ಹಿಂದೆ, ಭಾರತೀಯ ಒಟ್ಟೂ ಕುಟುಂಬ ವ್ಯವಸ್ಥೆಯಲ್ಲಿ, ಎಲ್ಲ ಹಂಚಿಕೊಂಡು, ಅವರವರ ಜವಾಬ್ದಾರಿ ಹೊತ್ತು ಕೆಲಸ ಮಾಡಿದಾಗ, ಎಲ್ಲರಿಗೂ ಸಾಕಷ್ಟು ವಿಶ್ರಾಂತಿ ಸಮಯ ಸಿಗುತ್ತಿತ್ತು. ಒಟ್ಟಾಗಿ ದುಡಿಯುವಾಗ, ಒಟ್ಟಾಗಿ ಅಡಿಗೆ ಮಾಡುವಾಗ, ಒಟ್ಟಾಗಿ ತಿಂಡಿ, ಊಟ ಮಾಡುವಾಗ, ಎಲ್ಲ ಖುಷಿಯಿಂದ ಹಾಡು ಹಾಡುತ್ತ, ಕೇಳುತ್ತ, ಹರಟೆ ಹೊಡೆಯುತ್ತ, ಮುಖ್ಯವಾಗಿ ಬಾಯ್ತುಂಬ ನಗುತ್ತಿದ್ದ ಕಾಲ, ಈಗ ಇತಿಹಾಸ. ಆಗ ಹೊಲದಲ್ಲಿ ಕಳೆ ಕೀಳುವಾಗ, ರಾಶಿ ಮಾಡುವಾಗ, ಮದುವೆಯ ಶಾಸ್ತ್ರಗಳಲ್ಲಿ, ಬೀಗರ ಹಾಡುಗಳಲ್ಲಿ, ಮಗುವಿಗಾಗಿ ಹಾಡುವ ಜೋಗುಳ ಪದಗಳು, ಇಲ್ಲೆಲ್ಲಾ ಆರೋಗ್ಯಕರ ಹಾಸ್ಯ ಎದ್ದು ಕಾಣುತ್ತಿತ್ತು. ಈಗ ಒಟ್ಟಾಗಿರುವುದೇ ಅಪರೂಪ. ನಕ್ಕರೆ ಮುತ್ತು ಸುರಿದೀತು ಎಂಬ ಭಯ, ಅನ್ನುವಂತಹ ಬಿಗುಮಾನ ಎಲ್ಲರಿಗೆ! ಡಿ.ವಿ.ಜಿ ಅವರು ಮಂಕುತಿಮ್ಮನ ಕಗ್ಗದಲ್ಲಿ, ‘ನಗುವು ಸಹಜದ ಧರ್ಮ, ನಗಿಸುವುದು ಪರಧರ್ಮ, ನಗುವ ಕೇಳುತ ನಗುವದತಿಶಯದ ಧರ್ಮ.’ ಎಂದು ಹೇಳಿದ್ದಾರೆ. ಭಾರತೀಯ ಜೀವನದರ್ಶನ, ಕಾವ್ಯ, ಪುರಾಣ, ನಾಟಕಗಳಲ್ಲಿ ಹಿಂದಿನಿಂದ ನವರಸಗಳು, ಅದರಲ್ಲೂ ಹಾಸ್ಯ ರಸಕ್ಕೆ ಮಹತ್ವ ಕೊಟ್ಟಿದ್ದಾರೆ.
ಜಗತ್ತಿನಲ್ಲಿ ಶಾಂತಿ ಹಾಗೂ ಪ್ರೇಮ ಹರಡಲು, ವಿಶ್ವ ನಗು ಯೋಗ ಆಂದೋಳನ 1998ರ ಜನವರಿ 10 ರಂದು ಮೊಟ್ಟಮೊದಲು ಆಚರಿಸಲ್ಪಟ್ಟಿತು. ನಗುವಿನಿಂದ ಸೋದರತ್ವ ಹಾಗೂ ಸ್ನೇಹದ ವಿಶ್ವ ಜಾಗೃತಿ ಉಂಟುಮಾಡುವುದೇ ಇಂದಿನ ಆವಶ್ಯಕತೆ. ಮುಗುಳ್ನಗು ಇದ್ದಲ್ಲಿ ಯಶಸ್ಸು ಖಂಡಿತ. ನಗದಿದ್ದ ದಿನ ಹಾಳೆಂದು ಅರಿಯಿರಿ. ಈ ವರ್ಷದ ಧ್ಯೇಯವಾಕ್ಯ ಅಪ್ಪಿಕೊಳ್ಳಿ ಮಾನವೀಯ ಆಂದೋಳನ. ಪ್ರಪಂಚದಲ್ಲಿ ಪ್ರತೀ ವರ್ಷ, ಮೇ ತಿಂಗಳ ಮೊದಲ ಭಾನುವಾರ, ಅಂತರ್‌ರಾಷ್ಟ್ರೀಯ ನಗೆದಿನವನ್ನಾಗಿ ಭಾರತ, ಅಮೇರಿಕಾ, ಆಸ್ಟ್ರೆಲಿಯಾ, ಫ್ರಾನ್ಸ್, ಜರ್ಮನಿ, ಡೆನ್ ಮಾರ್ಕ್, ಸ್ಪೀಡನ್, ಬ್ರಿಟನ್ ಹಾಗೂ ಹಂಗೇರಿ ಮುಂತಾದ ಅನೇಕ ದೇಶಗಳೆಲ್ಲ ಆಚರಿಸುತ್ತಿದ್ದಾರೆ.
