾರೆ.
ರಾಹುಲ್ ಗಾಂಧಿ ಕುರಿತು ಸರಿಯಾದ ಮಾಹಿತಿ, ದಾಖಲೆಗಳನ್ನು ಇಟ್ಟುಕೊಂಡೇ ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿದ್ದಾರೆ. ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ ಸೂಚಿಸುವ ನೆಪದಲ್ಲಿ ದಿಲ್ಲಿಯಲ್ಲಿ ಹಿಂಸಾಚಾರಕ್ಕಿಳಿದ ಕ್ರಿಮಿನಲ್ ಶಕ್ತಿಗಳನ್ನು ರಾಹುಲ್ ಗಾಂಧಿ ಸಮರ್ಥಿಸಿಕೊಳ್ಳುತ್ತಾರೆ. ನಿಜವಾದ ವಿದ್ಯಾರ್ಥಿಗಳು ಹಿಂಸಾತ್ಮಕ ಪ್ರತಿಭಟನೆಯಲ್ಲಿ ಭಾಗವಹಿಸಿಲ್ಲ. ಹಿಂಸೆಯಲ್ಲಿ ತೊಡಗಿದವರು ನಾನಾ ಬಗೆಯ ಕ್ರಿಮಿನಲ್ ಹಿನ್ನೆಲೆಯವರು ಎಂಬುದನ್ನು ಈಗಾಗಲೇ ದಿಲ್ಲಿ ಪೊಲೀಸರು ದಾಖಲೆ ಸಮೇತ ಬಹಿರಂಗಪಡಿಸಿದ್ದಾರೆ. ಇಂಥವರಿಗೆ ಬೆಂಬಲ ಸೂಚಿಸಿ ಮಾತನಾಡುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಶಾಸಕ ಯಶ್ಪಾಲ್ ಸುವರ್ಣ ತರಾಟೆಗೆ ತೆಗೆದುಕೊಂಡಿದ್ದಾರೆಯೇ ಹೊರತು ಕಾಂಗ್ರೆಸ್‌ನ ಗೂಂಡಾ ನಾಯಕರಂತೆ ವರ್ತಿಸಿಲ್ಲ ಎಂದು ರಾಜಗೋಪಾಲ್ ರೈ ತಿಳಿಸಿದ್ದಾರೆ.
ಈಗ ಜೆನ್‌ಝೀ ಎಂದು ಕರೆಸಿಕೊಳ್ಳುತ್ತಿರುವ ಯುವ ವಿದ್ಯಾರ್ಥಿ ಸಮೂಹಕ್ಕೆ ಹಿಂದಿನ ಕಾಂಗ್ರೆಸ್ ಸರಕಾರಗಳ ಭ್ರಷ್ಟಾಚಾರಗಳು, ಶಿಕ್ಷಣ ರಂಗದಲ್ಲಿ ಎಸಗಿದ ಮಹಾ ಪ್ರಮಾದಗಳ ಅರಿವಿಲ್ಲ. ಅವರನ್ನು ತಪ್ಪು ದಾರಿಗೆಳೆಯುವ ಕೆಲಸವನ್ನು ರಾಹುಲ್ ಗಾಂಧಿಯಂತಹ ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ. ಸಹಜವಾಗಿಯೇ ದೇಶಾದ್ಯಂತ ಕಾಂಗ್ರೆಸ್‌ನ ದೇಶವಿರೋಧಿ ಹುನ್ನಾರಗಳ ಬಗ್ಗೆ ಆಕ್ರೋಶ ಉಂಟಾಗಿದೆ. ಅದಕ್ಕೆ ಧ್ವನಿಯಾಗಿ ಉಡುಪಿ ಶಾಸಕರು ಮಾತನಾಡಿದ್ದಾರೆ ಎಂದು ಬಿಜೆಪಿ ವಕ್ತಾರರು ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ಎಂಎಲ್‌ಸಿ ಐವನ್ ಡಿಸೋಜ ಅಂಥವರು ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಮಾತಾಡುತ್ತಾರೆ. ಬಾಂಗ್ಲಾದಲ್ಲಿ ಅಧಿಕಾರರೂಢ ಸರಕಾರವನ್ನು ಕಿತ್ತೊಗೆದಂತೆ ಕರ್ನಾಟಕದಲ್ಲೂ ರಾಜ್ಯಪಾಲರ ಮೇಲೆ ದಾಳಿ ನಡೆಯಬಹುದು ಎನ್ನುವ ಅರ್ಥದ ಬೆದರಿಕೆಗಳನ್ನು ಹಾಕುತ್ತಾರೆ. ಪಾಕಿಸ್ತಾನದ ಪರ ವಿಧಾನಸೌಧದಲ್ಲೆ ಘೋಷಣೆ ಕೂಗಿದರೂ ಅಂಥವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಕಾಂಗ್ರೆಸ್ ಸರಕಾರ ಈಗ ಬಿಜೆಪಿ ಶಾಸಕರ ಧ್ವನಿ ಅಡಗಿಸಬೇಕು ಎಂದು ಮಾಜಿ ಶಾಸಕರೊಬ್ಬರು ಆಗ್ರಹಿಸುತ್ತಿರುವುದು ಹಾಸ್ಯಾಸ್ಪದ ಎಂದು ರೈ ನುಡಿದಿದ್ದಾರೆ.
ಜೆನ್‌ಝೀಗಳೆಂದು ಕರೆಸಿಕೊಳ್ಳುವ ಈಗಿನ ಯುವ ಸಮೂಹಕ್ಕೆ ಸರಿಯಾದ ಮಾರ್ಗದರ್ಶನ ನೀಡಿ ರಾಷ್ಟ್ರ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಬೇಕಾಗಿರುವುದು ಈಗಿನ ಅಗತ್ಯ. ಅಂತಹ ಕಾರ್ಯ ಮಾಡುವುದು ಬಿಟ್ಟು ಹಾದಿ ತಪ್ಪಿಸುವ ಹುನ್ನಾರ ನಡೆಸುತ್ತಿರುವುದು ಕಾಂಗ್ರೆಸ್ ನಾಯಕರ ದೇಶವಿರೋಧಿ ಮನಸ್ಥಿತಿಯನ್ನು ಬಿಂಬಿಸುತ್ತದೆ ಎಂದು ರಾಜಗೋಪಾಲ್ ರೈ ಟೀಕಿಸಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