ಡೆನ್‌ಮಾರ್ಕ್ನ ಕೋಪನ್ ಹೇಗನ್‌ನ ಪುರಭವನ ಚೌಕದಲ್ಲಿ ಸುಮಾರು 8000 ಜನ ಸೇರುತ್ತಾರೆ. ನಗೆಮಂಡಳಿಯ ಸದಸ್ಯರು ಬ್ಯಾನರ್‌ಗಳನ್ನು ಹಿಡಿದು, ಈ ಮುಂದಿನ ಘೋಷಣೆಗಳನ್ನು ಕೂಗುತ್ತಾರೆ. ಅವು - ನಗೆಯಿಂದ ವಿಶ್ವ ಶಾಂತಿ, ಇಡೀ ವಿಶ್ವ ವಿಸ್ತರಿಸಲ್ಪಟ್ಟ ಕುಟುಂಬ, ನಗೆಯೇ ಜೀವನ, ಜೀವನಕ್ಕಾಗಿ ನಗಿ, ಹೋ ಹೋ ಹ್ಹ ಹ್ಹ ಹ್ಹ ನಗಿ ಪ್ರೀತಿ ಹಾಗೂ ನಗು, ನಗುವಿಗೆ ಭಾಷೆಯಿಲ್ಲ. ನಗಿ ಇತರರನ್ನು ನಗಿಸಿ, ನಗೆಮಂಡಳಿ ಸೇರಿ ಅದು ಉಚಿತ. ನಗೆಯು ಒಂದು ಧನಾತ್ಮಕ ಶಕ್ತಿ, ನಾನು ನಗುವನ್ನು ಪ್ರೀತಿಸುತ್ತೇನೆ. ಈ ಶಾಂತಿ ನಡಿಗೆಯಲ್ಲಿ ಚಪ್ಪಾಳೆ ತಟ್ಟುತ್ತಾ ಕುಣಿಯಲು, ಹೋ ಹೋ ಹ್ಹ ಹ್ಹ ಹ್ಹ ಎಂದು ಉಚ್ಛರಿಸುತ್ತಾರೆ. ಇಲ್ಲಿ ಮಧ್ಯೆ ಮಧ್ಯೆ ನಿಂತು, 2 ನಗೆಯೋಗ ವ್ಯಾಯಾಮಗಳನ್ನು ಮಾಡುತ್ತಾರೆ.
ಈ ವಿಶ್ವ ನಗೆ ದಿನಾಚರಣೆಯ ಸಂಸ್ಥಾಪಕ ಅಧ್ಯಕ್ಷರಾದ ಡಾ. ಮದನ್ ಕಟಾರಿಯಾ ಅವರ ಸಂದೇಶ ಹೀಗಿದೆ “ಪ್ರಪಂಚಾದ್ಯಂತ ಜನರ ಮನಸ್ಸುಗಳಲ್ಲಿರುವ ಆಂತರಿಕ ಸಂಘರ್ಷದ ಪ್ರತಿಬಿಂಬವೇ, ಬಾಹ್ಯ ಪ್ರಪಂಚ. ಇಂದು ನಾವು ನಗದಿರುವ ಕಾರಣ ಹಾಸ್ಯದ ನಿಜವಾದ ಅರ್ಥ, ನಾವು ತಿಳಿದಿಲ್ಲ. ನಗು ಕೇವಲ ಮೋಜು, ತಮಾಷೆ, ಮನರಂಜನೆಗಾಗಿ ಅಲ್ಲ, ನಾವು ಜೀವನದ ಉದ್ದೇಶ ಅರ್ಥ ಮಾಡಿಕೊಂಡಾಗ ಮಾತ್ರ, ಆಂತರಿಕ ಸಂತೋಷದ ಅಭಿವ್ಯಕ್ತಿಯಾಗಿ ಹೊರ ಹೊಮ್ಮುವುದು ಈ ನಗು. ಜೀವನದ ನಿಜವಾದ ಉದ್ದೇಶವೆಂದರೆ, ಪ್ರತಿಯೊಬ್ಬ ಮನುಷ್ಯನೂ ತನ್ನಲ್ಲಿ ಮಾತ್ರವಿರುವ, ತಾನು ಇತರರಿಗೆ ಹಂಚಬಹುದಾದ ತನ್ನ ಪ್ರತಿಭೆಯನ್ನು, ಪ್ರಪಂಚಕ್ಕೆ ಕೊಡುಗೆಯಾಗಿ ಕೊಡುವದು. ಈ ಪ್ರಪಂಚದಿಂದ ನಾವೇನು ಪಡೆಯಬಲ್ಲೆವು, ಸಾಧಿಸಬಲ್ಲೆವು ಎಂಬುದರ ಮೇಲೆ ಕೇಂದ್ರೀಕರಿಸುವುದಲ್ಲ. ನಾವು ನಗದಿರುವ ಮತ್ತೊಂದು ಕಾರಣ, ಯಶಸ್ಸು ಪಡೆದಾಗ ಮಾತ್ರ ನಗಲು ಕಲಿತಿದ್ದೇವೆ. ಆದರೆ ನಮ್ಮ ತಪ್ಪುಗಳು ಅಪಯಶಸ್ಸುಗಳು, ಸಮಸ್ಯೆಗಳ ಸಂದರ್ಭದಲ್ಲಿ, ನಕ್ಕು ಆಚರಿಸುವುದನ್ನು ನಾವಿನ್ನೂ ಕಲಿತಿಲ್ಲ. ಮೊದಲು ನಮ್ಮನ್ನೇ ನಾವು ನೋಡಿಕೊಂಡು ನಗುವುದನ್ನು ರೂಢಿ ಮಾಡಿಕೊಳ್ಳಬೇಕು. ನಗೆಯ ಧನಾತ್ಮಕ ಶಕ್ತಿ ಬಳಸಿದರೆ, ನಗು ಯೋಗದ ವ್ಯಾಯಾಮಗಳನ್ನು ಮಾಡಿದರೆ, ಒಳ್ಳೆಯ ಆರೋಗ್ಯ. ಒಳ್ಳೆಯ ಜೀವನ ನಡೆಸಲು, ನಗುವಿನ ಅತ್ಮ ಶಕ್ತಿ ನಮಗೆ ಸಹಾಯ ಮಾಡುತ್ತದೆ. ನಗು ಮಂಡಲಿಗಳ ಮೂಲಕ, ಈ ಮಾರ್ಗ ಹಾಗೂ ಮಾಧ್ಯಮಗಳ ಮೂಲಕ, ನಮ್ಮೊಳಗೆ ಶಾಂತಿ ತಂದು, ಹೊರ ಪ್ರಪಂಚದಲ್ಲಿ ಶಾಂತಿ ತರಬಹುದು. ಇದಕ್ಕಾಗಿ ನಾವೆಲ್ಲ ನಿಂತು 2 ನಿಮಿಷ ಮೌನ ಆಚರಿಸಿ, ಆಕಾಶದತ್ತ ನಮ್ಮ ತೋಳುಗಳನ್ನು ಹರಡಿ, ವಿಶ್ವ ಶಾಂತಿಗಾಗಿ ನಮ್ಮ ಮನಸ್ಸಿನೊಳಗೆ ಪ್ರಾರ್ಥನೆ ಮಾಡಿ, ಹೃದಯಪೂರ್ವಕ ನಕ್ಕು ಬಿಡೋಣ. ಮಕ್ಕಳು ಸರಾಸರಿ 400 ಬಾರಿ ಒಂದು ದಿನಕ್ಕೆ ನಕ್ಕರೆ, ಶೇಕಡಾ 64 ರಷ್ಟು ಹಿರಿಯರು, ದಿನಕ್ಕೆ 20ಕ್ಕಿಂತ ಕಡಿಮೆ ಬಾರಿ ನಗುತ್ತಾರೆ. ಮನೆಯಲ್ಲಿ ಶೇಕಡ 72ರಷ್ಟು ಹಿರಿಯರು, ದಿನಕ್ಕೆ 20ಕ್ಕಿಂತ ಕಡಿಮೆ ಬಾರಿ, ಕಚೇರಿಯಲ್ಲಿ ದಿನಕ್ಕೆ 20ಕ್ಕಿಂತ ಕಡಿಮೆ ಬಾರಿ ನಗುತ್ತಾರೆಂದು ಒಂದು ಆಧ್ಯಯನ ತಿಳಿಸುತ್ತದೆ. 1950ರಲ್ಲಿ ದಿನಕ್ಕೆ ಸರಾಸರಿ 18 ಬಾರಿ ಜನ ನಗುತ್ತಿದ್ದರೆ, ಇಂದು ದಿನಕ್ಕೆ 4 ರಿಂದ 6 ಬಾರಿ ನಕ್ಕರೆ, ಅದೇ ಅದೃಷ್ಟ."
ಪೌರಾಣಿಕ ಹಾಗೂ ಐತಿಹಾಸಿಕ ಕಾಲದಲ್ಲಿ ಹಾಸ್ಯ: ಪೌರಾಣಿಕವಾಗಿ ಮಕರಂದನಿಲ್ಲದ ಶ್ರೀಕೃಷ್ಣನನ್ನು ಕಲ್ಪಿಸಿಕೊಳ್ಳಲು ಸಾಧ್ಯವೇ? ಇತಿಹಾಸದಲ್ಲಿ ವಿಜಯನಗರದ ಶ್ರೀಕೃಷ್ಣದೇವರಾಯನ ಅಸ್ಥಾನದಲ್ಲಿದ್ದ ತೆನಾಲಿರಾಮಕೃಷ್ಣ, ಅಕ್ಬರ್‌ನ ಆಸ್ಥಾನದಲ್ಲಿದ್ದ ಬೀರ್‌ಬಲ್ ಹಾಸ್ಯರತ್ನಗಳಾಗಿದ್ದರು. ಹಿಂದೆ ಪ್ರತಿಯೊಬ್ಬ ರಾಜಮಹಾರಾಜರ ಆಸ್ಥಾನಗಳಲ್ಲಿ, ದಿನನಿತ್ಯದ ರಾಜ್ಯಭಾರದ ಜಂಜಡ ನಿವಾರಿಸಲು, ಸಂಗೀತಗಾರರು, ವಿದೂಷಕರನ್ನು, ಆಸ್ಥಾನ ರತ್ನಗಳನ್ನಾಗಿ ಇಟ್ಟುಕೊಂಡು, ಅವರ ಕಲಾಸಾಧನೆಯಿಂದ ನಕ್ಕು ನಲಿದು, ಆನಂದ ರಸಧಾರೆಯಲ್ಲಿ ಮಿಂದು ಧನ್ಯರಾಗುತ್ತಿದ್ದರು.
ಹರಿಕಥೆಯಲ್ಲಿ ಹಾಸ್ಯ : ಸಾಕಷ್ಟು ವಿರಾಮದ ಸಮಯ, ಸರಳ ಜೀವನ, ಟಿ.ವಿ, ವೀಡಿಯೋ, ಮೊಬೈಲ್, ಇಂಟರ್‌ನೆಟ್, ಇರದಿದ್ದ ಕಾಲದಲ್ಲಿ ಹರಿಕಥೆ, ಶಿವಕಥೆಗಳ ದಾಸರು, ಉಪಕಥೆಗಳನ್ನು ಹೇಳಿ ನಗಿಸುತ್ತಿದ್ದರು. ಗುರುರಾಜಲು ನಾಯ್ದು, ಅಚ್ಯುತದಾಸರು, ಕೇಶವದಾಸರು ಇವರ ಹರಿಕಥೆಗಳನ್ನು ಕೇಳಿದವರು, ಭಕ್ತಿರಸದೊಂದಿಗೆ, ಹಾಸ್ಯವನ್ನೂ ಅನುಭವಿಸುತ್ತಿದ್ದರು.
ಸೀರಿಯಲ್ ಸಿನಿಮಾಗಳ ಕಾಲದಲ್ಲಿ: ಆಧುನಿಕ ಜೀವನ ಶೈಲಿಗೆ ತೆರೆದುಕೊಂಡಂತೆ, ಅಭಿವೃದ್ಧಿಯ ವಿವಿಧ ಸಾಧನಗಳು ಲಭ್ಯವಾದಂತೆ, ಜೀವನದಲ್ಲಿ ಹಣ ಸಂಪಾದನೆಗೆ ಪ್ರಾಧಾನ್ಯತೆ ಸಿಕ್ಕಂತೆ, ಎಲ್ಲ ಯಂತ್ರಗಳಂತಾಗಿ, ಗಳಿಕೆಯ ದಾಸರಾಗಿ, ಜೀವನ ಯಾಂತ್ರಿಕವಾದಂತೆ, ನಗುವುದೇ ಮರೆತು ಹೋಗ್ತಿದೆ. ಟಿ.ವಿ. ವಾಹಿನಿಗಳ ಧಾರಾವಾಹಿಗಳೆಲ್ಲ ಅಳುಮೂಂಜಿಯಾಗಿ, ಅತ್ತೆಯ ಕಾಟ, ಸೊಸೆಯ ವೇದನೆ, ನಾದಿನಿಯರ ದ್ವೇಷ, ಕುಟುಂಬದ ಸದಸ್ಯರ ಗಟ್ಟಿ ಸಂಬಂಧವಿರದ ಅಳ್ಳಕ ಪಾತ್ರಗಳಾಗಿ, ಜನ ನಗಲಾರದೇ, ಹೊಗೆಯ ಸ್ಥಿತಿ ತಲುಪಿದ್ದಾರೆ. ಎಲ್ಲ ಭಾಷೆಗಳಲ್ಲೂ ಹಾವು ಹಾಗೂ ದೆವ್ವಗಳು ವಿಜೃಂಭಿಸುತ್ತಿವೆ. ಚಲನಚಿತ್ರಗಳಲ್ಲಿ ಹೊಡಿ, ಬಡಿ, ಕೊಲ್ಲು, ಮಚ್ಚು, ಲಾಂಗ್‌ಮಯವಾಗಿ, ರಕ್ತ-ಕೊಲೆ, ಹಿಂಸೆ ಪ್ರಧಾನವಾಗುತ್ತಿರುವಾಗ ಉತ್ತಮ ಹಾಸ್ಯ ಮಾಯವಾಗುತ್ತಿದೆ. ಈಗ ಟಿ.ವಿ ಚಾನೆಲ್‌ಗಳಲ್ಲಿ, ನಗರಗಳಲ್ಲಿ, ವಿವಿಧ ಕಾರ್ಯಕ್ರಮ ವೇದಿಕೆಗಳಲ್ಲಿ ಹರಟೆ, ನಗೆಹಬ್ಬ, ನಗೆದಿನಗಳಿಗೆ ಡಿಮಾಂಡೋ ಡಿಮಾಂಡ್. ದುಡ್ಡು ಕೊಟ್ಟು ನಗೆ ಭಾಷಣಕಾರರು, ಕಲಾವಿದರನ್ನು ಕರೆಸಿ, ಅವರು ನಗೆಚಾಟಿಕೆ, ವ್ಯಂಗ್ಯದ ಕೂರಂಬುಗಳನ್ನು ಇವರತ್ತ ಬೀಸಿದಾಗ, ಅದರ ಕಚಗುಳಿತನಕ್ಕೆ ಆ ಕ್ಷಣಕ್ಕೆ ಬಿದ್ದು ಬಿದ್ದು ನಗುವ ಜನ, ಆ ಸ್ಥಳ ಬಿಟ್ಟು ಬಂದರೆ, ಮತ್ತೆ ಜೋಲು ಮುಖದ, ಹ್ಯಾಪ್ ಮೊರೆಯ, ಗಾಳಿ ತೆಗೆದ ಜಪಾನಿ ಗುಡಿಯಾ ಆಗುತ್ತಾರೆ.
ಚಲನ ಚಿತ್ರಗಳಲ್ಲಿ ಹಾಸ್ಯ : ನಮ್ಮ ಹಿಂದಿನ ಚಲನಚಿತ್ರಗಳಲ್ಲಿ, ಹಾಸ್ಯ ಪಾತ್ರಗಳಿಗೆ ಕಥೆಯಲ್ಲಿ ಮಹತ್ವ ಹಾಗೂ ಬೇರೆಯ ಟ್ರಾಕ್ ಇದ್ದು, ಚಿತ್ರ ನಿರ್ಮಾಪಕರು ಹಾಸ್ಯ ಕಲಾವಿದರ ಕಾಲ್‌ಶೀಟ್ ಪಡೆದು, ನಂತರ ನಾಯಕ ನಾಯಕಿಯರ ಕಾಲ್‌ಶೀಟ್ ಪಡೆಯಬೇಕಿತ್ತು. ಕನ್ನಡದಲ್ಲಿ ಬಾಲಕೃಷ್ಣ, ನರಸಿಂಹರಾಜು, ಎಮ್.ಎನ್ ಲಕ್ಷ್ಮಿದೇವಿ, ಗಣಪತಿ ಭಟ್, ರತ್ನಾಕರ, ದ್ವಾರಕೀಶ್, ಉಮೇಶ್, ಡಿಂಗ್ರಿನಾಗರಾಜ, ಹಿಂದಿಯಲ್ಲಿ ಜಾನಿವಾಕರ, ಮುಕ್ರಿ, ರಾಜೇಂದ್ರನಾಥ್, ಮೆಹಮೂದ್, ತಮಿಳಿನಲ್ಲಿ ಟಿ.ಎಮ್ ಕೃಷ್ಣನ್, ಮಧುರಂ, ತಾಯ್‌ನಾಗೇಶ, ಟಿ.ಎಸ್ ಬಾಲಯ್ಯ, ವಡಿವೇಲು, ಮಣಿವಣ್ಣನ್, ಇಂಗ್ಲೀಷ್‌ನಲ್ಲಿ ಚಾರ್ಲಿಚಾಪ್ಲಿನ್, ರೋವನ್‌ಅಟ್‌ಕಿನ್‌ಸನ್, ಡೀನ್‌ಮಾರ್ಟಿನ್, ಜರ‍್ರಿ ಲುಯೀಸ್, ಚಲನಚಿತ್ರರಂಗದ ಕೆಲವು ಹಾಸ್ಯ ಕಲಾರತ್ನಗಳು. ಕೆ.ಎಸ್.ಅಶ್ವಥ್ ಅವರಂಥ ಪೋಷಕ ಕಲಾವಿದರು, ಪುಟ್ಟಣ್ಣ ಕಣಗಾಲ್ ಅವರ ಬಯಕೆಯಂತೆ, ಶುಭಮಂಗಳ ಚಿತ್ರದಲ್ಲಿ ಅಭಿನಯಿಸಿದ, ಸ್ವತಃ ರೋಗಿಯಾಗಿದ್ದ ಡಾಕ್ಟರ್ ಪಾತ್ರ ಒಂದೇ ದೃಶ್ಯದ್ದಾದ್ದರೂ, ಎಲ್ಲರನ್ನೂ ನಗಿಸಿದ್ದು ಒಂದು ದಾಖಲೆ.
ರಂಗಭೂಮಿಯಲ್ಲಿ ಹಾಸ್ಯ: ಕೈಲಾಸಂ ಅವರ ಹೋಂ ರೂಲ್, ಬಂಡ್ವಾಳವಿಲ್ಲದ ಬಡಾಯಿ, ಮುಂತಾದ ನಾಟಕಗಳು, ದಾಶರಥಿ ದೀಕ್ಷಿತ್ ಅವರ ಅಳಿಯದೇವರು, ಕ್ಷೀರಸಾಗರರ, ಶಾಮಣ್ಣನ ಸಾಹಸ, ಕಂಬಳಿ ಸೇವೆ, ಎ.ಎನ್ ಮೂರ್ತಿರಾವ್ ಅವರ ಆಷಾಢಭೂತಿ, ನಾ ಕಸ್ತೂರಿ ಅವರ ಗಗ್ಗಯ್ಯನ ಗಡಿಬಿಡಿ, ಪರ್ವತವಾಣಿ, ಎ.ಎಸ್ ಮೂರ್ತಿ, ಕೆ ಗುಂಡಣ್ಣ ಅವರ ನೂರಾರು ನಾಟಕಗಳು, ಹಾಸ್ಯ ನಾಟಕ ರಸಾಯನಗಳು. ಗುಬ್ಬಿ ವೀರಣ್ಣನವರ ಸದಾರಮೆ ನಾಟಕದ ಕಳ್ಳ ಹಾಗೂ ಆದಿಮೂರ್ತಿ ಪಾತ್ರಗಳು ಅಗಸನ ಪಾತ್ರ ಹಾಸ್ಯ ರಸ ಉಕ್ಕಿಸುತ್ತಿದ್ದವು. ಮಾಸ್ಟರ್ ಹಿರಣ್ಣಯ್ಯನವರ ಮೊನಚು, ವ್ಯಂಗ್ಯಹರಿತ ಮಾತು, ಅಬ್ಬಾಸ್ ಅಲಿ, ಓಬಳೇಶ, ರಾಜು ತಾಳೀಕೋಟೆ ಮುಂತಾದ ವೃತ್ತಿ ರಂಗಭೂಮಿ ಹಾಸ್ಯ ಕಲಾವಿದರನ್ನು ಮರೆಯಲಾರೆವು. ಕನ್ನಡ ರಂಗಭೂಮಿಯಲ್ಲಿ ಹಾಸ್ಯರಸ ಸಕಾಲಿಕವಾಗಿದೆ. ಪ್ರತಿನಿತ್ಯದ ಜೀವನದ ಒತ್ತಡಗಳು ಹಾಗೂ ಪರಿಶ್ರಮಗಳು, ಜೀವನವನ್ನು ದುಃಖಮಯ ಮಾಡುತ್ತಿರುವಾಗ, ಜನ ಕುಳಿತು, ಮನಸ್ಸು - ಹೃದಯತುಂಬಿ ನಗ ಬಯಸುತ್ತಾರೆ.
ಬಾನುಲಿಯಲ್ಲಿ ಹಾಸ್ಯ : ಹಿಂದೆಲ್ಲ ಆಕಾಶವಾಣಿಯಲ್ಲಿ ಪ್ರತಿ ವರ್ಷ ಹಾಸ್ಯ ನಾಟಕೋತ್ಸವ ನಡೆಯುತ್ತಿದ್ದವು. 15 ನಿಮಿಷ, 30 ನಿಮಿಷಗಳ ಹಾಸ್ಯ ನಾಟಕಗಳು, ಸತತ ಒಂದು ವಾರ, ಪ್ರತಿ ರಾತ್ರಿ 9.30ಗೆ ಪ್ರಸಾರವಾಗಿ ಶ್ರೋತೃಗಳನ್ನು ನಗಿಸುತ್ತಿದ್ದವು.
ನಗೆಯ ವೈವಿಧ್ಯ : ಮೆಲುನಗೆ, ಪಿಸುನಗು, ಹಲ್ಲು ಕಿರಿಯುವುದು, ಕಿಲಕಿಲ ನಗು, ಕೇಕೆಹಾಕಿ ನಗುವುದು, ಚೀರಿ ನಗುವುದು, ಅಟ್ಟಹಾಸದ ನಗು, ಬಿದ್ದುಬಿದ್ದು ನಗುವುದು, ಅಸ್ತವಸ್ತ ಸಿಡಿವ ನಗು, ಜೋರಾದ ಆಳವಾದ ನಗುಸ್ಫೋಟ, ಒಳಗೊಳಗೆ ವ್ಯಂಗ್ಯನಗು, ಕುಚೋದ್ಯದ ಒಳನಗು, ಕಟ್‌ನಗು, ಸತತ ನಗು, ಅಲೆಅಲೆಯಾಗಿ ನಗು, ಕೀರಲು ಧ್ವನಿಯಲ್ಲಿ ನಗು, ನಕ್ಕು ನಕ್ಕು ಸುಸ್ತಾಗಿ ಕಣ್ಣೀರು ತರಿಸುವ ನಗು ಇವೆಲ್ಲಾ ನಗುವಿನ ವೈವಿಧ್ಯಗಳು.
ನಗು ಹಾಗೂ ಆರೋಗ್ಯ : 2005ರಲ್ಲಿ ಕಂಡುಹಿಡಿದಂತೆ, ರಕ್ತನಾಳಗಳ ಆರೋಗ್ಯಕರ ಕ್ರಿಯೆಗೂ, ನಗೆಗೂ ಕೊಂಡಿಯಿದೆ. ನಗುವುದರಿಂದ ರಕ್ತನಾಳಗಳ ಒಳ ಭಾಗ ತೇವವಾಗಿ, ರಕ್ತದ ಹರಿವು ಹೆಚ್ಚುತ್ತದೆ. ಕಾರ್ಟಿಸೋಲ್ ಹಾಗೂ ಎಪಿನೈಫ್ರಿನ್ ಎಂಬ ಒತ್ತಡದ ಅಂತಃಸ್ರಾವಗಳಲ್ಲಿ ಇಳಿತವಾಗುತ್ತದೆ. ನಕ್ಕಾಗ ಮೆದುಳು ಎಂಡಾರ್ಫಿನ್‌ನ್ನು ಬಿಡುಗಡೆ ಮಾಡಿದಾಗ, ಶಾರೀರಿಕ ನೋವು ಶಮನವಾಗುತ್ತದೆ. ಪ್ರತಿರೋಧಕ ಕೋಶಗಳ ಸಂಖ್ಯೆ ಹೆಚ್ಚಿಸಿ, ಟಿ. ಕೋಶಗಳ ಸಾಮರ್ಥ್ಯ ಹೆಚ್ಚಿಸಿ, ದೇಹದ ಪ್ರತಿರೋಧಕ ಶಕ್ತಿ ಹೆಚ್ಚಿಸುತ್ತದೆ. ನಗೆ ಉಕ್ಕಲು ಕಾರಣಗಳು ಸಂತಸ ಹಾಗೂ ಹಾಸ್ಯದ ಸ್ಪರ್ಶಗಳು. ಸಿಗ್ಮಂಡ್ ಫ್ರಾಯ್ಡ್ ಸಾರಿದಂತೆ, ನಗು ಒತ್ತಡ ನಿವಾರಿಸಿ ಮಾನಸಿಕ ಶಕ್ತಿ ಹೆಚ್ಚಿಸುತ್ತದೆ. ಕೋಪ, ದುಃಖ ಇರುವಾಗ, ತಲೆ ಕೆಡಿಸಿಕೊಂಡ ಸ್ಥಿತಿಯಲ್ಲಿ ನಗು ಸಾಂತ್ವನ ನೀಡುತ್ತದೆ. ಜಾನ್ ಮೊರೀಲ್ ಪ್ರಕಾರ ಮಾನವನ ನಗುವಿಗೆ ಜೈವಿಕ ಕಾರಣಗಳಿರಬಹುದು. ಮೆದುಳಿನ ನರಗಳ ಸಂಕೀರ್ಣ ವ್ಯವಸ್ಥೆ ಹಾಗೂ ಮೆದುಳಿನ ಮುಂಭಾಗದಲ್ಲಿ ಚೆನ್ನಾಗಿ ಅಭಿವೃದ್ಧಿಯಾದ ಒಳಗಿನ ಭಾಗ ಹಾಸ್ಯ ಸೇರಿದಂತೆ ಭಾವನೆಗಳನ್ನು ನಿಯಂತ್ರಿಸುತ್ತದೆ.
ನಗು ಚಿಕಿತ್ಸೆ : ಬಹು ಹಿಂದಿನಿಂದ ಔಷಧದ ಸ್ವಾಭಾವಿಕ ರೂಪವಾದ ನಗುವನ್ನು, ಚಿಕಿತ್ಸೆಗಾಗಿ ಬಳಸುತ್ತಿದ್ದಾರೆ. ಶಾರೀರಿಕ, ಭಾವನಾತ್ಮಕ, ಹಾಗೂ ಸಾಮಾಜಿಕ ಒಳಿತಿನ ಲಾಭಗಳನ್ನು ನಗು ನೀಡುತ್ತದೆ. ಆತುರ, ಒತ್ತಡಗಳನ್ನು ದೂರ ಮಾಡಿ, ನೋವು ನಿವಾರಿಸಲು, ಕಾಹಿಲೆ ಗುಣ ಮಾಡಲು, ನಗು ಹಾಗೂ ಹಾಸ್ಯ ಉತ್ತಮ ಔಷಧವಾಗಿ ಕೆಲಸ ಮಾಡುತ್ತದೆ. ಇದು ವೃದ್ಧಾಪ್ಯವನ್ನು ಮುಂದೂಡಿ, ಆಯುಷ್ಯವನ್ನು ಹೆಚ್ಚಿಸುತ್ತವೆ. ಜೀವನ ಹಾಗೂ ವೃತ್ತಿಯ ಸಮತೋಲನಕ್ಕೆ, ನಗು ದಿವ್ಯಮಂತ್ರ. ಇಡೀ ದೇಹಕ್ಕೆ ನವ ಚೈತನ್ಯ ನೀಡಿ ದೇಹ ಹಗುರವಾಗುತ್ತದೆ. ರಕ್ತದ ಹರಿವು ಸರಾಗ ಮಾಡಿ ಹೃದಯ ಬೇನೆ ತಡೆಯಬಲ್ಲದು. ಹೆದರಿಕೆ, ಉದ್ವೇಗ ಕಡಿಮೆಮಾಡಿ, ಮನುಷ್ಯನ ಮನೋಸ್ಥಿತಿ ಉಲ್ಲಾಸದಾಯಕ ಮಾಡಿ, ಧೂಳಿನ ಅಲರ್ಜಿ ಪ್ರತಿಕ್ರಿಯೆಯಿಂದ ಬಳಲುವವರ ಕಷ್ಟ ಶಾಂತಗೊಳಿಸುತ್ತದೆ.
- ಎನ್.ವ್ಹಿ. ರಮೇಶ್
ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಅಧಿಕಾರಿಗಳು
ಮೈಸೂರು. ಮೊ. : 9845565238
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


